ನೀರಿಗೆ ಬರ, ದಂಧೆಕೋರರಿಗೆ ವರ!

ಮುಂಡರಗಿ: ತುಂಗಭದ್ರಾ ನದಿ ನೀರು ಬರಿದಾಗುತ್ತಿದ್ದಂತೆ ಮರಳು ದಂಧೆಕೋರರು ಕಾನೂನು, ನಿಯಮಗಳನ್ನು ಗಾಳಿಗೆ ತೂರಿ ಗಣಿಗಾರಿಕೆಯಲ್ಲಿ ತೊಡಗಿದ್ದಾರೆ. ಮನಬಂದಂತೆ ತುಂಗಭದ್ರೆಯ ಒಡಲು ಬಗೆದು ಹಗಲು ದರೋಡೆ ಮಾಡುತ್ತಿದ್ದಾರೆ.

ನದಿಯಲ್ಲಿ ಈಗ ನೀರು ಕಡಿಮೆಯಾಗಿದ್ದು, ಟಿಪ್ಪರ್ ಹಾಗೂ ಲಾರಿಗಳ ಸದ್ದು ಜೋರಾಗಿದೆ. ನದಿಯಲ್ಲೇ ಕಚ್ಚಾ ರಸ್ತೆ ನಿರ್ವಿುಸಿ ಜೆಸಿಬಿ ಯಂತ್ರಗಳನ್ನು ಬಳಸಿ ಮರಳು ತೆಗೆಯಲಾಗುತ್ತಿದೆ.

ಕಾನೂನು ಪ್ರಕಾರ ಗುತ್ತಿಗೆದಾರರು ನದಿಯ ನಿಂತ ನೀರಿನಲ್ಲಿ ಮರಳು ತೆಗೆಯುವಂತಿಲ್ಲ. ಮರಳು ತೆಗೆಯಲು ಯಾವುದೇ ಯಂತ್ರ ಬಳಸುವಂತಿಲ್ಲ. ಮಾನವ ಸಂಪನ್ಮೂಲಗಳಿಂದ ಮರಳು ತೆಗೆಯಬೇಕು. ಅದು ಯಾವುದೇ ಜಲಚರ ಜೀವಿಗಳಿಗೆ ತೊಂದರೆಯಾಗದಂತೆ ನೀರು ನಿಲ್ಲದ ಜಾಗದಲ್ಲಿ 1 ಮೀ. ಆಳದಲ್ಲಿ ಮಾತ್ರ ಮರಳು ತೆಗೆಯಬೇಕು ಎಂಬ ಸೂಚನೆ ಇದೆ. ಆದರೆ, ಗುತ್ತಿಗೆದಾರರು ಕಾನೂನು ನಿಯಮಗಳನ್ನು ಕಡೆಗಣಿಸಿ ಕಳೆದ ಹಲವಾರು ಮನಬಂದಂತೆ 4-5 ಮೀಟರ್ ಆಳದಲ್ಲಿ ಜೆಸಿಬಿ ಯಂತ್ರ ಬಳಸಿ ಮರಳು ತೆಗೆಯುತ್ತಿದ್ದಾರೆ.

ನದಿಯಲ್ಲೇ ರಸ್ತೆ: ನದಿಯಿಂದ ಮರಳು ಸಾಗಾಟ ಮಾಡಲು ನದಿಯಲ್ಲೇ ಗರಸು ಹಾಕಿ ಕಚ್ಚಾ ರಸ್ತೆ ನಿರ್ವಿುಸಲಾಗಿದೆ. ಜೆಸಿಬಿ ಯಂತ್ರಗಳು ನಿಂತ ನೀರಿನಿಂದ ಮರಳು ತೆಗೆದು ಟಿಪ್ಪರ್, ಟ್ರ್ಯಾಕ್ಟರ್​ಗೆ ಹಾಕುತ್ತಿವೆ. ಕಚ್ಚಾ ರಸ್ತೆಯ ಮೂಲಕ ಟಿಪ್ಪರ್, ಟ್ರ್ಯಾಕ್ಟರ್​ಗಳು ನದಿಯಲ್ಲಿ ಸುಗಮವಾಗಿ ಸಂಚರಿಸಲು ಅನುಕೂಲ ಮಾಡಿಕೊಳ್ಳಲಾಗಿದೆ. ಇಷ್ಟೆಲ್ಲ ಅಕ್ರಮ ಚಟುವಟಿಕೆ ನಡೆದರೂ ಅಧಿಕಾರಿಗಳು ಮಾತ್ರ ತಮಗೆ ಸಂಬಂಧವಿಲ್ಲ ಎಂಬಂತೆ ಮೌನವಾಗಿದ್ದಾರೆ.

ಗುಂಡಿಯೊಳಗೆ ನೀರು: ನದಿಯಲ್ಲಿ ಆಳವಾಗಿ ಮರಳು ತೆಗೆಯುವುದರಿಂದ ಅಲ್ಲಲ್ಲಿ ಬೃಹತ್ ಗುಂಡಿಗಳು ನಿರ್ವಣವಾಗಿವೆ. ಹಮ್ಮಿಗಿ ಬ್ಯಾರೇಜ್​ನಿಂದ ನೀರು ಹರಿಸಿದರೆ ಆ ನೀರು ಗುಂಡಿಯೊಳಗೆ ಸೇರುತ್ತದೆ. ಇದರಿಂದ ಜನರಿಗೆ ಕುಡಿಯುವ ನೀರಿನ ಅಭಾವ ಸೃಷ್ಟಿಯಾಗುವುದರ ಜೊತೆಗೆ ರೈತರ ಜಮೀನುಗಳಿಗೆ ನೀರಿಲ್ಲದಂತಾಗುತ್ತದೆ.

