ನಿರ್ವಹಣೆ ಇಲ್ಲದ ಏತ ನೀರಾವರಿ ಘಟಕ

ಕಾರವಾರ :ಸಣ್ಣ ನೀರಾವರಿ ಇಲಾಖೆ ಒಡ್ಡು, ಏತ ನೀರಾವರಿ ಘಟಕಗಳನ್ನು ನಿರ್ವಹಣೆ ಮಾಡದೇ ಖರ್ಚು ಹಾಕುತ್ತಿರುವ ಕುರಿತು ಮಂಗಳವಾರ ಆಯೋಜನೆಯಾಗಿದ್ದ ಜಿಪಂ ಸಾಮಾನ್ಯ ಸಭೆಯಲ್ಲಿ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.

ಸದಸ್ಯ ಶಿವಾನಂದ ಹೆಗಡೆ ಮಾತನಾಡಿ, ತಮ್ಮ ಕ್ಷೇತ್ರದಲ್ಲಿರುವ ಒಂದು ಒಡ್ಡಿಗೆ ಕಳೆದ ಬಾರಿ 10 ಲಕ್ಷ ರೂ. ನಿರ್ವಹಣಾ ಅನುದಾನವನ್ನು ಖರ್ಚು ಮಾಡಲಾಗಿದೆ. ಆದರೆ, ಯಾವುದೇ ನಿರ್ವಹಣೆ ಮಾಡಿಲ್ಲ. ಇದರಿಂದ ರೈತರಿಗೆ ತೊಂದರೆ ಉಂಟಾಗುತ್ತಿದೆ. ಈ ಅವ್ಯವಹಾರದ ಕುರಿತು ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

ಜಗದೀಶ ನಾಯಕ ಮೊಗಟ ಮಾತನಾಡಿ, ಸಂತೆಪೇಟೆ ಏತ ನೀರಾವರಿ ಯೋಜನೆ ಕಾಮಗಾರಿಯನ್ನೇ ಮಾಡದೇ 21 ಲಕ್ಷ ರೂ. ಬಿಲ್ ಮಾಡಲಾಗಿದೆ. ಈ ಕುರಿತು ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು. ಶಿರಸಿ ತಾಲೂಕಿನ ವಾನಳ್ಳಿಯಲ್ಲಿ 27 ಲಕ್ಷ ರೂ. ವೆಚ್ಚದಲ್ಲಿ ನಿರ್ವಣವಾದ ಒಡ್ಡಿನಿಂದ ಯಾರಿಗೂ ಪ್ರಯೋಜನವಾಗುತ್ತಿಲ್ಲ ಎಂದು ಜಿ.ಎನ್.ಹೆಗಡೆ ಮುರೇಗಾರ ದೂರಿದರು. ಹಿಂದಿನ ಎಇಇಗಳ ಅವಧಿಯಲ್ಲಿ ಕಾಮಗಾರಿ ನಡೆದಿದ್ದು, ಈ ಕುರಿತು ಮಾಹಿತಿ ನೀಡಲು ತಮಗೆ ಕಾಲಾವಕಾಶ ಬೇಕು ಎಂದು ಜಿಪಂ ಎಇಇ ಎಂ.ಟಿ.ಕಳಸ ವಿನಂತಿಸಿದರು. ಅದಕ್ಕೆ ಹೆಚ್ಚಿನ ಸದಸ್ಯರು ಆಕ್ಷೇಪಿಸಿದರು.

ಶಾಲೆ ಸಮಸ್ಯೆಯ ಸರಮಾಲೆ :ಸರ್ಕಾರಿ ಶಾಲೆಗಳ ಸಂಬಂಧ ಸಮಸ್ಯೆಗಳ ಸರಮಾಲೆಯೇ ಸಾಮಾನ್ಯ ಸಭೆಯಲ್ಲಿ ಬಿಚ್ಚಿಕೊಂಡಿತು.

