ನಿರ್ದಿಷ್ಟ ಗುರಿ ಇದ್ದರೆ ಯಶಸ್ಸು

ದೊಡ್ಡಬಳ್ಳಾಪುರ: ಪದವೀಧರರು ಜೀವನದಲ್ಲಿ ಗುರಿ ಏನೆಂಬುದನ್ನು ನಿರ್ಣಯಿಸಿ ಅದನ್ನು ತಲುಪಲು ಉತ್ತಮ ಮಾರ್ಗ ಯಾವುದು ಎಂಬುದನ್ನು ಅರಿತಾಗ ಮಾತ್ರ ಯಶಸ್ಸುಗಳಿಸಲು ಸಾಧ್ಯ ಎಂದು ಬೆಳಗಾವಿಯ ಕೇಂದ್ರೀಕೃತ ಸ್ಥಳ ನಿಯೋಜನಾ ಘಟಕದ (ಸಿಪಿಸಿ) ನಿರ್ದೇಶಕ ಡಾ.ಬಿನೊಯ್ ಮ್ಯಾಥಿವ್ ತಿಳಿಸಿದರು.

ನಗರ ಹೊರವಲಯದ ಆರ್.ಎಲ್.ಜಾಲಪ್ಪ ತಾಂತ್ರಿಕ ವಿದ್ಯಾಲಯದಲ್ಲಿ ಗುರುವಾರ ಏರ್ಪಡಿಸಿದ್ದ ಪದವಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.

ಸಾಮಾಜಿಕ ಹಿತಕ್ಕೆ ಬಳಕೆಯಾಗದ ಪದವಿಗಳು ಅಪ್ರಸ್ತುತ. ಸಮುದಾಯದ ಅಭ್ಯುದಯದ ಜತೆಗೆ ಸಂಬಂಧ ಗಟ್ಟಿಗೊಳಿಸುವ, ಜವಾಬ್ದಾರಿಯುತ ಕರ್ತವ್ಯ ನಿರ್ವಹಣೆ ವಿಶ್ವಾಸ ಹೆಚ್ಚಬೇಕಾದ ಅನಿವಾರ್ಯತೆ ಇದೆ ಎಂದರು.

ಆಧುನಿಕತೆ ಹೆಚ್ಚಾದಂತೆ ಸ್ಪರ್ಧೆ ಹೆಚ್ಚಾಗುತ್ತಿದೆ. ಈ ಹಂತದಲ್ಲಿ ಪ್ರಜ್ಞಾಪೂರ್ವಕ ಗುರಿ ಮತ್ತು ಸವಾಲು ಸ್ವೀಕರಿಸಿ ಗೆಲ್ಲುವ ಮನೋಭಾವ ಅಗತ್ಯವಾಗಿದೆ. ದೇಶದ ಆಸ್ತಿ ಎಂದು ಪರಿಗಣಿತವಾಗುವ ವಿದ್ಯಾವಂತ ಯುವ ಸಮುದಾಯ ಹೊಣೆಯಾಧಾರಿತ ಕರ್ತವ್ಯ ಮರೆಯಬಾರದು ಎಂದರು.

ಮಾನವೀಯ ಮೌಲ್ಯಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು ಸಮಾಜ ಮತ್ತು ಹೆತ್ತವರ ಬೇಕು-ಬೇಡಗಳಿಗೆ ಸ್ಪಂದಿಸುವ ಮನುಷ್ಯ ಸಹಜ ಭಾವನೆ ಮರೆಯದಿರುವುದು ಪದವಿ ಪಡೆಯುವುದಕ್ಕಿಂತ ಮುಖ್ಯ ಎಂದರು.

ಶ್ರೀ ದೇವರಾಜ ಅರಸ್ ಶಿಕ್ಷಣ ಸಂಸ್ಥೆಯ ನಿರ್ದೇಶಕ ಜೆ.ರಾಜೇಂದ್ರ ಮಾತನಾಡಿ, ಪದವೀಧರ ವಿದ್ಯಾರ್ಥಿಗಳು ದೇಶದ ಸಾಂಸ್ಕೃತಿಕ, ಸಾಮಾಜಿಕ ಮತ್ತು ಆರ್ಥಿಕ ತಲ್ಲಣ ಅರ್ಥಮಾಡಿಕೊಂಡು ಸೃಜನಶೀಲ ಬದುಕು ಕಟ್ಟಿಗೊಳ್ಳುವ ಕೆಲಸ ಮಾಡಬೇಕು. ಸ್ವತಂತ್ರ ಆಲೋಚನೆ ಮೂಲಕ ಉದ್ಯೋಗಾವಕಾಶಗಳಿಗೆ ಬೇಕಾದ ಕೌಶಲ ರೂಢಿಸಿಕೊಳ್ಳಬೇಕು ಎಂದರು.

