ನಿವಾಸಿಗಳಿಗೆ ‘ತ್ಯಾಜ್ಯ ಸಂಕಷ್ಟ’

ಮಡಿಕೇರಿ: ಕಚೇರಿಗಳನ್ನು ಸುತ್ತಿ, ಜನಪ್ರತಿನಿಧಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದರೂ ಪ್ರಯೋಜನ ಆಗದಿರುವುದರಿಂದ ಬೇಸತ್ತಿರುವ ಸುಬ್ರಹ್ಮಣ್ಯನಗರ ನಿವಾಸಿಗಳು, ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಹೂಡುವ ಮೂಲಕ ‘ತ್ಯಾಜ್ಯ ಸಂಕಷ್ಟ’ಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ನಿರ್ಧರಿಸಿದ್ದಾರೆ.

ನಗರಸಭೆ ವ್ಯಾಪ್ತಿಯ ತ್ಯಾಜ್ಯವನ್ನು ಸ್ಟೋನ್ ಹಿಲ್‌ನಲ್ಲಿ ಅವೈಜ್ಞಾನಿಕವಾಗಿ ವಿಲೇವಾರಿ ಮಾಡಲಾಗುತ್ತಿದೆ. ಇದರಿಂದ ದುರ್ವಾಸನೆ, ಸೊಳ್ಳೆಗಳ ಕಾಟ, ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಸೇರಿ ಬಹಳಷ್ಟು ತೊಂದರೆಗಳನ್ನು ಸ್ಥಳೀಯ ನಿವಾಸಿಗಳು ಅನುಭವಿಸುತ್ತಿದ್ದಾರೆ. ಸಮಸ್ಯೆ ಬಗೆಹರಿಸುವಂತೆ ಜಿಲ್ಲಾಡಳಿತ, ನಗರಸಭೆ ಹಾಗೂ ಜನಪ್ರತಿನಿಧಿಗಳಿಗೆ ಸಾಕಷ್ಟು ಬಾರಿ ಮನವಿ ನೀಡಿ ಗಮನ ಸೆಳೆದಿದ್ದರೂ ಪ್ರಯೋಜನವಾಗಿಲ್ಲ. ಇದರಿಂದ ಬೇಸತ್ತು ದಾವೆ ಹೂಡಲು ತೀರ್ಮಾನಿಸಿದ್ದಾರೆ.

ಸ್ಟೋನ್ ಹಿಲ್‌ನಲ್ಲಿ ತ್ಯಾಜ್ಯ ಹಾಕದಂತೆ ನಗರಸಭೆಗೆ ನಿರ್ದೇಶನ ನೀಡಬೇಕೆಂದು ನ್ಯಾಯಾಲಯವನ್ನು ಕೋರಲಾಗುವುದು ಎಂದು ತಿಳಿಸಿರುವ ಸ್ಥಳೀಯ ಪ್ರಮುಖರು, ಈ ನಿಟ್ಟಿನಲ್ಲಿ ತಮ್ಮ ಜತೆ ಕೈಜೋಡಿಸುವಂತೆ ಸಂಘ- ಸಂಸ್ಥೆಗಳಿಗೆ ಲಿಖಿತ ಮನವಿ ಸಲ್ಲಿಸುತ್ತಿದ್ದಾರೆ.

6.30 ಎಕರೆ ಜಾಗ
ತ್ಯಾಜ್ಯ ವಿಲೇವಾರಿ ಮಾಡಲು ಸ್ಟೋನ್ ಹಿಲ್‌ನಲ್ಲಿರುವ 6.30 ಎಕರೆ ಜಾಗವನ್ನು ನಗರಸಭೆಗೆ ಜಿಲ್ಲಾಡಳಿತ ಮಂಜೂರು ಮಾಡಿದೆ. ನಗರಸಭೆ ವ್ಯಾಪ್ತಿಯಲ್ಲಿ ಸಂಗ್ರಹಿಸಿದ ತ್ಯಾಜ್ಯಗಳನ್ನು ಇಲ್ಲಿಗೆ ಸುರಿಯಲಾಗುತ್ತಿದೆ. ಆದರೆ, ಅವೈಜ್ಞಾನಿಕವಾಗಿ ವಿಲೇವಾರಿ ಮಾಡುತ್ತಿರುವುದರಿಂದ ಸಂಕಷ್ಟ ಎದುರಾಗಿದೆ. ಸುಬ್ರಹ್ಮಣ್ಯನಗರ ಸೇರಿದಂತೆ ಅಕ್ಕಪಕ್ಕದ ನಿವಾಸಿಗಳು ಆಕ್ಷೇಪ ವ್ಯಕ್ತಪಡಿಸುವ ವೇಳೆ ತಾತ್ಕಾಲಿಕ ಪರಿಹಾರ ಕ್ರಮಗಳನ್ನು ಮಾಡಲಾಗುತ್ತದೆ. ಬಳಿಕ ಕೆಲವೇ ದಿನಗಳಲ್ಲಿ ಯಥಾಸ್ಥಿತಿಯಲ್ಲಿ ಸಮಸ್ಯೆ ಮುಂದುವರಿಯುತ್ತದೆ. ಇದಕ್ಕೆ ಶಾಶ್ವತ ಪರಿಹಾರ ಪಡೆಯಲು ನಿವಾಸಿಗಳು ಮುಂದಾಗಿದ್ದಾರೆ.

