ನಿರ್ಲಕ್ಷ್ಯ ಮಾಡಿದ್ರೆ ಸುಮ್ಮನೆ ಬಿಡಲ್ಲ

ಶ್ರೀನಿವಾಸಪುರ: ಸರ್ಕಾರ ಬಿಕ್ಕಟ್ಟಿನಲ್ಲಿದೆ ಎಂದು ಆಸ್ಪತ್ರೆಗಳಿಗೆ ಔಷಧ ವಿತರಣೆ ಮಾಡುವಲ್ಲಿ ನಿರ್ಲಕ್ಷ್ಯ ತೋರುತ್ತಿದ್ದೀರಿ. ಸರ್ಕಾರ ಇರಲಿ ಅಥವಾ ಬೇರೆ ಸರ್ಕಾರ ಬರಲಿ, ಆಸ್ಪತ್ರೆಗಳಿಗೆ ಔಷಧ ವಿತರಣೆಯಲ್ಲಿ ನಿರ್ಲಕ್ಷ್ಯ ಮಾಡಿದರೆ ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸ್ಪೀಕರ್ ಕೆ.ಆರ್.ರಮೇಶ್​ಕುಮಾರ್ ಎಚ್ಚರಿಕೆ ನೀಡಿದರು.

ಸೋಮವಾರ ರಾತ್ರಿ ಅಪಘಾತದಲ್ಲಿ ಮೃತಪಟ್ಟ ಕಾಂಗ್ರೆಸ್ ಕಾರ್ಯಕರ್ತ, ಕೆಇಬಿ ಗುತ್ತಿಗೆದಾರ ಶಾಕಂಪಲ್ಲಿ ಶಂಕರರೆಡ್ಡಿ ಪಾರ್ಥಿವ ಶರೀರ ದರ್ಶನಕ್ಕಾಗಿ ಮಂಗಳವಾರ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಆಗಮಿಸಿದ್ದ ವೇಳೆ ಆಸ್ಪತ್ರೆ ಸೌಲಭ್ಯ ಹಾಗೂ ಔಷಧ ಸರಬರಾಜಿನ ಬಗ್ಗೆ ಮಾಹಿತಿ ಪಡೆದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಖಾಸಗಿ ಆಸ್ಪತ್ರೆ ಹಾಗೂ ಔಷಧ ಕಂಪನಿಗಳೊಂದಿಗೆ ಶಾಮೀಲಾಗಿ ವಿತರಣೆಯಲ್ಲಿ ವಿಳಂಬ ಮಾಡುತ್ತಿದ್ದೀರೆಂದು ಮೇಲ್ನೋಟಕ್ಕೆ ಕಂಡುಬರುತ್ತಿದೆ ಎಂದು ಅಧಿಕಾರಿಗಳ ವಿರುದ್ಧ ಕೆಂಡಾಮಂಡಲವಾದರು.

ಶ್ರೀನಿವಾಸಪುರ ಸರ್ಕಾರಿ ಆಸ್ಪತ್ರೆಗೆ ಶಿಫಾರಸು ಮಾಡಿರುವ ಯಂತ್ರ ಹಾಗೂ ಔಷಧ ನಮಗೆ ಸರಬರಾಜಾಗಿಲ್ಲ ಎಂದು ಆಸ್ಪತ್ರೆ ಆಡಳಿತಾಧಿಕಾರಿ ಡಾ.ಶ್ರೀನಿವಾಸ್ ಸ್ಪೀಕರ್​ಗೆ ಮಾಹಿತಿ ನೀಡಿದಾಗ, ದೂರವಾಣಿ ಮೂಲಕ ಜಿಲ್ಲಾ ಆರೋಗ್ಯಾಧಿಕಾರಿ ಹಾಗೂ ಬೆಂಗಳೂರಿನ ಔಷಧ ಸರಬರಾಜು ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಸರ್ಕಾರಿ ಆಸ್ಪತ್ರೆಗಳಿಗೆ ನೀವು ಔಷಧ ಸರಬರಾಜು ಮಾಡುವುದಿಲ್ಲವಾದರೆ ರೋಗಿಗಳ ಗತಿ ಏನಾಗಬೇಕು. ನಾನು ಶ್ರೀನಿವಾಸಪುರ ಆಸ್ಪತ್ರೆಗೆ ಸಂಬಂಧಿಸಿದಂತೆ ಮಾತನಾಡುತ್ತಿಲ್ಲ. ರಾಜ್ಯಾದ್ಯಂತ ಸರ್ಕಾರಿ ಆಸ್ಪತ್ರೆಗಳಿಗೆ ಔಷಧ ಸರಬರಾಜು ಆಗುತ್ತಿಲ್ಲ ಎಂದು ದೂರುಗಳು ಬಂದಿವೆ. ಔಷಧವಿಲ್ಲ ಎಂದರೆ ಟೆಂಡರ್​ಗಾಗಿ ಕಾಯದೆ ಮೊದಲು ಔಷಧ ಸರಬರಾಜು ಮಾಡಿ ಎಂದು ಕರ್ನಾಟಕ ಔಷಧ ಸಂಗ್ರಹ ಹಾಗೂ ಸಾಗಣೆ ವಿಭಾಗದ ನಿರ್ದೇಶಕರಿಗೆ ಎಚ್ಚರಿಕೆ ನೀಡಿದರು.

