ನಿಯಂತ್ರಣಕ್ಕೆ ಬಂದ ಮಂಗನ ಕಾಯಿಲೆ

ಸಾಗರ: ತಾಲೂಕಿನಲ್ಲಿ ಕಾಣಿಸಿಕೊಂಡಿರುವ ಮಂಗನ ಕಾಯಿಲೆ ನಿಯಂತ್ರಣಕ್ಕೆ ಬರುತ್ತಿದ್ದು ಸೋಮವಾರವೂ ಕೆಲವೆಡೆ ರೋಗನಿರೋಧಕ ಚುಚ್ಚುಮದ್ದು ಹಾಕಲಾಯಿತು.

ಆವಿನಹಳ್ಳಿ, ಕಾರ್ಗಲ್, ಹೆನ್ನಿ, ಜೋಗ, ಗೆಣಸಿನಕುಣಿ, ಗುಳ್ಳಳ್ಳಿಯಲ್ಲಿ ಚುಚುಮದ್ದು ನೀಡಲಾಗಿದೆ. ಅರಳಗೋಡು ಪ್ರಾಥಮಿಕ ಆರೋಗ್ಯ ಘಟಕದಲ್ಲಿ ಚಿಕಿತ್ಸೆಗೆ ಬರುವವರ ರಕ್ತದ ಪರೀಕ್ಷೆ ನಡೆಸಲಾಗುತ್ತಿದೆ. ಜಿಲ್ಲಾಡಳಿತ ಈ ಬಗ್ಗೆ ಕ್ರಮ ಕೈಗೊಂಡಿದ್ದು ಜನ ಆತಂಕಪಡುವ ಅಗತ್ಯವಿಲ್ಲ. ಯಾರಿಗೆ ಏನೇ ಸಮಸ್ಯೆಯಾದರೂ ತುರ್ತು ಪರೀಕ್ಷೆ ನಡೆಸಲಾಗುತ್ತಿದೆ. ಅರಳಗೋಡು ಆಸ್ಪತ್ರೆಯಲ್ಲಿ ನಿರಂತರವಾಗಿ ರೋಗ ನಿರೋಧಕ ಚುಚ್ಚುಮದ್ದು ನೀಡಲಾಗುತ್ತಿದೆ. ಸಾರ್ವಜನಿಕರು ಮನೆಯಿಂದ ಹೊರಗೆ ತೆರಳುವಾಗ, ಹೊಲಗದ್ದೆಗಳಲ್ಲಿ ಕೆಲಸ ಮಾಡುವಾಗ ನಿರಂತರವಾಗಿ ಡಿಎಂಪಿ ತೈಲ ಹಚ್ಚಿಕೊಳ್ಳುವುದು ಕಡ್ಡಾಯ ಎಂದು ತಾಲೂಕು ವೈದ್ಯಾಧಿಕಾರಿ ಡಾ. ಮುನಿವೆಂಕಟರಾಜು ತಿಳಿಸಿದ್ದಾರೆ.

ಡಾ. ದಯಾನಂದ, ಚಂದ್ರಶೇಖರ್, ಡಾ. ತಿಮ್ಮಪ್ಪ, ಡಾ. ಸುನೀತಾ, ಡಾ. ಗುರುಪ್ರಸಾದ್ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿ ಬೇರೆ ಬೇರೆ ಸ್ಥಳದಲ್ಲಿ ಹಾಜರಿದ್ದು ಅಗತ್ಯ ಕ್ರಮ ಕೈಗೊಂಡಿದ್ದಾರೆ.

ಕಡಿಮೆಯಾಗದ ಮಂಗಗಳ ಸಾವು: ತಾಲೂಕಿನಲ್ಲಿ ಮಂಗನ ಕಾಯಿಲೆ ನಿಯಂತ್ರಣದಲ್ಲಿದ್ದರೂ ಮಂಗಗಳ ಸಾವು ಕಡಿಮೆಯಾಗಿಲ್ಲ. ವರದಿ ಪ್ರಕಾರ 60ಕ್ಕೂ ಹೆಚ್ಚು ಮಂಗಗಳು ಮೃತಪಟ್ಟಿವೆ. ಆದರೆ ಗಮನಕ್ಕೆ ಬಾರದೇ ಕಾಡಿನಲ್ಲಿ ಹಲವು ಮಂಗಗಳು ಸಾವನ್ನಪ್ಪಿರುವ ಸಾಧ್ಯತೆ ಇದೆ. ಸೋಮವಾರ ಮಂಚಾಲೆ, ಚನ್ನಶೆಟ್ಟಿಕೊಪ್ಪ, ಮುಂಡಿಗೇಸರ ಭಾಗದಲ್ಲಿ ಮಂಗಗಳು ಸಾವನ್ನಪ್ಪಿದ್ದು ತಾಲೂಕಿನಲ್ಲಿ ಒಟ್ಟು 3 ಮಂಗಗಳು ಮೃತಪಟ್ಟಿವೆ. ಈ ಬಗ್ಗೆ ಎಲ್ಲ ಕ್ರಮಗಳನ್ನೂ ಕೈಗೊಳ್ಳಲಾಗಿದೆ ಎಂದು ಪಶು ವೈದ್ಯಾಧಿಕಾರಿ ಡಾ. ಶ್ರೀಪಾದರಾವ್ ತಿಳಿಸಿದ್ದಾರೆ.