ಡಿಸಿ ಮುತುವರ್ಜಿ
ಮಡಿಕೇರಿಯನ್ನು ಸ್ವಚ್ಛ ನಗರವಾಗಿ ಇಟ್ಟುಕೊಳ್ಳುವ ನಿಟ್ಟಿನಲ್ಲಿ ವೈಜ್ಞಾನಿಕ ತ್ಯಾಜ್ಯ ವಿಲೇವಾರಿಯತ್ತ ಗಮನ ಹರಿಸಲಾಗಿದೆ. ಸ್ಟೋನ್ ಹಿಲ್ ಬೆಟ್ಟದಲ್ಲಿ ವಿಲೇವಾರಿ ಮಾಡುತ್ತಿರುವ ತ್ಯಾಜ್ಯ ನಿರ್ವಹಣೆ ಸೇರಿದಂತೆ ಹಲವು ವಿಷಯಗಳತ್ತ ಗಮನ ಹರಿಸಲಾಗಿದೆ. ಜಿಲ್ಲಾಧಿಕಾರಿ ಈ ಬಗ್ಗೆ ಹೆಚ್ಚಿನ ಮುತುವರ್ಜಿ ಹೊಂದಿದ್ದಾರೆ ಎಂದು ಡಿಸಿ ಅಧ್ಯಕ್ಷರಾಗಿರುವ ತ್ಯಾಜ್ಯ ನಿರ್ವಹಣೆ ಟಾಸ್ಕ್‌ಫೋರ್ಸ್ ಸಮಿತಿ ಸದಸ್ಯ ಹಾಗೂ ಗ್ರೀನ್ ಸಿಟಿ ಫೋರಂ ಅಧ್ಯಕ್ಷ ಕುಕ್ಕೇರ ಜಯ ಚಿಣ್ಣಪ್ಪ ಹೇಳುತ್ತಾರೆ.

ವೈಜ್ಞಾನಿಕ ವಿಲೇವಾರಿ
ಮನೆ, ಅಂಗಡಿ- ಮುಂಗಟ್ಟುಗಳಿಂದ ಹಸಿ ಮತ್ತು ಒಣ ತ್ಯಾಜ್ಯಗಳನ್ನು ಪ್ರತ್ಯೇಕವಾಗಿ ಸಂಗ್ರಹಿಸುವುದರೊಂದಿಗೆ, ವೈಜ್ಞಾನಿಕ ವಿಲೇವಾರಿ ಮಾಡುವ ಅಗತ್ಯವಿದೆ. ವಿವಿಧೆಡೆ ತ್ಯಾಜ್ಯ ನಿರ್ವಹಣೆ ಮಾಡುತ್ತಿರುವುದನ್ನು ಗಮನಿಸಿ, ಮಡಿಕೇರಿಯಲ್ಲಿ ಯೋಗ್ಯ ಮಾದರಿ ಅನುಷ್ಠಾನಕ್ಕೆ ತರಬೇಕಾಗಿದೆ. ತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿದಂತೆ ಸಾರ್ವಜನಿಕರಲ್ಲೂ ಜಾಗೃತಿ ಮೂಡಬೇಕಾಗಿದೆ ಎಂಬುದು ಗ್ರೀನ್ ಸಿಟಿ ಫೋರಂ ಸ್ಥಾಪಕಾಧ್ಯಕ್ಷ ಚೈಯ್ಯಂಡ ಸತ್ಯ ಗಣಪತಿ ಅವರ ಅಭಿಪ್ರಾಯವಾಗಿದೆ.