ನಿಯಮ ಉಲ್ಲಂಘಿಸಿ ಲೈಟ್‌ಫಿಶಿಂಗ್ ನಾಡದೋಣಿ ಮೀನುಗಾರರ ಪ್ರತಿಭಟನೆ

ಮಂಗಳೂರು: ಪರ್ಶಿಯನ್ ದೋಣಿ ಮೀನುಗಾರರು ಸರ್ಕಾರದ ಆದೇಶ ಉಲ್ಲಂಘಿಸಿ ಲೈಟ್‌ಫಿಶಿಂಗ್ ಮಾಡುತ್ತಿದ್ದು, ಅದನ್ನು ಸ್ಥಗಿತ ಮಾಡಬೇಕು ಎಂದು ಆಗ್ರಹಿಸಿ ನಾಡದೋಣಿ ಮೀನುಗಾರರು ಶನಿವಾರ ದಕ್ಕೆಯಲ್ಲಿರುವ ಮೀನುಗಾರಿಕಾ ಉಪನಿರ್ದೇಶಕರ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

12 ನಾಟೆಕಲ್ ಮೈಲು ದೂರದ ಒಳಗಡೆ ಲೈಟ್‌ಫಿಶಿಂಗ್ ಮಾಡಬಾರದು. ಇದರಿಂದ ಸಾಂಪ್ರದಾಯಿಕ ಮೀನುಗಾರಿಕೆಗೆ ತೊಂದರೆಯಾಗುತ್ತದೆ. 12 ನಾಟೆಕಲ್ ಮೈಲು ಹೊರಗಡೆ ಅಮಾವಾಸ್ಯೆಯ ಮೊದಲು 5 ದಿನ ಹಾಗೂ ನಂತರ 5 ದಿನ ತಿಂಗಳಿನಲ್ಲಿ ಒಟ್ಟು 10 ದಿನ ಮೀನುಗಾರಿಕೆ ಮಾಡಬಹುದು. ಏಪ್ರಿಲ್, ಮೇ ತಿಂಗಳಿನಲ್ಲಿ ಬಂಗುಡೆ ಮೀನು ಮರಿ ಇಡುವ ಸಮಯವಾದ್ದರಿಂದ ಈ ಸಮಯದಲ್ಲಿ ಮೀನುಗಾರಿಕೆ ನಡೆಸಬಾರದು ಮುಂತಾದ ಷರತ್ತುಗಳನ್ನು ವಿಧಿಸಿ ಸರ್ಕಾರ ಆದೇಶಿಸಿದೆ. ಈ ಆದೇಶಕ್ಕೆ ತಡೆಯಾಜ್ಞೆ ನೀಡಬೇಕು ಎಂದು ಪರ್ಶಿಯನ್ ದೋಣಿ ಮೀನುಗಾರರು ಹೈಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಹೈಕೋರ್ಟ್ ತಡೆಯಾಜ್ಞೆ ನೀಡಿಲ್ಲ. ಆದರೂ ಲೈಟ್‌ಫಿಶಿಂಗ್ ಮೀನುಗಾರಿಕೆ ನಡೆಸಲಾಗುತ್ತಿದೆ ಎಂದು ಮೀನುಗಾರರು ಆಕ್ರೋಶ ವ್ಯಕ್ತಪಡಿಸಿದರು.

ಪರ್ಶಿಯನ್ ಮೀನುಗಾರರು ನಿಯಮಾವಳಿಗಳನ್ನು ಉಲ್ಲಂಘಿಸುತ್ತಿದ್ದಾರೆ ಎಂದು ಆರೋಪಿಸಿರುವ 200ಕ್ಕೂ ಅಧಿಕ ನಾಡದೋಣಿ ಮೀನುಗಾರರು ಪ್ರತಿಭಟನೆ ನಡೆಸಿದರು. ಪರ್ಶಿಯನ್ ಬೋಟ್‌ನವರ ಮೀನು ಮಾರಾಟ ಮಾಡದಂತೆ ಮೀನು ಮಾರಾಟಗಾರರ ಸಂಘಕ್ಕೂ ಮನವಿ ಸಲ್ಲಿಸಿದರು. ಶನಿವಾರ ಮತ್ತು ಭಾನುವಾರ ಮೀನುಗಾರಿಕೆ ಇಲಾಖೆಗೆ ರಜೆ ಆದ ಕಾರಣ ಅಧಿಕಾರಿಗಳನ್ನು ಭೇಟಿಯಾಗಲು ಸಾಧ್ಯವಾಗಿಲ್ಲ.

ನಾಳೆ ಸಭೆ: ಟ್ರಾಲ್‌ಬೋಟ್ ಅಸೋಸಿಯೇಶನ್ ಜ.28ರಂದು ಸಭೆ ನಡೆಸಲು ನಿರ್ಧರಿಸಿದೆ. ಈ ಸಮಸ್ಯೆಯನ್ನು ಯಾವ ರೀತಿಯಲ್ಲಿ ಬಗೆಹರಿಸಿಕೊಳ್ಳಬಹುದು ಎಂಬುದರ ಬಗ್ಗೆ ಮಾತುಕತೆ ನಡೆಸಲಾಗುವುದು. ಇದೊಂದು ಗಂಭೀರ ಸಮಸ್ಯೆಯಾಗಿದ್ದು, ಪ್ರಕರಣ ನ್ಯಾಯಾಲಯದಲ್ಲಿದೆ ಎಂದು ಟ್ರಾಲ್‌ಬೋಟ್ ಮೀನುಗಾರರ ಸಂಘ ಮುಖಂಡ ನಿತಿನ್ ಕುಮಾರ್ ತಿಳಿಸಿದ್ದಾರೆ.