ನೀರಿಗಾಗಿ ಅನಿರ್ದಿಷ್ಟಾವಧಿ ಧರಣಿ

ಗಜೇಂದ್ರಗಡ: ಪಟ್ಟಣದ ಎಲ್ಲ ಬಡಾವಣೆಗಳಿಗೆ ಸಮರ್ಪಕ ಕುಡಿಯುವ ನೀರು ಪೂರೈಸಲು ಪುರಸಭೆ, ತಾಲೂಕು ಹಾಗೂ ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಬಿಜೆಪಿ ಕಾರ್ಯಕರ್ತರು ಇಲ್ಲಿನ ತಹಸೀಲ್ದಾರ್ ಕಚೇರಿ ಆವರಣದಲ್ಲಿ ಬುಧವಾರ ಅನಿರ್ದಿಷ್ಟಾವಧಿ ಧರಣಿ ಪ್ರಾರಂಭಿಸಿದರು.

ಬೇಸಿಗೆ ಆರಂಭಕ್ಕೂ ಮುನ್ನವೇ ಪಟ್ಟಣದಲ್ಲಿ 20- 22 ದಿನಗಳಿಗೊಮ್ಮೆ ನೀರು ಪೂರೈಕೆಯಾಗುತ್ತಿದ್ದು, ಜನಸಾಮಾನ್ಯರು ನಿತ್ಯ ಕಾಯಕ ಬಿಟ್ಟು ನೀರಿಗಾಗಿ ಅಲೆಯುವ ದುಸ್ಥಿತಿ ಎದುರಾಗಿದೆ.

ಉಳ್ಳವರು ಟ್ಯಾಂಕರ್​ಗಳಿಂದ ನೀರು ಹಾಕಿಸಿಕೊಂಡು ಕುಡಿಯಲು ಶುದ್ಧ ನೀರು ಬಳಸುತ್ತಾರೆ. ಆದರೆ, ಮಧ್ಯಮ ವರ್ಗ ಹಾಗೂ ಬಡವರ ಪಾಡೇನು? ನೀರಿನ ಕರ ಕಟ್ಟದಿದ್ದರೆ ನಲ್ಲಿಯ ಸಂಪರ್ಕ ಬಂದ್ ಮಾಡುವುದಾಗಿ ಹೆದರಿಸುತ್ತಾರೆ ಎಂದು ಧರಣಿ ನಿರತರು ಅಧಿಕಾರಿಗಳ ವಿರುದ್ಧ ಹರಿಹಾಯ್ದರು. ಧರಣಿ ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ಗುರುಸಿದ್ದಯ್ಯ ಹಿರೇಮಠ, ಪುರಸಭೆ ಮುಖ್ಯಾಧಿಕಾರಿ ಹನಮಂತಮ್ಮ ನಾಯಕ ಅಹವಾಲು ಆಲಿಸಿ ಮಾತನಾಡಿ, ನೀರಿನ ಸಮಸ್ಯೆ ಬಗೆಹರಿಸಲು ಖಾಸಗಿಯವರ ಕೊಳವೆ ಬಾವಿ ವಶಕ್ಕೆ ಪಡೆದು, ಅವುಗಳಿಂದ ಮುಖ್ಯ ಜಲಸಂಗ್ರಹಾಗಾರಕ್ಕೆ ಸಂರ್ಪಸುವ ಪೈಪ್​ಲೈನ್ ಕಾಮಗಾರಿ ನಡೆಸಲಾಗುತ್ತಿದೆ ಎಂದು ತಿಳಿಸಿದರು. ಇದಕ್ಕೊಪ್ಪದ ಧರಣಿನಿರತರು ಸಮಸ್ಯೆ ಎದುರಾಗುವ ಮುನ್ನವೇ ಏಕೆ ಕ್ರಮ ಕೈಗೊಳ್ಳಲಿಲ್ಲ? ನೀವು ಪೈಪ್​ಲೈನ್ ಸಂಪರ್ಕ ಕಲ್ಪಿಸುವವರೆಗೆ ಜನರ ಪಾಡೇನು? ಈಗಿನಿಂದಲೇ ಟ್ಯಾಂಕರ್ ಮೂಲಕ ಜಲ ಸಂಗ್ರಹಾಗಾರಕ್ಕೆ ನೀರು ಸರಬರಾಜು ಮಾಡಿ ನಲ್ಲಿಯ ಮೂಲಕ ಎಲ್ಲರಿಗೂ ಸಮರ್ಪಕ ನೀರು ಪೂರೈಸಬೇಕು ಎಂದು ಪಟ್ಟುಹಿಡಿದಿದ್ದಾರೆ. ಬಿಜೆಪಿಯ ಅಶೋಕ ವನ್ನಾಲ, ಭಾಸ್ಕರ ರಾಯಬಾಗಿ, ಬಿ.ಎಂ. ಸಜ್ಜನರ, ರಾಜೇಂದ್ರ ಘೊರ್ಪಡೆ, ಸಿದ್ದಣ್ಣ ಬಳಿಗಾರ, ಪುರಸಭೆ ಬಿಜೆಪಿ ಸದಸ್ಯರಾದ ಕನಕಪ್ಪ ಅರಳಿಗಿಡದ, ಯು.ಆರ್. ಚನ್ನಮ್ಮನವರ, ಉಮಾ ಮ್ಯಾಕಲ್, ಸುಜಾತಾಬಾಯಿ ಶಿಂಗ್ರಿ, ವಿಜಯಾ ಮಾಳಗಿ, ಲೀಲಾವತಿ ಸವಣೂರ, ಲೀಲಾವತಿ ವನ್ನಾಲ, ಕೌಸರಬಾನು ಹುನಗುಂದ, ವೀರಪ್ಪ ಪಟ್ಟಣಶೆಟ್ಟಿ, ರೂಪಲೇಶ ರಾಠೋಡ, ಲಕ್ಷ್ಮೀ ಮುಧೋಳ, ಯಮನಪ್ಪ ತಿರಕೋಜಿ, ಸುಭಾಸ ಮ್ಯಾಗೇರಿ, ಸಂಜೀವಕುಮಾರ ಜೋಶಿ, ಗುಲಾಂನಬಿ ಹುನಗುಂದ, ಬಸವರಾಜ ಬಂಕದ, ಶರಣಪ್ಪ ಚಳಗೇರಿ, ದುರಗಪ್ಪ ಮುಧೋಳ ಇದ್ದರು.

ಅಧಿಕಾರಿಗಳ ಭರವಸೆ

ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಿದ ಅಧಿಕಾರಿಗಳು, ಗುರುವಾರದಿಂದ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುವುದಾಗಿ ತಿಳಿಸಿದರು. ಆದರೆ, ಟ್ಯಾಂಕರ್ ನೀರು ಸರಬರಾಜಾದ ಮೇಲೆಯೇ ಧರಣಿ ಅಂತ್ಯಗೊಳಿಸುವುದಾಗಿ ಪ್ರತಿಭಟನಾಕಾರರು ತಿಳಿಸಿದರು.