ನಿರಂತರ ಕಲಿಕೆಯಿಂದ ಫಲಶ್ರುತಿ

ಕೋಲಾರ: ಮಕ್ಕಳು-ಶಿಕ್ಷಕರ ನಡುವಿನ ಕಲಿಕಾ ಪ್ರಕ್ರಿಯೆ ಅತಿ ಮಹತ್ವದ್ದು, ಪರೀಕ್ಷಿಸಲು ಪರೀಕ್ಷೆ ನಡೆಸುವುದು ಬೇಡ. ಮಕ್ಕಳಲ್ಲಿನ ಸಾಮರ್ಥ್ಯ, ಜ್ಞಾನ ಹೊರ ತರುವ ವಾತಾವರಣವನ್ನು ಶಾಲೆಗಳಲ್ಲಿ ನಿರ್ವಿುಸಬೇಕು ಎಂದು ಡಿಡಿಪಿಐ ಕೆ.ರತ್ನಯ್ಯ ಶಿಕ್ಷಕರಿಗೆ ಕಿವಿಮಾತು ಹೇಳಿದರು.

ಟಿ. ಚನ್ನಯ್ಯ ರಂಗಮಂದಿರದಲ್ಲಿ ಕರ್ನಾಟಕ ಶಾಲಾ ಗುಣಮಟ್ಟ ಮೌಲ್ಯಾಂಕನ ಮತ್ತು ಅಂಗೀಕರಣ ಪರಿಷತ್ ನಡೆಸುವ ಮೌಲ್ಯಾಂಕನ ಪರೀಕ್ಷೆ ಸಂಬಂಧ ಸರ್ಕಾರಿ ಮತ್ತು ಅನುದಾನಿತ ಶಾಲೆ ಮುಖ್ಯಶಿಕ್ಷಕರಿಗೆ ಸೋಮವಾರ ಆಯೋಜಿಸಿದ್ದ ಪೂರ್ವಭಾವಿ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಕಲಿಕೆ ನಿರಂತರ ಮತ್ತು ಸಮಗ್ರವಾಗಿದ್ದರೆ ಉತ್ತಮ ಫಲಶ್ರುತಿ ಕಾಣಬಹುದು. ನಾವು ಮಕ್ಕಳ ಋಣದಲ್ಲಿದ್ದೇವೆ. ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಲ್ಲದಿದ್ದರೆ ಉದ್ಯೋಗವಿಲ್ಲ. ಈ ಮಕ್ಕಳಿಂದ ನಮಗೆ ಉದ್ಯೋಗ ಸಿಕ್ಕಿದೆ ಎಂಬ ಭಾವನೆ ಬಂದಾಗ ಬದ್ಧತೆ ಬರುತ್ತದೆ. ಅದು ಬಿಟ್ಟು ಕೇವಲ ಕಿರು ಪರೀಕ್ಷೆ, ವಾರ್ಷಿಕ ಪರೀಕ್ಷೆ ನಡೆಸಿ ಮಕ್ಕಳನ್ನು ಮುಂದಕ್ಕೆ ತಳ್ಳಿದರೆ ಸಾಕು ಎಂಬ ಭಾವನೆಯಿಂದ ಕೆಲಸ ಮಾಡಿದರೆ ಶಾಲೆಗಳು ಮುಚ್ಚಿಹೋದೀತು ಎಂದರು.

ಅಕ್ಷರ ದಾಸೋಹ ಯೋಜನೆ ಸಹಾಯಕ ನಿರ್ದೇಶಕ ಬಾಲಾಜಿ ಮಾತನಾಡಿ, ಅ.26ರಂದು ರಂಗಮಂದಿರದಲ್ಲಿ ಬಿಸಿಯೂಟ ನೌಕರರಿಗೆ ಬಿಸಿಯೂಟ ಸುರಕ್ಷತೆ, ನಿರ್ವಹಣೆ ಕುರಿತ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ಪ್ರತಿ ತಿಂಗಳ 3ನೇ ತಾರೀಖಿನೊಳಗೆ ಆಹಾರ ಇಂಡೆಂಟ್ ತಲುಪಿಸಬೇಕು ಎಂದರು.

