ನೀತಿ ಸಂಹಿತೆ ಸಡಿಲಿಕೆಗೆ ಬಿಜೆಪಿ ಪಟ್ಟು

ತುಮಕೂರು: ರಾಜ್ಯದಲ್ಲಿ ಮತದಾನ ಮುಗಿದಿರುವುದರಿಂದ ಚುನಾವಣೆ ನೀತಿ ಸಂಹಿತೆ ಸಡಿಲಿಸಬೇಕೆಂದು ಜಿಲ್ಲೆಯ ಬಿಜೆಪಿ ಶಾಸಕರು ಒಕ್ಕೊರಲಿನಿಂದ ಆಗ್ರಹಿಸಿದ್ದಾರೆ.

ಜಿಲ್ಲೆಯಾದ್ಯಂತ ತೀವ್ರ ಬರ ಪರಿಸ್ಥಿತಿ ಇದೆ. ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಒದಗಿಸಲು ನೀತಿ ಸಂಹಿತೆ ಅಡ್ಡಿಯಾಗಿದೆ ಎಂದು ನಗರದಲ್ಲಿ ಗುರುವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಶಾಸಕರಾದ ಬಿ.ಸಿ.ನಾಗೇಶ್, ಮಸಾಲ ಜಯರಾಂ, ಜಿ.ಬಿ.ಜ್ಯೋತಿಗಣೇಶ್ ವಿವರಿಸಿದರು. ಬರಗಾಲ ಎದುರಿಸುವುದು ಬಹಳ ಕಷ್ಟವಾಗಿದೆ. ಕುಡಿಯುವ ನೀರು, ದನಗಳಿಗೆ ಮೇವು ಕೊಡಲಾಗದ ಅಸಹಾಯಕ ಸ್ಥಿತಿಗೆ ಬಂದಿದ್ದೇವೆ. ತಕ್ಷಣವೇ ನೀತಿ ಸಂಹಿತೆ ಸಡಿಲಿಸಿ ಬರ ನಿರ್ವಹಣೆಗೆ ಕ್ರಮವಹಿಸಲು ರಾಜ್ಯದ ಮುಖ್ಯಕಾರ್ಯದರ್ಶಿಗಳಿಗೆ ಅನುವು ಮಾಡಿಕೊಡುವಂತೆ ರಾಜ್ಯಸರ್ಕಾರ ಹಾಗೂ ಚುನಾವಣಾ ಆಯೋಗವನ್ನು ಒತ್ತಾಯಿಸಿದರು.

ಚುನಾವಣಾ ಆಯೋಗ ‘ನಮ್ಮನ್ನು ಕ್ರಿಮಿನಲ್ಸ್ ರೀತಿಯಲ್ಲಿ ನಡೆಸಿಕೊಳ್ಳುತ್ತಿದೆ’. ಜನರಿಗೆ ನೀರು ಕೊಡಲು ಹೊಸದಾಗಿ ಕೊಳವೆಬಾವಿ ಕೊರೆಸಲು ಟೆಂಡರ್ ಕರೆಯಲು ಆಗುತ್ತಿಲ್ಲ. ನೀತಿ ಸಂಹಿತೆ ನೆಪ ಹೇಳುತ್ತಿರುವ ಅಧಿಕಾರಿಗಳು ನಮ್ಮ ಜತೆ ಮಾತನಾಡದಂತೆ ತಾಕೀತು ಮಾಡಲಾಗಿದೆ. ಇಂತಹ ದುರಂತ ಸನ್ನಿವೇಶವನ್ನು ನನ್ನ ರಾಜಕೀಯ ಜೀವನದಲ್ಲೇ ಕಂಡಿಲ್ಲ ಎಂದು ಚಿಕ್ಕನಾಯಕಹನಳ್ಳಿ ಶಾಸಕ ಜೆ.ಸಿ.ಮಾಧುಸ್ವಾಮಿ ಅಸಮಾಧಾನ ಹೊರಹಾಕಿದರು.

ರಾಜಕೀಯ ಬಿಟ್ಟು ಬೇರೇನೂ ಮಾಡಿಲ್ಲ !: ಕುಡಿಯುವ ನೀರು, ಮೇವು ನೀಡುವಂತೆ ರೈತರು ಒತ್ತಾಯಿಸುತ್ತಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ಈ ಬಗ್ಗೆ ಗಮನಕೊಡುತ್ತಿಲ್ಲ. ಸರ್ಕಾರ ಬಂದು 1 ವರ್ಷವಾಗುತ್ತ ಬಂದಿದ್ದು, ಒಂದು ಕೆಡಿಪಿ ಸಭೆ ಮಾಡಿದೆ. ರಾಜಕೀಯ ಮಾಡಿದ್ದು ಬಿಟ್ಟು ಬೇರೇನೂ ಮಾಡಿಲ್ಲ. ನಿಜಕ್ಕೂ ನನ್ನ ಸ್ಥಾನದ ಬಗ್ಗೆ ನಾಚಿಕೆಯಾಗುತ್ತಿದೆ. ನೀತಿ ಸಂಹಿತೆ ಸಡಿಲಗೊಳಿಸಲು ಚುನಾವಣಾ ಆಯೋಗಕ್ಕೆ ಸಿಎಂ ಮನವಿ ಮಾಡಬೇಕು ಎಂದು ಒತ್ತಾಯಿಸಿದರು.

ಶಾಸಕರಾದ ಬಿ.ಸಿ.ನಾಗೇಶ್, ಮಸಾಲ ಜಯರಾಂ, ಜಿ.ಬಿ.ಜ್ಯೋತಿಗಣೇಶ್ ಇದ್ದರು.

ಏಕವಚನದಲ್ಲಿ ಸಂಬೋಧಿಸಿಲ್ಲ…: ನನಗೆ ಹುಚ್ಚು ಹಿಡಿದಿಲ್ಲ, ಯಾರ ಸಮ್ಮುಖದಲ್ಲಾದರೂ ಪರೀಕ್ಷೆ ಮಾಡಿಸಿ. ಮುಖ್ಯಮಂತ್ರಿಗಳೇ ಸೈಕಿಯಾಟ್ರಿಸ್ಟ್ ಅಲ್ವಾ ಹಾಗಾಗಿ ಆ ರೀತಿ ಹೇಳಿದ್ದಾರೆ. ಸಿಎಂ ಸ್ಥಾನಕ್ಕೆ ಘನತೆಗೆ ಬರುವಂತೆ ನಡೆದುಕೊಳ್ಳಬೇಕಿತ್ತು. ಅದು ಬಿಟ್ಟು ಚಿಕ್ಕನಾಯಕನಹಳ್ಳಿಗೆ ಬಂದಾಗ ನನ್ನ ಬಗ್ಗೆ ಅಸಭ್ಯವಾಗಿ ಮಾತನಾಡಿದ್ದರು. ಹಾಗಾಗಿ, ನಾನೂ ಅವರ ವೈಯಕ್ತಿಕ ವಿಷಯ ಚುನಾವಣಾ ಪ್ರಚಾರದಲ್ಲಿ ಪ್ರಸ್ತಾಪಿಸಿದ್ದೆ. ಅದಕ್ಕೆ ವಿಷಾದ ಕೂಡ ವ್ಯಕ್ತಪಡಿಸಿದ್ದೆ. ನಾನೆಂದೂ ಏಕವಚನದಲ್ಲಿ ಸಂಬೋಧಿಸಿಲ್ಲ ಎಂದು ಶಾಸಕ ಜೆ.ಸಿ.ಮಾಧುಸ್ವಾಮಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು. ಇನ್ನು ಚಿಕ್ಕನಾಯಕನಹಳ್ಳಿಯಲ್ಲಿ ಅಧಿಕಾರಿಗಳು ಕೆಲಸ ಮಾಡಲು ಹಿಂದೇಟು ಹಾಕುತ್ತಿದ್ದಾರೆ ಎಂಬ ಮಾಜಿ ಸಚಿವ ಜಯಚಂದ್ರ, ಮಾಜಿ ಶಾಸಕ ಸಿ.ಬಿ.ಸುರೇಶ್​ಬಾಬು ಹೇಳಿಕೆಗೆ ಚಿಕ್ಕನಾಯಕನಹಳ್ಳಿಯಲ್ಲಿ ಯಾವ ಕಚೇರಿ ಖಾಲಿ ಇವೆಯಾ? ಅಧಿಕಾರಿಗಳು ನಾನು ಸರ್ವಾಧಿಕಾರಿ ರಈತಿ ವರ್ತಿಸುತ್ತೇನೆಂದು ಆರೋಪ ಮಾಡಿದ್ದಾರಾ ಎಂದು ತಿರುಗೇಟು ನೀಡಿದರು.

ಹೇಮಾವತಿ ಜತೆಗೆ ಚಿಕ್ಕನಾಯಕನಹಳ್ಳಿ, ತಿಪಟೂರು, ಗುಬ್ಬಿಗೆ ಎತ್ತಿನಹೊಳೆ ಯೋಜನೆ ನೀರು ಕೊಡಬೇಕು. ನೀರು ಕೊಡದಿದ್ದರೆ ಒಂದಿಂಚು ನಾಲೆ ತೆಗೆಯಲು ಬಿಡುವುದಿಲ್ಲ. ಯಾವ ಮಿಲಿಟರಿ ತಗೊಂಡು ಬಂದ್ರು ನಾಲೆ ಕಾಮಗಾರಿ ಮಾಡಲು ಬಿಡಲ್ಲ. ಅರಸೀಕೆರೆಗೆ ನೀರು ಕೊಡ್ತಾರೆ, ಕೊರಟಗೆರೆಗೂ ಕೊಡ್ತ್ತಾರೆ. ತಿಪಟೂರು, ಚಿಕ್ಕನಾಯಕನಹಳ್ಳಿಗೆ ಏಕೆ ಕೊಡಲ್ಲ. ನಾವೂ ನೋಡ್ತೇವೆ.

| ಜೆ.ಸಿ.ಮಾಧುಸ್ವಾಮಿ ಚಿಕ್ಕನಾಯಕನಹಳ್ಳಿ ಶಾಸಕ

 

Leave a Reply

Your email address will not be published. Required fields are marked *