ನಿಸ್ಸಂಗ, ವಾಸನಾಕ್ಷಯ

ಅಧ್ಯಾತ್ಮ ಪ್ರಪಂಚದಲ್ಲಿ ಎರಡು ಬಗೆಯ ಸಂಗಗಳುಂಟು. ಮೊದಲನೆಯದು ‘ದೈವ’ದ ಜತೆಗಿನ ಸಂಗ, ಮತ್ತೊಂದು ‘ಲೋಕ’ದ ಬಗೆಗಿನ ನಿಸ್ಸಂಗ. ಈ ಎರಡೂ ಸಾಂಗತ್ಯಗಳಲ್ಲಿ ಮೊದಲನೆಯದು ಕಷ್ಟದ ದಾರಿಯೇನೊ ಹೌದು. ಆದರೆ, ಎರಡನೆಯದು ನಾವು ಸದಾ ನಿಸ್ಸಂಗತ್ವಕ್ಕಾಗಿ ಹೋರಾಡುವ ಮಾನಸಿಕ ಕಡುದಾರಿ.

ಲೋಕವು ಎಂಥವರನ್ನಾಗಲಿ ತನ್ನೊಡನೆ ಸಂಗ ಮಾಡಿಕೊಳ್ಳುತ್ತದೆ. ನಾವು ಲೋಕದ ಜತೆ ನಿಸ್ಸಂಗದ ವ್ಯಾಪಾರಕ್ಕಾಗಿ ಪರದಾಡಬೇಕಾಗುತ್ತದೆ! ಸಾಧಕನು

ಲೋಕದ ಸಮಸ್ತ ವ್ಯಾಪಾರಗಳ ಜತೆ ನಿಸ್ಸಂಗಕ್ಕಾಗಿ ಹೋರಾಡುತ್ತಿರುತ್ತಾನೆ. ಗೀತೆಯು ‘ನಿಸ್ಸಂಗತ್ವೇ ನಿಮೋಹತ್ವಂ’ ಎಂದು ಹೇಳಿದೆ. ನಿಜ, ಸಾಧಕನು ನಿಮೋಹನಾಗಬೇಕಾದರೆ ನಿಸ್ಸಂಗತ್ವಕ್ಕೆ ಒಳಗಾಗಲೇಬೇಕು. ಅದು ಅಷ್ಟು ಸುಲಭವೆ? ಈ ಪ್ರಶ್ನೆಗೆ ಉತ್ತರ ಹುಡುಕುವುದರಲ್ಲೇ ಆಯಸ್ಸು ಮುಗಿಯುವಂತೆ ತೋರುತ್ತದೆ.

ಮಹಲಿಂಗರಂಗನು ಸಾಧಕನು ಸಾಗಬೇಕಾದ ಎರಡು ಸೋಪಾನಗಳನ್ನು ಈವರೆಗೂ ವಿವರಿಸಿದ್ದು ಸರಿಯಷ್ಟೆ. ಈಗ ಮೂರನೆಯ ಸೋಪಾನವಾದ ‘ನಿಸ್ಸಂಗ’ದ ಬಹುತ್ವದ ನೆಲೆಗಳನ್ನು ವಿವರಿಸುತ್ತಿದ್ದಾನೆ:

ವಿಷಯ ಸುಖವನು ಚಿಂತಿಸದೆ, ತನ

ಗೆಸೆವ ವೈರಾಗ್ಯವನು ಬಿಡದಿರು

ತಸಮಸಜ್ಜನರೊಡನೆ ಗೋಷ್ಠಿಯ ಮಾಡಿ ದುರ್ಜನರ |

ಘಸಣಿಯನು ಬಿಟ್ಟಾತ್ಮನಲ್ಲಿಯೆ

ವ್ಯಸನ ದೃಢತರವಾಗೆ ನಿಜಸುಖ

ವೊಸರುತಂಗಯ್ಯೊಳಗೆ ಮಾಣಿಕದಂತೆ ತೋರುವುದು || (6.17)

