ನಿರಾಶ್ರಿತರತ್ತ ಜಿಲ್ಲಾಡಳಿತ ನಿರ್ಲಕ್ಷ್ಯ ಆರೋಪ

ಬಂಕಾಪುರ: ಮಳೆಯಿಂದ ನಿರಾಶ್ರಿತರಾದ ಸುತ್ತಲಿನ ಗ್ರಾಮಸ್ಥರು ಪಟ್ಟಣದ ಮಠ, ಶಾದಿಮಹಲ್​ಗಳಲ್ಲಿ ಆಶ್ರಯ ಪಡೆದಿದ್ದು, ಇವರಿಗಾಗಿ ಪರಿಹಾರ ಕೇಂದ್ರ ತೆರೆಯಬೇಕಾಗಿದ್ದ ಜಿಲ್ಲಾಡಳಿತ ಇತ್ತ ಗಮನಹರಿಸುತ್ತಿಲ್ಲ ಎಂದು ನಾಗರಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಪಟ್ಟಣದ ಅರಳೆಲೆಮಠ, ಹುಚ್ಚಯ್ಯನಮಠ, ಫಕ್ಕೀರಸ್ವಾಮಿ ಮಠ, ಹೈಯತ್​ಭಾಷಾ ಶಾದಿಮಹಲ್, ಮಲ್ಲಿಕಾರ್ಜುನ ದೇವಸ್ಥಾನ, ಚಾಮುಂಡೇಶ್ವರಿ ಸಭಾಭವನಗಳಲ್ಲಿ ಚಿಕ್ಕನೆಲ್ಲೂರ, ಹಲಸೂರು, ನಂದಳ್ಳಿ, ಪಕ್ಕೀರನಂದಿಹಳ್ಳಿ, ಬರದೂರ ಗ್ರಾಮಗಳ 200ಕ್ಕೂ ಅಧಿಕ ಮಕ್ಕಳು, ಮಹಿಳೆಯರು, ಬಾಣಂತಿಯರು ಜಾನುವಾರು ಸಮೇತ ಆಶ್ರಯ ಪಡೆದುಕೊಂಡಿದ್ದಾರೆ. ಆದರೆ, ಈವರೆಗೆ ಪರಿಹಾರ ಕೇಂದ್ರ ತೆರೆದು ಸಹಾಯಕ್ಕೆ ಬರಬೇಕಾಗಿದ್ದ ಅಧಿಕಾರಿಗಳು ಗಮನಹರಿಸುತ್ತಿಲ್ಲ.

ಇದನ್ನು ಗಮನಿಸಿದ ಪಟ್ಟಣದ ಮಲ್ಲಿಕಾರ್ಜುನ ಯುವಕ ಸಂಘ ಮತ್ತು ಸಾರ್ವಜನಿಕರು ಫಕ್ಕೀರಸ್ವಾಮಿ ಮಠದಲ್ಲಿರುವ ನಿರಾಶ್ರಿತರಿಗೆ ಬೆಳಗ್ಗೆ ಚಹಾ ಬಿಸ್ಕಿಟ್, ಮಧ್ಯಾಹ್ನ ಊಟದ ವ್ಯವಸ್ಥೆ ಮಾಡಿದ್ದಾರೆ. ಅಲ್ಲದೆ, ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರದ ವೈದ್ಯರಿಂದ ಚಿಕಿತ್ಸೆ ಕೊಡಿಸಿದ್ದಾರೆ. ಅರಳೆಲೆಮಠದಲ್ಲಿರುವ ನಿರಾಶ್ರಿತರ ಸಹಾಯಕ್ಕೆ ಬಂದಿರುವ ವೈದ್ಯ ಡಾ.ಆರ್.ಎಸ್. ಅರಳೆಲೆಮಠ ಅವರು ಉಚಿತ ಚಿಕಿತ್ಸೆ ಹಾಗೂ ಊಟ-ಉಪಹಾರದ ಹೊಣೆ ಹೊತ್ತಿದ್ದಾರೆ.

ಈ ಎಲ್ಲ ನಿರಾಶ್ರಿತರನ್ನು ಮಧ್ಯಾಹ್ನ ಭೇಟಿ ಮಾಡಿ ಆರೋಗ್ಯ ವಿಚಾರಿಸಿದ ಶಾಸಕ ಬಸವರಾಜ ಬೊಮ್ಮಾಯಿ, ನಿರಾಶ್ರಿತರಿಗೆ ಸೌಲಭ್ಯ ಹಾಗೂ ಜಾನುವಾರುಗಳಿಗೆ ಮೇವಿನ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.