ನಿಡಗುಂದಿಯಲ್ಲಿ ಬೆಳೆ ಹಾನಿ ಪರಿಶೀಲನೆ


ನರೇಗಲ್:ಕೇಂದ್ರ ಸರ್ಕಾರದ ಬರ ಅಧ್ಯಯನ ತಂಡದ ಅಧಿಕಾರಿಗಳು ಗುರುವಾರ ಸಮೀಪದ ನಿಡಗುಂದಿ ಗ್ರಾಮದ ರೈತರ ಹೊಲಗಳಿಗೆ ಭೇಟಿ ನೀಡಿ ಬೆಳೆ ಹಾನಿ ಪರಿಶೀಲಿಸಿದರು.

ಸಿದ್ದಪ್ಪ ಕಳ್ಳಿ, ಕರಿಯಪ್ಪ ಕಂಬಳಿ ಅವರ ಹೊಲದಲ್ಲಿ ಕಡಲೆ ಬೆಳೆ ಹಾನಿ, ಸಿದ್ದಪ್ಪ ಮಲ್ಲೇಶಪ್ಪ ಸರವಿ ಅವರ ಹೊಲದಲ್ಲಿ ಕಡಲೆ ಮತ್ತು ಕುಸಬಿ ಬೆಳೆ ಹಾನಿ ವೀಕ್ಷಿಸಿ ಸಮಸ್ಯೆ ಆಲಿಸಿದರು.

ಕೇಂದ್ರ ಸರ್ಕಾರದ ಜಲಸಂಪನ್ಮೂಲ ಇಲಾಖೆಯ ಹಿರಿಯ ಜಂಟಿ ಆಯುಕ್ತ ಎಸ್.ಕೆ. ಕಾಂಬೋಜ್ ಅವರು ಪ್ರಸಕ್ತ ವರ್ಷ ಸರಿಯಾಗಿ ಮಳೆಯಾಗಿದ್ದರೆ ಕಡಲೆ ಇಳುವರಿ ಎಷ್ಟು ಪ್ರಮಾಣದಲ್ಲಿ ಬರುತ್ತಿತ್ತು ಎಂದು ರೈತರಿಗೆ ಕೇಳಿದರು. ಇದಕ್ಕುತ್ತರವಾಗಿ ರೈತ ಕರಿಯಪ್ಪ ಕಂಬಳಿ ಅವರು ಎಕರೆಗೆ ಅಂದಾಜು 9 ಕ್ವಿಂಟಲ್ ಕಡಲೆ ಸಿಗುತ್ತಿತ್ತು. ಆದರೆ, ಕಳೆದ ಮೂರ್ನಾಲ್ಕು ವರ್ಷ ಸತತ ಮಳೆ ಇಲ್ಲದೇ ಬರಗಾಲ ಆವರಿಸಿದ್ದರಿಂದ ಬಿತ್ತಿದ ಬೆಳೆ ಕೈಗೆ ಸಿಗುತ್ತಿಲ್ಲ. ಮೇವು-ಹೊಟ್ಟಿನ ಕೊರತೆಯಿಂದ ಜಾನುವಾರುಗಳನ್ನು ಮಾರುವ ಸ್ಥಿತಿಗೆ ತಲುಪಿದ್ದೇವೆ ಎಂದು ಹೇಳಿದರು. ನಿಡಗುಂದಿ ರೈತರಾದ ಮುತ್ತಪ್ಪ ಅಬ್ಬಿಗೇರಿ, ಶಿವಕುಮಾರ ದಡ್ಡೂರ, ಬಸಲಿಂಗಪ್ಪ ಜೀರಗಿ, ಅಂದಪ್ಪ ಬಿಷ್ಷೂರ, ಜಗದೀಶ ಕರಡಿ ಸೇರಿ ಅಕ್ಕ-ಪಕ್ಕದ ಗ್ರಾಮದ ರೈತರು ಅಧಿಕಾರಿಗಳ ಮುಂದೆ ಅಳಲು ತೋಡಿಕೊಂಡರು.

ಕೇಂದ್ರ ಸರ್ಕಾರದ ಜಲಸಂಪನ್ಮೂಲ ಇಲಾಖೆಯ ಹಿರಿಯ ಜಂಟಿ ಆಯುಕ್ತ ಎಸ್.ಕೆ. ಕಾಂಬೋಜ್ ನೇತೃತ್ವದಲ್ಲಿ ಕೇಂದ್ರ ಸರ್ಕಾರದ ಪಶುಸಂಗೋಪನಾ ಇಲಾಖೆಯ ಅಧಿಕಾರಿ ಡಾ. ತರುಣಕುಮಾರ ಸಿಂಗ್, ಕೇಂದ್ರ ಸರ್ಕಾರದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಡೆಪ್ಯುಟಿ ಜನರಲ್ ಮ್ಯಾನೇಜರ್ ಸತ್ಯಕುಮಾರ್ ಅವರನ್ನೊಳಗೊಂಡ ಅಧಿಕಾರಿಗಳು ಕೇಂದ್ರ ಬರ ಅಧ್ಯಯನ ತಂಡದಲ್ಲಿದ್ದರು.

ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ, ಅಪರ ಜಿಲ್ಲಾಧಿಕಾರಿ ಶಿವಾನಂದ ಹಿರೇಮಠ, ಉಪವಿಭಾಗಾಧಿಕಾರಿ ಪಿ.ಎಸ್. ಮಂಜುನಾಥ, ರೋಣ ತಹಸೀಲ್ದಾರ ಶರಣಮ್ಮ ಕಾರಿ, ಗಜೇಂದ್ರಗಡ ತಹಸೀಲ್ದಾರ ಗುರುಸಿದ್ಧಯ್ಯ ಹಿರೇಮಠ, ಕೃಷಿ ಜಂಟಿ ನಿರ್ದೇಶಕ ಸಿ.ಬಿ. ಬಾಲರೆಡ್ಡಿ, ಕಂದಾಯ ಹಾಗೂ ಕೃಷಿ ಇಲಾಖೆಗಳ ಅಧಿಕಾರಿಗಳು, ರೈತರು ಉಪಸ್ಥಿತರಿದ್ದರು.