ನಿಮ್ಮ ಸಮಯ ಸರಿಯಾಗಿರಲಿ

| ವರುಣ ಹೆಗಡೆ ಬೆಂಗಳೂರು

ಮ್ಮ ಬದುಕಿನಲ್ಲಿ ಪ್ರತಿಕ್ಷಣ ಅಮೂಲ್ಯವಾಗಿದ್ದು, ಮುಂಜಾನೆಯಿಂದ ರಾತ್ರಿವರೆಗೂ ಸಮಯದ ಜೊತೆಗೆ ಒಂದೇ ಸಮನೆ ಓಡುತ್ತಿರುತ್ತೇವೆ. ಇಂದು ದಿನನಿತ್ಯದ ಬಹುತೇಕ ಸಮಯವನ್ನು ಮನೆಯ ಹೊರಗಡೆಯೇ ಕಳೆಯುತ್ತಿದ್ದು, ಸಮಯ ತಿಳಿದುಕೊಳ್ಳಲು ಮೊಬೈಲ್​ನಂತಹ ಆಧುನಿಕ ಸಾಧನಗಳನ್ನು ಹೊಂದಿದ್ದೇವೆ. ಇಷ್ಟಾದರೂ ನಮ್ಮ ಮನೆಯ ಎಲ್ಲಾ ಗೋಡೆಗಳ ಮೇಲೆ ಒಂದೊಂದು ಗಡಿಯಾರ ಒಂದೇ ಸಮನೆ ಸುತ್ತುಹೊಡೆಯುತ್ತಿರುವುದು ವಿಶೇಷ. ಅಷ್ಟಕ್ಕೂ ಈ ಗಡಿಯಾರ ಮನೆಯ ಅಂದಕ್ಕೆ ಪೂರಕವಾಗಿದ್ದರೆ ಇನ್ನು ಒಳ್ಳೆಯದು.

ಮನೆಗೆ ಅತಿಥಿ ಬರುವಾಗ, ನೆಚ್ಚಿನ ಧಾರಾವಾಹಿಗಾಗಿ ಕಾಯುತ್ತಿರುವಾಗ, ಪ್ರಯಾಣಕ್ಕೆ ಅಣಿಯಾದಾಗ ಸಾಮಾನ್ಯವಾಗಿ ನಮ್ಮ ಕಣ್ಣು ಗೋಡೆಯ ಮೇಲಿರುವ ಗಡಿಯಾರದ ಮುಳ್ಳಿನೊಂದಿಗೆ ಓಡುತ್ತಿರುತ್ತದೆ. ಇದರಿಂದಾಗಿ ಲಿವಿಂಗ್ ರೂಂ, ಕಿಚನ್, ಬೆಡ್ ರೂಂ, ಹಾಲ್​ಗಳಲ್ಲಿ ವಾಲ್ ಕ್ಲಾಕ್ ನೋಡಬಹುದು. ಹಾಗಂತ ನಮಗೆ ಇದೀಗ ಸಮಯದ ಮಹತ್ವ ತಿಳಿಯಿತು ಎಂದಲ್ಲ. ಪ್ರಾಚೀನ ಕಾಲದಲ್ಲಿ ಸಹ ಜನತೆ ಗಡಿಯಾರ ಇಲ್ಲದಿದ್ದರೂ ಸಮಯವನ್ನು ತಮ್ಮದೇ ರೀತಿಯಲ್ಲಿ ತಿಳಿದುಕೊಳ್ಳುತ್ತಿದ್ದರು. ಸೂರ್ಯನ ಸಹಾಯದಿಂದ ದಿನದ ಸಮಯವನ್ನು ಅಳೆಯಲು ಸನ್ ಡಯಲ್​ಗಳನ್ನು ವ್ಯಾಪಕವಾಗಿ ಬಳಸಲಾಗುತಿತ್ತು. ಆದರೆ, ರಾತ್ರಿಯಾಗುತ್ತಿದ್ದಂತೆ ಸೂರ್ಯ ಅಸ್ತಂಗತವಾಗುವುದರಿಂದ ಸಮಯವನ್ನು ಅರಿಯುವುದು ಕಷ್ಟವಾಗಿತ್ತು. ಮುಂದುವರೆದು 16ನೇ ಶತಮಾನದಲ್ಲಿ ಗಡಿಯಾರ ನಿರ್ದಿಷ್ಟ ರೂಪ ಪಡೆದ ಮನೆಯ ಗೋಡೆಗಳನ್ನು ಅಲಂಕರಿಸಿತು. ಡಣ್ ಡಣ್ ಎಂದು ಅರ್ಧ ಗಂಟೆಗೊಮ್ಮೆ ಸದ್ದು ಮಾಡುವ ಹಳೆಯ ಕಾಲದ ಹಿತ್ತಾಳೆಯ ಪೆಂಡಾಲಂ ಗಡಿಯಾರ ನಮ್ಮನ್ನು ಎಚ್ಚರಿಸುತಿತ್ತು. ಇದೀಗ ಅದರ ಜಾಗವನ್ನು ಅತ್ಯಾಕರ್ಷ ಆಧುನಿಕ ಗಡಿಯಾರಗಳು ಆಕ್ರಮಿಸಿವೆ.

