ನೀರಿನ ಮಿತ ಬಳಕೆಯಾಗದಿದ್ರೆ ಅಪಾಯ

ನೆಲಮಂಗಲ: ಬೆಳೆಯುತ್ತಿರುವ ಜನಸಂಖ್ಯೆಯಿಂದಾಗಿ ನೀರಿನ ಬಳಕೆ ಮತ್ತು ಅವಶ್ಯಕತೆ ಹೆಚ್ಚಾಗುತ್ತಿದೆ. ಸದುಪಯೋಗದ ಕುರಿತು ಎಚ್ಚರಿಕೆ ವಹಿಸದಿದ್ದಲ್ಲಿ ಮುಂದಿನ ತಲೆಮಾರಿಗೆ ಅಪಾಯ ತಪ್ಪಿದ್ದಲ್ಲ ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ತಿಳಿಸಿದರು.

ಟಿ.ಬೇಗೂರು ಗ್ರಾಪಂ ವ್ಯಾಪ್ತಿಯ ಹುಚ್ಚೆಗೌಡನಪಾಳ್ಯದಲ್ಲಿ ಶನಿವಾರ ಟಿ.ಬೇಗೂರು ಗ್ರಾಪಂ, ಸ್ವಾಮಿ ವಿವೇಕಾನಂದ ಯುವ ಮೂವ್​ವೆುಂಟ್, ಮುಳ್ಳಕಟ್ಟಮ್ಮ ದೇವಿ ಅಭಿವೃದ್ಧಿ ಸೇವಾ ಟ್ರಸ್ಟ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಹಕಾರದಲ್ಲಿ ಮಳೆನೀರು ಕೊಯ್ಲು ಹಾಗೂ ತಪೋವನ ನಿರ್ಮಾಣ ಕಾರ್ಯ ಉದ್ಘಾಟಿಸಿ ಮಾತನಾಡಿದರು.

ಕೆಲ ದಶಕಗಳ ಹಿಂದೆ ಕೆರೆ, ಬಾವಿಗಳಿಂದ ನೀರು ತರಲಾಗುತ್ತಿತ್ತು. ನೀರಿನ ಮಿತ ಬಳಕೆಯಿತ್ತು. ಕೃಷಿಗೆ ಮಳೆ ನೀರನ್ನು ಮಾತ್ರ ಬಳಕೆ ಮಾಡಲಾಗುತ್ತಿತ್ತು. ಕ್ರಮೇಣ ನೀರಿನ ಬಳಕೆ ಹೆಚ್ಚಾದಂತೆ ಪಂಪ್ ಬಳಕೆ ಮಾಡಿಕೊಳ್ಳಬೇಕಾಯಿತು ಎಂದರು.

ನೀರಿನ ಮಿತ ಬಳಕೆ ಕುರಿತು ಎಲ್ಲೆಡೆ ಎಚ್ಚರಿಕೆ ಗಂಟೆ ಮೊಳಗುತ್ತಿದೆ. ರಾಜಸ್ಥಾನ, ಗುಜರಾತ್​ನಂತಹ ರಾಜ್ಯಗಳಲ್ಲಿ ಅತಿ ಕಡಿಮೆ ಮಳೆಯಾದರೂ ಏಕೆ ನೀರಿನ ಸಮಸ್ಯೆ ಹೆಚ್ಚಾಗಿಲ್ಲ ಎಂಬುದರ ಬಗ್ಗೆ ಯೋಚಿಸಬೇಕು ಎಂದರು.

ಗ್ರಾಮದ ಎಲ್ಲ ಮನೆಗಳಲ್ಲಿ ಮಳೆ ನೀರು ಕೊಯ್ಲು ಪದ್ಧತಿ ಮಾಡಿ ತಪೋವನ ನಿರ್ವಿುಸುವ ನಿಟ್ಟಿನಲ್ಲಿ ಆದರ್ಶ ಕಾರ್ಯಕ್ರಮ ಆಯೋಜಿಸಿರುವುದು ಅರ್ಥಪೂರ್ಣವಾಗಿದೆ. ಮುಂದೆಯೂ ಮನೆ ನಿರ್ವಣದ ವೇಳೆ ಮಳೆ ನೀರಿಗಾಗಿ ಪ್ರತ್ಯೇಕ ಜಾಗ ಮೀಸಲಿಡಬೇಕು. ಮಳೆ ನೀರು ಸಂಗ್ರಹಿಸಿ ಭೂಮಿಯೊಳಗೆ ಇಂಗಿಸುವ ನಿಟ್ಟಿನಲ್ಲಿ ಜಲಮರುಪೂರಣವಾಗಬೇಕು. ಇಲ್ಲವಾದಲ್ಲಿ ಮೊಮ್ಮಕ್ಕಳು ಮಳೆಗಾಗಿ ಬಾಯಿ ತೆರೆದು ಕಾದು ಕುಳಿತುಕೊಳ್ಳಬೇಕಾಗುತ್ತದೆ ಎಂದರು.

