ನಿನಗೇನು ಬೇಕೆಂದವರು ಬಾರದ ಲೋಕಕ್ಕೆ!

| ಅವಿನಾಶ ಮೂಡಂಬಿಕಾನ ಬೆಂಗಳೂರು

ಕೊಲಂಬೋದ ಶಾಂಗ್ರಿಲಾ ಹೋಟೆಲ್​ನಲ್ಲಿ 2 ರೂಂ ಬುಕ್ ಮಾಡಿ, ಈಗಷ್ಟೇ ತಿಂಡಿ ತಿನ್ನಲು ನೆಲಮಹಡಿಗೆ ಬಂದಿದ್ದೇನೆ. ಶ್ರೀಲಂಕಾದಿಂದ ಬರುವಾಗ ಏನಾದರೂ ತರಬೇಕಾದರೆ ಹೇಳು. ಮತ್ತೆ ಕರೆ ಮಾಡುತ್ತೇನೆ ಎಂದು ಹೇಳಿದವರೀಗ ಇನ್ನೆಂದೂ ಬಾರದ ಲೋಕಕ್ಕೆ ಹೋಗಿದ್ದಾರೆ…!

ಸ್ನೇಹಿತರ ಜತೆಗೆ ಶ್ರೀಲಂಕಾ ಪ್ರವಾಸಕ್ಕೆ ಹೋಗಿದ್ದ ದಾಸರಹಳ್ಳಿ ವಿಧಾನಸೌಧ ಕ್ಷೇತ್ರದ ಜೆಡಿಎಸ್ ಮುಖಂಡ ಎಂ. ರಂಗಪ್ಪ ಬಾಂಬ್ ಸ್ಫೋಟ ಸಂಭವಿಸುವ ಕೆಲವೇ ನಿಮಿಷಗಳ ಮುನ್ನ ಪತ್ನಿ ಅಂಬಿಕಾ ಅವರಿಗೆ ಕರೆ ಮಾಡ ಮಾತನಾಡಿದ್ದರು.

ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಪಕ್ಷದ ಪರ ಪ್ರಚಾರ ನಡೆಸಿದ್ದ ರಂಗಪ್ಪ, ಮತದಾನ ಮುಗಿದ ಬಳಿಕ ಸ್ನೇಹಿತರ ಜತೆ ಶ್ರೀಲಂಕಾಗೆ ತೆರಳಿದ್ದರು. ಭಾನುವಾರ ಬೆಳಗ್ಗೆ 8 ಗಂಟೆಗೆ ಹೋಟೆಲ್​ನಲ್ಲಿ 2 ರೂಂ ಕಾಯ್ದಿರಿಸಿದ್ದರು. ಲಗೇಜ್​ಗಳನ್ನಿಟ್ಟು ಉಪಾಹಾರ ಸೇವಿಸಲು ಹೋಟೆಲ್​ನ ಮೊದಲ ಮಹಡಿಗೆ ಬಂದಿದ್ದರು. ಬೆಳಗ್ಗೆ 8.10ರಲ್ಲಿ ಉಪಾಹಾರ ಸೇವಿಸುತ್ತಿದ್ದಾಗ ಹಿರಿಯ ಪುತ್ರ ರಿನೀತ್​ಗೆ ಕರೆ ಮಾಡಿದ್ದರು. ಆದರೆ, ಅದನ್ನು ಗಮನಿಸದ ರಿನೀತ್ ಕರೆ ಸ್ವೀಕರಿಸಿರಲಿಲ್ಲ. ನಂತರ ಪತ್ನಿ ಅಂಬಿಕಾಗೆ ಕರೆ ಮಾಡಿ ಐದು ನಿಮಿಷ ಮಾತನಾಡಿ ಮತ್ತೆ ಕರೆ ಮಾಡುವುದಾಗಿ ಹೇಳಿ ಕಟ್ ಮಾಡಿದ್ದರು. ಕೆಲ ಸಮಯದ ಬಳಿಕ ಕರೆ ಮಾಡಿರುವುದನ್ನು ನೋಡಿದ ಮಗ ರಿನೀತ್ ತಂದೆಗೆ ವಾಪಸ್ ಕರೆ ಮಾಡಿದ್ದ. ಆದರೆ, ರಂಗಪ್ಪ ಮೊಬೈಲ್ ಅಷ್ಟೊತ್ತಿಗೆ ನಾಟ್ ರೀಚಬಲ್ ಆಗಿತ್ತು.

ಪ್ರತಿವರ್ಷ ರಂಗ-11 ಕ್ರಿಕೆಟ್ ಟೂರ್ನಮೆಂಟ್

ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಮತಗಟ್ಟೆ ಸಮಿತಿ ಅಧ್ಯಕ್ಷರಾಗಿದ್ದ ರಂಗಪ್ಪ ದಾಸರಹಳ್ಳಿಯಲ್ಲಿ ಪ್ರತಿ ವರ್ಷ ‘ರಂಗ-11’ ಹೆಸರಿನ ಕ್ರಿಕೆಟ್ ಟೂರ್ನಮೆಂಟ್ ನಡೆಸುತ್ತಿದ್ದರು. ರಾಜಕೀಯದ ಜತೆ ಕ್ರಿಕೆಟ್ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿದ್ದ ರಂಗಪ್ಪ ವಿದ್ಯಾರಣ್ಯಪುರದಲ್ಲೂ ಆಗಾಗ ಕ್ರಿಕೆಟ್ ಪಂದ್ಯಾವಳಿ ಆಯೋಜಿಸುತ್ತಿದ್ದರು. ರಿಯಲ್​ಎಸ್ಟೇಟ್ ವ್ಯವಹಾರವನ್ನೂ ನಡೆಸುತ್ತಿದ್ದರು. ರಂಗಪ್ಪ ಮೃತಪಟ್ಟ ವಿಚಾರ ತಿಳಿದ ಅವರ ಸ್ನೇಹಿತ ಕ್ಲೇಟಸ್ ಸೋಮವಾರ ಸಂಜೆ 5.30ರ ವಿಮಾನದಲ್ಲಿ ಶ್ರೀಲಂಕಾಗೆ ತೆರಳಿದ್ದಾರೆ. ರಂಗಪ್ಪಗೆ ಮೂವರು ಮಕ್ಕಳಿದ್ದು, ಮಕ್ಕಳ ವಿದ್ಯಾಭ್ಯಾಸದ ದೃಷ್ಟಿಯಿಂದ ವಿದ್ಯಾರಣ್ಯಪುರದ ಬಿಇಎಲ್ ಲೇಔಟ್​ನಲ್ಲಿ ಬಾಡಿಗೆ ಮನೆಯಲ್ಲಿದ್ದಾರೆ ಎಂದು ರಂಗಪ್ಪ ಸಹೋದರ ಮುನಿಸ್ವಾಮಿ ವಿಜಯವಾಣಿಗೆ ತಿಳಿಸಿದ್ದಾರೆ.

‘ದುರಂತ ಸಂಭವಿಸಿದ ಪಕ್ಕದ ಹೊಟೇಲ್​ನಲ್ಲೇ ನಾನಿದ್ದೆ !

ಟಿವಿ ಆನ್ ಮಾಡುತ್ತಿದ್ದಂತೆ, ಹೊರಗಿನ ಸ್ಥಿತಿಯ ಬಗ್ಗೆ ಗೊತ್ತಾಯಿತು. ಹೋಟೆಲ್ ಸಿಬ್ಬಂದಿ ಯಾವುದೇ ಕಾರಣಕ್ಕೂ ಕೆಳಗೆ ಬರಬೇಡಿ ಎಂದು ಆದೇಶಿಸಿದ್ದರು. ಏನಾಗುತ್ತಿದೆ ಎಂಬ ಅರಿವಿಲ್ಲದೆ, ಭಯದಲ್ಲೇ ಹೋಟೆಲ್​ನ ನಾಲ್ಕು ಗೋಡೆಗಳ ಮಧ್ಯೆ ಕಾಲ ಕಳೆದಿದ್ದೆವು

ಹೀಗೆ ಶ್ರೀಲಂಕಾದಲ್ಲಿ ಸಂಭ ವಿಸಿದ ದುರಂತದಲ್ಲಿ ಅದೃಷ್ಟವಶಾತ್ ಪಾರಾಗಿ ಬಂದ ‘ದಿ ವಿಲನ್’ ಚಿತ್ರದ ನಿರ್ವಪಕ ಸಿ.ಆರ್. ಮನೋಹರ್, ‘ವಿಜಯವಾಣಿ’ ಜತೆಗೆ ಹಂಚಿಕೊಂಡ ಮಾತುಗಳಿವು.

ಶನಿವಾರವೇ ನಾಲ್ವರು ಸ್ನೇಹಿತರೊಂದಿಗೆ ಕೊಲಂಬೊಗೆ ತೆರಳಿದ್ದ ಮನೋಹರ್, ಮೊದಲು ಶಾಂಗ್ರಿಲಾ ಹೋಟೆಲ್​ನಲ್ಲಿಯೇ ತಂಗಿದ್ದರು. ಅದೇಕೋ ಆ ಹೋಟೆಲ್​ನ ವಾತಾವರಣ ಹಿಡಿಸಲಿಲ್ಲ ಎಂಬ ಕಾರಣಕ್ಕೆ ಎರಡೇ ಗಂಟೆಯಲ್ಲಿ ಆ ಹೊಟೇಲ್ ಬಿಟ್ಟು ಪಕ್ಕದ ತಾಜ್ ಸಮುದ್ರಕ್ಕೆ ಆಗಮಿಸಿದ್ದರು. ‘ತಾಜ್ ಸಮುದ್ರ ಹೊಟೇಲ್​ನಲ್ಲಿ ನನಗೆ ಮನೆಯಲ್ಲಿದ್ದಂಥ ಫೀಲ್ ಆಗುತ್ತದೆ. ಅದಕ್ಕಾಗಿ ನಾವೆಲ್ಲ ಹೋಟೆಲ್ ಬದಲಿಸಿದೆವು. ವಿಶ್ರಾಂತಿಗೆಂದು ಮಲಗಿದ್ದಾಗ ಸ್ಪೋಟದ ಶಬ್ದ ಕೇಳಿತು. ಬಳಿಕ ಅದು ಶಾಂಗ್ರಿ್ರಾದಲ್ಲಾದ ಸ್ಫೋಟ ಎಂದು ತಿಳಿಯುತ್ತಿದ್ದಂತೆ ಭಯಗೊಂಡೆವು’

‘ಹೋಟೆಲ್​ನಲ್ಲಿದ್ದಷ್ಟು ಹೊತ್ತು ನಮಗೆ ಅಷ್ಟೇನೂ ಭಯ ಆಗಿರಲಿಲ್ಲ. ನಂತರ ಹೋಟೆಲ್​ನ ತಳಮಹಡಿಗೆ ಬಂದು ಪರಿಸ್ಥಿತಿ ನೋಡಿದಾಗ ಭಯದ ಜತೆ ದುಃಖವೂ ಆಯಿತು. ನನ್ನ ಜೀವನದಲ್ಲೇ ಇಂಥ ದುರಂತವನ್ನು ನಾನು ಕಣ್ಣಾರೆ ನೋಡಿಲ್ಲ. ದಾರಿಯುದ್ದಕ್ಕೂ ಕಟ್ಟಡಗಳು ಛಿದ್ರಗೊಂಡಿದ್ದವು. ಎಲ್ಲೆಡೆ ರಕ್ತಸಿಕ್ತ ವಾತಾವರಣ. ಒಂದು ಕ್ಷಣ ಮೈ ಜುಂ ಅಂದಿತು! ಯಾವಾಗ ಇಲ್ಲಿಂದ ಹೊರಡುತ್ತೇವೊ ಎಂಬ ತವಕದಲ್ಲಿದ್ದೆವು.

ಸ್ಫೋಟ ಬಳಿಕ ಹಲವು ಗಂಟೆ ಹೊರಗಿನ ಸಂಪರ್ಕ ಇಲ್ಲದೆ ಆತಂಕದಲ್ಲೇ ಕಾಲ ಕಳೆದೆವು. ಏರ್​ಪೋರ್ಟ್​ನತ್ತ ಹೋಗಬೇಕೆಂದು ನಿರ್ಧರಿಸಿದಾಗ, ಯಾವುದೇ ವಾಹನ ಇಲ್ಲದೆ ಪರದಾಡಿದೆವು. ಹೇಗೋ ಕಾರೊಂದನ್ನು ಹೊಂದಿಸಿಕೊಂಡು ಏರ್​ಪೋರ್ಟ್​ನತ್ತ ಧಾವಿಸಿದೆವು.

ಏರ್​ಪೋರ್ಟ್​ನಲ್ಲಿಯೂ ಜನವೋ ಜನ! ರಸ್ತೆಯುದ್ದಕ್ಕೂ ವಾಹನಗಳು. ಬಹುತೇಕ ರಸ್ತೆಗಳು ಬ್ಲಾಕ್ ಆಗಿದ್ದವು. ಮನೆಯಿಂದ ಕರೆ ಮಾಡಿ ಬೆಂಗಳೂರಿಗೆ ವಿಮಾನ ಸಿಗದಿದ್ದರೆ ಬೇರೆ ದೇಶಕ್ಕೆ ಹೋಗುವಂತೆ ಸೂಚಿಸಿದ್ದರು. ಕೊನೆಗೆ ಹರಸಾಹಸ ಮಾಡಿ ಬಿಜಿನೆಸ್ ಕ್ಲಾಸ್​ನಲ್ಲಿ ಕೊಲಂಬೊದಿಂದ ಚೆನ್ನೈ ವಿಮಾನದ ಟಿಕೆಟ್ ಪಡೆದುಕೊಂಡೆವು. ಸೋಮವಾರ ಬೆಳಗಿನ ಜಾವ 1 ಗಂಟೆಗೆ ವಿಮಾನ ಏರಿ 3.30ಕ್ಕೆ ಚೆನ್ನೈ ತಲುಪಿದೆವು. ಇದೀಗ ಬೆಂಗಳೂರು ಮನೆ ಸೇರಿದ್ದೇವೆ’ ಎಂದು ದುರಂತದ ಕ್ಷಣಗಳನ್ನು ನೆನೆದರು ಮನೋಹರ್.

