ನಿಸರ್ಗದ ಸೊಬಗಿನ ಬಲ್ಲಾಳರಾಯನ ದುರ್ಗ

| ನಂದೀಶ್ ಬಂಕೇನಹಳ್ಳಿ

ಕಣ್ಣು ಹಾಯಿಸಿದಷ್ಟು ದೂರವೂ ಆವರಿಸುವ ಹಸಿರಿನ ನಡುವೆ ಇತಿಹಾಸದ ಕುರುಹಾಗಿ ನಿಂತಿರುವ ಕಲ್ಲಿನ ಪ್ರವೇಶದ್ವಾರ. ಬೆಟ್ಟಸಾಲುಗಳ ಅಂಚಿನ ಉದ್ದಕ್ಕೂ ಕಲ್ಲಿನಗೋಡೆಗಳು, ಮೈನಡುಗಿಸುವಷ್ಟು ಆಳವಿರುವ ರಾಣಿ ಝುರಿ ಎಂಬ ಪ್ರಪಾತ. ಇದು ನಿಸರ್ಗದ ಸೊಬಗು ಮತ್ತು ಇತಿಹಾದ ಬೆರಗನ್ನು ಮೈದುಂಬಿಕೊಂಡಿರುವ ಬಲ್ಲಾಳರಾಯನ ದುರ್ಗ.

ಮೂಡಿಗೆರೆ ತಾಲೂಕಿನಲ್ಲಿರುವ ಸುಂಕಸಾಲೆ ಗ್ರಾಮದಲ್ಲಿರುವ ಬಲ್ಲಾಳರಾಯನದುರ್ಗ, ಬಲ್ಲಾಳರಾಯ ಎಂಬ ದೊರೆ ಇಲ್ಲಿ ಕೋಟೆ ನಿರ್ವಿುಸಿರುವುದರಿಂದ ಬಲ್ಲಾಳರಾಯನದುರ್ಗ ಎಂಬ ಹೆಸರು ಬಂದಿದೆ.

ಬಲ್ಲಾಳರಾಯನ ದುರ್ಗಕ್ಕೆ ಸಾಗುವ ಪ್ರಾರಂಭದಲ್ಲಿ ಪುರಾತನ ಕಾಲಭೈರವೇಶ್ವರ ದೇವಸ್ಥಾನವಿದ್ದು ಹಸಿರು ಪರಿಸರದ ನಡುವೆ ದೈವದರ್ಶನವನ್ನು ಮಾಡಬಹುದಾಗಿದೆ. ಬೆಟ್ಟದ ನಡುವೆ ಕೋಟೆ ಇದ್ದ ಕುರುಹುವಾಗಿ ಕಲ್ಲಿನ ಗೋಡೆಗಳು, ಬೆಟ್ಟದ ಅಂಚಿನಲ್ಲಿ ಕಲ್ಲಿನ ಗೋಡೆಸಾಲುಗಳು ಕಾಣಸಿಗುತ್ತವೆ. ಗುಡ್ಡಸಾಲುಗಳ ನಡುವಿನ ಮರಗಿಡಗಳ ನಡುವೆ ಆಕರ್ಷಕ ಕೆತ್ತನೆಯ ಮಹಾದ್ವಾರ ನೋಡುಗರನ್ನು ಆಕರ್ಷಿಸುತ್ತದೆ. ಮಹಾದ್ವಾರದ ಇಕ್ಕೆಲಗಳಲ್ಲಿ ಆನೆ, ಸಿಂಹ ಮುಂತಾದ ಕೆತ್ತನೆಗಳು ಗಮನ ಸೆಳೆಯುತ್ತವೆ. ದಕ್ಷಿಣಕನ್ನಡ ಮತ್ತು ಚಿಕ್ಕಮಗಳೂರಿನ ಗಡಿಯಲ್ಲಿರುವ ಬಲ್ಲಾಳರಾಯನ ದುರ್ಗದ ಬೆಟ್ಟಸಾಲಿನಲ್ಲಿ ನಿಂತು ನೋಡಿದರೆ ದೂರದ ದಕ್ಷಿಣಕನ್ನಡದ ಕೆಲ ಊರುಗಳು ಕಾಣಿಸುತ್ತದೆ.

