ನಿರ್ಬಂಧ ಜಾರಿಗೆ ಟ್ರಂಪ್ ಹೊಸ ಪ್ಲ್ಯಾನ್

ವಾಷಿಂಗ್ಟನ್: ಮುಸ್ಲಿಂ ಬಾಹುಳ್ಯವಿರುವ 7 ರಾಷ್ಟ್ರಗಳ ನಾಗರಿಕರು ಅಮೆರಿಕ ಪ್ರವೇಶಿಸದಂತೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇರಿರುವ ನಿರ್ಬಂಧಕ್ಕೆ ಮೂರು ನ್ಯಾಯಾಲಯಗಳು ತಡೆ ನೀಡಿರುವ ಹಿನ್ನೆಲೆಯಲ್ಲಿ ಭಾರಿ ಮುಖಭಂಗ ಅನುಭವಿಸಿರುವ ಅಮೆರಿಕ ಸರ್ಕಾರ, ನಿಷೇಧ ಜಾರಿಗೊಳಿಸಲು ಹೊಸ ತಂತ್ರ ಅನುಸರಿಸಿದೆ. ವಲಸಿಗರ ನೀತಿಗೆ ತಿದ್ದುಪಡಿ ತಂದು, ನಿರ್ಬಂಧ ಆದೇಶವನ್ನು ಪರಿಷ್ಕರಿಸಿ ಮತ್ತೆ ಜಾರಿಗೊಳಿಸಲು ಟ್ರಂಪ್ ನಿರ್ಧರಿಸಿದ್ದಾರೆ.

ಶನಿವಾರ ಮಾಧ್ಯಮದೊಂದಿಗೆ ಮಾತನಾಡಿದ ಟ್ರಂಪ್, ಅಮೆರಿಕದ ಭದ್ರತಾ ದೃಷ್ಟಿಯಿಂದ ಕೆಲ ದೇಶಗಳ ನಾಗರಿಕರಿಗೆ ನಿರ್ಬಂಧ ವಿಧಿಸಲಾಗಿದೆ. ಕಾನೂನು ತೊಡಕಿನಿಂದ ಈ ನೀತಿ ಜಾರಿ ವಿಳಂಬವಾಗುತ್ತಿದೆ. ಇದನ್ನು ಜಾರಿಗೆ ತರಲು ಸರ್ಕಾರ ಬದ್ಧವಾಗಿದ್ದು, ಹಲವು ಆಯ್ಕೆಗಳು ಸರ್ಕಾರದ ಮುಂದಿವೆ. ಹೊಸ ನೀತಿಗೆ ತಡೆ ನೀಡಿರುವ ನ್ಯಾಯಾಲಯದ ತೀರ್ಪಿನ ವಿರುದ್ಧ ಸುಪ್ರೀಂಕೋರ್ಟ್​ನಲ್ಲಿ ಪ್ರಕರಣ ದಾಖಲಿಸಬಹುದು. ಇಲ್ಲವೇ ಪರಿಷ್ಕೃತ ನೀತಿ ಜಾರಿಗೊಳಿಸಬಹುದಾಗಿದೆ. ಮುಂದಿನ ಎರಡು, ಮೂರು ದಿನಗಳಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಇನ್ನಷ್ಟು ಕ್ರಮ: ಹೊಸ ನೀತಿಯಲ್ಲಿ ಹೆಚ್ಚಿನ ಭದ್ರತಾ ಕ್ರಮಗಳನ್ನು ಅಳವಡಿಸಲು ಟ್ರಂಪ್ ನಿರ್ಧರಿಸಿದ್ದಾರೆ ಎಂದು ಅಮೆರಿಕ ಮಾಧ್ಯಮಗಳು ವರದಿ ಮಾಡಿವೆ. ನಿಷೇಧ ಪಟ್ಟಿಗೆ ಮತ್ತಷ್ಟು ರಾಷ್ಟ್ರಗಳನ್ನು ಸೇರಿಸುವುದು, ಇತರ ದೇಶಗಳಿಂದ ಬರುವ ನಾಗರಿಕರನ್ನು ಕಠಿಣ ತಪಾಸಣೆಗೆ ಒಳಪಡಿಸುವುದು, ಗ್ರೀನ್​ಕಾರ್ಡ್ ಹಾಗೂ ಕಾಯಂ ವಾಸದ ಅನುಮತಿ ಪಡೆದಿರುವ ವ್ಯಕ್ತಿಗಳಿಗೂ ಹಲವು ನಿರ್ಬಂಧ ವಿಧಿಸುವ ಅಂಶ ಹೊಸ ಆದೇಶದಲ್ಲಿ ಸೇರ್ಪಡೆ ಮಾಡುವ ಸಾಧ್ಯತೆಯಿದೆ. ವಲಸೆ ನೀತಿ ದೇಶದ ಭದ್ರತೆ ವಿಚಾರವಾಗಿರುವ ಕಾರಣ ತ್ವರಿತ ಗತಿಯಲ್ಲಿ ಹೊಸ ನೀತಿ ಜಾರಿಗೊಳಿಸಲು ಟ್ರಂಪ್ ಉತ್ಸುಕರಾಗಿದ್ದಾರೆ ಎನ್ನಲಾಗಿದೆ.

ವಲಸಿಗರಿಗೆ ತಾತ್ಕಾಲಿಕ ನೆಮ್ಮದಿ: ಡೊನಾಲ್ಡ್ ಟ್ರಂಪ್ ವಿವಾದಿತ ವಲಸೆ ನೀತಿ ಜಾರಿಗೆ ಬರುವುದು ಸಾಕಷ್ಟು ವಿಳಂಬವಾಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

Leave a Reply

Your email address will not be published. Required fields are marked *