ರಾಜ್ಯದಲ್ಲಿ 40 ಲಕ್ಷ ಸದಸ್ಯರನ್ನು ಒಳಗೊಂಡಿರುವ ಗ್ರಾಮಾಭಿವೃದ್ಧಿ ಯೋಜನೆ ಸಹಸ್ರ ಸಂಖ್ಯೆಯ ಸ್ವಸಹಾಯ ಸಂಘ ಸ್ಥಾಪಿಸಿದ್ದು, ಸದಸ್ಯರ ಆರ್ಥಿಕ ಪ್ರಗತಿ ಮಾಡಲಾಗುತ್ತಿದೆ. ದೇವರ ಮೇಲೆ ಶ್ರದ್ಧೆ ನಂಬಿಕೆ ಇಟ್ಟು ಕೆಲಸ ಮಾಡಿದಲ್ಲಿ ಅಭಿವೃದ್ಧಿ ಸಾಧ್ಯ ಎಂದರು.

ಗ್ರಾಮಾಂತರ ಜಿಲ್ಲ್ಲೆಯಾದ್ಯಂತ 1.16 ಲಕ್ಷ ಕುಟುಂಬಗಳಿದ್ದು, 28 ಕೋಟಿ ರೂ. ಉಳಿತಾಯ ಮಾಡಿದ್ದರೆ, ತಾಲೂಕಿನಲ್ಲಿ 20 ಸಾವಿರ ಕುಟುಂಬ 6 ಕೋಟಿ ರೂ. ಉಳಿತಾಯ ಮಾಡಿರುವುದು ಹೆಮ್ಮೆಯ ಸಂಗತಿ. ದೇವನಹಳ್ಳಿ ಭಾಗದ ಭಕ್ತರು ನಿರಂತರವಾಗಿ ಕ್ಷೇತ್ರಕ್ಕೆ ತರಕಾರಿ ಕಳುಹಿಸಿಕೊಡುವ ಜತೆಗೆ 2 ಲಕ್ಷ ಲೀಟರ್​ಗೂ ಮೀರಿದ ಪ್ಯಾಕೇಟ್ ನೀರನ್ನು ಕ್ಷೇತ್ರಕ್ಕೆ ತಂದುಕೊಟ್ಟಿರುವ ಈ ಭಾಗದ ಜನರ ಶುದ್ಧಭಕ್ತಿಯನ್ನು ಸ್ಮರಿಸಬೇಕು ಎಂದರು.

ಕೇವಲ ರಾಜಸ್ಥಾನ, ಗುಜರಾತ್ ರಾಜ್ಯಗಳಲ್ಲಿ ಮಾತ್ರ ನೀರಿನ ಸಂರಕ್ಷಣೆ ಮಾಡುವುದಲ್ಲ. ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲೂ ಜಲಮರುಪೂರಣ ಕಾರ್ಯ ಮಾಡಬೇಕು. ಹೂ, ತರಕಾರಿ ಬೆಳೆದು ಹಣ ಗಳಿಸಿ-ಉಳಿಸಿಕೊಳ್ಳುವ ಜತೆಗೆ ಹಣವನ್ನು ಸರಿಯಾದ ರೀತಿಯಲ್ಲಿ ಹೂಡಿಕೆ ಮಾಡಿ ಬೆಳೆಸಿಕೊಳ್ಳಬೇಕು. ಸರ್ಕಾರದ ವಿವಿಧ ಹಂತದ ಜನಪ್ರತಿನಿಧಿಗಳ ಸಹಕಾರ ಪಡೆದು ಸುಂದರ ಬದುಕು ಕಟ್ಟಿಕೊಳ್ಳಬೇಕು ಎಂದರು.

ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿ ಮಾತನಾಡಿ, ಕ್ಷೇತ್ರದ ಜನತೆ ಕೊಳವೆಬಾವಿ ಅವಲಂಬಿಸಿ ಜೀವನ ಸಾಗಿಸುತ್ತಿದ್ದಾರೆ. ಸಾವಿರ ಅಡಿ ಕೊರೆದರೂ ನೀರು ದೊರೆಯುತ್ತಿಲ್ಲ. ಅದರಲ್ಲೂ ಬೇಸಿಗೆ ಕಾಲದಲ್ಲಿ ಉದ್ಭವಿಸುವ ನೀರಿನ ಸಮಸ್ಯೆ ಹೇಳತೀರದು. ಆದ್ದರಿಂದ ಪ್ರತಿಯೊಬ್ಬರೂ ಎಚ್ಚೆತ್ತುಕೊಳ್ಳಬೇಕು ಎಂದರು.

ರೈತರು ಹೊಲಗದ್ದೆಗಳಲ್ಲಿ ಇಂಗುಗುಂಡಿ ನಿರ್ವಿುಸಿ ಮಳೆ ನೀರು ಇಂಗಿಸಬೇಕಿದೆ. ತಾಲೂಕಿನ ಎಲ್ಲ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಮಳೆನೀರು ಕೊಯ್ಲು ಪದ್ಧತಿ ಅನುಸರಣೆ ಮಾಡಿದರೆ ನೀರಿನ ಸಮಸ್ಯೆ ಕಡಿಮೆಯಾಗಲಿದೆ. ಗ್ರಾಮದ ಸೌಂದರ್ಯ ಹೆಚ್ಚಿಸುವ ವನದ ಅವಶ್ಯಕತೆಯಿದೆ ಎಂದು ಹೇಳಿದರು.

ತಹಸೀಲ್ದಾರ್ ಕೆ.ಎನ್.ರಾಜಶೇಖರ್, ತಾಪಂ ಇಒ ಹನುಮಂತರಾಯಪ್ಪ, ಜಿಪಂ ಸದಸ್ಯೆ ಪುಟ್ಟಮ್ಮ, ತಾಪಂ ಸದಸ್ಯ ಬಿ.ಕೆ.ಮುನಿರಾಜು, ಗ್ರಾಪಂ ಅಧ್ಯಕ್ಷೆ ರೇಖಾ, ಯೂವ ಮೂವ್​ವೆುಂಟ್ ಅಧ್ಯಕ್ಷ ಡಾ.ಎಂ.ಆರ್.ಸೀತಾರಾಮ್ ಅಖಿಲಕರ್ನಾಟಕ ಜನಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷ ವಿ.ರಾಮಸ್ವಾಮಿ, ಪಿಡಿಒ ಮಲ್ಲೇಶ್, ಕಾರ್ಯದರ್ಶಿ ಹನುಮಂತರಾಜು, ಉಪಾಧ್ಯಕ್ಷೆ ನಾಗರತ್ನಾ ಉಪಸ್ಥಿತರಿದ್ದರು.

ನೀರಿನ ಸಮಸ್ಯೆ ಇಲ್ಲ: ಧರ್ಮಸ್ಥಳ ತೀರ್ಥ ಕ್ಷೇತ್ರವಾದ್ದರಿಂದ ನೇತ್ರಾವತಿ ನದಿ ಸ್ನಾನ ಮಾಡುವುದು ಪ್ರತೀತಿ. ಆದರೆ ನದಿ ನೀರು ನಿಂತು 50 ದಿನ ಸಮಸ್ಯೆಯಾಗಿತ್ತು. ಉತ್ತರ ಕರ್ನಾಟಕದ ಸ್ಥಳಗಳಿಂದ ಬಂದಿದ್ದ ಭಕ್ತರಿಗಂತೂ ನೀರು ಕಂಡರೆ ಸ್ವರ್ಗ, ಅವರು ನಿಂತ ನೀರಿನಲ್ಲಿ ಬಟ್ಟೆ ಒಗೆಯುವುದೇ ಹೆಚ್ಚಾಗಿತ್ತು. ಆದರೀಗ ನೀರಿನ ಸಮಸ್ಯೆ ಇಲ್ಲ. ಭಕ್ತರು ನಿರಾತಂಕವಾಗಿ ಕ್ಷೇತ್ರ ದರ್ಶನಕ್ಕೆ ಬರಬಹುದು ಎಂದು ಡಾ.ವೀರೇಂದ್ರೆಹೆಗ್ಗಡೆ ತಿಳಿಸಿದರು.

Leave a Reply

Your email address will not be published. Required fields are marked *