ನೀರಿನ ಅಭಾವದಿಂದ ಕಾಡುಕೋಣ ಸಾವು?

ಜೊಯಿಡಾ: ತಾಲೂಕಿನ ಕಾಳಿ ಹುಲಿ ಸಂರಕ್ಷಿತ ಪ್ರದೇಶವಾದ ಉಳವಿ ಸಮೀಪದ ಕಡಗರ್ಣಿ ಊರಿನ ರಸ್ತೆ ಪಕ್ಕದ ಕಾಡಿನಲ್ಲಿ 13 -16 ಪ್ರಾಯದ ಕಾಡುಕೋಣ ಮೃತಪಟ್ಟಿದೆ.

ಬಿಸಿಲಿನ ತಾಪಕ್ಕೆ ಕಾಡಿನಲ್ಲಿರುವ ಝುರಿಯ ನೀರೆಲ್ಲ ಬತ್ತುತ್ತಿದೆ. ನೀರಿನ ಅಭಾವದಿಂದ ಈ ಕಾಡು ಕೋಣ ಮೃತಪಟ್ಟಿರಬಹುದು ಎಂಬ ಶಂಕೆಯಿದೆ. ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರ ಖಚಿತ ಮಾಹಿತಿ ದೊರೆಯಲಿದೆ. ಮೂರ್ನಾಲ್ಕು ದಿನಗಳ ಹಿಂದೆ ಮೃತಪಟ್ಟಿರುವ ಕಾಡುಕೋಣವನ್ನು ಅರಣ್ಯಾಧಿಕಾರಿಗಳು ಉಳವಿ ಪಶು ವೈದ್ಯರಿಂದ ಭಾನುವಾರ ಮರಣೋತ್ತರ ಪರೀಕ್ಷೆ ನಡೆಸಿ ಅಂತ್ಯಕ್ರಿಯೆ ಮಾಡಿದ್ದಾರೆ. ಅಣಶಿ ವನ್ಯ ಜೀವಿ ವಲಯ ಎಸಿಎಫ್ ಶಿವಾನಂದ ತೊಡ್ಕರ, ಆರ್​ಎಫ್​ಒ ವೀರೇಶ ಕಬ್ಬಿನ, ಉಳವಿ ಪಶು ವೈದ್ಯಾಧಿಕಾರಿ ಪ್ರದೀಪ ಮತ್ತು ಅರಣ್ಯ ಇಲಾಖೆಯ ಸಿಬ್ಬಂದಿ ಇದ್ದರು.

ಇಲಾಖೆ ನಡೆಗೆ ಅನುಮಾನ: ಕಾಡುಕೋಣ ಮೃತಪಟ್ಟ ವಿಚಾರವನ್ನು ಅರಣ್ಯ ಇಲಾಖೆಯವರು ತಾವಾಗಿಯೇ ಮಾಧ್ಯಮದವರಿಗೆ ಮಾಹಿತಿ ನೀಡಲಿಲ್ಲ. ಈ ನಡೆ ಹಲವು ಶಂಕೆಗೆ ಕಾರಣವಾಗಿದೆ. 4 ದಿನಗಳ ಹಿಂದೆ ಕಾಡುಕೋಣ ಮೃತಪಟ್ಟರೂ ಅರಣ್ಯ ಇಲಾಖೆಯವರಿಗೆ ಯಾರೂ ಮಾಹಿತಿ ನೀಡಿದಂತಿಲ್ಲ. ಅಲ್ಲದೆ, ಇಲಾಖೆಗೆ ಮಾಹಿತಿ ತಿಳಿದ ಕೂಡಲೇ ಮರಣೋತ್ತರ ಪರೀಕ್ಷೆ ನಡೆಸಿ ಅಂತ್ಯಕ್ರಿಯೆ ನಡೆಸಿದ್ದರು. ಕಾಡುಕೋಣ ನೀರಿನ ಅಭಾವದಿಂದ ಅಥವಾ ಸಹಜವಾಗಿ ಮೃತಪಟ್ಟಿದ್ದರೆ ಇಲಾಖೆ ಯಾಕೆ ಗುಪ್ತವಾಗಿ ಅಂತ್ಯಕ್ರಿಯೆಗೆ ತಯಾರಿ ನಡೆಸಿತ್ತು? ಯಾರನ್ನಾದರೂ ಬಚಾವ್ ಮಾಡುವ ಯತ್ನ ಇದರ ಹಿಂದೆ ಇದೆಯೇ ಎಂಬ ಅನುಮಾನ ವ್ಯಕ್ತವಾಗಿದೆ.

Leave a Reply

Your email address will not be published. Required fields are marked *