ರಾತ್ರಿ ಸಾಗಾಣಿಕೆ: ನದಿಯಿಂದ ಸಂಜೆ 6 ಗಂಟೆಯ ನಂತರ ಮರಳು ಸಾಗಾಣಿಕೆ ಮಾಡಬಾರದು. ಆದರೆ, ರಾತ್ರಿ ವೇಳೆ ನದಿಯಿಂದ ಅಕ್ರಮವಾಗಿ ಮರಳನ್ನು ಸಾಗಾಣಿಕೆ ಮಾಡಲಾಗುತ್ತಿದೆ ಎನ್ನುವ ಆರೋಪಗಳು ಕೇಳಿಬಂದಿವೆ.

ಓವರ್ ಲೋಡ್: ಕೆಲವು ಮರಳು ಘಟಕದಲ್ಲಿ 12 ಕ್ಯೂಬಿಕ್ ಮೀಟರ್ ಅಂತ ಪಾಸ್ ನೀಡಿ ಮನಬಂದಂತೆ ಮರಳು ತುಂಬಿ ಸಾಗಾಣಿಕೆ ಮಾಡುತ್ತಾರೆ. 12 ಕ್ಯೂಬಿಕ್ ಮೀಟರ್ ಮರಳು, ಲಾರಿ 8 ಟನ್ ತೂಕ ಸೇರಿ ಒಟ್ಟು 20 ಟನ್ ಇರುವಲ್ಲಿ 25, 30, 40, ಕ್ಯೂಬಿಕ್ ಮೀಟರ್​ನಷ್ಟು ಮರಳು ತುಂಬಿ ಸಾಗಾಣಿಕೆ ಮಾಡಲಾಗುತ್ತದೆ. ಫೆ. 1ರಂದು ಗಂಗಾಪುರ ಬಳಿಯ ಘಟಕಕ್ಕೆ ತಹಸೀಲ್ದಾರ್ ವೆಂಕಟೇಶ ನಾಯಕ ಭೇಟಿ ನೀಡಿದ ಸಂದರ್ಭದಲ್ಲಿ 40 ಕ್ಯೂಬಿಕ್ ಮರಳು ತುಂಬಿದ್ದ ಓವರ್ ಲೋಡ್ ಆದ ಅನೇಕ ಲಾರಿಗಳನ್ನು ಪರಿಶೀಲಿಸಿ ಮರಳನ್ನು ಒಂದೆಡೆ ಹಾಕಿಸಿದ್ದರು. ಮುಂದೆ ಹೀಗಾಗದಂತೆ ಎಚ್ಚರ ವಹಿಸಬೇಕು ಎಂದು ಅಧಿಕಾರಿಗಳು ಸೂಚಿಸಿದ್ದರು.

ಕೆಲಸ ಕೊಡ್ರಿ: ತಾಲೂಕಿನಲ್ಲಿ ಸತತ ಬರಗಾಲದಿಂದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈಗಾಗಲೇ ಹಲವಾರು ಗ್ರಾಮಗಳ ಅದೆಷ್ಟೋ ಜನರು ಉದ್ಯೋಗ ಅರಸಿ ಗುಳೆ ಹೋಗುವಂತಹ ಸ್ಥಿತಿ ನಿರ್ವಣವಾಗಿದೆ. ನದಿಯಲ್ಲಿ ಯಂತ್ರೋಪಕರಣ ಬಳಸದೇ ಮಾನವ ಸಂಪನ್ಮೂಲಗಳಿಂದ ಮರಳು ಸಂಗ್ರಹಿಸಬೇಕು ಎಂದು ಕಾನೂನು ನಿಯಮವಿದೆ. ಹೀಗಾಗಿ, ನಮಗೆ ಮರಳು ಸಂಗ್ರಹಿಸಲು ಕೆಲಸ ಕೊಡಿ ಎಂದು ಜನರ ಒತ್ತಾಯಿಸುತ್ತಿದ್ದಾರೆ.

ದಾಖಲಾದ ಪ್ರಕರಣಗಳು: ಅಕ್ರಮ ಮರಳು ಸಾಗಾಣಿಕೆ ಮಾಡುತ್ತಿದ್ದ ಟಿಪ್ಪರ್, ಲಾರಿ, ಟ್ರಾ್ಯಕ್ಟರ್, ಬೊಲೆರೋ ವಶಕ್ಕೆ ತೆಗೆದುಕೊಂಡಿರುವುದು ಸೇರಿ 32ಕ್ಕೂ ಹೆಚ್ಚು ಪ್ರಕರಣಗಳು ಪೊಲೀಸ್ ಠಾಣೆಯಲ್ಲಿ ದಾಖಲಾಗಿವೆ. ಅನೇಕರು ಹೊರ ವಲಯದಲ್ಲಿ ಸಂಗ್ರಹಿಸಿದ್ದ ಅಕ್ರಮ ಮರಳು ಅಡ್ಡೆಗಳ ಮೇಲೆ ದಾಳಿ ನಡೆಸಿದ 2 ಪ್ರಕರಣಗಳು ದಾಖಲಾಗಿವೆ.