ನೀರಿನ ಕೊರತೆಯಿಂದ ಸೊರಗುತ್ತಿದೆ ಅಬ್ಬಿಕೆರೆ

ಮುಳಗುಂದ: ಪಟ್ಟಣದ ಐತಿಹಾಸಿಕ ಅಬ್ಬಿ ಕೆರೆ ಹಲವು ದಶಕಗಳಿಂದ ಅಭಿವೃದ್ಧಿ ಕಾಣದೆ ನೀರಿನ ಮೂಲ ಕ್ಷೀಣಿಸುತ್ತಿದೆ. ಇದರಿಂದ ಸುತ್ತ ಮುತ್ತಲಿನ ಬೋರ್​ವೆಲ್​ಗಳ ಅಂತರ್ಜಲ ಕುಸಿಯುವ ಭೀತಿ ಎದುರಾಗಿದೆ.

20 ಎಕರೆ ವಿಸ್ತೀರ್ಣ ಹೊಂದಿದ ಈ ಕೆರೆ ಒಂದು ಕಾಲದಲ್ಲಿ ಪಟ್ಟಣದ ಜನರಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸುತ್ತಿತ್ತು. ಆದರೆ, ಈಗ ಕೈ ತೊಳೆಯಲು ಸಹ ಯೋಚಿಸುವಷ್ಟು ನೀರು ಮಲಿನಗೊಂಡಿದೆ. ಕೆರೆಯ ಸುತ್ತ ಮುತ್ತಲಿನ ಬಹುಭಾಗ ಮನೆಗಳ ಗಲೀಜು ನೀರು ಈ ಕೆರೆಗೆ ಬಂದು ಸೇರುತ್ತಿದೆ. ಕೆರೆ ಸುತ್ತ ಜಾಲಿ ಕಂಟಿಗಳು ಬೆಳೆದಿದ್ದು ಬಯಲು ಬಹಿರ್ದೆಸೆಯ ತಾಣವಾಗಿದೆ. ಕೆರೆಯ ಉತ್ತರ ಭಾಗದಲ್ಲಿ ಬೆಳೆದಿದ್ದ ಜಾಲಿ ಗಿಡಗಳನ್ನು ಮಾತ್ರ ಪಂಚಾಯಿತಿಯವರು ಇತ್ತೀಚೆಗೆ ತೆರವುಗೊಳಿಸಿದ್ದಾರೆ. ಆದರೆ, ಬೇರೆ ಯಾವುದೇ ಅಭಿವೃದ್ಧಿ ಕೆಲಸ ನಡೆದಿಲ್ಲ. ತಿಪ್ಪೆ, ಇತರ ಕಸವನ್ನು ತಂದು ದಡದಲ್ಲೇ ಸುರಿಯಲಾಗುತ್ತಿದೆ. ಇನ್ನೊಂದು ಬದಿಯಲ್ಲಿರುವ ಸುಲಭ ಶೌಚಗೃಹದ ನೀರು ಪೈಪ್ ಒಡೆದು ಕೆರೆಗೆ ಸೇರುತ್ತಿದೆ. ಪಕ್ಕದಲ್ಲಿ ಜಿಲ್ಲೆಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆ ಇದ್ದು, ತಡೆಗೋಡೆ ಕೂಡಾ ಇಲ್ಲದಾಗಿದೆ.

ಅವೈಜ್ಞಾನಿಕ ಕಾಲುವೆ ಕಾಮಗಾರಿ

ಪ.ಪಂ.ನವರ ಅವೈಜ್ಞಾನಿಕ ಕಾಲುವೆ ಕಾಮಗಾರಿಯಿಂದ ನೂರಾರು ಎಕರೆ ಹೊಲದಲ್ಲಿನ ಮಳೆ ನೀರು ಈಗ ಕೆರೆಗೆ ಬರುತ್ತಿಲ್ಲ. ಅದನ್ನು ಸರಿಪಡಿಸಿ ಮಳೆ ನೀರು ಕೆರೆಗೆ ಸೇರುವಂತೆ ಮಾಡಬೇಕಿದೆ. ಈ ಭಾಗದ ರೈತರ ದನಕರುಗಳಿಗೆ ನೀರು ಕುಡಿಯಲು ಕೆರೆಯೇ ಆಧಾರವಾಗಿದೆ.

ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಿ

ಕೆರೆಯ ಮಧ್ಯ ಪ್ರಾಕೃತಿಕವಾದ ನಡುಗಡ್ಡೆಯಿದ್ದು, ಪುರಾತನ ಹುಣಸೆ ಮರ, ಸಣ್ಣ ಪುಟ್ಟ ಗಿಡಗಂಟಿಗಳು ಬೆಳೆದಿರುವುದರಿಂದ ವಿವಿಧ ಜಾತಿಯ ಪಕ್ಷಿಗಳು ನೆಲೆಸುವ ನೆಚ್ಚಿನ ತಾಣವಾಗಿದೆ. ಇತ್ತೀಚೆಗೆ ಅಪರೂಪದ ವಿದೇಶಿ ಪಕ್ಷಿಗಳು ಸಹ ಇಲ್ಲಿ ಕಾಣುತ್ತಿರುವುದು ವಿಶೇಷ. ಹೀಗಾಗಿ ಈ ಕೆರೆಯನ್ನು ಇನ್ನಷ್ಟು ಅಭಿವೃದ್ಧಿಪಡಿಸುವ ಅಗತ್ಯವಿದೆ. 2013ರಲ್ಲಿ ಸ್ಥಳಿಯ ಪಟ್ಟಣ ಪಂಚಾಯಿತಿಯವರು ಕೆರೆ ಅಭಿವೃದ್ಧಿ ಮಾಡುವ ಯೋಜನೆ ಕೈಗೊಂಡಿದ್ದರಾದರೂ ಸಂಪೂರ್ಣ ಕಾಮಗಾರಿ ನಡೆಯಲಿಲ್ಲ. ಈ ಭಾಗದ ಶಾಸಕ ಎಚ್.ಕೆ. ಪಾಟೀಲ ಅವರು ಹಲವು ಸಂದರ್ಭಗಳಲ್ಲಿ ಕೆರೆ ಅಭಿವೃದ್ಧಿಯ ಭರವಸೆ ನೀಡುತ್ತಲೇ ಬಂದಿದ್ದಾರೆ, ಆದರೆ, ಇಲ್ಲಿಯವರೆಗೂ ಕಾರ್ಯರೂಪಕ್ಕೆ ಬರಲೇ ಇಲ್ಲ. ಕೆರೆ ಅಭಿವೃದ್ಧಿ ಜತೆಗೆ ಉತ್ತಮ ಪ್ರವಾಸಿ ತಾಣವಾಗಿಸುವ ಅಗತ್ಯವಿದ್ದು, ಸಂಬಂಧಿಸಿದ ಅಧಿಕಾರಿಗಳು ಕೂಡಲೆ ಕ್ರಮ ಕೈಗೊಳ್ಳಬೇಕು ಎಂದು ನಾಗರಿಕರಾದ ಮಂಜುನಾಥ ಅಣ್ಣಿಗೇರಿ, ಎಂ.ಎಚ್. ಕಣವಿ ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *