ಮುದಗಲ್: ಪಟ್ಟಣ ಸುತ್ತಲಿನ ಗ್ರಾಮೀಣ ಪ್ರದೇಶದಲ್ಲಿ ಜಲಧಾರೆ ಯೋಜನೆ ಕಾಮಗಾರಿಗಾಗಿ ನಿಯಮ ಉಲ್ಲಂಘಿಸಿ ರಸ್ತೆ ಅಗೆಯಲಾಗುತ್ತಿದೆ. ಇದರಿಂದ ವಾಹನಗಳ ಸಂಚಾರಕ್ಕೆ ತೊಂದರೆಯಾಗಿದೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.
ಕೇಂದ್ರ ಸರ್ಕಾರದ ಜಲಧಾರೆ ಯೋಜನೆಯಡಿ ಲಿಂಗಸುಗೂರು ಮತ್ತು ಮಸ್ಕಿ ತಾಲೂಕಿನಲ್ಲಿ ಕುಡಿಯುವ ನೀರಿನ ಪೈಪ್‌ಲೈನ್ ಕಾಮಗಾರಿ ಕೈಗೊಳ್ಳಲಾಗಿದೆ. ಇದಕ್ಕಾಗಿ ಕೆಲವೆಡೆ ಸಿಸಿ, ಡಾಂಬರ್ ರಸ್ತೆ ಅಗೆದು ಪೈಪ್‌ಲೈನ್ ಹಾಕಿ ಅಗೆದ ಮಣ್ಣನ್ನು ಹಾಗೇ ಬಿಡಲಾಗುತ್ತಿದೆ. ಕೆಲವು ಕಡೆ ರೈತರ ಪರವಾನಗಿ ಇಲ್ಲದೆ ಜಮೀನಿನಲ್ಲಿ ಬಿತ್ತನೆ ಮಾಡಲಾದ ಬೆಳೆಗಳನ್ನು ಹಾಳು ಮಾಡಿ ಕಾಮಗಾರಿ ಕೈಗೊಳ್ಳಲಾಗಿದೆ.
ಕನ್ನಾಪೂರಹಟ್ಟಿ ಹತ್ತಿರ ಖಾಸಗಿ ಹೊಲವೊಂದರಲ್ಲಿ ಜಲಧಾರೆ ಯೋಜನೆಯ ಸಾಮಗ್ರಿಗಳನ್ನು ಸಂಗ್ರಹಿಸಿ ಕುಡಿಯುವ ನೀರಿನ ಪೈಪ್‌ಲೈನ್ ಕಾಮಗಾರಿ ಕೈಗೊಳ್ಳಲಾಗಿದೆ. ಈ ಕುರಿತು ಅಗತ್ಯ ಕ್ರಮ ವಹಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.