ನಿರಾಶ್ರಿತರಿಗೆ ಸೂರು ಒದಗಿಸಲು ಆದ್ಯತೆ

ಹಾನಗಲ್ಲ: ನಿರಾಶ್ರಿತರ ಪಟ್ಟಿ ತಯಾರಿಸಲು ರಾಜ್ಯದ ಎಲ್ಲ ಜಿಲ್ಲಾಡಳಿತಕ್ಕೆ ಸೂಚಿಸಲಾಗಿದ್ದು, ಬೇರೆ ಎಲ್ಲ ಯೋಜನೆಗಳನ್ನು ಬದಿಗಿಟ್ಟು ಮನೆ ಕಟ್ಟುವ ಕಾರ್ಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಸಾರ್ವಜನಿಕರ, ಉದ್ಯಮಿಗಳ ಸಹಕಾರದೊಂದಿಗೆ ಗ್ರಾಮೀಣ ಪ್ರದೇಶದ ಸಂತ್ರಸ್ತರಿಗೆ ಸೂರು ಕಟ್ಟಿಕೊಡಲು ನಿರ್ಧರಿಸಿದ್ದೇವೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.

ಮಂಗಳವಾರ ಶಿವಮೊಗ್ಗ ಜಿಲ್ಲೆಯ ಆನವಟ್ಟಿಯಿಂದ ಹಾನಗಲ್ಲ ತಾಲೂಕಿನ ಗೊಂದಿ ಗ್ರಾಮಕ್ಕೆ ಭೇಟಿ ನೀಡಿ ವರದಾ ನದಿ ಪ್ರದೇಶದಲ್ಲಿ ಅತಿವೃಷ್ಟಿಯಿಂದಾದ ಬೆಳೆ ಹಾನಿ ಪರಿಶೀಲಿಸಿ, ನಂತರ ಅಗಸನಹಳ್ಳಿಯಲ್ಲಿ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿದರು.

ರಾಜ್ಯಾದ್ಯಂತ ಸಾವಿರಾರು ಗ್ರಾಮಗಳು ಅತಿವೃಷ್ಟಿಗೆ ತುತ್ತಾಗಿ 30 ಸಾವಿರಕ್ಕೂ ಅಧಿಕ ಮನೆಗಳು ನೆಲಸಮವಾಗಿವೆ. ರೈತರ ಸಾವಿರಾರು ಎಕರೆ ಕೃಷಿ ಭೂಮಿ ನೀರಿನಲ್ಲಿ ಮುಳುಗಿವೆ. ಆದರೆ, ಇದಾವುದಕ್ಕೂ ಅಧೈರ್ಯಗೊಳ್ಳಬೇಕಾಗಿಲ್ಲ. ಪ್ರವಾಹ ಸಂತ್ರಸ್ತರಿಗೆ ತಕ್ಷಣಕ್ಕೆ ತಾತ್ಕಾಲಿಕವಾಗಿ 10 ಸಾವಿರ ರೂ. ಪರಿಹಾರ ವಿತರಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಬೆಳೆ ನಾಶವಾಗಿರುವುದನ್ನು ನಾಲ್ಕಾರು ದಿನಗಳಲ್ಲಿ ಸರ್ವೆ ಮಾಡಿ ವಾಸ್ತವಿಕ ಸ್ಥಿತಿಯ ವರದಿ ಸಲ್ಲಿಸಲು ಸೂಚಿಸಲಾಗಿದೆ. ಬೆಳೆ ಹಾನಿಯ ವಾಸ್ತವ ಸ್ಥಿತಿ ತಿಳಿಯಲು ಇನ್ನೂ ಒಂದೆರಡು ವಾರಗಳು ಬೇಕು. ನಂತರವಷ್ಟೇ ಯಾವ ರೀತಿಯಲ್ಲಿ ಪರಿಹಾರ ನಿಗದಿಗೊಳಿಸಬೇಕು ಎಂಬುದು ನಿರ್ಣಯವಾಗಲಿದೆ ಎಂದರು.

