ನಾವೇಕೆ ಬುದ್ಧರಾಗಿಲ್ಲ?

ರಾಜಕುಮಾರ ಸಿದ್ಧಾರ್ಥ ಅದೊಂದು ದಿನ ವಿಹಾರಕ್ಕೆಂದು ಹೊರಟ. ಅವನ ತಂದೆ ಶುದ್ಧೋಧನ ಮಹಾರಾಜ ಮಗನ ವಿಹಾರಕ್ಕೆಂದು ವೈಭವದ ವ್ಯವಸ್ಥೆಯನ್ನೇ ಮಾಡಿದ್ದ. ಎಲ್ಲೆಲ್ಲಿಯೂ ಸಂಭ್ರಮ, ನೃತ್ಯ, ಮೋಜು. ದುಃಖದ ಪರಿಚಯವೇ ಮಗನಿಗೆ ಆಗಕೂಡದು ಎಂಬಲ್ಲಿ ಬಹಳ ಕಾಳಜಿ ವಹಿಸಿದ್ದ, ಆದರೂ ನಿಯತಿಯ ನಿರ್ಧಾರ ಬೇರೆಯೇ ಆಗಿತ್ತು. ಸಿದ್ಧಾರ್ಥ ಒಬ್ಬ ಮುದುಕನನ್ನು, ರೋಗಿಯನ್ನು ಮತ್ತು ಒಂದು ಶವವನ್ನು ನೋಡಿದ. ತನ್ನ ಜೀವನದಲ್ಲಿ ಈ ದೃಶ್ಯಗಳನ್ನು ಅವನು ಕಂಡಿರಲೇ ಇಲ್ಲ. ಬಹಳ ಆತಂಕವಾಯಿತು. ಸಾರಥಿಯನ್ನು ಪ್ರಶ್ನಿಸಿದ. ಸಾರಥಿ ಎಲ್ಲರಿಗೂ ಜೀವನದಲ್ಲಿ ಈ ಅವಸ್ಥೆಗಳು ಬರುತ್ತವೆ ಎಂದು ಪರಿಚಯಿಸಿದ. ಅದಾದ ನಂತರ ಸಿದ್ಧಾರ್ಥನಿಗೆ ಯಾವ ವೈಭವವೂ, ಸುಖ-ಸಂತೋಷಗಳೂ ಬೇಡವಾದವು. ರಥವನ್ನು ಹಿಂತಿರುಗಿಸುವಂತೆ ಹೇಳಿದ. ಈ ಬಗೆಯ ಭೌತಿಕ ಜೀವನ ಅವನಿಗೆ ನಿರರ್ಥಕವೆನಿಸಿತು. ರಾತೋರಾತ್ರಿ ಎಲ್ಲರನ್ನೂ, ಎಲ್ಲವನ್ನೂ ತೊರೆದು ತಪಸ್ಸಿಗೆ ನಡೆದ. ಬುದ್ಧನಾದ. ಈ ಕಥೆ ನಮಗೆಲ್ಲರಿಗೂ ಗೊತ್ತಿದೆ.

ಶ್ರೀರಂಗಮಹಾಗುರುಗಳು ಹೇಳುತ್ತಿದ್ದರು. ‘ಅಪ್ಪಾ, ನಮ್ಮ ಜೀವನದಲ್ಲಿ ನಾವು ದಿನ ಬೆಳಗಾದರೆ ಎಷ್ಟುಜನ ಮುದುಕರನ್ನು, ರೋಗಿಗಳನ್ನು ಮತ್ತು ಶವಗಳನ್ನು ನೋಡುತ್ತೇವಲ್ಲ, ಏಕೆ ನಾವೂ ಬುದ್ಧರಾಗಿಲ್ಲ? ಅಷ್ಟು ಸುಖ, ಸಂತೋಷಗಳಲ್ಲಿ ಬೆಳೆದ ಸಿದ್ಧಾರ್ಥನೇಕೆ ಈ ಮೂರು ದೃಶ್ಯಗಳಿಂದ ಮಹಾ ಸಂನ್ಯಾಸಿಯಾಗಲು ನಿಶ್ಚಯಿಸಿದ? ಜೀವನದ ಪರಮಸತ್ಯವನ್ನು ಕಂಡುಕೊಳ್ಳಲು ಇನ್ನಿಲ್ಲದ ಕಷ್ಟಗಳನ್ನು ಎದುರಿಸಲು ತಯಾರಾದ? ಘಟನೆಯೇ ಪರಿಣಾಮ ಮಾಡುವ ಹಾಗಿದ್ದರೆ ನಮಗೂ ಮಾಡಬೇಕಿತ್ತಲ್ಲವೇ?’ ಪ್ರಶ್ನೆ ಸಹಜ. ಆದರೆ ಎಲ್ಲರಿಗೂ ಒಂದು ಪೂರ್ವಸ್ಥಿತಿ ಇರುತ್ತದೆ. ನಮಗೆ ಆ ಪೂರ್ವಸ್ಥಿತಿಯ ಪರಿಚಯವಿರುವುದಿಲ್ಲ. ಸ್ವಿಚ್ ಹಾಕಿದರೆ ಬಲ್ಬ್ ಉರಿಯುತ್ತದೆ ಎಂಬುದು ಸತ್ಯವಾದರೂ ವಿದ್ಯುತ್ತಿನ ಸಂಪರ್ಕ ಎರಡಕ್ಕೂ ಸರಿಯಾಗಿದ್ದಾಗ ಮಾತ್ರ ಇದು ಸಾಧ್ಯ ಎಂಬುದು ಅಲಿಖಿತ ನಿಯಮ. ಅಂಗಡಿಯಲ್ಲಿ ಮಾರಾಟಕ್ಕೆಂದು ಇಟ್ಟ ಸ್ವಿಚ್​ನ್ನು ಸುಮ್ಮನೇ ಒತ್ತಿದರೆ ಯಾವ ಬಲ್ಬೂ ಉರಿಯದು. ಹಾಗೆ ಸಿದ್ಧಾರ್ಥನಿಗೆ ಜನ್ಮ ಜನ್ಮಾಂತರಗಳ ಸಂಸ್ಕಾರದಿಂದ ಒಳಜೀವನಕ್ಕೆ ಬೇಕಾದ ಪೂರ್ವತಯಾರಿ ಸಿದ್ಧವಾಗಿತ್ತು. ಈ ಮೂರು ದೃಶ್ಯಗಳು ಕೇವಲ ಸ್ವಿಚ್ ಒತ್ತುವ ಕೆಲಸ ಮಾಡಿದವು. ಅಷ್ಟೇ. ಆದರೆ ನಮಗೆ ಜೀವನದ ಪರಮಸತ್ಯವನ್ನು ಅರಿಯುವ ನಿಟ್ಟಿನಲ್ಲಿ ಯಾವ ಪೂರ್ವಸಿದ್ಧತೆಗಳೂ ಇಲ್ಲ. ಹಾಗೆಂದೇ ನಮಗೆ ಈ ಘಟನೆಗಳು ಯಾವ ಗಂಭೀರವಾದ ಪರಿಣಾಮವನ್ನೂ ಮಾಡಿಲ್ಲ. ಯಾವುದೇ ವಿಷಯಗಳು ಸಂಸ್ಕಾರಿಗಳಿಗೆ ಮಾಡುವ ಪರಿಣಾಮವೇ ಬೇರೆ, ಸಾಮಾನ್ಯರಿಗೇ ಬೇರೆಯಾಗಿರುತ್ತದೆ.