ಈ ಪದ್ಯದ ಅಂತರಾರ್ಥವನ್ನು ಮೊದಲು ತುಸು ಬಗೆಯೋಣ: ‘‘ಸಾಧಕನು ವಿಷಯಸುಖದ ಬಗೆಗೆ ಯೋಚಿಸಕೂಡದು. ಈಗ ಒದಗಿಬಂದಿರುವ ವೈರಾಗ್ಯವನ್ನು ಬಿಡಕೂಡದು. ಸದಾ ಸಜ್ಜನರ ಗೋಷ್ಠಿಯಲ್ಲಿಯೇ ಅವನು ಇರಬೇಕು. ದುರ್ಜನರ ಸಹವಾಸವನ್ನು ದೂರ ಮಾಡಬೇಕು. ಸಾಧಕನು ಸದಾ ಆತ್ಮಧ್ಯಾನದಲ್ಲಿಯೇ ನಿರತನಾಗಿರಬೇಕು. ಹೀಗೆ ದೊರೆತ ಸುಖವು ಅಂಗೈಯಲ್ಲಿರುವ ಮಾಣಿಕ್ಯದಂತೆ ಗೋಚರಿಸುತ್ತದೆ.’’ ಇದಿಷ್ಟು ಪದ್ಯದ ಅಂತರಾರ್ಥ.

ಸಾಧಕನು ನಿಸ್ಸಂಗ ಭಾವನೆಯನ್ನು ತಾಳುವುದು ಅಷ್ಟು ಸುಲಭವಲ್ಲ! ಈ ಪದ್ಯದಲ್ಲಿ ‘ವ್ಯಸನ’ ಎಂಬ ಮಾತು ಬಂದಿದೆಯಷ್ಟೆ. ಸಾಧಕನಿಗೆ ಲೌಕಿಕದ ‘ವ್ಯಸನ’ ಬಂದೇ ತೀರುತ್ತದೆ. ನಾವು ಎಷ್ಟೆಷ್ಟು ನೂಕುತ್ತೇವೆಯೋ ಅಷ್ಟಷ್ಟು ನಮ್ಮನ್ನು ಅದು ಆವರಿಸಿಕೊಳ್ಳುತ್ತದೆ! ಆದರೆ, ಸಾಧಕನು ಇದನ್ನು ಅಖಂಡ ವೈರಾಗ್ಯದ ಮೂಲಕ ಮಾತ್ರ ಜಯಿಸಬೇಕಾಗುತ್ತದೆ. ಆಗ ಅವನು ವಿಷಯಸುಖದ ಕಡೆ ಗಮನ ಹಾಕುವುದಿಲ್ಲ. ದೈವದ ಅಥವಾ ಗುರುವಿನ ಅಥವಾ ಆತ್ಮವಿಷಯದ ‘ವ್ಯಸನ’ ಪ್ರಬಲವಾದಾಗ ಉಂಟಾಗುವ ಅನುಭವ ಬೇರೆ ತೆರೆನಾದದ್ದು. ಈ ಅಂಶವು ಮುಂದಿನ ಪದ್ಯದಲ್ಲಿ ಬೆಳೆಯುತ್ತದೆ.

ತಾನೆ ಸತ್ಯಜ್ಞಾನಸುಖಮುಯ

ಸ್ವಾನುಭವಸಂವೇದ್ಯ ಘನವಿ

ನ್ನೇನು ತೋರುವ ತೋರಿಕೆಯ ಸಂಸರ್ಗ ತನಗಿಲ್ಲ |

ಭಾನು ಬೆಳಗಲು ಲೋಕ ಚೇಷ್ಟಿಸು

ವಾ ನಿಯಮದಲಿ ಸಕಲ ಕರಣಕೆ

ತಾನು ತಿಳಿಯೆ ನಿಮಿತ್ತಕಾರಣನೆಂದು ಬಗೆದಿಹನು || (6.18)

ಈ ಪದ್ಯದ ಅರ್ಥವನ್ನು ಮೊದಲಿಗೆ ತಿಳಿಯೋಣ: ‘‘ಸಾಧಕನಿಗೆ ನಿಸ್ಸಂಗತ್ವದ ತಿಳಿವಳಿಕೆ ಬಂದೊಡನೆ ತಾನು ಸತ್ಯಜ್ಞಾನದಿಂದ ಸುಖವಾಗಿದ್ದೇನೆಂಬ ಅರಿವು ಬರುತ್ತದೆ. ತನ್ನ ಅನುಭವದಿಂದಲೇ ತಿಳಿಯಬಲ್ಲನಾದುದಕ್ಕಿಂತ ಹೆಚ್ಚಿನದೇನು ಉಂಟು? ಈ ಸಂಸಾರವು ನಶ್ವರವಾದುದು. ಇದು ತೋರಿಕೆಯದೇ ಸರಿ. ಸೂರ್ಯನು ಬೆಳಕು ಬೀರಿದರೆ ಲೋಕವು ನಿತ್ಯಕರ್ಮದಲ್ಲಿ ತೊಡಗುವಂತೆ, ಸಕಲ ಇಂದ್ರಿಯಗಳಿಗೂ ತಾನೇ ಕಾರಣ ಎಂದು ನಿಶ್ಚಿತವಾಗಿ ಸಾಧಕನು ತಿಳಿಯುವನು.’’