ಬಲ್ಲಾಳರಾಯನ ದುರ್ಗಕ್ಕೆ ಸಾಗುವ ಮಾರ್ಗದ ಪ್ರಾರಂಭದಲ್ಲಿ ರಾಣಿಝುರಿ ಎಂಬ ಸ್ಥಳವಿದೆ. ಬಲ್ಲಾಳರಾಯ ಯುದ್ದವೊಂದರಲ್ಲಿ ವೀರಾವೇಷದಿಂದ ಸೆಣಸಾಡಿ ವೀರಮರಣವನ್ನು ಅಪ್ಪಿದಾಗ ಈ ಸುದ್ದಿಯನ್ನು ಕೇಳಿ ಆಘಾತಗೊಂಡು ಆತನ ರಾಣಿ ಈ ಪ್ರಪಾತದಿಂದ ಹಾರಿ ಪ್ರಾಣಕಳೆದುಕೊಂಡ ಕಾರಣಕ್ಕಾಗಿ ಇಲ್ಲಿಗೆ ರಾಣಿ ಝುರಿ ಎಂಬ ಹೆಸರು ಬಂದಿದೆ ಎನ್ನುವ ಕಥೆಗಳು ಸ್ಥಳೀಯರಲ್ಲಿವೆ.

ಬಲ್ಲಾಳರಾಯನ ದುರ್ಗದ ಸುತ್ತಲೂ ಅರಣ್ಯ ಆವರಿಸಿದ್ದು ರೋಮಾಂಚನ ಮೂಡಿಸುವ ಪ್ರಕೃತಿಯ ಸೌಂದರ್ಯ ಭಾವಪರವಶನಾಗಿಸುತ್ತದೆ.

ಕೊಟ್ಟಿಗೆಹಾರ ರಸ್ತೆಯಿಂದ ಕಳಸಕ್ಕೆ ಸಾಗುವ ಮಾರ್ಗದಲ್ಲಿ್ಲ ಸುಂಕಸಾಲೆ ಗ್ರಾಮದ ಬಳಿ ಒಂದು ರಸ್ತೆ ಎಡಕ್ಕೆ ಸಾಗಿದರೆ ಬಲ್ಲಾಳರಾಯನ ದುರ್ಗ ತಲುಪಬಹುದು. ಕೋಟೆ ಇರುವ ಸ್ಥಳಕ್ಕೆ ಸಾಗಬೇಕಾದರೆ ಸುಮಾರು 3 ಕಿ.ಮಿ ದೂರ ಬೆಟ್ಟಸಾಲುಗಳ ನಡುವೆ ಕಾಲ್ನಡಿಗೆಯಲ್ಲೆ ಸಾಗಬೇಕು. ಬಸ್ ಸೌಕರ್ಯ ಇಲ್ಲದೆ ಇರುವುದರಿಂದ ಖಾಸಗಿ ವಾಹನದಲ್ಲಿ ಇಲ್ಲಿಗೆ ಬರುವುದು ಸೂಕ್ತ.

ಬಲ್ಲಾಳರಾಯನ ದುರ್ಗ ಅರಣ್ಯ ಪ್ರದೇಶದ ಒಳಗಿರುವುದರಿಂದ ಅರಣ್ಯ ಇಲಾಖೆಯ ಅನುಮತಿಯನ್ನು ಪಡೆಯಬೇಕಾಗಿರುವುದು ಕಡ್ಡಾಯ. ಮತ್ತು ಸೂಕ್ಷ್ಮ ಅರಣ್ಯ ಪ್ರಧೇಶವಾಗಿರುವುದರಿಂದ ಪ್ಲಾಸ್ಟಿಕ್ ಮುಂತಾದ ತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ಎಸೆಯದೆ ಸ್ವಚ್ಛತೆಯನ್ನು ಕಾಪಾಡುವುದು ಕೂಡ ಅಗತ್ಯ.

Leave a Reply

Your email address will not be published. Required fields are marked *