ನೀರಾ ಘಟಕ ಆರಂಭ ಯಾವಾಗ?

ರಾಮನಗರ: ತೆಂಗು ಬೆಳೆಗಾರರ ರಕ್ಷಣೆಗಾಗಿ ಬಜೆಟ್​ನಲ್ಲಿ ಘೊಷಣೆಯಾದ ನೀರಾ ಸಂಸ್ಕರಣ ಘಟಕಗಳ ಸ್ಥಾಪನೆ ಯೋಜನೆ ಇನ್ನೂ ಕಾಗದದಲ್ಲಷ್ಟೇ ಇದ್ದು ಕಾರ್ಯರೂಪಕ್ಕೆ ಬರುವುದು ಯಾವಾಗ ಎಂಬುದು ರೈತರ ಪ್ರಶ್ನೆಯಾಗಿದೆ.

ನುಸಿ ಪೀಡೆ, ಕಪ್ಪು ತಲೆ ಹುಳು ಬಾಧೆ ಜತೆಗೆ ಬೆಲೆ ಕುಸಿತದಿಂದ ಕಂಗಾಲಾಗಿದ್ದ ರೈತ ನೀರಾ ಇಳಿಸಲು ಮುಂದಾದಾಗ ಚನ್ನಪಟ್ಟಣದಲ್ಲಿ ಹುಟ್ಟಿಕೊಂಡ ಹೋರಾಟದ ಕಾವು ಇಡೀ ರಾಜ್ಯ ವ್ಯಾಪಿಸಿತು. 2001ರ ಅಕ್ಟೋಬರ್ 9ರಂದು ಚನ್ನಪಟ್ಟಣ ತಾಲೂಕಿನ ವಿಠಲೇನಹಳ್ಳಿಯಲ್ಲಿ ನಡೆದ ಗೋಲಿಬಾರ್​ಗೆ ರೈತರಾದ ತಮ್ಮಯ್ಯ ಮತ್ತು ಪುಟ್ಟನಂಜಯ್ಯ ಬಲಿಯಾದರು. ಆದರೆ ಇದುವರೆಗೂ ನೀರಾ ಸಂಸ್ಕರಣ ಘಟಕ ಆರಂಭವಾಗದಿರುವುದು ದೌರ್ಭಾಗ್ಯ ಎನ್ನುವಂತಾಗಿದೆ.

ಸಂಸ್ಕರಣ ಘಟಕವಾಗಲೇ ಇಲ್ಲ: ಎರಡು ದಶಕದ ಹಿಂದೆ ಹುಟ್ಟಿಕೊಂಡ ನೀರಾ ಹೋರಾಟ ಜೀವ ಕಳೆದುಕೊಳ್ಳದೆ ನಿರಂತರವಾಗಿ ನಡೆಯುತ್ತಲೇ ಬಂತು. ಇದರ ಪರಿಣಾಮವಾಗಿ 2017-18ನೇ ಸಾಲಿನಲ್ಲಿ ನೀರಾವನ್ನು ಒಂದು ಪುಷ್ಟಿದಾಯಕ ಪೇಯವಾಗಿ ಬಳಸಲು ರಾಜ್ಯ ಸರ್ಕಾರ ಅನುಮತಿ ನೀಡಿತು. ಜತೆಗೆ 3 ಕೋಟಿ ರೂಪಾಯಿ ಅನುದಾನ ಮೀಸಲಿಟ್ಟಿತ್ತು. ರಾಜ್ಯದಲ್ಲಿ ನೀರಾ ಇಳಿಸಲು ಅನುಕೂಲವಾಗುವಂತೆ ನೀರಾ ನೀತಿ ಜಾರಿಗೆ ತರುವ ಬಗ್ಗೆ ಬಜೆಟ್​ನಲ್ಲಿ ಪ್ರಸ್ತಾಪ ಮಾಡಿ, ಅಬಕಾರಿ ನಿಯಮಗಳಲ್ಲಿ ಕೆಲ ಮಾರ್ಪಾಡು ಮಾಡುವುದಾಗಿಯೂ ಹೇಳಿತ್ತು. ಜತೆಗೆ ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯಡಿ ನೀರಾ ಸಂಸ್ಕರಣ ಘಟಕಗಳ ಸ್ಥಾಪನೆಗೆ ಸರ್ಕಾರ ಮಾರ್ಗಸೂಚಿ ಹೊರಡಿಸಿದೆ. ಆದರೆ ಈ ಮಾರ್ಗಸೂಚಿ ಜಿಲ್ಲಾ ತೋಟಗಾರಿಕೆ ಇಲಾಖೆಗೆ ಬಂದಿದೆಯಾದರೂ, ಘಟಕಗಳ ಸ್ಥಾಪನೆಗೆ ಬೇಕಾದ ಅನುದಾನ ಬಂದಿಲ್ಲ.

