ನೀರಿಗಾಗಿ ಜಿಪಂ ಎಇಇ, ಪಿಡಿಒಗೆ ಘೇರಾವ್

ಹಟ್ಟಿಚಿನ್ನದಗಣಿ: ಸಮೀಪದ ಪೈದೊಡ್ಡಿ ಗ್ರಾಪಂ ವ್ಯಾಪ್ತಿ ಯರಜಂತಿ ಗ್ರಾಮದಲ್ಲಿ ಸೋಮವಾರ ಬೋರ್‌ವೆಲ್ ಕೊರೆಸಲು ತೆರಳುತ್ತಿದ್ದ ಅಧಿಕಾರಿಗಳನ್ನು ಪೈದೊಡ್ಡಿ ಗ್ರಾಮಸ್ಥರು ತಡೆದು ಘೇರಾವ್ ಹಾಕಿ ಪ್ರತಿಭಟನೆ ನಡೆಸಿದರು.

ಗ್ರಾಮದ ದೊಡ್ಡಿಗಳಲ್ಲಿ ಬೋರ್‌ವೆಲ್ ಕೊರೆಸಲು ಹೊರಟಿದ್ದ ಜಿಪಂ ಎಇಇ ಶ್ರೀಮಂತ ಮಿಣಜಗಿ ಹಾಗೂ ಪೈದೊಡ್ಡಿ ಗ್ರಾಪಂ ಪಿಡಿಒ ಜಹೀರ್‌ಹುಸೇನ್ ಅವರ ವಾಹನ ಅಡ್ಡಗಟ್ಟಿದ ಗ್ರಾಮಸ್ಥರು, ಗ್ರಾಮದಲ್ಲಿ ಕುಡಿವ ನೀರಿಗೆ ಹಾಹಾಕಾರ ಉಂಟಾಗಿದೆ. ಈ ಕುರಿತು ಹಲವು ಬಾರಿ ಗಮನಕ್ಕೆ ತರಲಾಗಿದ್ದರೂ ಯಾವುದೆ ಕ್ರಮಕೈಗೊಂಡಿಲ್ಲ ಎಂದು ಗ್ರಾಪಂ ಸದಸ್ಯ ತಿಮ್ಮಯ್ಯ ಸೇರಿ ಜನರು ಆಕ್ರೋಶ ವ್ಯಕ್ತಪಡಿಸಿದರು. ಎಲ್ಲೆಲ್ಲಿ ನೀರಿನ ಸಮಸ್ಯೆ ಇದೆ ಎಂದು ಇಲಾಖೆಯಿಂದ ಪರಿಶೀಲನೆ ನಡೆಸಿದ್ದು, ಅಗತ್ಯವಿರುವಲ್ಲಿ ಬೋರ್‌ವೆಲ್ ಕೊರೆಸಲಾಗುತ್ತಿದೆ ಎಂದ ಬಳಿಕ ಗ್ರಾಮಸ್ಥರು ಸುಮ್ಮನಾದರು.