Wednesday, 12th December 2018  

Vijayavani

ಮಧ್ಯಪ್ರದೇಶದಲ್ಲಿ ಸರ್ಕಾರ ರಚನೆ ಕಸರತ್ತು -ಕೈಗೆ ಬೆಂಬಲ ಘೋಷಿಸಿದ ಮಾಯಾವತಿ -ಶಾಸಕಾಂಗ ಪಕ್ಷದ ಸಭೆ ಕರೆದ ಕಾಂಗ್ರೆಸ್        ಪಾನ್ ಬ್ರೋಕರ್ ಡೀಲ್ ಪ್ರಕರಣದ ತನಿಖೆ ಚುರುಕು -ಸಹಕಾರ ಇಲಾಖೆಯಿಂದ ನೋಟಿಸ್ -ಇದು ದಿಗ್ವಿಜಯ ನ್ಯೂಸ್ ವರದಿ ಫಲಶ್ರುತಿ        ಋಣ ಸಂದಾಯಕ್ಕೆ ಮುಂದಾದ ರಾಮಲಿಂಗಾರೆಡ್ಡಿ -ಬಿಜೆಪಿ ಕಾರ್ಪೋರೇಟರ್ ಗೆ ಸ್ಥಾಯಿ ಸಮಿತಿ ಅಧ್ಯಕ್ಷ ಪಟ್ಟ -ಪುತ್ರಿ ಗೆಲುವಿಗೆ ಸಹಕರಿಸಿದ್ದಕ್ಕೆ ಗಿಫ್ಟ್        ಸರ್ಕಾರದ ವಿರುದ್ಧ ಇಂದು ಬರಾಸ್ತ್ರ -ಸಿಎಂಗೆ ಬಿಸಿ ಮುಟ್ಟಿಸಲು ಬಿಎಸ್‌ವೈ ರಣತಂತ್ರ -ಅತ್ತ ಭದ್ರತೆಗೆ ಬಂದ ಎಸ್ಪಿಗೆ ಕೈಕೊಟ್ಟ ಕಾರು        ಕಿಡ್ನಾಪರ್ಸ್ ಹಿಡಿಯಲು ಪ್ರೇಮಿಗಳ ವೇಷ -ಆಂಧ್ರಕ್ಕೆ ಆಗಿ ಹೋದ ಪೊಲೀಸರು -ಶಿವಾಜಿನಗರ ಠಾಣೆ ಪೊಲೀಸರಿಂದ ಕಿರಾತಕರಿಗೆ ಕೋಳ        ಮುಂಬೈನಲ್ಲಿಂದು ಅಂಬಾನಿ ಮಗಳ ಅದ್ಧೂರಿ ವಿವಾಹ -ಹಿಲರಿ ಕ್ಲಿಂಟನ್ ಸೇರಿ ಗಣ್ಯಾತಿಗಣ್ಯರು ಭಾಗಿ - ಸ್ಯಾಂಡಲ್‌ವುಡ್‌ನಲ್ಲಿ ದಿಗಂತ್, ಐಂದ್ರಿತಾ ಮದುವೆ ಸಂಭ್ರಮ       
Breaking News

ನಾವು ಕಂಡ ಕರಾವಳಿಯ ಒಂದು ರಮ್ಯಚಿತ್ರ…

Sunday, 15.10.2017, 3:02 AM       No Comments

| ಡಾ. ನರಹಳ್ಳಿ ಬಾ ಲಸುಬ್ರಹ್ಮಣ್ಯ

ಕರಾವಳಿಯಲ್ಲಿರುವುದು ಅಪ್ಪಟ ಪ್ರಜಾರಾಜ್ಯ. ಆದರೆ ಪ್ರಭುತ್ವ ಈಗ ಇಲ್ಲಿ ತನ್ನ ‘ಆಟ‘ ಆರಂಭಿಸಿದಂತೆ ತೋರುತ್ತಿದೆ. ಇಲ್ಲಿಯ ಶುದ್ಧ ಮನಸ್ಸುಗಳನ್ನು ತನ್ನ ಸ್ವಾರ್ಥಕ್ಕಾಗಿ ಕಲುಷಿತಗೊಳಿಸಲು ಪ್ರಯತ್ನಿಸುತ್ತಿದೆ. ಎಲ್ಲ ಆಕ್ರಮಣಗಳ ನಡುವೆಯೂ ಯಕ್ಷಗಾನ ತನ್ನ ಸ್ವಾಯತ್ತತೆಯನ್ನು ಕಾಪಾಡಿಕೊಂಡಿರುವಂತೆ ಇಲ್ಲಿಯ ಮನಸ್ಸುಗಳು ಯಾವ ಒತ್ತಡಗಳಿಗೂ ಮಣಿಯದೆ ಸ್ವಾಯತ್ತ ಸಹಬಾಳ್ವೆಯ ಪರಿಕಲ್ಪನೆಯನ್ನು ಕಾಪಾಡಿಕೊಳ್ಳಬೇಕು.