ಆರ್.ಎಲ್.ಜಾಲಪ್ಪ ತಾಂತ್ರಿಕ ವಿದ್ಯಾಲಯದ ಪ್ರಾಂಶುಪಾಲ ಡಾ. ಶ್ರೀನಿವಾಸರೆಡ್ಡಿ ಮಾತನಾಡಿ, 2001ರಿಂದ ಆರಂಭಿಸಿದ ವಿದ್ಯಾಲಯದಲ್ಲಿ 15ನೇ ತಂಡ ಇಂದು ಪದವಿ ಪಡೆಯುತ್ತಿದೆ. ಕಲಿಕೆಗೆ ಕೊನೆಯಿಲ್ಲವೆಂಬುದನ್ನು ಅರಿತು, ಜವಾಬ್ದಾರಿಯುತವಾಗಿ ನಡೆದಾಗ ಮಾತ್ರ ಸವಾಲುಗಳನ್ನು ಮೆಟ್ಟಿ ನಿಲ್ಲಲು ಸಾಧ್ಯ ಎಂದರು.

ಪದವಿ ಪ್ರತಿಜ್ಞಾ ವಿಧಿ ಬೋಧನೆ: ಕಾಲೇಜಿನಲ್ಲಿ 2015 ರಿಂದ 19ರವರೆಗಿನ 4 ವರ್ಷದ ಶೈಕ್ಷಣಿಕ ಪದವಿ ಪರೀಕ್ಷೆ ಪೂರೈಸಿದ ಪದವೀಧರರಿಗೆ ಕಾಲೇಜಿನ ಪ್ರೊ. ಸುನೀಲ್ ಕುಮಾರ್ ಪದವಿ ಪ್ರತಿಜ್ಞಾ ವಿಧಿ ಬೋಧಿಸಿದರು. ನಂತರ ಪದವಿ ಪ್ರಮಾಣ ಪತ್ರ ವಿತರಿಸಲಾಯಿತು.

ಸಂಸ್ಥೆ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಜೆ.ನಾಗೇಂದ್ರಸ್ವಾಮಿ, ಟ್ರಸ್ಟಿ ಅರವಿಂದ್, ಪ್ಲೇಸ್ ಮೇಂಟ್ ಆಫೀಸರ್ ಬಾಬುರೆಡ್ಡಿ, ಯಾಂತ್ರಿಕ ವಿಭಾಗದ ಮುಖ್ಯಸ್ಥ ಪ್ರೊ.ಸುಚೀಂದ್ರ, ಗಣಕ ತಂತ್ರ ವಿಭಾಗದ ಮುಖ್ಯಸ್ಥ ಪ್ರೊ.ಮಂಜುನಾಥ್ ಮತ್ತಿತರರು ಇಲ್ಲಿದ್ದರು.

ಉತ್ತಮವಾದ ಶಿಕ್ಷಣ ದೊರಕಿಸಿ ಪದವೀಧರರನ್ನಾಗಿಸಿದ ಈ ಕ್ಯಾಂಪಸ್ ನೆನಪು ನನ್ನ ಜೀವನದಲ್ಲಿ ಅಚ್ಚಳಿಯದೆ ಉಳಿಯಲಿದೆ. ಇತರೆ ಕಾಲೇಜುಗಳಿಗಿಂತ ಆರ್.ಎಲ್.ಜಾಲಪ್ಪ ತಾಂತ್ರಿಕ ವಿದ್ಯಾಲಯ ವಿಶಿಷ್ಟವಾಗಿದೆ.

| ಅವಿನಾಶ್ ಪದವೀಧರ

Leave a Reply

Your email address will not be published. Required fields are marked *