ರಿಪೇರಿ ಮಾಡಬೇಕಾದ ಶಾಲೆಗಳನ್ನು ಶಿಕ್ಷಣ ಇಲಾಖೆ ಸರಿಯಾಗಿ ಗುರುತಿಸಿಲ್ಲ. ಇನ್ನು ಪಾರಂಪರಿಕ ಶಾಲೆಗಳ ಪಟ್ಟಿಯೂ ಸಮರ್ಪಕವಾಗಿಲ್ಲ ಎಂದು ಶಿವಾನಂದ ಹೆಗಡೆ ಆಕ್ಷೇಪಿಸಿದರು. ಆಂಗ್ಲ ಮಾಧ್ಯಮ ಶಾಲೆಗಳ ಆಯ್ಕೆ ಕ್ರಮ ಸರಿಯಾಗಿಲ್ಲ ಎಂದು ಗಾಯತ್ರಿ ಗೌಡ ಅಸಮಾಧಾನ ವ್ಯಕ್ತಪಡಿಸಿದರು. ಅತಿ ಹೆಚ್ಚು ಮಕ್ಕಳಿರುವ ಶಾಲೆಗಳನ್ನು ಗುರುತಿಸಿ ಅಲ್ಲಿ ಆಂಗ್ಲ ಮಾಧ್ಯಮ ಪ್ರಾರಂಭಿಸಲಾಗಿದೆ. ಆಯ್ದ ಶಾಲೆಗಳನ್ನು ಪಾರಂಪರಿಕ ಶಾಲೆಗಳ ಪಟ್ಟಿಯಲ್ಲಿ ಸೇರಿಸಲಾಗಿದೆ. ಅಂಥ ಶಾಲೆಗೆ 2 ಲಕ್ಷ ರೂ. ಅನುದಾನ ಬಿಡುಗಡೆಯಾಗಿದೆ. ಮುಂದಿನ ವರ್ಷ ಮತ್ತಷ್ಟು ಶಾಲೆಗಳನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ಎಲ್ಲ ಶಾಲೆಗಳನ್ನೂ ಪಾರಂಪರಿಕ ಪಟ್ಟಿಗೆ ಪರಿಗಣಿಸಲಾಗುವುದು ಎಂದು ಡಿಡಿಪಿಐ ಮಂಜುನಾಥ ಭರವಸೆ ನೀಡಿದರು. ಕೇಂದ್ರೀಯ ನೆರೆ ಪರಿಹಾರ ನಿಧಿಯಲ್ಲಿ ಶಾಲೆಗಳ ಮೇಲ್ಛಾವಣಿ ರಿಪೇರಿಗೆ ಮಾತ್ರ ಅವಕಾಶ ನೀಸಲಾಗುತ್ತದೆ. ಆದರೆ, ಅದನ್ನು ಶಾಲೆಗಳ ಕಿಟಕಿ ಬಾಗಿಲು, ನೆಲಗಳ ರಿಪೇರಿಗೂ ಅನ್ವಯಿಸಬೇಕು ಎಂದು ಸದಸ್ಯೆ ಉಷಾ ಹೆಗಡೆ ಒತ್ತಾಯಿಸಿದರು.

ಕೇಂದ್ರ ಸರ್ಕಾರದ ನೀತಿಯನ್ನು ಬದಲಿಸಲು ಸಾಧ್ಯವಿಲ್ಲ. ಆದರೆ, ರಾಜ್ಯ ನೆರೆ ಪರಿಹಾರ ನಿಧಿಯಲ್ಲಿ ಈ ಬದಲಾವಣೆ ತರುವ ಬಗ್ಗೆ ಕಂದಾಯ ಸಚಿವರಿಂದ ಅನುಮತಿ ಪಡೆಯಲಾಗುವುದು ಎಂದು ಸಿಇಒ ಎಂ.ರೋಶನ್ ಭರವಸೆ ನೀಡಿದರು.

