ನೀಚ ಬುದ್ಧಿಯ ಬಿಡು ನಾಲಿಗೆ

|ರಾಮ ಸುಬ್ರಾಯ ಶೇಟ್

ರಾಜನ ಒಡ್ಡೋಲಗದಲ್ಲಿ ಪ್ರಭುಗಳು ಪಂಡಿತರನ್ನು ಪ್ರಶ್ನಿಸಿದರು-‘ಮಾನವನ ಅಂಗಗಳಲ್ಲಿ ಯಾವುದು ಶ್ರೇಷ್ಠ ಮತ್ತು ಪ್ರಧಾನ ಅಂಗ’ ಎಂದು. ಪಂಡಿತರಲ್ಲಿ ಕೆಲವರೆಂದರು ತಲೆಯೇ ಉತ್ತಮಾಂಗ. ನಯನವೇ ಪ್ರಧಾನ ಅಂಗ. ಮತ್ತೆ ಕೆಲವರು ಹೃದಯ ಎಂದರು. ಆಗ ಮಹಾಮಂತ್ರಿ-‘ಪ್ರಭುಗಳೇ ನಮ್ಮ ನಾಲಿಗೆ’ ಎಂದರು. ಮತ್ತೆ ದೊರೆಯ ಪ್ರಶ್ನೆ ‘ಕೀಳಾದ, ಕನಿಷ್ಠವಾದ ಅಂಗ ಯಾವುದು?’ ಎಂದಾಗ ಪಂಡಿತರು ‘ಕಾಲು, ಪಾದ, ಎಡಗೈ’ ಅಂದರು. ಮತ್ತೆ ಅಮಾತ್ಯರು ‘ಅದೂ ನಾಲಿಗೆಯೇ ಮಹಾಪ್ರಭು!’ ಎಂದಾಗ ಎಲ್ಲರಿಗೂ ಆಶ್ಚರ್ಯ, ಕುತೂಹಲ. ಈ ಕುರಿತು ಸಮರ್ಪಕ ವಿಶ್ಲೇಷಣೆಗೆ ಒತ್ತಾಯಿಸಿದರು. ಆಗ ಅಮಾತ್ಯರ ಉತ್ತರ, ‘ಮಹಾಪ್ರಭು! ಜಗತ್ತಿನಲ್ಲಿ ಮಾತನಾಡುವವರು ಮಾನವರು ಮಾತ್ರ. ಈ ಮಾತಿನಿಂದಲೇ ಒಳಿತು ಕೆಡುಕು ಘಟಿಸುವುದು. ಯಾವ ಜಿಹ್ವೆ ಜಗದೀಶನ ಸ್ತುತಿ ಮಾಡುತ್ತದೆಯೋ ವೇದಘೊಷ ಮಂತ್ರಘೊಷ ಮಾಡುತ್ತದೆಯೋ ಅದೇ ನಾಲಿಗೆ ಇತರರನ್ನು ತೆಗಳುವ, ದೂರುವ ನೀಚ ಬೈಗುಳಿಂದ ಕೆರಳಿಸುವ ತೇಜೋವಧೆಗೈವ ಕೆಲಸ ಮಾಡಬಹುದು. ಒಬ್ಬನಲ್ಲಿ ಅತ್ಮವಿಶ್ವಾಸ ತುಂಬಿಸಬಹುದು. ಒಬ್ಬನನ್ನು ಆತ್ಮಹತ್ಯೆಗೂ ಪ್ರಚೋದಿಸಬಹುದು. ದುಃಖ, ಮೋಹ, ಸಂಶಯದಿಂದ ಹತಾಶನಾದ ಪಾರ್ಥನಿಗೆ, ಪಾರ್ಥಸಾರಥಿಯ ಬೋಧನೆ ನವೋಲ್ಲಾಸ ಮತ್ತು ಕರ್ತವ್ಯ ಪ್ರಜ್ಞೆ ಮೂಡಿಸಿತು. ಧರ್ಮ ಸಂಸ್ಥಾಪನೆಗೆ ಕಾರಣಾವಾಯಿತು. ಹಾಗಾಗಿ ಅದೇ ಶ್ರೇಷ್ಠ ಅದೇ ಕನಿಷ್ಠ’ ಅಂದಾಗ ಎಲ್ಲರೂ ತಲೆದೂಗಿದರು.

ನಿಜ! ನಾಲಿಗೆ ಕುಲವನ್ನರುಹುವುದು. ಮಾತು ಬಲ್ಲವನಿಗೆ ಜಗಳವಿಲ್ಲ. ‘ಮೃದುವಚನ ಮೂರುಲೋಕ ಗೆಲ್ಲುವುದು ಗೆಳೆಯ’ ಎಂಬ ಕವಿವಾಣಿಯಂತೆ ಶ್ರೀರಾಮಚಂದ್ರನ ವಾಣಿ, ಧರ್ಮರಾಯನ ಮಾತು ಎಂದಿಗೂ ಯಾರನ್ನೂ ನೋಯಿಸಲಿಲ್ಲ. ಅದಕ್ಕೆ ಬಸವಣ್ಣನವರು ‘ಅಯ್ಯಾ ಎಂದರೆ ಸ್ವರ್ಗ, ಎಲವೋ ಎಂದರೆ ನರಕ’ ಎಂದಿದ್ದು. ನಾವು ಮೃದುಭಾಷಿಗಳಾಗಲು ಏನನ್ನೂ ಕಳೆದುಕೊಳ್ಳಬೇಕಾಗಿಲ್ಲ.

ಷಿಕಾಗೊದಲ್ಲಿ ಸ್ವಾಮಿ ವಿವೇಕಾನಂದರು ಪಡೆದ ಪ್ರಶಂಸೆ ಹಿತಮಿತ ವಿದ್ವತ್ ವಾಣಿಯಿಂದ. ಶಾಸ್ತ್ರದಲ್ಲಿ ಹೇಳಿದಂತೆ ಸರ್ವದೇವತೆಗಳ ವಾಸಸ್ಥಾನ ವಾಣಿ ವಾಗ್ದೇವಿ. ವಿವೇಚನೆ ಹಾಗೂ ದೂರದರ್ಶಿತ್ವದ ಮೃದು ಮಾತುಗಳಿಂದ ಪ್ರಪಂಚದಲ್ಲಿ ಸಂಭವಿಸಬಹುದಾದ ಸಮರಗಳನ್ನು ತಡೆದು ಪರಸ್ಪರ ಸಹೋದರತ್ವದಿಂದ ಬಾಳಬಹುದು. ಹಾಗಾಗಿ ಎಲ್ಲ ಸಂದರ್ಭಗಳಲ್ಲಿ ನಾಲಿಗೆಯನ್ನು ಹಿಡಿತದಲ್ಲಿಟ್ಟು ನೀಚಶಬ್ದಗಳನ್ನು ಬಳಸದಂತೆ ಎಚ್ಚರಿಕೆ ವಹಿಸೋಣ. ಸಮಾಜದಲ್ಲಿ ಶಾಂತಿನೆಲೆಸುವಂತೆ ಮಾಡೋಣ.

(ಲೇಖಕರು ನಿವೃತ್ತ ಉಪನ್ಯಾಸಕರು ಮತ್ತು ಗಮಕ ವ್ಯಾಖ್ಯಾನಕಾರರು) 

Leave a Reply

Your email address will not be published. Required fields are marked *