ನೀತಿ ಪಾಲನೆ ಯಶಸ್ಸಿಗೆ ನಾಂದಿ

ವಿಜಯವಾಣಿ ಸುದ್ದಿಜಾಲ ಕಲಬುರಗಿ
ಧರ್ಮ, ಯಶಸ್ಸು, ನೀತಿ, ದಕ್ಷತೆ ಮತ್ತು ಒಳ್ಳೆಯ ಮಾತುಗಳನ್ನು ಅನುಸರಿಸಿ ಬಾಳಿದರೆ ಜೀವನದಲ್ಲಿ ಶ್ರೇಯಸ್ಸು ಕಾಣಲು ಸಾಧ್ಯ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

ತೆಲಂಗಾಣದ ಕೋಲನಪಾಕ್ನ ಚಂಡಿಕಾಂಬಾ ಸಮೇತ ಸ್ವಯಂಭು ಶ್ರೀ ಸೋಮೇಶ್ವರ ದೇವಸ್ಥಾನದಲ್ಲಿ ಏರ್ಪಡಿಸಿದ್ದ ಇಷ್ಟಲಿಂಗ ಮಹಾಪೂಜೆ ಹಾಗೂ ಧರ್ಮ ಜಾಗೃತಿ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿದ್ದ ಅವರು, ಮನುಷ್ಯ ಎಷ್ಟೇ ಹಣ ಸಂಪಾದನೆ ಮಾಡಲಿ. ಆದರೆ ದುರಾಸೆ ಬೇಡ. ದುಡಿಮೆ ನಂಬಿ, ಆದರೆ ದೇವರನ್ನು ಮರೆಯಬೇಡಿ. ಮನುಷ್ಯ ಕಲಿಯಬೇಕಾದದ್ದು ಸಾಗರದಷ್ಟಿದೆ. ಆದರೆ ಕಲಿತಿರುವುದು ಸಾಸಿವೆಯಷ್ಟು ಎಂಬುದನ್ನು ಮರೆಯದಿರಿ. ಜೀವನದಲ್ಲಿ ಅಡೆ ತಡೆಗಳು ಬಂದಾಗ ದಾರಿ ಬದಲಿಸಬೇಕೆ ವಿನಃ ನಾವು ಕಣ್ಣಿಟ್ಟಿರುವ ಮಹತ್ತರ ಗುರಿಯನ್ನಲ್ಲ ಎಂದು ಹಿತೋಪದೇಶ ಹೇಳಿದರು.

ಮೇಹಕರ ಹಿರೇಮಠದ ಶ್ರೀ ರಾಜೇಶ್ವರ ಶಿವಾಚಾರ್ಯರು ಮಾತನಾಡಿ, ನಂಬಿಕೆಯೇ ಜೀವನ. ಸಂಶಯವೇ ಮರಣ. ನಂಬಿಕೆಯಿಂದ ಅದ್ಭುತ ಕಾರ್ಯ ಸಾಧಿಸಲು ಸಾಧ್ಯ. ಸಂಶಯ ಸರ್ವ ನಾಶಕ್ಕೆ ಕಾರಣವಾಗುತ್ತದೆ. ದೇವರು, ಧರ್ಮ ಗುರುವಿನಲ್ಲಿ ನಮ್ಮ ನಂಬಿಕೆ, ಶ್ರದ್ಧೆ ಅಚಲವಾಗಿರಬೇಕು ಎಂದರು.

ಬಿಚಗುಂದ ಸೋಮಲಿಂಗ ಶ್ರೀ, ಹಳ್ಳಿಖೇಡದ ಶ್ರೀಪತಿ ಪಂಡಿತಾರಾಧ್ಯ ಶ್ರೀ, ಸಂಗೊಳ್ಳಿ ಗುರುಲಿಂಗ ಶ್ರೀ, ಬಿಳಕಿ ರಾಚೋಟೇಶ್ವರ ಶ್ರೀ ಉಪಸ್ಥಿತರಿದ್ದರು. ಶ್ರೀ ಜಗದ್ಗುರು ರೇಣುಕಾಚಾರ್ಯ ಗುರುಕುಲ ಸಾಧಕರಿಂದ ವೇದಘೋಷ, ದಾರುಕ ಶಾಸ್ತ್ರಿಗಳಿಂದ ಭಕ್ತಿ ಗೀತೆ ಜರುಗಿತು. ಕಾರ್ಯದರ್ಶಿ ಅಣ್ಣಾರಾವ ಬಿರಾದಾರ ಸ್ವಾಗತಿಸಿದರು. ಸಿದ್ಧರಬೆಟ್ಟದ ಶ್ರೀ ವೀರಭದ್ರ ಶಿವಾಚಾರ್ಯ ನಿರೂಪಣೆ ಮಾಡಿದರು. ಕಲಬುರಗಿಯ ಗಿರಿಯಪ್ಪ ಮುತ್ತ್ಯಾ ದಾಸೋಹ ಸೇವೆ ಸಲ್ಲಿಸಿದರು. ಬೆಂಗಳೂರಿನ ಬಿಬಿಎಂಪಿ ಇಂಜನಿಯರ್ ವಿ.ನಟರಾಜು ಅವರು `ರಂಭಾಪುರಿ ಬೆಳಗು’ ಜನವರಿ ಸಂಚಿಕೆಯನ್ನು ಬಿಡುಗಡೆ ಮಾಡಿದರು.

ಜಗದ್ಗುರು ರೇಣುಕಾಚಾರ್ಯರು ಆವಿರ್ಭವಿಸಿದ ಕೋಲನಪಾಕ್ ಸ್ವಯಂಭು ಶ್ರೀ ಸೋಮೇಶ್ವರ ಮಹಾಲಿಂಗಕ್ಕೆ ಏಕಾದಶ ರುದ್ರಾಭಿಷೇಕ ಮಹಾಪೂಜೆ ಹಾಗೂ ಶಕ್ತಿಮಾತೆ ಚಂಡಿಕಾಂಬಾ ದೇವಿಗೆ ಕುಂಕುಮಾರ್ಚನೆ, ವಿಶೇಷ ಪೂಜೆ ಜರುಗಿತು.