ನಿಡಸೋಸಿ ಶ್ರೀಮಠದ ಉತ್ತರಾಧಿಕಾರತ್ವ ವಿವಾದ !ಇತ್ಯರ್ಥಕ್ಕೆ ಮುಂದಾದ ಮುಖಂಡರು

ವಿಜಯವಾಣಿ ಸುದ್ದಿಜಾಲ,ಚಿಕ್ಕೋಡಿ
ಉತ್ತರ ಕರ್ನಾಟಕ ಹಾಗೂ ದಕ್ಷಿಣ ಮಹಾರಾಷ್ಟ್ರದ ತ್ರಿವಿಧ ದಾಸೋಹ ಪರಂಪರೆಯ ಜಗದ್ಗುರು ಪೀಠವಾಗಿರುವ ನೀಡಸೊಸಿ ಮಠದ ಉತ್ತರಾಧಿಕಾರತ್ವದ ಗೊಂದಲ ನಿವಾರಣೆಗೆ ಜಿಲ್ಲೆಯ ಹಿರಿಯ ಮುಖಂಡರು ಮುಂದಾಗಿದ್ದಾರೆ.
ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ನೀಡಸೊಸಿ ಶ್ರೀ ದುರದುಂಡೇಶ್ವರ ಸಿದ್ದಸಂಸ್ಥಾನದ ಮಠದ ಜಗದ್ಗುರ ಡಾ.ಪಂಚಮ ಶಿವಲಿಂಗೇಶ್ವರ ಸ್ವಾಮಿಗಳ ಉತರಾಧಿಕಾರಿಯಾಗಿ ನೇಮಕಗೊಂಡ ನಿಜಲಿಂಗೇಶ್ವರ ಸ್ವಾಮಿಜಿ, ಕಳೆದ 2023ರಲ್ಲಿ ಮಂಗಳೂರಿನ ರಾಮಕೃಷ್ಣ ಆಶ್ರಮ ತೊರೆದು, ನೂತನ ಉತ್ತರಾಧಿಕಾರಿಯಾಗಿ ದೀಕ್ಷೆ ಪಡೆದಿದ್ದರು. ಬಳಿಕ ಉತ್ತರಾಧಿಕಾರಿಯಾಗಿದ್ದ ನಿಜಲಿಂಗೇಶ್ವರ ಸ್ವಾಮೀಜಿ ಅವರಿಗೆ ಅಧಿಕಾರ ಹಂಚಿಕೆ ಹಾಗೂ ಪಟ್ಟಾಧಿಕಾರ ವಿಷಯವಾಗಿ ನಡೆದ ಮನಸ್ತಾಪದಿಂದಾಗಿ, ಕಳೆದ ಒಂದು ವರ್ಷದಿಂದ ಶ್ರೀ ಮಠದಲ್ಲಿ ವಿವಿಧ ಬೆಳೆವಣಿಗೆಗಳು ಸಂಭವಿಸಿದ್ದು, ಕಿರಿಯ ಶ್ರೀಗಳಾದ ನಿಜಲಿಂಗೇಶ್ವರ ಸ್ವಾಮಿಜಿ ಅಮರಣಾಂತ ಉಪವಾಸದ ಮೂಲಕ ಸತ್ಯಾಗ್ರಹ ಆರಂಭಿಸಿದ್ದು, ಇದರಿಂದ ಎಲ್ಲಡೆ ಗೊಂದಲದ ವಾತಾವರಣ ನಿರ್ಮಾಣವಾಗಿದೆ.
ಕಳೆದ ಒಂದು ವರ್ಷದಿಂದ ಬೂದಿ ಮುಚ್ಚಿದ ಕೆಂಡಂತ್ತಿದ್ದ ವಿವಾದ ದಿನಕ್ಕೊಂದು ಸ್ವರೂಪ ಪಡೆಯುವ ಮೂಲಕ ಭಕ್ತರ ಮನಸ್ಸಿಗೆ ಘಾಸಿ ಉಂಟು ಮಾಡಿತ್ತು. ಹಲವಾರು ಬಾರಿ ಸಭೆ ನಡೆದರೂ ಸಹ ಹಿರಿಯ ಹಾಗೂ ಕಿರಿಯ ಶ್ರೀಗಳ ನಡುವೆ ಮನಸ್ತಾಪ ಕೊನೆಗಂಡಿರಲಿಲ್ಲ. ಇದರಿಂದ ತಡವಾಗಿ ಎಚ್ಚತ್ತುಕೊಂಡ ಇಲ್ಲಿಯ ಹಿರಿಯ ನಾಯಕರು ಶ್ರೀಮಠದ ಸದ್ಭಕ್ಷ ರು, ವಿವಿಧ ಸಂಘ ಸಂಸ್ಥೆಗಳ ಮುಖಂಡರು, ಬುಧವಾರ ಕೆಎಲ್‌ಇ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಹಾಗೂ ಮಾಜಿ ಸಂಸದ ರಮೇಶ ಕತ್ತಿ ನೇತೃತ್ವದಲ್ಲಿ ಬೆಳಗಾವಿಯಲ್ಲಿ ಸಭೆ ನಡೆಸಿ, ಭಕ್ತರ ಹಾಗೂ ಉತ್ತರಾಧಿಕಾರಿ ನೇಮಕ ಸಮಿತಿಯ ಸಲಹೆಗಳನ್ನು ಆಲಿಸಿ, ಶೀಘ್ರದಲ್ಲಿಯೇ ಹಿರಿಯ ಹಾಗೂ ಕಿರಿಯ ಶ್ರೀಗಳ ನಡುವೇ ಸಂಧಾನ ಸಭೆ ನಡೆಸುವುದಾಗಿ ನಿರ್ಣಯ ಕೈಗೊಂಡಿದ್ದಾರೆ.
ಸಭೆಯಲಿ ಶಾಸಕ ಗಣೇಶ ಹುಕ್ಕೇರಿ,ವಿ.ಪ ಮಾಜಿ ಸಚೇತಕ ಮಹಾಂತೇಶ ಕವಟಗಿಮಠ ಮಾಜಿ ಸಚಿವ ಎ.ಬಿ.ಪಾಟೀಲ ಸೇರಿದಂತೆ ಇತರರಿದ್ದರು.