More

  ನಿಡಸೋಸಿ ಮಠದ ಉತ್ತರಾಧಿಕಾರಿಯಾಗಿದ್ದು ಪೂರ್ವ ಜನ್ಮದ ಪುಣ್ಯ

  ಸಂಕೇಶ್ವರ: ನಿಡಸೋಸಿ ದುರದುಂಡೀಶ್ವರ ಶಕ್ತಿ ಪೀಠಕ್ಕೆ ನಾನು ಉತ್ತರಾಧಿಕಾರಿಯಾಗಿದ್ದು ನನ್ನ ಪೂರ್ವ ಜನ್ಮದ ಪುಣ್ಯ ಎಂದು ನೂತನ ಉತ್ತರಾಧಿಕಾರಿ 6ನೇ ನಿಜಲಿಂಗೇಶ್ವರ ದೇವರು ತಿಳಿಸಿದರು.

  ಸಮೀಪದ ನಿಡಸೋಸಿ ಜಗದ್ಗುರು ದುರುದುಂಡೀಶ್ವರ ಸಿದ್ಧ ಸಂಸ್ಥಾಪನ ಮಠದಲ್ಲಿ ಗುರುವಾರ ಹಮ್ಮಿಕೊಂಡಿದ್ದ 10ನೇ ಪೀಠಾಧಿಪತಿ ಉತ್ತರಾಧಿಕಾರಿ ಸ್ವಾಗತ ಸಮಾರಂಭದಲ್ಲಿ ಮಾತನಾಡಿದ ಅವರು, ಶ್ರೀಮಠದ ಪೂಜ್ಯರ ಮಾರ್ಗದರ್ಶನ ಹಾಗೂ ಸದ್ಭಕ್ತರ ಅಪೇಕ್ಷೆಗೆ ಧಕ್ಕೆ ಬಾರದಂತೆ ಶ್ರೀಮಠದ ಉತ್ತರಾಧಿಕಾರಿಯಾಗಿ ಮುಂದುವರೆಯುತ್ತೇನೆ ಎಂದರು.

  ನಾನು ಇದೇ ಗ್ರಾಮದ ಮಗನಾಗಿ ಶ್ರೀಮಠಕ್ಕೆ ಬಂದಿಲ್ಲ. ದುರದುಂಡೀಶ್ವರರ ಮಗನಾಗಿ, ಪೂಜ್ಯರ ಶಿಷ್ಯನಾಗಿ ಶ್ರೀಮಠದ ಉತ್ತರಾಧಿಕಾರಿಯಾಗಿ ಶ್ರೀಮಠದ ಪರಂಪರೆ, ಭಕ್ತರ ಆಶಯ ಉಳಿಸಿ-ಬೆಳೆಸುವ ಮೂಲಕ ಮಠದ ಶ್ರೇಯೋಭಿವದ್ಧಿಗೆ ಶಕ್ತಿಮೀರಿ ಪ್ರಯತ್ನಿಸುತ್ತೇನೆ ಎಂದರು.

  ಕೆಎಲ್‌ಇ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಮಾತನಾಡಿ, ಉತ್ತರ ಕರ್ನಾಟಕ ಹಾಗೂ ದಕ್ಷಿಣ ಮಹಾರಾಷ್ಟ್ರದಲ್ಲಿ ಅತ್ಯಂತ ಶ್ರೇಷ್ಠ ಪರಂಪರೆ ಹೊಂದಿರುವ ಶ್ರೀಮಠದ ಜಗದ್ಗುರುಗಳ ಸಾನ್ನಿಧ್ಯದಲ್ಲಿ ಎಲ್ಲ ರಂಗಗಳಲ್ಲಿಯೂ ತನ್ನ ಅಪರಿಮಿತ ಸಾಧನೆ ಮಾಡುವ ಮೂಲಕ ಶ್ರೇಷ್ಠತೆ ಹೊಂದಿದೆ. ಬರುವ ದಿನಮಾನಗಳಲ್ಲಿ ಉತ್ತರಾಧಿಕಾರಿಗಳು ಸಹ ವೀರಶೈವ ಲಿಂಗಾಯತ ಪರಂಪರೆ ಉಳಿಸಿ-ಬೆಳೆಸುವ ಮೂಲಕ ಮಠದ ಘನತೆ ಎತ್ತಿ ಹಿಡಿಯಬೇಕು ಎಂದರು.

  ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಮಾತನಾಡಿ, ವೀರಶೈವ ಲಿಂಗಾಯತ ಪರಂಪರೆಯಲ್ಲಿ ದೇವಸ್ಥಾನಗಳಿಗಿಂತ ಮಠಮಾನ್ಯಗಳಿಗೆ ಹೆಚ್ಚಿನ ಪ್ರಾತಿನಿಧ್ಯ ದೊರೆತಿದ್ದು, ದೇವಸ್ಥಾನಗಳಲ್ಲಿ ಮೂರ್ತಿಗಳಲ್ಲಿ ದೇವರನ್ನು ಕಂಡರೆ, ಮಠಗಳಲ್ಲಿ ಸ್ವಾಮೀಜಿಗಳಲ್ಲಿ ದೇವರನ್ನು ಕಾಣುವ ಪರಿಪಾಠವಿದೆ ಎಂದರು. ಸಂಸದ ಅಣ್ಣಾಸಾಹೇಬ ಜೊಲ್ಲೆ ಮಾತನಾಡಿ, ಬಡವನಿಂದ ಪ್ರತಿಷ್ಠಿತ ಕುಟುಂಬಗಳವರೆಗೆ ಎಲ್ಲರನ್ನು ಒಂದೇ ರೀತಿ ನೋಡುವ ಜಗದ್ಗುರು ಪಂಚಮ ಶಿವಲಿಂಗೇಶ್ವರರ ಹೃದಯವಂತಿಕೆ ಮಠದ ಭಕ್ತರ ಶಕ್ತಿಯಾಗಿದೆ. ಉತ್ತರಾಧಿಕಾರಿಗಳು ಸಹ ಈ ಭವ್ಯ ಪರಂಪರೆಯನ್ನು ಎತ್ತರಕ್ಕೆ ಕೊಂಡೊಯ್ಯಬೇಕು ಎಂದರು.

  ಜಗದ್ಗುರು ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಮಾತನಾಡಿ, ನಾಡಿನ ಎಲ್ಲೆಡೆ ನಿಡಸೋಸಿ ಮಠದ ಪರಂಪರೆಗೆ ವಿಶೇಷ ಗೌರವವಿದೆ. ಶ್ರೀಮಠದ ಎಲ್ಲ ಕಾರ್ಯಗಳನ್ನು ನೋಡಿಕೊಳ್ಳಲು ಓರ್ವ ಕಾಯಕ ನಿಷ್ಠ ಸಂತನ ಅವಶ್ಯಕತೆಯಿತ್ತು. ಆ ಸಂತ ಇದೇ ಊರಿನವರು. ಆದರೆ, ಅವರು ತಂದೆ-ತಾಯಿ ಮಗನಾಗಿ ಮಠಕ್ಕೆ ಬಂದಿಲ್ಲ. ದುರದುಂಡೇಶ್ವರರ ಮಗನಾಗಿ ಮಠಕ್ಕೆ ಬಂದಿದ್ದಾರೆ ಎಂದರು.

  ಮಂಗಳೂರಿನ ರಾಮಕೃಷ್ಣಾಶ್ರಮದ ಏಕಗಮ್ಯಾನಂದ ಸ್ವಾಮೀಜಿ ಅವರಿಗೆ 10ನೇ ಪೀಠಾಧಿಪತಿಗಳ ಉತ್ತರಾಧಿಕಾರಿ ಗುರು ನಿಜಲಿಂಗೇಶ್ವರ ಸ್ವಾಮೀಜಿ ಎಂದು ಉತ್ತರಾಧಿಕಾರತ್ವ ಪತ್ರ ಓದಿ ಎಲ್ಲರಿಂದ ಒಪ್ಪಿಗೆ ಪಡೆದು, ಶ್ರೀಗಳನ್ನು ಉತ್ತರಾಧಿಕಾರಿ ಎಂದು ನೇಮಕ ಮಾಡಲಾಯಿತು.

  ವಿಧಾನ ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ, ಮಾಜಿ ಸಚಿವ ಎ.ಬಿ.ಪಾಟೀಲ ಮಾತನಾಡಿದರು. ಗುರುಸಿದ್ದೇಶ್ವರ ಶ್ರೀ, ತ್ರಿನೇತ್ರ ಶ್ರೀ, ಚಿಂಚಣಿ ಸಿದ್ಧ ಸಂಸ್ಥಾನ ಮಠದ ಡಾ.ಅಲ್ಲಮಪ್ರಭು ಸ್ವಾಮೀಜಿ, ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಸಂಪಾದನಾ ಶ್ರೀ, ಮಲ್ಲಿಕಾರ್ಜುನ ಶ್ರೀ, ಶ್ರೀಗುರು ದೇವ ದೇವರು, ಗುರುಸಿದ್ದೇಶ್ವರ ಶ್ರೀ, ಶಿವಾನಂದ ಶ್ರೀ, ಹಿರಾಶುಗರ್ಸ್‌ ಚೇರ್ಮನ್ ನಿಖಿಲ್ ಕತ್ತಿ, ಜಿಪ ಮಾಜಿ ಸದಸ್ಯ ಪೃಥ್ವಿ ಕತ್ತಿ, ಪವನ ಕತ್ತಿ, ವಿನಯ ಪಾಟೀಲ, ಚಂದ್ರಕಾಂತ ಕೋಠಿವಾಲೆ ಇತರರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts