ನಿರೀಕ್ಷೆ ಮೂಡಿಸಿದ ಮಾತುಕತೆ

ಭಾರತ ಹಾಗೂ ಪಾಕಿಸ್ತಾನ ನಡುವಣ ಶಾಶ್ವತ ಇಂಡಸ್ ಆಯೋಗದ ಸಭೆಯು ಮಾರ್ಚ್ 20 ಹಾಗೂ 21ರಂದು ಪಾಕಿಸ್ತಾನದ ಲಾಹೋರ್​ನಲ್ಲಿ ನಡೆಯಲಿದ್ದು, ಹಲವು ನಿರೀಕ್ಷೆಗಳನ್ನು ಮೂಡಿಸಿದೆ. ಎರಡೂ ದೇಶಗಳಿಂದ ತಲಾ ಒಬ್ಬ ಕಮಿಷನರ್ ಇದ್ದು, ಇವರ ನಿಯತ ಭೇಟಿಯಲ್ಲಿ, ನದಿಗಳ ಕುರಿತ ದತ್ತಾಂಶ, ಮಾಹಿತಿಗಳನ್ನು ಪರಸ್ಪರ ಹಂಚಿಕೊಂಡು, ಸಣ್ಣಪುಟ್ಟ ಭಿನ್ನಾಭಿಪ್ರಾಯ, ಬಿಕ್ಕಟ್ಟುಗಳನ್ನು ಪರಿಹರಿಸಿಕೊಳ್ಳಲಾಗುತ್ತದೆ. ಮಾತುಕತೆ ಒಮ್ಮೆ ಭಾರತದಲ್ಲಿ ಮಗದೊಮ್ಮೆ ಪಾಕಿಸ್ತಾನದಲ್ಲಿ ನಡೆಯುತ್ತದೆ. ಇತ್ತೀಚಿನ ವರ್ಷಗಳಲ್ಲಿ ಈ ಭೇಟಿ ಆರು ತಿಂಗಳಿಗೊಮ್ಮೆ ನಡೆಯುತ್ತಿದೆ. ಇಂಡಸ್ ಕಮಿಷನರ್​ಗಳು ಇಲ್ಲಿ ತನಕ 110 ಸುತ್ತಿನ ಮಾತುಕತೆ ನಡೆಸಿದ್ದಾರೆ. 2016ರ ಸೆಪ್ಟೆಂಬರ್​ನಲ್ಲಿ ಉರಿ ದಾಳಿ ಬಳಿಕ ಈ ಮಾತುಕತೆ ರದ್ದಾಗಿತ್ತು. ಅಷ್ಟೇ ಅಲ್ಲ, ಭಾರತ ಸರ್ಕಾರ 1960ರ ಇಂಡಸ್ ಜಲ ಒಪ್ಪಂದದ ಅಂಶಗಳ ಕುರಿತು ಪರಾಮರ್ಶೆ ನಡೆಸಿತ್ತಲ್ಲದೆ, ‘ನೀರು ಮತ್ತು ರಕ್ತ ಒಟ್ಟಿಗೆ ಹರಿಯಲು ಸಾಧ್ಯವಿಲ್ಲ. ಇಂಡಸ್ ಜಲ ಒಪ್ಪಂದ ಪ್ರಕಾರ ಭಾರತಕ್ಕೆ ಲಭ್ಯವಿರುವ ನೀರನ್ನು ಪೂರ್ಣ ಪ್ರಮಾಣದಲ್ಲಿ ಬಳಸುವುದಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು. 1965, 1971ರ ಯುದ್ಧ ಮತ್ತು ಕಾರ್ಗಿಲ್ ಸಮರದ ಸಂದರ್ಭದಲ್ಲೂ ಇಂಡಸ್ ಆಯೋಗದ ಮಾತುಕತೆ ರದ್ದಾಗಿರಲಿಲ್ಲ. ಜಲ ಸಂಪನ್ಮೂಲವು ಬಿಕ್ಕಟ್ಟಿಗಷ್ಟೇ ಅಲ್ಲ ಅದು ಪರಸ್ಪರ ಸಹಕಾರ, ಸೌಹಾರ್ದದ ನಡೆಗೂ ಕಾರಣವಾಗುತ್ತದೆ ಎಂಬುದಕ್ಕೆ ಇಂಡಸ್ ಜಲ ಒಪ್ಪಂದ ಸಾಕ್ಷಿಯಾಗಿತ್ತು. ಆದರೆ, ಭಯೋತ್ಪಾದನೆ ರಫ್ತು ಮಾಡುವ ಪಾಕ್​ಗೆ ತಕ್ಕಬುದ್ಧಿ ಕಲಿಸುವ ನಿಟ್ಟಿನಲ್ಲಿ ಕಳೆದ ವರ್ಷ ಭಾರತ ಸರ್ಕಾರ ಮಾತುಕತೆ ರದ್ದುಪಡಿಸಿತ್ತು.

ಈ ಬಾರಿ ಮಾತುಕತೆಗೆ ಪಾಕ್​ನ ಆಹ್ವಾನವನ್ನು ಒಪ್ಪಿಕೊಂಡಿರುವ ಭಾರತ ಸರ್ಕಾರ ಈ ಮೂಲಕ ದೇಶದ ಹಿತಾಸಕ್ತಿಗಳ ಈಡೇರಿಕೆಗೆ ಹಾಗೂ ನೀರು ಹಂಚಿಕೆ ಸಂಬಂಧ ಇರುವ ವಿವಾದಗಳನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಲು ಮುಂದಾಗಿದೆ. ಒಪ್ಪಂದ ಪ್ರಕಾರ, ಸಿಂಧೂ ತಟದ ಆರು ನದಿಗಳನ್ನು ಪೂರ್ವ ಮತ್ತು ಪಶ್ಚಿಮ ವಲಯದ ನದಿಗಳೆಂದು ವಿಭಜಿಸಲಾಗಿದೆ. ಇದರಲ್ಲಿ ಸಟ್ಲೆಜ್, ಬಿಯಾಸ್, ರವಿ ನದಿಗಳು ಪೂರ್ವ ವಲಯಕ್ಕೂ, ಝೀಲಂ, ಚೆನಾಬ್ ಮತ್ತು ಸಿಂಧೂ ನದಿಗಳು ಪಶ್ಚಿಮವಲಯಕ್ಕೂ ಸೇರುತ್ತವೆ. ಒಪ್ಪಂದದಂತೆ, ಪೂರ್ವ ವಲಯದ ಎಲ್ಲ ನದಿಗಳ ಮೇಲಿನ ಪೂರ್ಣ ಅಧಿಕಾರವನ್ನು ಭಾರತಕ್ಕೆ ನೀಡಿದ್ದರೆ, ಪಶ್ಚಿಮ ವಲಯದ ನದಿಗಳ ಹಕ್ಕು ಪಾಕಿಸ್ತಾನಕ್ಕೆ ಸೇರಿದೆ. ಆದರೆ, ಭಾರತ ತನಗೆ ಲಭ್ಯವಿರುವ ಪ್ರಯೋಜನಗಳನ್ನು ಪೂರ್ತಿಯಾಗಿ ಬಳಸಿಕೊಂಡಿಲ್ಲ. ಅದರ ಪೂರ್ಣ ಬಳಕೆಗಾಗಿ ಜಲ ವಿದ್ಯುತ್ ಉತ್ಪಾದನೆ, ನೀರಾವರಿ ಯೋಜನೆ ಕೈಗೆತ್ತಿಕೊಳ್ಳಲು ತೀರ್ವನಿಸಲಾಗಿದೆ. ಈ ಎಲ್ಲ ಅಂಶಗಳು ಇಂಡಸ್ ಆಯೋಗದ ಸಭೆಯಲ್ಲಿ ಪ್ರಸ್ತಾಪವಾಗಲಿದ್ದು, ಭಿನ್ನಾಭಿಪ್ರಾಯಗಳು ಬಗೆಹರಿಯಲಿ; ಜಲವಿವಾದದ ಮಾತುಕತೆಯ ಯಶಸ್ಸು ಉಭಯ ದೇಶಗಳ ಇತರ ಬಿಕ್ಕಟ್ಟುಗಳ ಶಮನಕ್ಕೂ ಪ್ರೇರಣೆಯಾಗಲಿ.

Leave a Reply

Your email address will not be published. Required fields are marked *