ನಿವೇಶನರಹಿತರಿಗೆ ವಸತಿ

ರಾಮನಗರ: ಜಿಲ್ಲೆಯಲ್ಲಿರುವ ವಸತಿರಹಿತರಿಗೆ ವಿವಿಧ ವಸತಿ ಯೋಜನೆಯಡಿ ವಸತಿ ಒದಗಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಜಿಲ್ಲಾಮಟ್ಟದ ಜಾಗೃತಿ ಸಮಿತಿ ಸಭೆಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ಸುಮಾರು 16 ಸಾವಿರ ನಿವೇಶನರಹಿತರಿದ್ದು, ಅವರೆಲ್ಲರಿಗೂ ವಸತಿ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೇಲಿನ ಹಳೆಯ ದೌರ್ಜನ್ಯ ಪ್ರಕರಣಗಳನ್ನು ಇತ್ಯರ್ಥ ಮಾಡಲಾಗಿದೆ, ಯಾವುದೇ ದೌರ್ಜನ್ಯ ನಡೆಯದಂತೆ ಕ್ರಮ ಕೈಗೊಳ್ಳಲಾಗಿದೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ಕಾಲನಿಗಳ ಅಭಿವೃದ್ಧಿಗೆ ಮುಂದಾಗುವಂತೆ ಸೂಚಿಸಿದರು.

ಜಿಲ್ಲೆಯ ಎಲ್ಲ ವಿದ್ಯಾರ್ಥಿ ನಿಲಯಗಳ ಗುಣಮಟ್ಟ ಪತ್ತೆಹಚ್ಚಲು ಮತ್ತು ವಿದ್ಯಾರ್ಥಿ ನಿಲಯಗಳಲ್ಲಿ ನಡೆಯುವ ಅವ್ಯವಹಾರ ತಡೆಯಲು ನೋಡಲ್ ಅಧಿಕಾರಿಗಳನ್ನು ನೇಮಿಸಲಾಗುವುದು, ಗುಣಮಟ್ಟದ ಆಹಾರ ಪೂರೈಕೆಗೆ ಸೂಕ್ತ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಮಹಿಳಾ ಮತ್ತು ಮಕ್ಕಳ ಇಲಾಖೆ ವತಿಯಿಂದ ಅಂಗನವಾಡಿಗಳಿಗೆ ಸರಬರಾಜಾಗುತ್ತಿರುವ ಆಹಾರ ಪದಾರ್ಥಗಳ ಗುಣಮಟ್ಟ ಕಾಪಾಡುವಂತೆ ಸೂಚಿಸಿದರು.

ಜಿಲ್ಲೆಯ 884 ಗ್ರಾಮಗಳ ಪೈಕಿ 74 ಗ್ರಾಮಗಳಲ್ಲಿ ಸಾರ್ವಜನಿಕ ಸ್ಮಶಾನವಿಲ್ಲ. ಎಲ್ಲ ಹಳ್ಳಗಳಲ್ಲೂ ಸ್ಮಶಾನಕ್ಕೆ ಜಾಗ ಖರೀದಿಗೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಜಿಲ್ಲಾಡಳಿತದ ಎದುರು ಡಾ.ಬಿ.ಆರ್ ಅಂಬೇಡ್ಕರ್ ಮತ್ತು ನಾಡಪ್ರಭು ಕೆಂಪೇಗೌಡರ ಪ್ರತಿಮೆಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. 3 ತಿಂಗಳಲ್ಲಿ ಪ್ರತಿಮೆಗಳು ಅನಾವರಣಗೊಳ್ಳಲಿವೆ ಎಂದರು.

ಇರುಳಿಗರ ಕಾಲನಿಯಲ್ಲಿ ಸಮುದಾಯ ಶೌಚಗೃಹಕ್ಕೆ ಸ್ಥಳ ಗುರುತಿಸಿದ್ದು, ಕೆಲವೇ ದಿನಗಳಲ್ಲಿ ಕಾಮಗಾರಿ ಪ್ರಾರಂಭವಾಗಲಿದೆ ಎಂದು ಹೇಳಿದರು.

ಚನ್ನಪಟ್ಟಣದಲ್ಲಿ ವಿದ್ಯಾರ್ಥಿನಿಯರ ಹಾಸ್ಟೆಲ್ ನಿರ್ವಣಕ್ಕೆ ಜಾಗ ಖರೀದಿಸಲು ಕ್ರಮಕೈಗೊಳ್ಳಲಾಗಿದೆ, ಶಾಲೆಗಳಲ್ಲಿ ವಂತಿಕೆ ಹಾವಳಿಯನ್ನು ತಪ್ಪಿಸಲು ಕ್ರಮ ಕೈಗೊಳ್ಳುವಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್​ನ ಸಿಇಓ ಎಂ.ಪಿ ಮುಲ್ಲೈ ಮುಹಿಲನ್, ಜಾಗೃತ ಸಮಿತಿಯ ರಾಂಪುರ ನಾಗೇಶ್, ಚನ್ನಕೇಶವ ಮುಂತಾದವರು ಇದ್ದರು.

ಅವ್ಯವಹಾರ ತಡೆಗೆ ಸಿ.ಸಿ. ಕ್ಯಾಮೆರಾ: ಆರೋಗ್ಯ ಮತ್ತು ಕಟುಂಬ ಕಲ್ಯಾಣ ಇಲಾಖೆಗೆ ಸಂಬಂಧಿಸಿದಂತೆ ಆರೋಗ್ಯ ಕಾರ್ಡ್ ವಿತರಣೆಯಲ್ಲಿ ಅಧಿಕಾರಿಗಳು 10 ರೂ.ಗಿಂತ ಹೆಚ್ಚು ಹಣ ಪಡೆಯುತ್ತಿದ್ದಾರೆ ಎಂಬ ದೂರಿನ ಮೇರೆಗೆ ಆರೋಗ್ಯ ಕಾರ್ಡ್ ವಿತರಿಸುವ ಸ್ಥಳದಲ್ಲಿ ಅವ್ಯವಹಾರ ತಡೆಗೆ ಸಿ.ಸಿ. ಕ್ಯಾಮೆರಾ ಅಳವಡಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.

Leave a Reply

Your email address will not be published. Required fields are marked *