ಕಾರವಾರ ಶಿರವಾಡ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕಿ ವರಲಕ್ಷ್ಮೀ ಮೋದಿ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಅವರನ್ನು ವರ್ಗಾಯಿಸಬೇಕು ಎಂದು ವರ್ಷದಿಂದ ಹೇಳುತ್ತಿದ್ದರೂ ಕ್ರಮವಾಗಿಲ್ಲ ಎಂದು ಚೈತ್ರಾ ಕೊಠಾರಕರ್ ದೂರಿದರು. ಶಿಕ್ಷಣ ಇಲಾಖೆ ಆಯುಕ್ತರ ಗಮನಕ್ಕೆ ತಂದು ಅವರ ಮೇಲೆ ಕ್ರಮಕ್ಕೆ ಮನವಿ ಮಾಡುವುದಾಗಿ ಸಿಇಒ ರೋಶನ್ ಭರವಸೆ ನೀಡಿದರು. ಹೊನ್ನಾವರ ತಾಲೂಕಿನ ಮಾಗೋಡ ಅಸೀಕೇರಿ ಶಾಲೆಯಲ್ಲಿ ಕಾಯಂ ಶಿಕ್ಷಕರು ಇಲ್ಲದ ಕುರಿತು ಪುಷ್ಪಾ ನಾಯ್ಕ ಅಸಮಾಧಾನ ವ್ಯಕ್ತಪಡಿಸಿದರು ವಾರದಲ್ಲಿ ಸ್ಥಳ ಭೇಟಿ ಮಾಡಿ ಸಮಸ್ಯೆ ಬಗೆಹರಿಸುವುದಾಗಿ ಸಿಇಒ ಎಂ.ರೋಶನ್ ಭರವಸೆ ನೀಡಿದರು. ಬನವಾಸಿ ಸರ್ಕಾರಿ ಉರ್ದು ಶಾಲೆಗೆ ಪೂರೈಸಿದ ಡೆಸ್ಕ್, ಬೇಂಚ್​ಗೆ ಗೆದ್ದಲು ಹಿಡಿದಿದೆ ಎಂದು ರೂಪಾ ನಾಯ್ಕ ಪ್ರಸ್ತಾಪಿಸಿದರು. ಸ್ಥಳ ಪರಿಶೀಲಿಸಿದ್ದು, ಸದಸ್ಯರ ದೂರು ಸತ್ಯವಾಗಿದೆ. ಅದನ್ನು ಬದಲಾಯಿಸಲು ಗುತ್ತಿಗೆದಾರರಿಗೆ ಸೂಚಿಸುವಂತೆ ಡಿಡಿಪಿಐಗೆ ಜಿಪಂ ಉಪ ಕಾರ್ಯದರ್ಶಿ ಶ್ಯಾಮಲಾ ಮಹಾಲೆ ತಿಳಿಸಿದರು.

ಬಜೆಟ್ ಅನುಮೋದನೆ :ಸರ್ಕಾರದಿಂದ ಅನುಮೋದನೆ ಪಡೆದ 953.96 ಕೋಟಿ ರೂ.ಗಳ ಜಿಪಂ ಬಜೆಟ್ ಅನ್ನು ಅಧ್ಯಕ್ಷೆ ಜಯಶ್ರೀ ಮೊಗೇರ ಸಾಮಾನ್ಯ ಸಭೆಯಲ್ಲಿ ಮಂಗಳವಾರ ಮಂಡಿಸಿದರು.