ಪ್ರಾಚೀನ ಗಡಿಯಾರಕ್ಕೆ ಹೆಚ್ಚಿದ ಬೇಡಿಕೆ:

ಡಿಜಿಟಲ್ ಯುಗದಲ್ಲಿ ಸಹ ಪ್ರಾಚೀನ ಗಡಿಯಾರಕ್ಕೆ ಬೇಡಿಕೆ ಹೆಚ್ಚುತ್ತಿದೆ. ಇದಕ್ಕೆ ಕಾರಣ ಗಡಿಯಾರ ನೀಡುವ ರಾಯಲ್ ಲುಕ್. ಸುಮಾರು ಹದಿನೆಂಟನೇ ಶತಮಾನದಲ್ಲಿ ಹೆಚ್ಚು ಪ್ರಚಲಿತವಿದ್ದ ರೋಮನ್ ಅಂಕಿಯ ಪ್ರಾಚೀನ ಗಡಿಯಾರ ಇದೀಗ ಮುಂಚೂಣಿಗೆ ಬಂದಿದೆ. ಈ ರೀತಿಯ ಗಡಿಯಾರವನ್ನು ಸಾಮಾನ್ಯವಾಗಿ ವುಡ್ ಮತ್ತು ಲೋಹದಿಂದ ತಯಾರಿಸಲಾಗುತ್ತದೆ. ಇದರ ಬೆಲೆ ಕೂಡ ಅಧಿಕವಾಗಿದ್ದು, ಉತ್ತಮ ಗುಣಮಟ್ಟದ ಗಡಿಯಾರ 1 ಸಾವಿರ ರೂ.ನಿಂದ ಆರಂಭವಾಗುತ್ತದೆ. ಅಷ್ಟಕ್ಕೂ ಈ ಮಾದರಿಯ ಗಡಿಯಾರ ಎಲ್ಲಾ ಸ್ಥಳಾವಕಾಶಕ್ಕೂ ಹೊಂದಿಕೊಳ್ಳುತ್ತದೆ.

ಸ್ಥಳಾವಕಾಶಕ್ಕೆ ಸರಿ ಹೊಂದಾಣಿಕೆಯಾಗಲಿ

ಗೋಡೆ ಗಡಿಯಾರ ಖರೀದಿಸುವ ಮುನ್ನ ಕೆಲವೊಂದು ಸಂಗತಿಗಳನ್ನು ಗಮನದಲ್ಲಿಟ್ಟುಕೊಳ್ಳಬೇಕಾಗುತ್ತದೆ. ನಮ್ಮ ಮನೆಯ ಗೋಡೆಯ ವಿಸ್ತಾರ ಹಾಗೂ ಅಲ್ಲಿನ ಮೂಡ್​ಗೆ ಅನುಗುಣವಾದ ಗಡಿಯಾರ ಜೋಡಿಸುವುದು ಮುಖ್ಯ. ವಿಶಾಲವಾದ ಗೋಡೆಗೆ ಚಿಕ್ಕದಾದ ಗಡಿಯಾರ ಹೊಂದಾಣಿಕೆಯಾಗುವುದಿಲ್ಲ. ಅದೇ ರೀತಿ ಚಿಕ್ಕ ಗೋಡೆಯ ಬಹುತೇಕ ಸ್ಥಳಾವಕಾಶವನ್ನು ಗಡಿಯಾರವೇ ಆವರಿಸಿದರೆ ಮನೆಯ ಅಂದಕ್ಕೆ ಧಕ್ಕೆ ಬರುವ ಸಾಧ್ಯತೆ ಅಧಿಕವಾಗಿರುತ್ತದೆ. ಉಳಿದಂತೆ ಅನಲಾಗ್ ಗಡಿಯಾರ ಅಥವಾ ಡಿಜಿಟಲ್ ಗಡಿಯಾರ ಅಳವಡಿಸಬೇಕೆ ಎಂದು ಪೂರ್ವನಿರ್ಧಾರ ಕೈಗೊಂಡು ಖರೀದಿಸಿದರೆ ಉತ್ತಮ.

