ಬಾಗಲಕೋಟೆ: ಆಸ್ಪತ್ರೆಗಳಲ್ಲಿ ಸಂಭವಿಸಿದ ಜನನ, ಮರಣ ಮತ್ತು ನಿರ್ಜಿವ ಜನನ ಘಟನೆಗಳನ್ನು ನಿಗದಿತ ಸಮಯದೊಳಗೆ ನೋಂದಣಿಗೆ ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿ ಜಾನಕಿ ಜೆ.ಎಂ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ನಾಗರಿಕ ನೋಂದಣಿ ಪದ್ದತಿಯನ್ನು ಉತ್ತಮ ಪಡಿಸುವ ಸಲುವಾಗಿ ಜರುಗಿದ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಇ-ಜನ್ಮ ತಂತ್ರಾಂಶದಲ್ಲಿ ಜನನ ಮತ್ತು ಮರಣ ನೋಂದಣಿಯನ್ನು 21 ದಿನಗಳ ಒಳಗಾಗಿ ನೋಂದಣಿ ಆಗಬೇಕು. ನೋಂದಣಿಯಾಗದೇ ಸಾರ್ವಜನಿಕರಿಗೆ ತೊಂದರೆಯಾದಲ್ಲಿ ಸಂಬಂಧಿಸಿದ ಉಪ ನೋಂದಣಾಧಿಕಾರಿಗಳನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುವುದೆಂದು ಸೂಚಿಸಿದರು.
ನೋಂದಣಿಗೆ ಪ್ರಕ್ರಿಯೆಗೆ ಪೊಲೀಸ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಹಾಗೂ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ ರಾಜ್ ಇಲಾಖೆಗಳ ಸಹಕಾರ ಪಡೆದುಕೊಂಡು ನೊಂದಣಿ ಪ್ರಕ್ರಿಯೆ ಶೇ.100 ರಷ್ಟು ಆಗಬೇಕು. ಜಿಲ್ಲೆಯ ಎಲ್ಲ ಆರೋಗ್ಯ ಸಂಸ್ಥೆಗಳಲ್ಲಿ ಘಟಿಸಿದ ಜನನ, ಮರಣ ಹಾಗೂ ನಿರ್ಜೀವ ಜನನ ಘಟನೆಗಳನ್ನು 21 ದಿನಗಳಲ್ಲಿ ನೋಂದಾಯಿಸಿ ಉಚಿತ ಪ್ರಮಾಣ ಪತ್ರವನ್ನು ಸಂಬಂಧಿಸಿದ ಮಾಹಿತಿದಾರರಿಗೆ ವಿತರಣೆಯಾಗಬೇಕು ಎಂದು ತಿಳಿಸಿದರು.
ಜನನ, ಮರಣ ತಿದ್ದುಪಡಿ, ರದ್ದತಿಗೆ ಸಂಬಂಧಿಸಿದಂತೆ ಜನನ, ಮರಣ ನೋಂದಣಾಧಿಆರಿಗಳು, ಉಪ ನೋಂದಣಾಧಿಕಾರಿಗಳು ತಾವೇ ಆದೇಶವನ್ನು ಮಾಡಿ ಮೂಲ ದಾಖಲೆಯಲ್ಲಿ ತಿದ್ದುಪಡಿ ಮಾಡಬಹುದಾಗಿದೆ. ಜನನ, ಮರಣಗಳ ದಾಖಲೆಗಳಲ್ಲಿ ತಿದ್ದುಪಡಿ ಮಾಡಲು ಸತ್ಯಾಸತ್ಯತೆಯನ್ನು ಪರಿಶೀಲಿಸಿ ಕ್ರಮವಹಿಸಬೇಕು. ನೋಂದಣಿ ಘಟಕಗಳ ಪರಿಶೀಲನಾ ಸಮಯದಲ್ಲಿ ಕೆಲವು ನ್ಯೂನ್ಯತೆಗಳು ಕಂಡುಬಂದಿವೆ. ಅವುಗಳನ್ನು ಗಣನೆಗೆ ತೆಗೆದುಕೊಂಡು ನೋಂದಣಿ ಪ್ರಕ್ರಿಯೆ ನಡೆಸುವಂತೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