ಈ ಪದ್ಯದಲ್ಲಿ ‘ಸ್ವಾನುಭವ ಸಂವೇದ್ಯ’ ಎಂಬ ಮಾತು ಬಂದಿದೆ. ಸಾಧಕನು ಈಗಾಗಲೇ ಎರಡು ಮೆಟ್ಟಿಲುಗಳನ್ನು ಏರಿದ್ದಾನೆ. ಇದು ಮೂರನೆಯ ಮೆಟ್ಟಿಲು. ಈ ಪದ್ಯದಲ್ಲಿ ‘ಸ್ವಾನುಭವ ಸಂವೇದ್ಯ’ ಎಂಬ ಮಾತು ಬಂದಿದೆಯಷ್ಟೆ. ಇದಕ್ಕೆ ‘‘ತನ್ನ ಅನುಭವದಿಂದಲೇ ತಿಳಿದು ಬರತಕ್ಕದ್ದು’’ ಎಂದು ಅರ್ಥ ಮಾಡಿಕೊಳ್ಳಬೇಕು. ಈ ಅಂಶವು ಸಾಧಕನಲ್ಲಿ ಮೈದೋರಬೇಕು. ಈ ಅರಿವು ತಲೆದೋರಿದಾಗ ‘ಘನವಿನ್ನೇನು’ ಎಂಬ ಮಾತಿನ ಸೂಕ್ಷ್ಮಾರ್ಥವು ಅವನಿಗೆ ಫಕ್ಕನೆ ಹೊಳೆಯುತ್ತದೆ. ಇದು ಒಂದರ್ಥದಲ್ಲಿ ಪ್ರಶ್ನೆಯೂ ಹೌದು! ಇನ್ನೊಂದರ್ಥದಲ್ಲಿ ಉತ್ತರವೂ ಹೌದು! ಸಾಧಕನು ಪ್ರಶ್ನೆಗಳ ಮೂಲಕವೇ ಉತ್ತರಗಳನ್ನು ಪಡೆಯಬೇಕು! ಇಂಥವನಿಗೆ ‘ಸಂಸರ್ಗ ತನಗಿಲ್ಲ’ ಎಂಬ ಭಾವವು ಬಲಿಯುವುದಕ್ಕೆ ಶುರುವಾಗುತ್ತದೆ.

ನಾವು ಲೋಕದಲ್ಲಿ ಗಮನಿಸುವಂತೆ ನೀರು ಹರಿಯುತ್ತಿರುತ್ತದೆ. ಆ ನೀರಿಗೆ ತನ್ನ ಜನ್ಮಸ್ಥಾನ ನೀರೆಂದು ಹೇಗೆ ತಿಳಿಯದೆ ಇರುತ್ತದೆಯೊ ಹಾಗೆ ಆತ್ಮನಿಂದ ಉಂಟಾಗುವ ಇಂದ್ರಿಯಗಳು ಅದಕ್ಕೆ ಕಾರಣಭೂತವಾದ ವಸ್ತುಗಳನ್ನು ನಾವು ಅರಿಯಲಾರವು. ಸೂರ್ಯನು ಕಿರಣಗಳನ್ನು ಹೊರಸೂಸುತ್ತಾನೆ. ಆದರೆ, ಕಿರಣಗಳಿಗೆ ಸೂರ್ಯನೇ ಕರ್ತನೆಂದು ತಿಳಿಯದೆ ಹೋಗುತ್ತವೆ. ಇದು ನಿಸ್ಸಂಗತ್ವದ ಕೆಲವು ಪರಿಣಾಮಗಳು. ಹೀಗಾಗಿ, ಸಾಧಕನು ಎಲ್ಲ ಬಗೆಯ ಸಂಸರ್ಗದಿಂದ ಮುಕ್ತನಾಗುವುದು ಅವಶ್ಯವೆಂದು ಮಹಲಿಂಗರಂಗನ ಇಂಗಿತವಾಗಿದೆ.

(ಲೇಖಕರು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳು. ಕನ್ನಡ ಹಾಗೂ ಸಂಸ್ಕೃತ ವಿದ್ವಾಂಸರು)

Leave a Reply

Your email address will not be published. Required fields are marked *