
ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:
ಬುಧವಾರ ಸುರಿದ ಭಾರಿ ಮಳೆಯ ಪರಿಣಾಮ ನೇಕಾರನಗರ ಸೇತುವೆ ಬಳಿ ನೀರಿನಲ್ಲಿ ಕೊಚ್ಚಿ ಹೋಗಿದ್ದ ಹುಸೇನಸಾಬ್ ಕಳಸ (58)ಎಂಬುವವರ ಶವ ಶುಕ್ರವಾರ ಮಧ್ಯಾಹ್ನ ಪತ್ತೆಯಾಗಿದೆ.
ನೀರಿನ ಸೆಳೆತಕ್ಕೆ ಸಿಲುಕಿ ಕೊಚ್ಚಿ ಹೋಗಿದ್ದ ಸ್ಥಳದಿಂದ 2.5 ಕಿಲೋ ಮೀಟರ್ ದೂರದಲ್ಲಿ ಮೃತ ದೇಹ ಸಿಕ್ಕಿದೆ. ಚರಂಡಿಯಲ್ಲಿ ಬಿದ್ದು ನಾಲಾ ಸೇರಿದ್ದ ಹುಸೇನಸಾಬ್ ದೇಹ ಗಿಡಗಂಟಿಗಳ ನಡುವೆ ಸಿಲುಕಿ ಹಾಕಿಕೊಂಡಿತ್ತು. ಜೆಸಿಬಿ ಬಳಸಿ ಗಿಡ ಗಂಟಿಗಳ ನಡುವೆ ಹುಡುಕಿದಾಗ ಶವ ಪತ್ತೆಯಾಗಿದೆ.
ಬೆಳಗಾವಿಯಿಂದ ಕರೆಯಿಸಲಾಗಿದ್ದ ಎಸ್ಡಿಆರ್ಎಫ್ ತಂಡ ಇಂದು ಬೆಳಗ್ಗೆಯಿಂದಲೇ ಶೋಧ ಕಾರ್ಯಾಚರಣೆ ನಡೆಸಿತ್ತು. ಅವರಿಗೆ ಹುಬ್ಬಳ್ಳಿ ಅಗ್ನಿಶಾಮಕ ದಳದ ಸಿಬ್ಬಂದಿ ಸಾಥ್ ನೀಡಿದ್ದರು.
ಹುಬ್ಬಳ್ಳಿಯಲ್ಲಿ ಬುಧವಾರ ಸಂಜೆಯಿಂದ ಮಧ್ಯರಾತ್ರಿಯವರೆಗೆ ಧಾರಾಕಾರ ಮಳೆಯಾಗಿತ್ತು. ಅಂದು ರಾತ್ರಿ ಬೈಕ್ನಲ್ಲಿ ನೇಕಾರನಗರ ಸೇತುವೆ ಬಳಿ ರಸ್ತೆ ದಾಟುತ್ತಿದ್ದ ಹುಸೇನಸಾಬ್ ಕಳಸ ಆಯ ತಪ್ಪಿ ಬಿದ್ದು ನೀರಿನ ಸೆಳೆತಕ್ಕೆ ಸಿಲುಕಿ ಚರಂಡಿ ಸೇರಿ ನಾಲಾ ನೀರಿನಲ್ಲಿ ಕೊಚ್ಚಿ ಹೋಗಿದ್ದರು. ಜಮೀನಿನಲ್ಲಿ ಕೆಲಸ ಮುಗಿಸಿಕೊಂಡು ಮನೆಗೆ ಹಿಂತಿರುಗುವ ವೇಳೆ ಈ ಅವಘಡ ಸಂಭವಿಸಿತ್ತು. ಸಮೀಪದಲ್ಲಿದ್ದ ಸಿಸಿ ಕ್ಯಾಮರಾ ದೃಶ್ಯಾವಳಿಯಲ್ಲಿ ವ್ಯಕ್ತಿ ಬಿದ್ದಿರುವ ದೃಶ್ಯ ಮಾತ್ರ ಸೆರೆಯಾಗಿತ್ತು. ನೀರಿನಲ್ಲಿ ಕೊಚ್ಚಿ ಹೋಗಿರುವುದು ಖಚಿತ ಪಟ್ಟಿರಲಿಲ್ಲ. ಆತನ ಮೊಬೈಲ್ ಲೋಕೇಶನ್ ಸಹ ಅದೇ ಸ್ಥಳದಲ್ಲಿ ಇದ್ದಿದ್ದು ಟ್ರ್ಯಾಕ್ ಆಗಿತ್ತು.
ಇದರ ಆಧಾರದ ಮೇಲೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಸಿಬ್ಬಂದಿ, ಶಹರ ತಹಸೀಲ್ದಾರ ಕಲ್ಲಗೌಡ ಪಾಟೀಲ ನೇತೃತ್ವದಲ್ಲಿ ಕಂದಾಯ ಇಲಾಖೆ ಸಿಬ್ಬಂದಿ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಬುಧವಾರ ರಾತ್ರಿಯಿಂದಲೇ ಶೋಧ ಕಾರ್ಯಾಚರಣೆ ನಡೆಸಿದ್ದರು. ಗುರುವಾರವೂ ಶವ ಪತ್ತೆಯಾಗದಿದ್ದರಿಂದ ಬೆಳಗಾವಿಯಿಂದ ಎಸ್ಡಿಆರ್ಎಫ್ ತಂಡವನ್ನು ಕರೆಯಿಸಲಾಗಿತ್ತು.