ಇ-ಜನ್ಮ ತಂತ್ರಾಂಶದ ಜಾರಿಗೊಳ್ಳುವ ಪೂರ್ವದಲ್ಲಿ ದಾಖಲಾತಿಗಳ ಸ್ಕ್ಯಾನಿಂಗ್ ಮತ್ತು ಡಿಜಿಟ್ಯಾಜೇಷನ್ ಪ್ರಕ್ರಿಯೆ ಮೊದಲ ಹಂತದಲ್ಲಿ ಆಗಿದ್ದು, ಎರಡನೇ ಹಂತದಲ್ಲಿ ಈ ಕಾರ್ಯ ಆಗಿಲ್ಲ. ಜಿಲ್ಲೆಯಲ್ಲಿ ಒಟ್ಟು ಜನನಕ್ಕೆ ಸಂಬಂಧಿಸಿದ 26100 ಮತ್ತು ಮರಣಕ್ಕೆ ಸಂಬಂಧಿಸಿದ 13600 ಸೇರಿ ಒಟ್ಟು 39700 ದಾಖಲಾತಿಗಳ ಸ್ಕ್ಯಾನಿಂಗ್ ಮತ್ತು ಡಿಜಿಟ್ಯಾಜೇಷನ್ಗೆ ಬಾಕಿ ಉಳಿದಿವೆ. ಸಂಬಂಧಿಸಿದ ಅಧಿಕಾರಿಗಳು ಕ್ರಮಕೈಗೊಳ್ಳಲು ತಿಳಿಸಿದರು. ಸಭೆಯಲ್ಲಿ ಗೈರು ಹಾಜರಾದ ಮೂರು ತಾಲೂಕಿನ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ನೋಟಿಸ್ ನೀಡಲು ಸೂಚಿಸಿದರು.
ಕಳೆದ 2024-25ನೇ ಸಾಲಿನ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯಡಿ ಹಿಂಗಾರು ಮತ್ತು ಬೇಸಿಗೆ ಹಂಗಾಮಿನ ಬೆಳೆಕಟಾವು ಪ್ರಯೋಗಗಳನ್ನು ನಿಯಮಾನುಸಾರ ಕೈಗೊಳ್ಳಲು ಮತ್ತು ಯಾವುದೇ ಪ್ರಯೋಗಗಳು ನಷ್ಟಗೊಳಿಸದಂತೆ ನೋಡಿಕೊಳ್ಳಲು ಹಾಗೂ ನಿಗಧಿತ ಅವಧಿಯಲ್ಲಿ ಪೂರ್ಣಗೊಳಿಸಲು ಎಲ್ಲ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ, ತಾಲೂಕಿನ ಅನುಷ್ಠಾನಾಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಅಂಕಿ ಸಂಖ್ಯೆ ಅಧಿಕಾರಿ ಗೌರಮ್ಮ ಪಿ. ಸುಂಕದ, ಜಂಟಿ ಕೃಷಿ ನಿರ್ದೇಶಕ ಲಕ್ಷ್ಮಣ ಕಳ್ಳೇನ್ನವರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಮಂಜುನಾಥ ಡಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪನಿರ್ದೇಶಕ ಪ್ರಭಾಕರ ಕೆ, ತೋಟಗಾರಿಕೆ ಇಲಾಖೆ ಉಪನಿರ್ದೇಶಕರು ರವೀಂದ್ರ ಹಕಾಟಿ, ಜಿಲ್ಲಾ ಆರೋಗ್ಯ ಸೇರಿದಂತೆ ಆಯಾ ತಾಲೂಕಿನ ತಹಶೀಲ್ದಾರರು, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿಗಳು ಉಪಸ್ಥಿತರಿದ್ದರು.