ಜಾರಿಯಾಗದ ಆದೇಶ: 2017ರ ಡಿಸೆಂಬರ್​ನಲ್ಲಿ ರಾಜ್ಯ ತೋಟಗಾರಿಕೆ ಆಯುಕ್ತರು ಘಟಕ ಸ್ಥಾಪನೆಗೆ ಮಾರ್ಗಸೂಚಿ ಹೊರಡಿಸಿದ್ದಾರೆ. ಅದರಂತೆ ತೆಂಗು ಅಭಿವೃದ್ಧಿ ಮಂಡಳಿಯಿಂದ ರಚನೆಯಾದ ನೋಂದಾಯಿತ ಬೆಳೆಗಾರರ ಕಂಪನಿಗಳು ಮತ್ತು ತೋಟಗಾರಿಕೆ ಇಲಾಖೆ ವತಿಯಿಂದ ರಚಿಸುವ ರೈತ ಉತ್ಪಾದಕ ಸಂಸ್ಥೆಗಳಿಗೆ ಮಾತ್ರ ನೀರಾ ಇಳಿಸಲು ಮತ್ತು ಉಪ ಉತ್ಪನ್ನಗಳ ತಯಾರಿಕೆಗೆ ಅನುಮತಿ ನೀಡಬೇಕು. ಇದಕ್ಕಾಗಿ ಅಬಕಾರಿ ಇಲಾಖೆಯಿಂದ ಪೂರ್ವಾನುಮತಿ ಪಡೆಯುವುದು ಸೇರಿ ಹಲವು ನಿಬಂಧನೆಗಳನ್ನು ವಿಧಿಸಿದೆ. ವಿವಿಧ ಹಂತದಲ್ಲಿ ಗರಿಷ್ಠ 25ರಿಂದ 50 ಲಕ್ಷ ರೂ.ವರೆಗೂ ಸಹಾಯಧನ ಮತ್ತು ಉತ್ಪನ್ನಗಳ ಮಾರುಕಟ್ಟೆ ಸೌಲಭ್ಯ ಕಲ್ಪಿಸಲು ಸರ್ಕಾರ 10 ಲಕ್ಷ ರೂ.ವರೆಗೆ ಸಹಾಯಧನ ನೀಡುತ್ತದೆ. ಹೀಗೆ ಹಲವು ಮಾರ್ಗಸೂಚಿಗಳುಳ್ಳ ಆದೇಶದ ಪ್ರತಿ ಬಂದು 2 ವರ್ಷ ಕಳೆದರೂ ನೀರಾ ಘಟಕ ಆರಂಭವಾಗುವ ಲಕ್ಷಣ ಕಾಣುತ್ತಿಲ್ಲ.

ಮುಖ್ಯಮಂತ್ರಿಗಳೇ ಇತ್ತ ನೋಡಿ: ನೀರಾ ಚಳವಳಿಗೆ ಶಕ್ತಿ ನೀಡಿದ್ದು ಚನ್ನಪಟ್ಟಣದಲ್ಲಿ ನಡೆದ ಹೋರಾಟ. ಇದರ ಫಲವಾಗಿಯೇ ಇಂದು ನೀರಾಗೆ ಸರ್ಕಾರ ಮಾನ್ಯತೆ ನೀಡಿದೆ. ಆದರೆ ರಾಜ್ಯದಲ್ಲಿ ಹೆಚ್ಚು ತೆಂಗು ಬೆಳೆಯುವ ಜಿಲ್ಲೆಯಲ್ಲಿ ಎರಡನೇ ಸ್ಥಾನ ಪಡೆದುಕೊಂಡಿರುವ ರಾಮನಗರದಲ್ಲಿ ನೀರಾ ಸಂಸ್ಕರಣ ಘಟಕ ಆಗಲೇ ಇಲ್ಲ. ಮುಖ್ಯಮಂತ್ರಿ ಕುಮಾರಸ್ವಾಮಿಯವರು ಈಗಲಾದರೂ ಸ್ವಕ್ಷೇತ್ರ ಚನ್ನಪಟ್ಟಣದಲ್ಲಿ ನೀರಾ ಘಟಕಕ್ಕೆ ಚಾಲನೆ ನೀಡುವ ಮೂಲಕ ಸಂಕಷ್ಟಕ್ಕೆ ಸಿಲುಕಿರುವವರ ನೆರವಿಗೆ ಧಾವಿಸಬೇಕು ಎನ್ನುವುದು ರೈತರ ಆಗ್ರಹವಾಗಿದೆ.

ಜಿಲ್ಲೆಯ ರೈತರು ಸಾಕಷ್ಟು ತೊಂದರೆಗೆ ಒಳಗಾಗಿದ್ದಾರೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಜಿಲ್ಲೆ ಪ್ರತಿನಿಧಿಸುತ್ತಿದ್ದು, ಈಗಲಾದರೂ ನೀರಾ ಘಟಕ ಸ್ಥಾಪನೆ ಸೇರಿ, ರೈತರಿಗೆ ಪೂರಕವಾಗುವಂತಹ ಯೋಜನೆಗಳನ್ನು ಜಾರಿಗೊಳಿಸಬೇಕು.

| ಸಿ.ಪುಟ್ಟಸ್ವಾಮಿ, ರೈತ ಮುಖಂಡ ರಾಮನಗರ.

ನೀರಾ ಸಂಸ್ಕರಣ ಘಟಕ ಸ್ಥಾಪನೆ ಸಂಬಂಧ ಮಾರ್ಗಸೂಚಿ ಬಂದು ಸುಮಾರು 2 ವರ್ಷಗಳಾಗುತ್ತಿವೆ. ಆದರೆ, ಇವು ಕೇವಲ ಕಾಗದದಲ್ಲಿವೆ. ಈಗಲಾದರೂ ಮುಖ್ಯಮಂತ್ರಿಗಳು ಅದನ್ನು ಕಾರ್ಯಗತಗೊಳಿಸುವ ನಿಟ್ಟಿನಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಬೇಕಿದೆ.

| ಧರಣೇಶ್, ರೈತ ಮುಖಂಡರು ರಾಂಪುರ

Leave a Reply

Your email address will not be published. Required fields are marked *