ನೀರಿನ ಬಳಕೆ ಶಿಸ್ತಿನಿಂದಾಗಲಿ

ಧಾರವಾಡ: ಕರ್ನಾಟಕದಲ್ಲಿ ರಾಜ್ಯಸ್ಥಾನಕ್ಕಿಂತ ಎಂಟು ಪಟ್ಟು ಹೆಚ್ಚು ಮಳೆ ಯಾಗುತ್ತಿದ್ದರೂ ಜಲ ಸಂಕಷ್ಟ ಅನುಭವಿಸುತ್ತಿದೆ. ಮಳೆ ನೀರನ್ನು ಸದುಪಯೋಗ ಪಡಿಸಿಕೊಂಡಾಗ ಮಾತ್ರ ಈ ಸಮಸ್ಯೆ ಪರಿಹಾರವಾಗಲಿದೆ ಎಂದು ಜಲ ತಜ್ಞ ಡಾ. ರಾಜೇಂದ್ರಸಿಂಗ್ ಹೇಳಿದರು.

ಜಲ ಹಾಗೂ ನೆಲ ನಿರ್ವಹಣೆ ಸಂಸ್ಥೆ ಆವರಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವಿಶ್ವ ಜಲ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು. ಕಾಲುವೆ ನೀರಾವರಿ ಕ್ಷೇತ್ರದಲ್ಲಿ ನೀರು ಬಳಕೆದಾರರು ಸಮರ್ಥವಾಗಿ ನೀರು ನಿರ್ವಹಣೆ ಮಾಡಬೇಕು. ಜೀವಜಲವನ್ನು ಸಮಾಜ ಶಿಸ್ತಿನಿಂದ ಬಳಸಬೇಕು. ಅರಣ್ಯ, ನದಿ, ಜನ ಸಮತೋಲನ ಸಾಧಿಸಬೇಕಾದರೆ ಜಲ ಸಾಕ್ಷರತೆಯನ್ನು ಇಂದಿನಿಂದಲೇ ಪ್ರಾರಂಭಿಸಬೇಕು. ಅಲ್ಲದೆ, ಜಲ ಹಂಚಿಕೆಯಲ್ಲಿ ಅಪಾರ ಅಸಮಾನತೆ ಇದೆ. ಹೀಗಾಗಿ ಜಲ ಲಭ್ಯತೆಯಲ್ಲಿ ಸಮಾನತೆ ಸಾಧಿಸುವ ಅವಶ್ಯಕತೆ ಇದೆ ಎಂದರು.

ಅರಣ್ಯ, ಜೀವಿಪರಿಸ್ಥಿತಿ ಮತ್ತು ಪರಿಸರ ಇಲಾಖೆ ಪ್ರಧಾನ ಕಾರ್ಯದರ್ಶಿ ವಿಜಯಕುಮಾರ ಗೋಗಿ ಮಾತನಾಡಿ, ನೀರಿನ ಮಿತ ಬಳಕೆಯ ತಂತ್ರಜ್ಞಾನ ಅಳವಡಿಸಿಕೊಳ್ಳಲು ಜಾಗೃತಿ ಮೂಡಿಸಬೇಕು. ಮರಗಳು ಮತ್ತು ಜಲ ಮೂಲಗಳಿಗೆ ಅವಿನಾಭಾವ ಸಂಬಂಧವಿದೆ. ಮರಗಳು ಭೂಮಿಯಲ್ಲಿ ತೇವಾಂಶ ಉಳಿಸುವ ಮತ್ತು ನೈಸರ್ಗಿಕವಾಗಿ ಭೂಮಿಯ ಫಲವತ್ತತೆ ಹೆಚ್ಚಿಸುವ ಕಾರ್ಯ ನಿರ್ವಹಿಸುತ್ತವೆ. ಯೋಗ್ಯವಾದ ನೀರನ್ನು ಕಲುಷಿತಗೊಳಿಸುತ್ತಿದ್ದೇವೆ. ನೀರು ಬದುಕು ಬದಲಾಯಿಸಬಲ್ಲದು ಎಂಬ ಜಾಗೃತಿ ಎಲ್ಲರಲ್ಲಿ ಮೂಡಬೇಕು ಎಂದರು.

ವಾಲ್ಮಿ ನಿರ್ದೇಶಕ ಡಾ. ರಾಜೇಂದ್ರ ಪೋದ್ದಾರ ಅಧ್ಯಕ್ಷತೆ ವಹಿಸಿದ್ದರು. ಎಸ್.ಬಿ. ನಾಯ್ಕರ್, ನ್ಯಾಯಾಧೀಶ ಆರ್.ಎಸ್. ಚಿನ್ನಣ್ಣನವರ, ಬೆಳಗಾವಿ ಕಾಡಾ ಆಡಳಿತಾಧಿಕಾರಿ ಎಸ್.ಬಿ. ನಾಯ್ಕರ್, ಎಸ್.ಎಂ. ಮುಂದಿನಮನಿ, ರಾಜ್ಯದ ವಿವಿಧ ಭಾಗಗಳ 1000 ಕ್ಕೂ ಹೆಚ್ಚು ಕಾರ್ಯಕರ್ತರು, ರೈತರು, ಅಧಿಕಾರಿಗಳು, ವಿದ್ಯಾರ್ಥಿಗಳು, ಇತರರು ಇದ್ದರು.

ಇದೇ ಸಂದರ್ಭದಲ್ಲಿ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ನಿಬಂಧ ಸ್ಪರ್ಧೆ ವಿಜೇತರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಸಹಾಯಕ ನಿರ್ದೇಶಕ ಆರ್.ಎಂ. ಭಟ್ ಸ್ವಾಗತಿಸಿದರು. ಮಹದೇವಗೌಡ ಹುತ್ತನಗೌಡರ ನಿರೂಪಿಸಿದರು. ಕೃಷಾಜಿರಾವ್ ವಂದಿಸಿದರು.

ಹವಾಮಾನ ವೈಪರಿತ್ಯದಿಂದ ಭೂಮಂಡಲದ ಉಷ್ಣತೆ ಹೆಚ್ಚಾಗಿ ಮಳೆ ಅವಧಿ ಪ್ರಮಾಣದಲ್ಲಿ ಏರಿಳಿತ ಕಾಣುತ್ತಿದ್ದೇವೆ. ಈಗಾಗಲೇ ಅನೇಕ ದೇಶಗಳಲ್ಲಿ ಅಂತರ್ಜಲ ಬರಿದಾದ ಪರಿಣಾಮ ಜನ ವಲಸೆ ಹೋಗುತ್ತಿದ್ದಾರೆ. ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಹೀಗಾಗಿ ಜಲ ಸಂರಕ್ಷಣೆ ಮತ್ತು ಮಿತ ಬಳಕೆ ಕುರಿತು ಜಾಗೃತಿ ಮೂಡಿಸುವ ಕಾರ್ಯ ಕೈಗೊಳ್ಳಬೇಕು.
| ಡಾ. ರಾಜೇಂದ್ರಸಿಂಗ್ ಜಲ ತಜ್ಞ