ನೀರಿನ ಕೊರತೆಯಾಗದಂತೆ ಸೂಕ್ತ ಕ್ರಮ

ಕಾರವಾರ: ಜಿಲ್ಲೆಯಲ್ಲಿ ಜನರಿಗೆ ನೀರಿನ ಕೊರತೆ ಉಂಟಾಗದಂತೆ ಸೂಕ್ತ ಕ್ರಮ ವಹಿಸಲು ಜಿಲ್ಲಾಡಳಿತ ಸಜ್ಜಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಹರೀಶ ಕುಮಾರ ಕೆ. ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಘಟ್ಟದ ಮೇಲಿನ ಭಾಗಗಳಲ್ಲಿ ಶಾಶ್ವತ ವ್ಯವಸ್ಥೆಗೆ ಸೂಚಿಸಲಾಗಿದೆ. ಕರಾವಳಿ ಭಾಗದಲ್ಲಿ ಉಪ್ಪು ನೀರಿನ ಸಮಸ್ಯೆ ಇರುವೆಡೆ ಟ್ಯಾಂಕರ್​ಗಳ ಮೂಲಕ ನೀರೊದಗಿಸಲು ವ್ಯವಸ್ಥೆ ಮಾಡಲಾಗಿದೆ. ಹಣದ ಕೊರತೆ ಇಲ್ಲ. ಕಾನೂನಿನ ತೊಡಕಿಲ್ಲ ಎಂದು ಸ್ಪಷ್ಟಪಡಿಸಿದರು. ನೀರಿನ ಸಮಸ್ಯೆ ಉಂಟಾಗುವ 304 ಗ್ರಾಮಗಳ 427 ಖಾಸಗಿ ಬೋರ್​ವೆಲ್​ಗಳು, 112 ತೆರೆದ ಬಾವಿಯ ಹಾಗೂ 10 ಇತರೆ ಖಾಸಗಿ ಮೂಲಗಳನ್ನು ಗುರುತಿಸಲಾಗಿದೆ. ಅವುಗಳನ್ನು ವಶಕ್ಕೆ ಪಡೆದು ನೀರು ಪೂರೈಸುವ ವ್ಯವಸ್ಥೆ ಮಾಡಲಾಗುವುದು ಎಂದು ವಿವರಿಸಿದರು.

ಜಿಪಂ ಸಿಇಒ ಎಂ.ರೋಶನ್ ಮಾತನಾಡಿ ಜಿಲ್ಲಾಧಿಕಾರಿ ಟಾಸ್ಕ್​ಫೋರ್ಸ್ ಅಡಿ 4 ಕೋಟಿ ವೆಚ್ಚದ 274 ಕಾಮಗಾರಿಗಳನ್ನು ಕೈಗೆತ್ತಿಕೊಂಡು 125 ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ. 149 ಕಾಮಗಾರಿಗಳು ಪ್ರಗತಿಯಲ್ಲಿವೆ. ಎಲ್ಲ ಕಾಮಗಾರಿಗಳನ್ನು ಮುಗಿಸಲಾಗುತ್ತಿದೆ. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಗೆ ಬಂದ ಅನುದಾನದಲ್ಲಿ 1.25 ಕೋಟಿ ವೆಚ್ಚದ 85 ಕಾಮಗಾರಿಗಳನ್ನು ಪಡೆದುಕೊಂಡಿದ್ದು, 36 ಕಾಮಗಾರಿಗಳು ಪೂರ್ಣಗೊಂಡಿವೆ ಎಂದರು.

