ನಿಧಿ ಆಸೆಗಾಗಿ ನೆಲ ಅಗೆದ ದುರುಳರು?

ಗುತ್ತಲ: ನಿಧಿ ಆಸೆಗಾಗಿ ಕಿಡಿಗೇಡಿಗಳು ಹಳೇ ಮಣ್ಣೂರ ಗ್ರಾಮದ ನಿರ್ಜನ ಪ್ರದೇಶದಲ್ಲಿ ಭೂಮಿ ಅಗೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ವರದಾ ನದಿಯ ಪ್ರವಾಹಕ್ಕೆ ತುತ್ತಾಗುತ್ತಿದ್ದ ಮಣ್ಣೂರ ಗ್ರಾಮವನ್ನು ಟಾಟಾ ಕಂಪನಿ ಸ್ಥಳಾಂತರ ಮಾಡಿ ಟಾಟಾ ಮಣ್ಣೂರ ಹೊಸ ಗ್ರಾಮ ನಿರ್ಮಾಣ ಮಾಡಿತ್ತು. ಮಣ್ಣೂರ ಗ್ರಾಮ ಸ್ಥಳಾಂತರಗೊಂಡ ನಂತರ ಹಳೆಯ ಗ್ರಾಮ ಹಾಳು ಬಿದ್ದಿತ್ತು. ಕಳೆದ 3 ದಿನಗಳ ಹಿಂದೆ ಯಾರೋ ಕಿಡಿಗೇಡಿಗಳು ಹಳೆಯ ಗ್ರಾಮದ ಪಾಳು ಬಿದ್ದ ಮನೆಯ ಹಿಂಭಾಗದಲ್ಲಿ ರಂಗೋಲಿ ಹಾಕಿ, ಲಿಂಬೆ ಹಣ್ಣುಗಳನ್ನು ಇಟ್ಟು ಪೂಜೆ ಮಾಡಿ ವೃತ್ತಾಕಾರದಲ್ಲಿ 3-4 ಅಡಿ ಭೂಮಿ ಅಗೆದಿದ್ದಾರೆ.

ಪಾಳು ಬಿದ್ದ ಗ್ರಾಮದಲ್ಲಿ ನಿಧಿ ಆಸೆಗೋ ಅಥವಾ ವಾಮಾಚಾರಕ್ಕಾಗಿ ಈ ರೀತಿ ಕೃತ್ಯ ನಡೆಸಿದ್ದಾರೆಯೊ ಎಂಬುದು ಮಾತ್ರ ನಿಗೂಢವಾಗಿದೆ. ಭೂಮಿ ಅಗೆದಿರುವ ಘಟನೆ ತಿಳಿದ ಗ್ರಾಮಸ್ಥರು ಘಟನಾ ಸ್ಥಳ ವೀಕ್ಷಿಸುತ್ತಿದ್ದಾರೆ. ಇದನ್ನು ನೋಡಿದ ಕೆಲವರು ಇಲ್ಲಿ ನಿಧಿ ಸಿಕ್ಕಿರಬಹುದು. ಅದಕ್ಕೆ ಹಂಡೆಯ ತರಹ ದುಂಡಾಗಿ ಭೂಮಿ ಅಗೆದಿದ್ದಾರೆ ಎಂದೂ, ಇನ್ನೂ ಅನೇಕರು, ಯಾವುದೇ ನಿಧಿ ಸಿಕ್ಕಿಲ್ಲ. ನಿಧಿಗಾಗಿ ಬಂದವರು ನಿರಾಸೆಯಿಂದ ಹೋಗಿರಬಹುದು ಎನ್ನುತ್ತಿದ್ದಾರೆ. ಇದರಲ್ಲಿ ಗ್ರಾಮದವರೊಬ್ಬರ ಜೊತೆ ಅನ್ಯರೂ ಕೈ ಜೋಡಿಸಿದ್ದಾರೆ ಎಂಬ ಮಾತು ಗ್ರಾಮದಲ್ಲಿ ಕೇಳಿಬರುತ್ತಿದೆ.

ಘಟನಾ ಸ್ಥಳಕ್ಕೆ ಗುತ್ತಲ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.