ನಿರ್ದೇಶಕ ಸ್ಥಾನಕ್ಕೆ ತ್ರಿಕೋನ ಸ್ಪರ್ಧೆ

ರಮೇಶ ಹಾರ್ಸಿಮನೆ ಸಿದ್ದಾಪುರ
ಧಾರವಾಡ ಹಾಲು ಒಕ್ಕೂಟದ ಆಡಳಿತ ಮಂಡಳಿಗಾಗಿ ಏ. 28ರಂದು ಚುನಾವಣೆ ನಡೆಯಲಿದೆ. ಸಿದ್ದಾಪುರ, ಕುಮಟಾ, ಹೊನ್ನಾವರ ಮತ್ತು ಭಟ್ಕಳ ಕ್ಷೇತ್ರದ ಒಂದು ನಿರ್ದೇಶಕ ಸ್ಥಾನಕ್ಕೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.

ಹಾಲಿ ನಿರ್ದೇಶಕ ಲಕ್ಷ್ಮೀನಾರಾಯಣ ಕೃಷ್ಣ ಹೆಗಡೆ ಬಿದ್ರಕಾನ್ ಮರು ಆಯ್ಕೆ ಬಯಸಿದ್ದಾರೆ. ಸಂತೋಷ ವೆಂಕಟಪತಿ ಶರ್ಮಾ ಕಲ್ಕಟ್ಟೆ ಕಾನಸೂರು ಹಾಗೂ ಪರಶುರಾಮ ವೀರಭದ್ರ ನಾಯ್ಕ ಬೇಡ್ಕಣಿ ಅವರು ಚುನಾವಣೆ ಕಣದಲ್ಲಿದ್ದು, ಈ ಮೂವರು ಈಗಾಗಲೇ ಹಾಲು ಉತ್ಪಾದಕರ ಸಹಕಾರಿ ಸಂಘಗಳ ಮತದಾರರನ್ನು ಭೇಟಿ ಮಾಡಿ ಮತ ನೀಡುವಂತೆ ಮನವಿ ಮಾಡಿದ್ದಾರೆ. ಸಿದ್ದಾಪುರ, ಕುಮಟಾ, ಹೊನ್ನಾವರ ಮತ್ತು ಭಟ್ಕಳ ಕ್ಷೇತ್ರದಲ್ಲಿ ಒಟ್ಟು 73 ಹಾಲು ಉತ್ಪಾದಕರ ಸಹಕಾರಿ ಸಂಘಗಳು ಕಾರ್ಯ ನಿರ್ವಹಿಸುತ್ತಿದ್ದು, ಅವುಗಳಲ್ಲಿ 43 ಸಂಘಗಳಿಗೆ ಮಾತ್ರ ಮತ ಚಲಾಯಿಸುವ ಅವಕಾಶ ಇದೆ. ಇನ್ನುಳಿದ 30 ಸಂಘಗಳ ನಿಗದಿಪಡಿಸಿದ ಪ್ರತಿನಿಧಿಗಳು ಹಾಲು ಒಕ್ಕೂಟದ ವಾರ್ಷಿಕ ಕನಿಷ್ಠ 3 ಸಾಮಾನ್ಯ ಸಭೆಗಳಿಗೆ ಗೈರಾಗಿದ್ದರಿಂದ ಮತ ಚಲಾಯಿಸುವ ಅವಕಾಶ ಇಲ್ಲದಂತಾಗಿದೆ. ಸಿದ್ದಾಪುರ ತಾಲೂಕಿನಲ್ಲಿ 51 ಹಾಲು ಸಂಘಗಳಿದ್ದು, ಅವುಗಳಲ್ಲಿ 28 ಸಂಘಗಳಿಗೆ, ಕುಮಟಾ ತಾಲೂಕಿನಲ್ಲಿ 6 ಸಂಘಗಳಿದ್ದು ಅವುಗಳಲ್ಲಿ 3 ಸಂಘಗಳಿಗೆ, ಹೊನ್ನಾವರ ತಾಲೂಕಿನಲ್ಲಿ 7 ಸಂಘಗಳಿದ್ದು 3 ಸಂಘಗಳಿಗೆ ಹಾಗೂ ಭಟ್ಕಳ ತಾಲೂಕಿನಲ್ಲಿ 9 ಸಂಘಗಳ ಪೈಕಿ 9 ಸಂಘಗಳಿಗೂ ಮತದಾನ ಮಾಡುವ ಅವಕಾಶ ಇದೆ. ಮೇಲ್ನೋಟಕ್ಕೆ ತ್ರಿಕೋನ ಸ್ಪರ್ಧೆಯಂತೆ ಕಂಡುಬಂದರೂ ಮುಖ್ಯವಾಗಿ ಸಂತೋಷ ವೆಂಕಟಪತಿ ಶರ್ಮಾ ಕಾನಸೂರು ಹಾಗೂ ಲಕ್ಷ್ಮೀನಾರಾಯಣ ಹೆಗಡೆ ಅವರ ನಡುವೆ ನೇರ ಹಣಾಹಣಿ ಏರ್ಪಡುವ ಸಾಧ್ಯತೆಯೇ ಹೆಚ್ಚು ಕಂಡುಬರುತ್ತಿದೆ. ಇವರಿಬ್ಬರ ನಡುವಿನ ಪೈಪೋಟಿಯ ಮಧ್ಯೆ ಪರಶುರಾಮ ವೀರಭದ್ರ ನಾಯ್ಕ ಬೇಡ್ಕಣಿ ಆಯ್ಕೆ ಆದರೂ ಅಚ್ಚರಿ ಇಲ್ಲ.

ನಾಳೆ ಮತದಾನ: ಧಾರವಾಡ ಹಾಲು ಒಕ್ಕೂಟದ ಮುಖ್ಯ ಕಚೇರಿ ಆವರಣದಲ್ಲಿ ಏ. 28ರಂದು ಬೆಳಗ್ಗೆ 9ರಿಂದ ಸಂಜೆ 4ರವರೆಗೆ ಮತದಾನ ನಡೆಯಲಿದ್ದು, ನಂತರ ಮತ ಎಣಿಕೆ ಕಾರ್ಯ ನಡೆಯಲಿದೆ.

ರಾಜಕೀಯ ಪಕ್ಷಗಳ ಆಟ

ಚುನಾವಣೆಯಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿರುವುದರಿಂದ ಈ ಚುನಾವಣೆ ಹಿಂದಿನ ಚುನಾವಣೆಗಿಂತ ಭಿನ್ನವಾಗಿದೆ. ಹಿಂದಿನ ಚುನಾವಣೆಯಲ್ಲಿ ಪ್ರಚಾರದ ಅಬ್ಬರ ಜೋರಾಗಿರಲಿಲ್ಲ. ಯಾರು ಚುನಾವಣೆ ಕಣದಲ್ಲಿದ್ದಾರೆ ಎಂಬುದು ತಿಳಿಯುತ್ತಿರಲಿಲ್ಲ. ಈಗ ಹಾಗಿಲ್ಲ. ಸಹಕಾರಿ ಸಂಘದಲ್ಲಿಯೂ ರಾಜಕೀಯ ಪಕ್ಷದ ಮುಖಂಡರು ತಮ್ಮ ಬೆಂಬಲಿತ ಅಭ್ಯರ್ಥಿಗಳಿಗೆ ಮತ ನೀಡುವಂತೆ ಮತದಾರರನ್ನು ಒತ್ತಾಯಿಸುತ್ತಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.