ಸಹಾಯಕ ಸಮನ್ವಯಾಧಿಕಾರಿ ಸಿದ್ದೇಶ್ ಮಾತನಾಡಿ, ಸಮಗ್ರ ಶಿಕ್ಷಣ ಅಭಿಯಾನದನ್ವಯ ಶಾಲೆ ಬಿಟ್ಟ ಮಕ್ಕಳ ಸರ್ವೆ ಕಾರ್ಯ ಡಿಸೆಂಬರ್​ನಲ್ಲಿ ನಡೆಯಲಿದೆ. ಮೂರು ವರ್ಷಗಳಿಂದ ಶಾಲಾ ದಾಖಲಾತಿ, ಶಾಲೆ ಬಿಟ್ಟ ಮಕ್ಕಳು ಎಲ್ಲಿಗೆ ಹೋಗಿದ್ದಾರೆ ಎಂಬುದನ್ನು ದಾಖಲಿಸಿ ಗ್ರಾಮ ಶಿಕ್ಷಣ ವಹಿ, ವಾರ್ಡ್ ಶಿಕ್ಷಣ ವಹಿ ನಿರ್ವಹಿಸಬೇಕು ಎಂದು ಕೋರಿದರು.

ಪವರ್ ಪಾಯಿಂಟ್ ಪ್ರೆಸಂಟೇಷನ್ ಮೂಲಕ ರಾಜ್ಯ ಮೌಲ್ಯಾಂಕನ ಪರೀಕ್ಷೆ ನಡೆಸುವ ಕುರಿತು ಶಿಕ್ಷಕರಿಗೆ ಅರಿವು ನೀಡಿದ ಶಿಕ್ಷಣ ಸಂಯೋಜಕ ರಾಮಕೃಷ್ಣಪ್ಪ, ತಾಲೂಕಿನಲ್ಲಿ 435 ಸರ್ಕಾರಿ, ಅನುದಾನಿತ ಶಾಲೆಗಳ 29,000 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಎಸ್​ಡಿಎಂಸಿ ಅಧ್ಯಕ್ಷರು ಅಥವಾ ಒಬ್ಬ ಸದಸ್ಯರನ್ನು ಪರೀಕ್ಷೆ ಗಮನಿಸಲು ಹಾಜರಿರುವಂತೆ ಕೋಡಬೇಕು ಎಂದು ಸಲಹೆ ನೀಡಿದರು.

ಇಸಿಒಗಳಾದ ಮುನಿರತ್ನಯ್ಯ, ರಾಘವೇಂದ್ರ, ಬೈರೆಡ್ಡಿ, ಬಿಆರ್​ಪಿ ಸವಿತಾ, ವಿವಿಧ ಶಿಕ್ಷಕ ಸಂಘಗಳ ಪದಾಧಿಕಾರಿಗಳಾದ ಕೆ.ಗೋಪಾಲರೆಡ್ಡಿ, ರುದ್ರಪ್ಪ, ವೆಂಕಟಶಿವಪ್ಪ, ಅನಿಲ್​ಕುಮಾರ್, ನಾರಾಯಣಸ್ವಾಮಿ , ಆರ್.ಶ್ರೀನಿವಾಸನ್, ಜಿ.ಶ್ರೀನಿವಾಸ್, ಮುಕುಂದ, ಮಂಜುನಾಥ್, ಎಂ.ಎನ್.ಶ್ರೀನಿವಾಸಮೂರ್ತಿ, ನಾಗರಾಜ್, ಸಿಆರ್​ಪಿಗಳಾದ ಸೌಮ್ಯಲತಾ, ರೇಣುಕಾ, ಸುಜಾತಮ್ಮ ಹಾಜರಿದ್ದರು.

ಅ.29 ಮತ್ತು 30ರಂದು ಮೌಲ್ಯಾಂಕನ ಪರೀಕ್ಷೆ ನಡೆಯಲಿದೆ. ಈಗಾಗಲೇ ಒಎಂಆರ್ ಶೀಟ್​ಗಳನ್ನು ತಾಲೂಕುಗಳಿಗೆ ತಲುಪಿಸಲಾಗಿದೆ. ಮೌಲ್ಯಾಂಕನ ಪರೀಕ್ಷೆ ಹೇಗಿರುತ್ತದೆ ಎಂಬುದಕ್ಕೆ ಮಕ್ಕಳಿಂದ ಪೂರ್ವಭಾವಿ ಪರೀಕ್ಷೆ ನಡೆದರೆ ಉತ್ತಮ ಫಲಿತಾಂಶ ನಿರೀಕ್ಷಿಸಬಹುದು.

| ಕೆ.ರತ್ನಯ್ಯ, ಡಿಡಿಪಿಐ