ಕಿಸಾನ್ ಸಮ್ಮಾನ್ ನಿಧಿಯ ಕೇಂದ್ರ ಸರ್ಕಾರದ 6 ಸಾವಿರ ರೂ.ನೊಂದಿಗೆ ರಾಜ್ಯ ಸರ್ಕಾರದ 2 ಸಾವಿರ ರೂ. ಮೊದಲ ಕಂತನ್ನು ವಾರದೊಳಗೆ ಬಿಡುಗೆಗೊಳಿಸಲಿದ್ದೇವೆ. ಬೊಕ್ಕಸಕ್ಕೆ ಭಾರವಾಗುತ್ತದೆಯಾದರೂ ರೈತರ ಸಹಾಯಕ್ಕೆ ಬರುವುದು ಸರ್ಕಾರದ ಆದ್ಯ ಕರ್ತವ್ಯ, ಅದಕ್ಕೆ ಸಿದ್ಧರಾಗಿದ್ದೇವೆ ಎಂದರು.

ಇತ್ತೀಚೆಗೆ ಗೃಹ ಸಚಿವ ಅಮಿತ್ ಷಾ, ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಸಮೀಕ್ಷೆ ಕೈಗೊಂಡು, ವಾಸ್ತವ ಸ್ಥಿತಿಯನ್ನು ಪ್ರಧಾನಿಗೆ ವರದಿ ಮಾಡಿದ್ದಾರೆ. ಆ. 15ರಂದು ಸಂಜೆ ದೆಹಲಿಗೆ ತೆರಳಿ ಹೆಚ್ಚಿನ ಆರ್ಥಿಕ ನೆರವು ಕೋರಲಿದ್ದೇನೆ ಎಂದರು.

ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ, ಶಾಸಕರಾದ ಸಿ.ಎಂ. ಉದಾಸಿ, ಕುಮಾರ ಬಂಗಾರಪ್ಪ, ಸಂಸದ ಬಿ.ವೈ. ರಾಘವೇಂದ್ರ, ಮುಖ್ಯಮಂತ್ರಿಗಳ ಸಲಹೆಗಾರ ಲಕ್ಷ್ಮೀನಾರಾಯಣ ಇತರರು ಇದ್ದರು.

ಏತ ನೀರಾವರಿ ಘೊಷಣೆ

ಹಲವು ವರ್ಷಗಳ ಬೇಡಿಕೆಯಾಗಿದ್ದ ಸೊರಬ ತಾಲೂಕಿನ ಮೂಗೂರು ಏತ ನೀರಾವರಿಗೆ 105 ಕೋಟಿ ಹಾಗೂ ಮೂಡಿ ಏತ ನೀರಾವರಿಗೆ 275 ಕೋಟಿ ರೂ. ಮಂಜೂರು ಮಾಡಲಾಗಿದೆ. ಇನ್ನೊಂದು ತಿಂಗಳಲ್ಲಿ ಟೆಂಡರ್ ಕರೆದು, ಕಾಮಗಾರಿ ಪ್ರಾರಂಭಿಸಲಾಗುವುದು. ಗ್ರಾಮೀಣ ರೈತರು ನೆಮ್ಮದಿಯಿಂದ ಬದುಕಲು ನೀರಾವರಿ ವ್ಯವಸ್ಥೆ ಕೈಗೊಳ್ಳುವುದೇ ನಮ್ಮ ಸರ್ಕಾರದ ಉದ್ದೇಶ ಎಂದರು.

ಮಂತ್ರಿ ಮಂಡಲ ವಿಸ್ತರಣೆ

ಆ. 15ರಂದು ದೆಹಲಿಗೆ ತೆರಳಿ ಪ್ರಧಾನಿ ಹಾಗೂ ಅಮಿತ್​ಷಾ ಅವರೊಂದಿಗೆ ರ್ಚಚಿಸಿ ಮಂತ್ರಿ ಮಂಡಲದ ಪಟ್ಟಿ ಸಿದ್ಧಪಡಿಸಿ ಒಂದೆರಡು ದಿನಗಳಲ್ಲಿ ವಿಸ್ತರಣೆ ಕಾರ್ಯ ಪೂರ್ಣಗೊಳಿಸಲಿದ್ದೇವೆ. ನಂತರದ ದಿನಗಳಲ್ಲಿ ಎಲ್ಲ ಭಾಗದ ಶಾಸಕರು, ಸಚಿವರು ಅಲ್ಲಿನ ಸಮಸ್ಯೆಗಳ ಬಗ್ಗೆ ಗಮನಹರಿಸಲು ಸಹಕಾರಿಯಾಗುತ್ತದೆ ಎಂದರು.

Leave a Reply

Your email address will not be published. Required fields are marked *