ಮೂಡ್​ಗೆ ಹೊಂದಾಣಿಕೆಯಾಗಲಿ

ನಮ್ಮ ಮನೆಯಲ್ಲಿ ಪ್ರತಿಯೊಂದು ಕೊಠಡಿಯಲ್ಲಿಯೂ ವೈವಿಧ್ಯತೆಯಿರುತ್ತದೆ. ಅದೇರೀತಿ ಗಡಿಯಾರದ ಆಯ್ಕೆಯಲ್ಲೂ ಅಲ್ಲಿಯ ಮೂಡ್​ಗೆ ಹೊಂದಾಣಿಕೆಯಾಗುವಂತಿದ್ದರೆ ಮನೆಯ ಸೌಂಧರ್ಯ ಹೆಚ್ಚಾಗುವುದರಲ್ಲಿ ಅನುಮಾನವಿಲ್ಲ. ನಾವು ಹೆಚ್ಚು ಸಮಯ ಕಳೆಯುವ ಲಿವಿಂಗ್ ರೂಂನಲ್ಲಿ ಸಾಂಪ್ರದಾಯಕ ವಿನ್ಯಾಸದ ದೊಡ್ಡ ಗಡಿಯಾರ ಅಗತ್ಯ. ಕಿಚನ್ ರೂಂಗಾಗಿಯೇ ಇಂದು ತರಕಾರಿ, ಹಣ್ಣು, ಹಾಗೂ ವಿವಿಧ ಅಡಿಗೆ ಸಲಕರಣೆಯ ಆಧುನಿಕ ವಿನ್ಯಾಸದ ಗಡಿಯಾರ ಮಾರುಕಟ್ಟೆಯಲ್ಲಿ ಲಭ್ಯ. ಪುಟಾಣಿ ಮಕ್ಕಳಿಗಾಗಿ ಆಕರ್ಷಕ ವಿನ್ಯಾಸದ ಗಡಿಯಾರಗಳಿವೆ. ಪ್ರಾಣಿ-ಪಕ್ಷಿ, ಆಟಿಕೆ ವಸ್ತು ಹಾಗೂ ಹಲವು ಪ್ರಕೃತಿಯ ಅಚ್ಚರಿಗಳನ್ನು ಗಡಿಯಾರದಲ್ಲಿ ಮೂಡಿಸಲಾಗಿದೆ. ಉಳಿದಂತೆ ಬೆಡ್​ರೂಂಗೆ ಚಿಕ್ಕದಾದ ಗಡಿಯಾರ ಅಳವಡಿಸಿದರೆ ಸಾಕು.

ಗಡಿಯಾರ ಅಳವಡಿಕೆಗೂ ಬೇಕು ವಾಸ್ತು!

ನಾವು ಮನೆಯಲ್ಲಿ ನಮ್ಮ ದೃಷ್ಟಿ ಹೆಚ್ಚಾಗಿ ಬೀಳುವ ವಿಶಾಲ ಸ್ಥಳಾವಕಾಶದಲ್ಲಿ ಗಡಿಯಾರ ಅಳವಡಿಸುತ್ತೇವೆ. ಆದರೆ, ಗಡಿಯಾರ ಅಳವಡಿಕೆಗೂ ವಾಸ್ತುಶಾಸ್ತ್ರದಲ್ಲಿ ಕೆಲವೊಂದು ನಿಯಮಗಳಿವೆ. ಸಾಮಾನ್ಯವಾಗಿ ನಮಗೆ ಕೆಲವೊಂದು ವಸ್ತುಗಳ ಮೇಲೆ ಅತಿಯಾದ ವ್ಯಾಮೋಹ ಹಾಗೂ ನೆನಪುಗಳು ಅಡಗಿರುತ್ತವೆ. ಇದರಿಂದಾಗಿ ಅಂತಹ ವಸ್ತುಗಳು ಕೆಟ್ಟಿದ್ದರೂ ಅದನ್ನು ಅದೇ ಜಾಗದಲ್ಲಿಡುವುದು ರೂಢಿ. ಇದಕ್ಕೆ ಗಡಿಯಾರ ಹೊರತಾಗಿಲ್ಲ. ಆದರೆ, ಅತೀ ಹಳೆಯದಾದ ಆಗಾಗ ಕೆಟ್ಟುಹೋಗುವ ಹಾಗೂ ಬಣ್ಣದ ಗಾಜಿರುವ ಗಡಿಯಾರವನ್ನು ಎಂದೂ ಮನೆಯಲ್ಲಿ ಹಾಕಬಾರದು. ಇದು ಕುಟುಂಬದ ಯಶಸ್ಸಿಗೆ ಅಡ್ಡಿಯುಂಟು ಮಾಡುತ್ತದೆ ಎಂಬ ನಂಬಿಕೆಯಿದೆ. ಉತ್ತರ, ಪೂರ್ವ ಹಾಗೂ ಪಶ್ಚಿಮ ದಿಕ್ಕಿನಲ್ಲಿ ಗಡಿಯಾರ ಹಾಕುವುದು ಶುಭವೆಂಬ ಭಾವನೆಯಿದೆ. ಉಳಿದಂತೆ ಕೊಠಡಿ ಬಾಗಿಲ ಮೇಲೆ ಗಡಿಯಾರ ಹಾಕುವುದು ಮಂಗಳಕರವಲ್ಲ. ಒಂದುವೇಳೆ ಹಾಕಿದರೆ ಈ ಮನೆಯಲ್ಲಿ ಖುಷಿ ಪ್ರವೇಶ ಮಾಡುವುದಿಲ್ಲ ಎಂಬ ನಂಬಿಕೆಯಿದೆ.

ಗಡಿಯಾರದ ಕುರಿತು ಒಂದಿಷ್ಟು…

  •  ಗಡಿಯಾರದ ಮುಳ್ಳು ಹಿಂದೆಬೀಳದ ಹಾಗೆ ನೋಡಿಕೊಳ್ಳುವುದು ಅತಿ ಮುಖ್ಯ. ಆದ್ದರಿಂದ ಸಮಯ ನಿಗದಿ ಮಾಡುವಾಗ 5 ನಿಮಿಷ ಮುಂದಿದ್ದರೆ ಒಳ್ಳೆಯದು. ಹಿಂದಿದ್ದಲ್ಲಿ ಜೀವನದಲ್ಲಿ ಸಾಕಷ್ಟು ಅಡೆತಡೆಗಳನ್ನು ಎದುರಿಸಬೇಕಾಗುತ್ತದೆ.
  • ಪ್ರತಿನಿತ್ಯ ಗಡಿಯಾರದ ಬಗ್ಗೆ ತಲೆಕೆಡಿಸಿಕೊಳ್ಳದೇ ಸಮಯಕ್ಕೆ ಹೆಚ್ಚು ಮಹತ್ವ ನೀಡಿ.
  • ನಿಂತಿರುವ ಗಡಿಯಾರವನ್ನು ಹೆಚ್ಚು ದಿನಗಳು ಮನೆಯಲ್ಲಿಡುವುದು ಒಳ್ಳೆಯದಲ್ಲ. ಇದು ನಕಾರಾತ್ಮಕತೆಯನ್ನು ಬಿಂಬಿಸುವುದರಿಂದ ಶೆಲ್ ಅಳವಡಿಸುವುದನ್ನು ಮರೆಯಬೇಡಿ.
  • ಅನಾವಶ್ಯಕವಾಗಿ ಮನೆಯ ಎಲ್ಲಾ ಕೊಠಡಿಗಳಿಗೆ ಗಡಿಯಾರದ ಅಳವಡಿಕೆ ಬೇಡ.
  • ಮನೆಯಲ್ಲಿನ ಮುಖ್ಯ ಗಡಿಯಾರ ಸ್ಪಷ್ಟವಾಗಿ ಸಮಯ ತೋರಿಸುವಂತಿರಲಿ.
  • ಮಲಗುವಾಗ ತಲೆಯ ನೇರ ಗಡಿಯಾರ ಇಡಬಾರದು. ಗಡಿಯಾರದಿಂದ ಹೊರಬರುವ ಇಲೆಕ್ಟ್ರೋ ಮ್ಯಾಗ್ನೆಟಿಕ್ ರೇಡಿಯೇಶನ್ ಮೆದುಳಿನ ಮೇಲೆ ಪರಿಣಾಮ ಬೀರುತ್ತದೆ.

Leave a Reply

Your email address will not be published. Required fields are marked *