ಪಟ್ಟನಾಯಕನಹಳ್ಳಿ: ಭದ್ರ್ರಾ, ಎತ್ತಿನಹೊಳೆ, ಮೇಕೆದಾಟುಗಳಂತಹ ನೀರಾವರಿ ಯೋಜನೆಗಳ ಕಾಮಗಾರಿ ತ್ವರಿತಗತಿ ಅನುಷ್ಠಾನಕ್ಕೆ ಸರ್ಕಾರ ಇಚ್ಛಾಶಕ್ತಿ ಹೊಂದಬೇಕಿದೆ ಎಂದು ಸ್ಪಟಿಕಪುರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ನಂಜಾವಧೂತ ಸ್ವಾಮೀಜಿ ಒತ್ತಾಯಿಸಿದರು.
ಶಿರಾ ತಾಲೂಕು ಪಟ್ಟನಾಯಕನಹಳ್ಳಿ ಗುರುಗುಂಡ ಬ್ರಹ್ಮೇಶ್ವರ ಸ್ವಾಮಿ ಮಠದ ಆವರಣದಲ್ಲಿ ಭಾನುವಾರು ಭಕ್ತರು ಆಯೋಜಿಸಿದ್ದ 40ನೇ ವರ್ಧಂತಿ ಮಹೋತ್ಸವ ಹಾಗೂ ನೀರಾವರಿ ಹಕ್ಕೊತ್ತಾಯ ದಿನ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ನೀರಾವರಿ ಯೋಜನೆಗಳು ತ್ವರಿತವಾಗಿ ಪೂರ್ಣಗೊಂಡರೆ ಮಧ್ಯ ಕರ್ನಾಟಕದ ಜಿಲ್ಲೆಗಳ ನೀರಾವರಿ ಸಮಸ್ಯೆ ಶಾಶ್ವತವಾಗಿ ನೀಗಲಿದ್ದು, ರೈತರಿಗೆ ಅನುಕೂಲವಾಗಲಿದೆ. ರೈತರ ಕಷ್ಟಕ್ಕೆ ಶ್ರೀಮಠ ಎಂದಿಗೂ ಧ್ವನಿಯಾಗಿ ಕಾರ್ಯ ನಿರ್ವಹಿಸಲಿದೆ ಎಂದರು.
ಶ್ರೀಮಠದ ಒತ್ತಾಸೆಯಂತೆ ಹಿರಿಯೂರು ಮಾರಿಕಣಿವೆ ಜಲಾಶಯಕ್ಕೆ ಪ್ರಾಯೋಗಿಕವಾಗಿ ಭದ್ರಾ ಯೋಜನೆಯ ನೀರು ಬಿಡಲಾಗಿದೆ. ಅದರಂತೆ ಶಿರಾ ತಾಲೂಕಿನ ಜನರ ಜೀವನಾಡಿಯಾದ ಮದಲೂರು ಕೆರೆಗೆ 68 ಕೋಟಿ ರೂ. ಅನುದಾನದಲ್ಲಿ 38 ಕಿಮೀ ಕಾಲುವೆ ನಿರ್ವಿುಸಿದ ಮಾಜಿ ಸಚಿವ ಜಯಚಂದ್ರ ಅವರ ಸೇವೆ ಶ್ಲಾಘನೀಯ. ಅದೇ ರೀತಿ ಮದಲೂರು ಕಾಲುವೆಗೆ ಹೇಮಾವತಿ ನೀರು ಹರಿಸಲು ಸಿಎಂ ಕುಮಾರಸ್ವಾಮಿ ಇಚ್ಛಾಶಕ್ತಿ ತೋರಿದರೆ ಈ ಭಾಗದ ಕುಡಿಯುವ ನೀರಿನ ತತ್ವಾರ ತಪ್ಪಲಿದೆ ಎಂದರು.
