ನಿಷ್ಠಾವಂತರಿಗೆ ಟಿಕೆಟ್ ನೀಡದ ಬಿಜೆಪಿ

ಸಾಗರ: ನಗರಸಭೆ ಚುನಾವಣೆಗೆ ಸಾಗರದ ಬಿಜೆಪಿಯಲ್ಲಿ ನಿಜವಾಗಿ ಪಕ್ಷದಲ್ಲಿ ತೊಡಗಿಕೊಂಡವರಿಗೆ ಟಿಕೆಟ್ ನೀಡಿಲ್ಲ. ಕೆಜೆಪಿ ಗುಂಪಿಗೆ ಟಿಕೆಟ್ ನೀಡಿದ್ದಾರೆ ಎಂದು ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು ಲೇವಡಿ ಮಾಡಿದರು.

ಬಿಜೆಪಿಯಲ್ಲಿ ಬಂಡಾಯ ಹೆಚ್ಚಿದೆ. ನಗರಸಭೆಯಲ್ಲಿ ಅವರ ಪಕ್ಷದವರನ್ನು ಅವರೇ ಸೋಲಿಸುತ್ತಾರೆ. ಯಾರು, ಎಲ್ಲಿ ವಾಸವಾಗಿದ್ದಾರೆಯೋ ಅಲ್ಲಿ ಬಿಟ್ಟು ಮತ್ತೆಲ್ಲೋ ಚುನಾವಣೆಗೆ ನಿಂತಿದ್ದಾರೆ. ಸುಳ್ಳಿನ ಮೇಲೆ ಸಾಮ್ರಾಜ್ಯ ಕಟ್ಟುವ ಟಿ.ಡಿ.ಮೇಘರಾಜ್​ಗೆ ಜನ ತಕ್ಕ ಪಾಠ ಕಲಿಸುತ್ತಾರೆ. ಪಕ್ಷದವರಿಗೇ ಮುಳ್ಳಾಗಿರುವ ಮೇಘರಾಜ್ ಮತ್ತು ಅವರ ಹಿಂಬಾಲಕರಿಗೆ ನಗರಸಭೆ ಚುನಾವಣೆ ಸರಿಯಾದ ಉತ್ತರ ನೀಡುತ್ತದೆ ಎಂದು ಸುದ್ದಿಗಾರರಿಗೆ ತಿಳಿಸಿದರು.

ನಗರಸಭೆಯಲ್ಲಿ ಹೆಚ್ಚು ಸ್ಥಾನ ಗಳಿಸಲು ಸಾಧ್ಯವಿಲ್ಲ ಎನ್ನುವ ಹತಾಶೆಯಿಂದ ಹರತಾಳು ಹಾಲಪ್ಪ ನಮ್ಮ ಪಕ್ಷದ ನಗರಸಭೆ ಅಭ್ಯರ್ಥಿಗಳ ವಿರುದ್ಧ ಸುಳ್ಳು ಹೇಳಿಕೆಗಳನ್ನು ನೀಡುತ್ತಿದ್ದಾರೆ. ನರೇಂದ್ರ ಮೋದಿಯವರ ಸಮಗ್ರ ಚಿಂತನೆಯನ್ನು ಗಮನಿಸಿ ಜನ ಮತ ನೀಡಿದ್ದಾರೆಯೇ ಹೊರತು ಬಿ.ಎಸ್. ಯಡಿಯೂರಪ್ಪ, ಬಿ.ವೈ.ರಾಘವೇಂದ್ರ ಮುಖ ನೋಡಿ ಯಾರೂ ಬಿಜೆಪಿಗೆ ಮತ ಹಾಕಿಲ್ಲ ಎಂಬುದು ಜನಕ್ಕೂ ತಿಳಿದಿದೆ ಎಂದರು.

18 ವಾರ್ಡ್​ಗಳಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಪಕ್ಷವನ್ನು, ಕಾರ್ಯಕರ್ತರನ್ನು ನಿಯಂತ್ರಿಸಲು ವಿಫಲವಾಗಿರುವ ಶಾಸಕರು ಅನಗತ್ಯವಾಗಿ ಬೇರೆಯವರ ಮೇಲೆ ಗೂಬೆ ಕೂರಿಸುವ ಪ್ರಯತ್ನ ನಡೆಸುತ್ತಿದ್ದಾರೆ. ಎಲ್ಲದಕ್ಕೂ ನಗರಸಭೆ ಚುನಾವಣೆ ಉತ್ತರ ನೀಡುತ್ತದೆ ಎಂದರು. ವಿ.ಶಂಕರ್, ಪರಿಮಳಾ, ಲಲಿತಮ್ಮ, ಈಶ್ವರ್, ತಾರಾಮೂರ್ತಿ, ವಿನೋದಮ್ಮ, ಮಹಾಬಲೇಶ್ವರ್ ಶೇಟ್, ಕಲಸೆ ಚಂದ್ರಪ್ಪ, ಅಕ್ಬರ್ ಅಲಿಖಾನ್, ಮೈಕೆಲ್ ಡಿಸೋಜ, ಜಾನ್, ಸಂತೋಲಿನ್ ಇದ್ದರು.

Leave a Reply

Your email address will not be published. Required fields are marked *