ನಿಮ್ಮಿಂದ ಎನೂ ಆಗಬೇಕಿಲ್ಲ,ಗೆಲ್ಲಿಸಿ ಅಂಥನೂ ಕೇಳಲ್ಲ ಅಂದ ಕಾಂಗ್ರೆಸ್ ಶಾಸಕ ಯಾರು?
ಚಿತ್ರದುರ್ಗ:ಸೂಕ್ತ ಸವಲತ್ತು ಒದಗಿಸಲು ವಿಫಲವಾದರೆ ವಾರ್ಡನ್ ಕೂಡಿ ಹಾಕಿ ವಿಚಾರಿಸಿಕೊಳ್ಳಿ ಎಂದು ನಗರದ ಹಾಸ್ಟೆಲ್‌ವೊಂದ ರ ವಿದ್ಯಾರ್ಥಿಗಳಿಗೆ ಹೇಳಿದ್ದ ಚಿತ್ರದುರ್ಗ ಶಾಸಕ ಕೆ.ಸಿ.ವೀರೇಂದ್ರಪಪ್ಪಿ ಹಾಗೂ ಗ್ರಾಮವೊಂದರಲ್ಲಿ ಅಕ್ರಮ ಮದ್ಯ ಮಾರಾಟ ನಡೆಯುತ್ತಿದೆ ಎಂಬ ಮಹಿಳೆಯರ ದೂರಿಗೆ ಸಂಬಂಧಿಸಿದಂತೆ ಪ್ರಚೋದನಕಾರಿ ಹೇಳಿಕೆ ನೀಡಿ ವಿವಾದಕ್ಕೆ ಸಿಲುಕಿದ್ದರು.
ಈಗ ಮತ್ತೆ ಈ ಶಾಸಕರು ಹೊಸದೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಕುಡಿವ ನೀರಿನ ಸಮಸ್ಯೆ ನಿವಾರಿಸುವಂತೆ ಒತ್ತಾಯಿಸಿ ಬುಧವಾರ ಸಂಜೆ ನಗರದ ಕವಾಡಿಗರಹಟ್ಟಿಯಲ್ಲಿ ರಸ್ತೆ ತಡೆದು ಪ್ರತಿಭಟಿಸುತ್ತಿದ್ದ ನಿವಾಸಿಗಳ ಸ್ಥಳಕ್ಕೆ ಶಾಸಕರು ಬರಬೇಕೆಂದು ಪಟ್ಟು ಹಿಡಿ ದಿದ್ದರು. ಕೂಡಲೇ ಸ್ಥಳಕ್ಕೆ ಧಾವಿಸಿದ ಶಾಸಕರು ಕೂಡಲೇ ನೀರು ಪೂರೈಸುವಂತೆ ಹೇಳಿದ್ದೇನೆ. ಈಗ ಅವಕಾಶ ಕೊಟ್ಟರೆ ಆಸ್ಪತ್ರೆಯಲ್ಲಿಯ ನನ್ನ ಹೆಂಡತಿ ಮುಖ ನೋಡಲು ಹೋಗುತ್ತೇನೆ. ಬೆಳಗ್ಗೆಯಿಂದ ಜನತಾದರ್ಶನದಲ್ಲಿದ್ದೇ,ಆಸ್ಪತ್ರೆಗೆ ಹೋಗಲು ಸಾಧ್ಯವಾಗಿಲ್ಲವೆಂದು ಹೇಳಿದ್ದರು.
ಆಗ ಪ್ರತಿಭಟನಾ ನಿರತ ಮಹಿಳೆಯೊಬ್ಬರಾಡಿದ ಮಾತಿಗೆ ಗರಂ ಆದ ಶಾಸಕ ಪಪ್ಪಿ,ಹೆಂಡತಿ,ಮಕ್ಕಳನ್ನ ಬಿಟ್ಟು ಸೇವೆ ಮಾಡಿ ಅಂದ್ರೆ ಹೇಗೆ?ನನಗೆ ಅಂಥ ದೊಡ್ಡ ಗುಣ ಇಲ್ಲ,ನಾನದನ್ನು ಮಾಡಲ್ಲ. ನನಗದು ಬೇಕಾಗಿಯೂ ಇಲ್ಲ. ಹಾಗೇ ಆಗಬೇಕು,ಹೀಗೆ ಆಗಬೇಕು ಅಂತ ನಾನು ರಾಜಕೀಯಕ್ಕೆ ಬಂದಿಲ್ಲ. ಶಾಸಕನಾಗಿದ್ದೇನೆ ಸೇವೆ ಮಾಡುತ್ತೇನೆ. ನಿಮಗೆ ಇಷ್ಟ ಇದ್ರೆ ಮುಂದಿನಬಾರಿ ಗೆಲ್ಲಿಸಿ.ಇಲ್ಲ ಅಂದ್ರೆ ಬಿಡಿ. ನನ್ನನ್ನು ಗೆಲ್ಲಿಸಿ ಅಂತಾನೂ ಕೇಳೋದಿಲ್ಲ. ನನಗೆ ನಿಮ್ಮಿಂದ ಆಗಬೇಕಾಗಿದ್ದು ಏನೂ ಇಲ್ಲ.
ನೀವು ಮಾತನಾಡಬೇಕಾದರೆ ಬಹಳ ಯೋಚನೆ ಮಾಡಿ ಮಾತನಾಡ ಬೇಕು. ನನ್ನಿಂದ ನಿಮಗೆ ತೊಂದರೆಯಾಗಿಲ್ಲ. ನನ್ನಿಂದ ನಿಮಗೆ ತೊಂದರೆಯಾಗಿದ್ದರೆ ನಿಮ್ಮ ಮಾತನ್ನು ಒಪ್ಪಿಕೊಳ್ಳುತ್ತಿದ್ದೆ ಎಂದು ಫುಲ್‌ಗರಂ ಆಗಿದ್ದಾರೆ. ಕಳೆದ ಮೂವತ್ತು ವರ್ಷಗಳಿಂದ ಅಜ್ಜ(ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ)ನಿಮ್ಮನ್ನು ಮನೆಯಿಂದ ಹೊರಗೆ ಬರದಂತೆ ಅಷ್ಟು ಚೆನ್ನಾಗಿ ಇಟ್ಟಿದ್ದರು. ನಿಮಗೆ ಈಗ ನನ್ನ ಕುಟುಂಬದ ಬಗ್ಗೆ ಮಾತಾಡುವಷ್ಟು ಮಾತು ಬಂದಿದೆ. ನನಗೂ ಮಾತು ಬರಲ್ಲಾ ಅನ್ಕೋಬೇಡಿ. ನಾನು ದೇಶ,ವಿದೇಶದಲ್ಲಿ ವ್ಯಾಪಾರ ಮಾಡು ವಂಥವನು ಎಂದಿದ್ದಾರೆ.