ನೀರಾವರಿ ವಿಚಾರದಲ್ಲಿ ಸಿಎಂ ಸುಳ್ಳಿನ ಕಂತೆ

ಸೊರಬ: ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ನೀರಾವರಿ ಯೋಜನೆ ಬಗ್ಗೆ ಸರ್ಕಾರದ ಮಾಹಿತಿ ತಿರುಚಿ ಸುಳ್ಳಿನ ಕಂತೆಯನ್ನು ಜನತೆಗೆ ಹೇಳುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಶಾಸಕ ಕುಮಾರ್ ಬಂಗಾರಪ್ಪ ಆರೋಪಿಸಿದರು.

ಕುಮಾರಸ್ವಾಮಿ ಅವರು ಸರ್ಕಾರ, ಬಜೆಟ್ ಸೇರಿ ಎಲ್ಲ ವಿಷಯಗಳಲ್ಲಿ ಸುಳ್ಳಿನ ಆಡಳಿತ ನಡೆಸುತ್ತಿದ್ದಾರೆ. ನವೆಂಬರ್​ನಲ್ಲಿ ನೀರಾವರಿ ಯೋಜನೆಗಳ ಬಗ್ಗೆ ಸಮಗ್ರ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದರ ಪರಿಣಾಮ ಜನವರಿಯಲ್ಲಿ ಮೂಗೂರು ನೀರಾವರಿ ಯೋಜನೆ ಜಾರಿಗೊಳಿಸಲಾಗಿದೆ. ಇದನ್ನು ಅರಿಯದೆ ನಾನೇ ನೀರಾವರಿಗೆ ಒತ್ತು ನೀಡಿದ್ದೇನೆ ಎನ್ನುವುದು ಸರಿಯಲ್ಲ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಜಾರಿಯಾಗದ ಮೂಡಿ ಏತ ನೀರಾವರಿ ಯೋಜನೆ ಮಂಜೂರು ಮಾಡಿದ್ದೇನೆಂದು ಸುಳ್ಳು ಮಾತುಗಳನ್ನಾಡಿದ್ದಾರೆ. ಸರ್ಕಾರದ ಅಧಿಕೃತ ದಾಖಲೆಗಳನ್ನು ಮುಂದಿಟ್ಟುಕೊಳ್ಳದೆ ಸುಳ್ಳನ್ನು ಜನತೆಗೆ ಒಪ್ಪಿಸುವ ಮುಖ್ಯಮಂತ್ರಿಗೆ ಜ್ಞಾನ ಇಲ್ಲವೇ ಎಂದು ಪ್ರಶ್ನಿಸಿದರು.

ಬಂಗಾರಪ್ಪ ಅಂಥವರಿಗೇ ರಾಜಕೀಯ ನೆಲೆ ನೀಡದ ದೇವೇಗೌಡ, ಕುಮಾರಸ್ವಾಮಿ ಅಂಥವರಿಂದ ಮಧು ಬಂಗಾರಪ್ಪ ಅವರನ್ನು ಗೆಲ್ಲಿಸಲು ಸಾಧ್ಯವೆ? ಡಿ.ಕೆ.ಶಿವಕುಮಾರ್ ಬರುತ್ತಾರೆನ್ನುವುದು ಕೂಡ ಹುಸಿಯಾಗಿದ್ದು, ಮಧು ಬಂಗಾರಪ್ಪ ಸೋಲು ಖಚಿತ ಎಂದರು.

ಕಳೆದೆರಡೂ ಚುನಾವಣೆಗಳಲ್ಲಿ ಮಧು ಬಂಗಾರಪ್ಪ ಅವರನ್ನು ಏಕೆ ಸೋಲಿಸಿದ್ದೀರಿ ಎಂದು ಕಾರಣ ಕೇಳುವ ಕುಮಾರಸ್ವಾಮಿ, ಕಾಗೋಡು ತಿಮ್ಮಪ್ಪ ಅವರೊಂದಿಗೆ ಮಧು ಸೇರಿಕೊಂಡು ಬಗರ್​ಹುಕುಂ ಹಕ್ಕುಪತ್ರ ವಿತರಿಸುವಲ್ಲಿ ಲೂಟಿ ಮಾಡಿರುವುದಕ್ಕೆ, ಅಭಿವೃದ್ಧಿ ಮಾಡದಿರುವುದಕ್ಕೆ ಜನ ಪಾಠ ಕಲಿಸಿದ್ದಾರೆ ಎಂಬುದನ್ನು ಅರಿಯಬೇಕು ಎಂದರು.

ತಾಲೂಕು ಬಿಜೆಪಿ ಅಧ್ಯಕ್ಷ ಎ.ಎಲ್.ಅರವಿಂದ್, ಜಿಪಂ ಮಾಜಿ ಉಪಾಧ್ಯಕ್ಷ ಪಾಣಿ ರಾಜಪ್ಪ, ಎಂ.ಆರ್.ಪಾಟೀಲ್, ವಕೀಲ ನಾಗಪ್ಪ, ಶಿವಯೋಗಿ, ಮಧುರಾಯ್ ಜಿ.ಶೇಟ್ ಇದ್ದರು.

ಗೀತಾಗೆ ಕುಮಾರ್ ಸವಾಲು: ಗೀತಾ ಶಿವರಾಜ್ ಕುಮಾರ್ ಅವರು ಲೋಕಸಭಾ ಚುನಾವಣೆಯಲ್ಲಿ ಸೋತ ಬಳಿಕ ಕ್ಷೇತ್ರದಲ್ಲಿರದೆ, ತಮ್ಮನನ್ನು ಗೆಲ್ಲಿಸಿಕೊಳ್ಳಲು ದಿಢೀರನೆ ಪ್ರತ್ಯಕ್ಷರಾಗಿ ಮಾಹಿತಿ ಕೊರತೆಯಿಂದ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದು ಕುಮಾರ್ ಹೇಳಿದರು. ತಂದೆ ಬಂಗಾರಪ್ಪ ಅವರ ಸಮಾಧಿ ಅಭಿವೃದ್ಧಿಗೆ ಮೊಮ್ಮಕ್ಕಳು ಇಂಜಿನಿಯರ್​ಗಳಾಗಲಿ ಅವರಿಂದ ಸಮಾಧಿ ಕೆಲಸ ಮಾಡಿಸುತ್ತೇವೆ ಎನ್ನುವುದು ಹಾಸ್ಯಾಸ್ಪದ. ನನ್ನ ಮಕ್ಕಳೂ ಇಂಜಿನಿಯರಿಂಗ್ ಓದಿದ್ದು ಸಮಾಧಿ ಅಭಿವೃದ್ಧಿ ಕೆಲಸ ಮಾಡಲು ನನಗೆ ಅವಕಾಶ ಕಲ್ಪಿಸಿದಲ್ಲಿ 24 ಗಂಟೆಯೊಳಗೆ ನಿರ್ವಿುಸಿ ತೋರಿಸುತ್ತೇನೆಂದು ಸವಾಲು ಹಾಕಿದರು.

Leave a Reply

Your email address will not be published. Required fields are marked *