ಮಾಜಿ ಸಂಸದ ಸಿ.ಪಿ.ಮೂಡಲಗಿರಿಯಪ್ಪ ಮಾತನಾಡಿ, ನೀರಾವರಿ ಯೋಜನೆಗಳ ಬಗ್ಗೆ ಶ್ರೀಗಳ ಕಾಳಜಿ ಹಾಗೂ ರೈತ ಪರ ನಿಲುವು ಮೆಚ್ಚುವಂತದ್ದು. ಇಂತಹ ಗುರುವಂದನೆ ನೀರಿಗಾಗಿ ಹಕ್ಕೊತ್ತಾಯ ದಿನವಾಗುತ್ತಿರುವುದು ಅರ್ಥಪೂರ್ಣ ಎಂದು ಹೇಳಿದರು.
ಲೋಕಕಲ್ಯಾಣಕ್ಕಾಗಿ ಹೋಮ ಹವನ, ಜನಪರ ಕಾಳಜಿ, ನಿರ್ಗತಿಕ ಹಾಗೂ ಅನಾಥ ಮಕ್ಕಳಿಗೆ ಆಶ್ರಯ ನೀಡಿ ಪೋಷಿಸುವ ಶ್ರೀಗಳ ಸಮಾಜಮುಖಿ ಸೇವೆ ಅವಿಸ್ಮರಣಿಯ ಎಂದು ಜಿಪಂ ಸದಸ್ಯ ಶಿವರಾಮ್ ಎಂದರು.
ತಾಪಂ ಸದಸ್ಯ ಕೆ.ಎಂ.ಶ್ರೀನಿವಾಸ್, ಜೆಡಿಎಸ್ ಜಿಲ್ಲಾ ಅಧ್ಯಕ್ಷ ಡಿ.ಯಶೋಧರ, ಜೆಡಿಎಸ್ ರಾಜ್ಯ ಸಂಘಟನಾ ಕಾರ್ಯದರ್ಶಿ ಕಲ್ಕೆರೆ ರವಿಕುಮಾರ್, ಬಿಜೆಪಿ ಮುಖಂಡ ಚಿದಾನಂದ ಎಂ.ಗೌಡ, ಜೆಡಿಎಸ್ ತಾಲೂಕು ಅಧ್ಯಕ್ಷ ಆರ್.ಉಗ್ರೇಶ್, ಮುಖಂಡರಾದ ಪ್ರಕಾಶ್ಗೌಡ, ಕ್ಯಾದಿಗುಂಟೆ ತಿಪ್ಪೇಸ್ವಾಮಿ, ವರಕೇರಪ್ಪ, ಮಂದ್ಲಹಳ್ಳಿ ನಾಗರಾಜು, ತಾಲೂಕು ರೈತ ಸಂಘದ ಅಧ್ಯಕ್ಷ ಲಕ್ಷ್ಮಣ್ಗೌಡ, ಡಾ. ನಾರಾಯಣ ಆಚಾರ್ಯ, ಡಾ.ಮುದ್ದರಂಗಪ್ಪ, ಮುದಮಡು ರಂಗಸ್ವಾಮಿ ಇತರರಿದ್ದರು.
ನೆರೆ ರಾಜ್ಯ ಆಂಧ್ರಪ್ರದೇಶ ಸರ್ಕಾರ ನೀರಾವರಿ ಯೋಜನೆಗಳಿಗೆ ಒತ್ತು ನೀಡುತ್ತಿದೆ. ಯಾವ ಮುಖ್ಯಮಂತ್ರಿ ಶಂಕುಸ್ಥಾಪನೆ ಮಾಡುತ್ತಾರೋ, ಅವರೇ ಯೋಜನೆ ಪೂರ್ಣಮಾಡಿ ಉದ್ಘಾಟಿಸುತ್ತಾರೆ. ಅಂತಹ ಇಚ್ಛಾಶಕ್ತಿ ನಮ್ಮ ರಾಜ್ಯದ ರಾಜಕಾರಣಿಗಳಲ್ಲಿ ಕಾಣುತ್ತಿಲ್ಲ.
| ಶ್ರೀ ನಂಜಾವಧೂತ ಸ್ವಾಮೀಜಿ, ಸ್ಪಟಿಕಪುರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