ಎಲ್ಲ ಗ್ರಾಪಂಗಳಲ್ಲಿ ಬರ 14 ನೇ ಹಣಕಾಸು ಆಯೋಗದ ಅನುದಾನದಲ್ಲಿ ಕನಿಷ್ಠ 2 ಲಕ್ಷದಂತೆ ಸುಮಾರು 5 ಕೋಟಿ ಹಣ ಇದೆ. ಇನ್ನು ಪ್ರತಿ ತಾಲೂಕು ಮಟ್ಟದಲ್ಲಿ ಬರ ನಿರ್ವಹಣೆಗೆ 5.36 ಕೋಟಿ ರೂ. ಇರಿಸಲಾಗಿದೆ. ಎಲ್ಲ ತಹಸೀಲ್ದಾರರು, ತಾಪಂ ಕಾರ್ಯನಿರ್ವಹಣಾಧಿಕಾರಿಗಳು, ಕುಡಿಯುವ ನೀರಿನ ವಿಭಾಗದ ಇಂಜಿನಿಯರ್​ಗಳ ಸಭೆ ನಡೆಸಿ ಸೂಕ್ತ ವ್ಯವಸ್ಥೆಗೆ ಸೂಚಿಸಲಾಗಿದೆ ಎಂದು ವಿವರಿಸಿದರು.

ಪಂಪ್​ಸೆಟ್​ಗಳಿಗೆ ಸಿಂಗಲ್ ಫೇಸ್ ವಿದ್ಯುತ್: ಕಾರವಾರ ಹಾಗೂ ಅಂಕೋಲಾ ಪಟ್ಟಣ, ಸೀಬರ್ಡ್ ನೌಕಾ ಯೋಜನೆ, ಬಿಣಗಾದ ಗ್ರಾಸಿಂ ಇಂಡಸ್ಟ್ರೀಸ್ ಹಾಗೂ 16 ಗ್ರಾಪಂಗಳಿಗೆ ನೀರೊದಗಿಸುವ ಗಂಗಾವಳಿ ನದಿಯಲ್ಲಿ ನೀರಿನ ಮಟ್ಟ ಕುಸಿತವಾಗಿದೆ. ಗಂಗಾವಳಿಯಲ್ಲಿ 4 ಮೀಟರ್ ಮಾತ್ರ ನೀರಿದೆ. ಇದರಿಂದ ಎಲ್ಲೆಡೆ ಎರಡು ದಿನಕ್ಕೊಮ್ಮೆ ನೀರು ಪೂರೈಸಲು ಯೋಜಿಸಲಾಗಿದೆ. ಆ ಭಾಗದಲ್ಲಿ ಪಂಪ್​ಸೆಟ್​ಗಳ ಮೂಲಕ ನದಿಯ ನೀರನ್ನು ತೋಟಗಳಿಗೆ ಹರಿಸುವುದನ್ನು ಕಡಿಮೆ ಮಾಡಲು ಯೋಜಿಸಲಾಗಿದೆ. ಆ ಭಾಗದಲ್ಲಿ ಹಗಲಿನ ಹೊತ್ತಿನಲ್ಲಿ ಸಿಂಗಲ್ ಫೇಸ್ ವಿದ್ಯುತ್ ನೀಡಲು ಹೆಸ್ಕಾಂಗೆ ಸೂಚಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಹರೀಶ ಕುಮಾರ್ ತಿಳಿಸಿದರು.

ಕರೆ ಮಾಡಿದ್ರೆ ನೀರು ಬರುತ್ತೆ: ನೀರಿನ ಸಮಸ್ಯೆ ಇರುವ ಬಗ್ಗೆ ಯಾವುದೇ ನಗರ ಅಥವಾ ಗ್ರಾಮೀಣ ಪ್ರದೇಶಗಳ ಜನರು ಜಿಲ್ಲಾಧಿಕಾರಿ ಕಚೇರಿಯ ಜಲವಾಣಿ 08382-229857, ವ್ಯಾಟ್ಸ್​ಆಪ್ ದೂರು ಸಂಖ್ಯೆ 9483511015, ಟೋಲ್ ಫ್ರೀ ನಂಬರ್ 1077 ಅಥವಾ ತಹಸೀಲ್ದಾರ್ ಕಚೇರಿಗಳಿಗೆ ಕರೆ ಮಾಡಿ ತಿಳಿಸಬಹುದು. ನಗರ ಪ್ರದೇಶದಲ್ಲಿ 6 ತಾಸಿನ ಒಳಗೆ ಗ್ರಾಮೀಣ ಪ್ರದೇಶವಾದಲ್ಲಿ ಒಂದು ದಿನದ ಒಳಗೆ ನೀರಿನ ವ್ಯವಸ್ಥೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಹರೀಶ ಕುಮಾರ್ ತಿಳಿಸಿದರು.

ಆಪ್ ರಚಿಸಲು ಯೋಜನೆ: ಚುನಾವಣೆಯ ಸಂದರ್ಭದಲ್ಲಿ ಸಿ-ವಿಜಿಲ್ ಆಪ್ ಮೂಲಕ ತಕ್ಷಣ ಜನರ ದೂರುಗಳಿಗೆ ಸ್ಪಂದಿಸುವ ವ್ಯವಸ್ಥೆಯನ್ನು ಯಶಸ್ವಿಯಾಗಿ ನಿರ್ವಹಿಸಲಾಗಿದೆ. ಅದೇ ಮಾದರಿಯಲ್ಲಿ ಆಪ್ ಒಂದನ್ನು ಸಿದ್ಧಪಡಿಸಲು ಎನ್​ಐಸಿಗೆ ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿತಿಳಿಸಿದರು.

ಹೆಚ್ಚಿದ ನೀರಿನ ಅಭಾವ: ನಡು ಬೇಸಿಗೆ ಬರುತ್ತಿದ್ದಂತೆ ಜಿಲ್ಲೆಯಲ್ಲಿ ನೀರಿನ ಅಭಾವ ಹೆಚ್ಚಿದೆ. ಜಿಲ್ಲೆಯ 73 ಗ್ರಾಮಗಳಲ್ಲಿ ಸದ್ಯ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದ್ದು, 51 ಟ್ಯಾಂಕರ್​ಗಳ 145 ಟ್ರಿಪ್​ಗಳ ಮೂಲಕ ಸುಮಾರು 62,870 ಜನರಿಗೆ ನೀರು ಪೂರೈಕೆ ಮಾಡಲಾಗುತ್ತಿದೆ. ಯಲ್ಲಾಪುರ ಹಳಿಯಾಳ ಭಾಗದಲ್ಲಿ ಒಟ್ಟು 34 ಖಾಸಗಿ ಬೋರ್​ವೆಲ್​ಗಳನ್ನು ಬಾಡಿಗೆ ಪಡೆದು ನೀರು ಪೂರೈಸಲಾಗುತ್ತಿದೆ.

ಇನ್ನೂ ಸಮಸ್ಯೆ ಉಲ್ಬಣ: ಜಿಲ್ಲೆಯ ಒಟ್ಟು 156 ನಗರ ಹಾಗೂ ಗ್ರಾಮೀಣ ಸ್ಥಳೀಯ ಸಂಸ್ಥೆಗಳ 332 ಗ್ರಾಮಗಳ 668 ಮಜರೆ ಅಥವಾ ವಾರ್ಡ್​ಗಳಲ್ಲಿ ನೀರಿನ ಸಮಸ್ಯೆ ಉಂಟಾಗಬಹುದು ಎಂದು ಜಿಲ್ಲಾಡಳಿತ ಅಂದಾಜಿಸಿದೆ. ಕಾರವಾರದ 50, ಅಂಕೋಲಾದ 103, ಕುಮಟಾದ 46, ಹೊನ್ನಾವರದ 92, ಭಟ್ಕಳದ 108, ಶಿರಸಿಯ 47, ಸಿದ್ದಾಪುರದ 64, ಸಿದ್ದಾಪುರದ 64, ಯಲ್ಲಾಪುರದ 82, ಮುಂಡಗೋಡಿನ 16, ಹಳಿಯಾಳದ 44, ಜೊಯಿಡಾದ 56 ಗ್ರಾಮಗಳಲ್ಲಿ ಹಾಗೂ 16 ನಗರ ಸ್ಥಳೀಯ ಸಂಸ್ಥೆಗಳ ವಾರ್ಡ್​ಗಳಲ್ಲಿ ನೀರಿನ ಸಮಸ್ಯೆ ಉಂಟಾಗಬಹುದು ಎಂದು ಅಂದಾಜಿಸಲಾಗಿದೆ.