ನಾವು ಮನುಷ್ಯ ಶರೀರವನ್ನು ಹೊತ್ತು ಓಡಾಡುತ್ತಿದ್ದರೂ ಈ ದೇಹದ ಸಾಮರ್ಥ್ಯ, ವಿಶೇಷತೆಗಳನ್ನು ಇಂದ್ರಿಯ ಜೀವನಕ್ಕಾಗಿ ಮಾತ್ರ ಬಳಸಿಕೊಂಡಿದ್ದೇವೆ. ಇಲ್ಲಿ ಇಂದ್ರಿಯಗಳನ್ನು ಮೀರಿದ ಆನಂದದ ಸೆಲೆಯನ್ನು ಅನುಭವಿಸುವ ವ್ಯವಸ್ಥೆಯುಂಟು. ಯೋಗದ ಅಂತಹ ಕೇಂದ್ರಗಳುಂಟು. ಅವುಗಳು ತೆರೆದಾಗ ನಮಗಾಗುವ ಅನುಭವ ಇಂದ್ರಿಯ ಸುಖಗಳಿಗಿಂತ ಕೋಟಿ ಪಾಲು ಹೆಚ್ಚಿನದು ಎಂದೆಲ್ಲ ಅಂತಹ ಪರಮಸುಖವನ್ನು ಅನುಭವಿಸಿದ ಜ್ಞಾನಿಗಳ ಮಾತು. ಅವರು ತಪಸ್ಸಿನಿಂದ ಈ ದೇಹಯಂತ್ರದ ಪೂರ್ಣ ಪ್ರಯೋಜನ ಪಡೆದುಕೊಂಡು ತುಂಬು ಜೀವನ ನಡೆಸಿದವರಾಗಿದ್ದರು. ಅಂತಹ ಪೂರ್ವಸಿದ್ಧತೆ ಇದ್ದಾಗ ಸೃಷ್ಟಿಯನ್ನೂ ಅಲ್ಲಿನ ವಿಷಯಗಳನ್ನೂ ನೋಡುವ ನೋಟವು ಸಮಗ್ರವಾದ ನೋಟವಾಗುತ್ತದೆ. ಅಂತಹ ಪೂರ್ವಸಿದ್ಧತೆಗಾಗಿ ಪ್ರಯತ್ನಿಸುವ ಬುದ್ಧಿಯನ್ನು ಭಗವಂತನು ನಮಗೆಲ್ಲ ಕರುಣಿಸಲಿ. ಸಿದ್ಧಾರ್ಥ ಬುದ್ಧನಾದಂತೆ ನಮ್ಮ ಮನಸ್ಸುಗಳೂ ಜೀವನದ ಆ ಅತ್ಯುನ್ನತ ಸ್ಥಾನಕ್ಕೆ ಏರುವಂತಾಗಲಿ.

| ಸುಬ್ರಹ್ಮಣ್ಯಸೋಮಯಾಜಿ

(ಲೇಖಕರು ಹವ್ಯಾಸಿ ಬರಹಗಾರರು)

Leave a Reply

Your email address will not be published. Required fields are marked *