ಶಿವಮೊಗ್ಗ: ಜಿಲ್ಲೆಯಲ್ಲಿ ಮುಂದಿನ 3 ತಿಂಗಳು ಕುಡಿಯುವ ನೀರಿಗೆ ಯಾವುದೆ ತೊಂದರೆಯಾಗದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಡಿಸಿ ಕೆ.ಬಿ.ಶಿವಕುಮಾರ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಡಿಸಿ ಕಚೇರಿಯಲ್ಲಿ ಸೋಮವಾರ ಕುಡಿಯುವ ನೀರಿನ ಪರಿಸ್ಥಿತಿ ಕುರಿತು ಪರಿಶೀಲನಾ ಸಭೆ ನಡೆಸಿದ ಅವರು, ಪ್ರಸ್ತುತ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಸುವ ಪರಿಸ್ಥಿತಿ ಇಲ್ಲ. ಆದರೂ ಬೇಸಿಗೆಯಲ್ಲಿ ನೀರಿನ ತೊಂದರೆ ಎದುರಾಗಬಹುದಾದ 316 ಗ್ರಾಮಗಳನ್ನು ಗುರುತಿಸಲಾಗಿದೆ ಎಂದರು. ಈ ಗ್ರಾಮಗಳಲ್ಲಿ ಈಗಾಗಲೇ ಕುಡಿಯುವ ನೀರಿನ ಕಾಮಗಾರಿಗಳನ್ನು ಕೈಗೊಳ್ಳಲು ಕ್ರಿಯಾಯೋಜನೆಗೆ ಅನುಮೋದನೆ ನೀಡಲಾಗಿದೆ. ತಾತ್ಕಾಲಿಕ ಕಾಮಗಾರಿ ಕೈಗೊಳ್ಳುವ ಬದಲು ನೀರಿನ ಮೂಲ ಗುರುತಿಸಿ ಪೈಪ್ಲೈನ್ ಅಳವಡಿಕೆಯಂತಹ ಶಾಶ್ವತ ಕಾಮಗಾರಿ ಕೈಗೊಳ್ಳಲು ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.
ಗ್ರಾಮೀಣ ನೀರು ಪೂರೈಕೆ ಇಲಾಖೆ ಸೇರಿ ಎಲ್ಲ ಕುಡಿಯುವ ನೀರಿನ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಬೇಕು. ಪ್ರಸ್ತುತ ಕಾಮಗಾರಿ ಪೂರ್ಣಗೊಂಡು ಪ್ರಾಯೋಗಿಕ ನೀರು ಪೂರೈಕೆ ನಡೆಯುತ್ತಿರುವ ಮೂರು ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳನ್ನು ಆದಷ್ಟು ಬೇಗ ಕಾರ್ಯಾರಂಭ ಮಾಡಬೇಕು ಎಂದರು.
ಟ್ಯಾಂಕರ್ ಸಾಫ್ಟ್ವೇರ್: ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಕೆ ಮಾಡುವುದಕ್ಕೆ ಸಂಬಂಧಿಸಿ ಸರ್ಕಾರ ‘ಟ್ಯಾಂಕರ್ ಸಾಫ್ಟ್ವೇರ್’ ಯೋಜನೆ ರೂಪಿಸಿದ್ದು ಈ ಕುರಿತು ಸಂಬಂಧಪಟ್ಟ ಎಲ್ಲ ಅಧಿಕಾರಿಗಳಿಗೆ ಮಾಹಿತಿ ಒದಗಿಸಬೇಕು. ಉಪವಿಭಾಗಾಧಿಕಾರಿ ಮಟ್ಟದಲ್ಲಿ ಟ್ಯಾಂಕರ್ ನೀರು ಸರಬರಾಜು ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಬೇಕು. ಕಳೆದ ವರ್ಷದ ಕುಡಿಯುವ ನೀರಿನ ಕಾಮಗಾರಿಗಳ ಬಿಲ್ ಪಾವತಿ ಬಾಕಿ ಇದ್ದರೆ ಅದನ್ನು ಪಾವತಿಸಲು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ಅನುಮತಿ ಇಲ್ಲದೆ ನೀರು ಬಿಡಬೇಡಿ: ಗಾಜನೂರು, ಭದ್ರಾ, ಅಂಜನಾಪುರ, ಅಂಬ್ಲಿಗೊಳ ಜಲಾಶಯಗಳಲ್ಲಿ ಜೂನ್ವರೆಗೆ ಕುಡಿಯುವ ನೀರು ಪೂರೈಕೆಗೆ ನೀರು ಲಭ್ಯವಿದೆ. ಆದರೆ ಈಗಾಗಲೆ ನಿಗದಿಯಾಗಿರುವ ನೀರನ್ನು ಬಿಟ್ಟು ಬೇರೆ ಯಾವ ಕಾರಣಕ್ಕೂ ನೀರನ್ನು ಬಿಡಬಾರದು. ಕುಡಿಯುವ ನೀರಿಗೆ ಯಾವುದೆ ತೊಂದರೆಯಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ನೀರಿನ ಲಭ್ಯತೆ ಬಗ್ಗೆ ಪ್ರತಿ 15 ದಿನಗಳಿಗೊಮ್ಮೆ ವರದಿ ಸಲ್ಲಿಸಬೇಕು ಎಂದು ಹೇಳಿದರು.
ಜಿಪಂ ಸಿಇಒ ಎಂ.ಎಲ್.ವೈಶಾಲಿ, ಎಡಿಸಿ ಜಿ.ಅನುರಾಧಾ, ನಗರಪಾಲಿಕೆ ಆಯುಕ್ತ ಚಿದಾನಂದ ವಠಾರೆ, ಯೋಜನಾ ನಿರ್ದೇಶಕ ಡಾ.ನಾಗೇಂದ್ರ ಹೊನ್ನಳ್ಳಿ, ಉಪವಿಭಾಗೀಯ ಆಯುಕ್ತರಾದ ಡಾ.ಎಲ್.ನಾಗರಾಜ್, ಟಿ.ವಿ.ಪ್ರಕಾಶ್, ವಿವಿಧ ಇಲಾಖಾ ಅಧಿಕಾರಿಗಳಿದ್ದರು.