ಜಿಪಂ ಕಾರ್ಯಕ್ರಮಗಳಿಗೆ 297.74 ಕೋಟಿ ರೂ. ತಾಪಂ ಕಾರ್ಯಕ್ರಮಗಳಿಗೆ 279.74 ಕೋಟಿ, ಗ್ರಾಪಂ ಕಾರ್ಯಕ್ರಮಗಳಿಗೆ 66 ಲಕ್ಷ ರೂ.ಗಳನ್ನು ನಿಗದಿ ಮಾಡಲಾಗಿದೆ. ಜಿಪಂ ಅಧಿಕಾರಿ ಮತ್ತು ನೌಕರರ ವೇತನಕ್ಕೆ 91.99 ಕೋಟಿ, ತಾಪಂ ನೌಕರರ ವೇತನಕ್ಕೆ 515.61 ಕೋಟಿ, ಜಿಪಂ ಅಧೀನ ಕಚೇರಿಗಳ ಸಾದಿಲ್ವಾರು ವೆಚ್ಚಕ್ಕೆ 198.35 ಕೋಟಿ, ಹೊರ ಮೂಲ ಸಿಬ್ಬಂದಿ ವೇತನಕ್ಕೆ 7.40 ಕೋಟಿ, ತಾಪಂ ಅಧೀನ ಕಚೇರಿಗಳ ಸಾದಿಲ್ವಾರು ವೆಚ್ಚಕ್ಕೆ 138.56 ಕೋಟಿ, ಹೊರ ಮೂಲ ಸಿಬ್ಬಂದಿ ವೆಚ್ಚಕ್ಕೆ 1.38 ಕೋಟಿ ರೂ. ವ್ಯಯಿಸಲಾಗುವುದು ಎಂದು ತಿಳಿಸಿದರು. ಶಿಕ್ಷಣ ಇಲಾಖೆಗೆ ಜಿಪಂನಿಂದ 129.43 ಕೋಟಿ, ತಾಪಂನಿಂದ 479.93 ಕೋಟಿ, ಆರೋಗ್ಯ ಇಲಾಖೆಗೆ ಜಿಪಂನಿಂದ 42.32 ಕೋಟಿ, ತಾಪಂನಿಂದ 4.19 ಕೋಟಿ, ಸಮಾಜ ಕಲ್ಯಾಣ ಇಲಾಖೆ 24.36 ಕೋಟಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ 40.20 ಕೋಟಿ, ಅಲ್ಪಸಂಖ್ಯಾತರ ಇಲಾಖೆಗೆ 2.64 ಕೋಟಿ ತೋಟಗಾರಿಕೆ ಇಲಾಖೆ 6.17 ಕೋಟಿ, ಕೃಷಿ ಇಲಾಖೆ 4.18 ಕೋಟಿ, ಪಶು ಸಂಗೋಪನಾ ಇಲಾಖೆಗೆ 17.52 ಕೋಟಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ 62.12 ಕೋಟಿ ರೂ. ನಿಗದಿ ಮಾಡಲಾಗಿದೆ ಎಂದು ತಿಳಿಸಿದರು.

ವಿಜಯವಾಣಿ ಪ್ರಸ್ತಾಪ :ಕುಮಟಾ ತಾಲೂಕಿನ ಮೇದಿನಿ ಗ್ರಾಮಕ್ಕೆ ಸೌಲಭ್ಯ ಇಲ್ಲದ ಕಾರಣ ಅಲ್ಲಿನ ಯುವಕರಿಗೆ ಹೆಣ್ಣು ಕೊಡದ ಬಗ್ಗೆ ಗಜಾನನ ಪೈ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದರು. ವಿಜಯವಾಣಿಯಲ್ಲಿ ಈ ಕುರಿತು ವರದಿ ಪ್ರಕಟವಾಗಿದೆ ಎಂದು ಸಮಸ್ಯೆ ವಿವರಿಸಿದರು. ಶೀಘ್ರ ಸ್ಥಳ ಭೇಟಿ ಮಾಡುವುದಾಗಿ ಸಿಇಒ ಎಂ.ರೋಶನ್ ಭರವಸೆ ನೀಡಿದರು.

ಇತರ ರ್ಚಚಿತ ವಿಷಯಗಳು: ಜಿಲ್ಲೆಯಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆಯಾಗಬೇಕು ಎಂದು ನಿರ್ಣಯ ಮಂಡಿಸಿ ಸರ್ಕಾರಕ್ಕೆ ಕಳಿಸಲು ತೀರ್ವನಿಸಲಾಯಿತು. ಪ್ರದೀಪ ನಾಯಕ ವಿಷಯ ಮಂಡಿಸಿದರು.

ಶಿರಸಿ ಜಿಪಂ ಇಂಜಿನಿಯರಿಂಗ್ ವಿಭಾಗ ಹಾಗೂ ಕುಡಿಯುವ ನೀರಿನ ವಿಭಾಗದ ಅಧಿಕಾರಿಗಳು ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ಪಡೆಯದೇ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಯಲ್ಲಾಪುರ ಭಾಗದ ಜಿಪಂ ಸದಸ್ಯರಾದ ರೂಪಾ ಬೂರಮನೆ ಹಾಗೂ ಶೃತಿ ಹೆಗಡೆ ದೂರಿದರು. ಮುಂದೆ ಆರೋಪ ಬಂದರೆ ನೋಟಿಸ್ ಜಾರಿ ಮಾಡುವುದಾಗಿ ಸಿಇಒ ರೋಶನ್ ಭರವಸೆ ನೀಡಿದರು.

Leave a Reply

Your email address will not be published. Required fields are marked *