ಮಂಗ್ಳೂರು ದಂಪತಿ ಸೇಫ್

ಮಂಗಳೂರು: ಪತ್ನಿಯೊಂದಿಗೆ ಶ್ರೀಲಂಕಾ ಪ್ರವಾಸಕ್ಕೆ ತೆರಳಿದ್ದ ಮಂಗಳೂರಿನ ವೈದ್ಯರೊಬ್ಬರು ಕೊನೇ ಕ್ಷಣದಲ್ಲಿ ವಾಸ್ತವ್ಯದ ಹೋಟೆಲ್ ಬದಲಾಯಿಸಿ ಸಾವಿನ ದವಡೆಯಿಂದ ಪಾರಾಗಿದ್ದಾರೆ. ನಗರದ ಶ್ರೀ ವೇದಂಆಯು ಆಯುರ್ವೆದ ಆಸ್ಪತ್ರೆಯ ಡಾ.ಕೇಶವರಾಜ್ ಹಾಗೂ ಅವರ ಪತ್ನಿ ಶ್ರೀದೇವಿ ತಮ್ಮ ವಿವಾಹ ವಾರ್ಷಿಕೋತ್ಸವ ಹಿನ್ನೆಲೆಯಲ್ಲಿ ಏ.20ರಂದು ಕೊಲಂಬೋಗೆ ತೆರಳಿದ್ದರು. ಸ್ಫೋಟ ನಡೆದ ಹೋಟೆಲ್ ಸಿನ್ನಾಮೊನ್ ಗ್ಯ್ರಾಂಡ್​ನಲ್ಲಿ ಉಳಿದುಕೊಳ್ಳಬೇಕಾಗಿತ್ತಾದರೂ, ಅಂತಿಮ ಹಂತದಲ್ಲಿ ಅದನ್ನು ರದ್ದು ಮಾಡಿ ನೆಗೊಂಬೋ ರಸ್ತೆಯ ಹೋಟೆಲ್ ಕ್ಲಾರಿಯನ್ ಹಬ್​ನಲ್ಲಿ ತಂಗಿದ್ದರು.

ಆತಂಕದಲ್ಲಿದ್ದ ಜನರು

ಬಾಂಬ್ ಸ್ಪೋಟಗೊಂಡಾಗ 90 ಕಿಲೋಮೀಟರ್ ದೂರವಿದ್ದೆ. ಘಟನೆ ಬಳಿಕ ಎಲ್ಲೆಡೆ ಪೊಲೀಸ್ ಭದ್ರತೆ ಹೆಚ್ಚಾಗಿತ್ತು, ಜನರು ಆತಂಕಕ್ಕೆ ಒಳಗಾಗಿದ್ದರು. ಕರ್ಫ್ಯೂ ಜಾರಿಗೆ ಬಂದ ಹಿನ್ನೆಲೆಯಲ್ಲಿ ಪೊಲೀಸರ ಅನುಮತಿ ಪಡೆದು ಕೊಲಂಬೋ ಏರ್​ಪೋರ್ಟ್​ಗೆ ಬಂದೆವು ಆದರೆ, 40 ಕಿಲೋಮೀಟರ್ ಕ್ರಮಿಸಲು 2 ತಾಸು ಬೇಕಾಯಿತು. ಪ್ರತಿಯೊಬ್ಬರನ್ನು ತಪಾಸಣೆ ನಡೆಸಿ ಸುರಕ್ಷಿತವಾಗಿ ತಲುಪಿಸಿದರು ಎಂದು ದೇವನಹಳ್ಳಿಯ ಡಾ. ರಘುರಾಂ ಅವರು ಶ್ರೀಲಂಕಾದ ಅನುಭವವನ್ನು ಹಂಚಿಕೊಂಡರು.

Leave a Reply

Your email address will not be published. Required fields are marked *