ದೇವರು ನಿಮ್ಮನ್ನು ಕ್ಷಮಿಸುವುದಿಲ್ಲ: ಜಿಲ್ಲಾ ಆರೋಗ್ಯಾಧಿಕಾರಿ ವಿಜಯ್ ಕುಮಾರ್ ಹಾಗೂ ಜಿಲ್ಲಾ ಔಷಧ ಉಗ್ರಾಣದ ಶ್ರೀರಾಮ್ ಶ್ರೀನಿವಾಸಪುರ ಸರ್ಕಾರಿ ಆಸ್ಪತ್ರಗೆ ಆಗಮಿಸುತ್ತಿದ್ದಂತೆ ವಿಜಯ್ ಕುಮಾರ್​ರನ್ನು ತರಾಟೆಗೆ ತೆಗೆದುಕೊಂಡು, ಕಮಿಷನರ್ ಸಭೆಗಳಿಗೆ ಆಗಮಿಸಿದಾಗ ಔಷಧಗಳ ಬಗ್ಗೆ ಮಾತನಾಡಲು ನಿಮಗೇನಾಗಿದೆ. ಎಆರ್​ವಿ ಚುಚ್ಚುಮದ್ದು ಸೇರಿ ಕೆಲವೊಂದು ಔಷಧಗಳು ಸರಬರಾಜು ಆಗುತ್ತಿಲ್ಲ ಎಂದು ದೂರು ಬಂದಿವೆ ಎಂದಾಗ ಸರಬರಾಜು ಮಾಡಲಾಗುತ್ತಿದೆ ಎಂದು ಔಷಧ ಉಗ್ರಾಣದ ಶ್ರೀರಾಮ್ ತಿಳಿಸಿದರು. ಸುಳ್ಳು ಹೇಳಿದರೆ ದೇವರು ನಿಮ್ಮನ್ನು ಕ್ಷಮಿಸುವುದಿಲ್ಲ. ಬಡವರ ಜತೆ ಚೆಲ್ಲಾಟ ಆಡುವುದನ್ನು ತಕ್ಷಣ ನಿಲ್ಲಿಸಿ ಎಂದು ಎಚ್ಚರಿಕೆ ನೀಡಿದರು.

ಎಇಇ ವಿರುದ್ಧ ಆಕ್ರೋಶ: ಪಟ್ಟಣದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಮುಖ್ಯಾಧಿಕಾರಿ ಮೋಹನ್​ಕುಮಾರ್ ಜತೆ ರ್ಚಚಿಸಿದ ಸ್ಪೀಕರ್ ಕೊಳವೆ ಬಾವಿ ಕೊರೆಸಲು ಟೆಂಡರ್ ಕರೆಯಲಾಗಿದೆ. ಟೆಂಡರ್ ಅನುಮೋದನೆ ವಿಳಂಬವಾಗಿದೆ ಎಂದಾಗ ಕೋಲಾರದ ಎಇಇ ಅವರನ್ನು ಕುಡಿಯುವ ನೀರಿಗಾಗಿ ಸಮಸ್ಯೆ ಉಂಟಾಗಿದ್ದರೂ ಟೆಂಡರ್ ಅನುಮೋದನೆ ಮಾಡಲು ನಿಮಗೆ ಕಷ್ಟವೇ ಎಂದು ಸ್ಪೀಕರ್ ತರಾಟೆಗೆ ತೆಗೆದುಕೊಂಡರು.

Leave a Reply

Your email address will not be published. Required fields are marked *