ಇತ್ತೀಚೆಗೆ ನಮ್ಮ ಕರಾವಳಿ ಪ್ರಾಂತ್ಯ ಬೇರೆ ಬೇರೆ ಕಾರಣಗಳಿಗಾಗಿ ಸುದ್ದಿಯಲ್ಲಿದೆ. ಅದರ ಬಗ್ಗೆ ವ್ಯಾಪಕ ಪ್ರಚಾರವಿರುವುದರಿಂದ, ನೀವು ಅದನ್ನು ಬಲ್ಲಿರಾದ್ದರಿಂದ ನಾನು ಅದನ್ನು ಇಲ್ಲಿ ಪ್ರಸ್ತಾಪ ಮಾಡಬಯಸುವುದಿಲ್ಲ. ಆದರೆ ಇತ್ತೀಚೆಗೆ ನಾವು ಕೆಲವು ಗೆಳೆಯರು ಕರಾವಳಿಯಲ್ಲಿ ಸುತ್ತಾಡಿದೆವು. ಸಮೂಹ ಮಾಧ್ಯಮಗಳಲ್ಲಿ ಓದಿ, ಕೇಳಿದ್ದಕ್ಕಿಂತ ನಮ್ಮ ಅನುಭವ ಭಿನ್ನವಾಗಿತ್ತು. ಈ ನಮ್ಮ ಪ್ರವಾಸ ಅನೇಕ ಕಾರಣಗಳಿಗಾಗಿ ನನಗೆ ಮುಖ್ಯವೆನ್ನಿಸಿತು. ಅದನ್ನು ನಿಮ್ಮೊಡನೆ ಹಂಚಿಕೊಳ್ಳುವುದು ನನ್ನ ಅಪೇಕ್ಷೆ.

ಸಜ್ಜನರ ಸಂಗದಲ್ಲಿ..: ಒಂದೆರಡು ತಿಂಗಳ ಹಿಂದೆ ಹಿರಿಯರಾದ ಏರ್ಯ ಲಕ್ಷ್ಮೀನಾರಾಯಣ ಆಳ್ವರು ದೂರವಾಣಿ ಕರೆಮಾಡಿ ಬಂಟ್ವಾಳದಲ್ಲಿ ಗೋಪಾಲಕೃಷ್ಣ ಅಡಿಗರ ಜನ್ಮಶತಮಾನೋತ್ಸವ ಆಚರಿಸುತ್ತಿದ್ದೇವೆ, ನೀವು ಬಂದು ಉದ್ಘಾಟಿಸಬೇಕೆಂದು ಅಪೇಕ್ಷಿಸಿದರು. ಆಳ್ವರಿಗೆ ಈಗ 93 ವರ್ಷ. ಇದು ಅವರು ಆಚರಿಸುತ್ತಿರುವ 15ನೆಯ ಜನ್ಮಶತಮಾನೋತ್ಸವ ಸಮಾರಂಭ ಎಂದು ನನಗೆ ನಂತರ ತಿಳಿಯಿತು. ‘ಸತ್ತವರ ಸಂಗದಲಿ ನನಗೆ ಹೊತ್ತು ಹಿತವಾಗಿ ಹೋಗುತ್ತದೆ‘ ಎಂದು ಅವರು ಹೇಳುತ್ತಾರೆ. ಅದು ನಮ್ಮ ವರ್ತಮಾನವನ್ನು ಏರ್ಯರು ವ್ಯಾಖ್ಯಾನಿಸುವ ರೀತಿ. ಹಿರಿಯ ತಲೆಮಾರಿನವರ ಬಗ್ಗೆ ಅವರಿಗೆ ಅಪಾರ ಗೌರವ. ಆದರೆ ಕಿರಿಯರ ಬಗೆಗಿನ ಅವರ ಪ್ರೀತಿಯ ಕಾಳಜಿಯನ್ನು ನಾನು ಬಲ್ಲೆ. ಕರಾವಳಿಯಲ್ಲಿ ಕನ್ನಡ ಸಂಸ್ಕೃತಿಯನ್ನು ಜೀವಂತವಾಗಿರಿಸಲು ನಿರಂತರ ಪ್ರಯತ್ನಿಸುತ್ತಿರುವ ಹಿರಿಯರಲ್ಲಿ ಏರ್ಯರು ಮೊದಲ ಸಾಲಿನವರು. ಸಾಹಿತ್ಯಕ್ಕೆ ಸಮಾಜದ ಅನಿಷ್ಟ ರೋಗಗಳನ್ನು ಪರಿಹರಿಸುವ ಔಷಧೀಯ ಗುಣವಿದೆಯೆಂದು ಆಳ್ವರು ನಂಬಿದ್ದಾರೆ. ಆದ್ದರಿಂದಲೇ ಅವಕಾಶ ಸಿಕ್ಕಿದಾಗಲೆಲ್ಲ ಉತ್ತಮ ಸಾಹಿತ್ಯವನ್ನು ಹೊಸ ತಲೆಮಾರಿಗೆ ತಲುಪಿಸುವುದರಲ್ಲಿ ಅವರಿಗೆ ಆಸಕ್ತಿ. ಈ ಕಾರ್ಯಕ್ರಮವೂ ಅಂಥದೇ. ಹೀಗಾಗಿ ಅವರ ಆಹ್ವಾನವನ್ನು ನಿರಾಕರಿಸುವುದು ನನಗೆ ಕಷ್ಟವಾಯಿತು. ಅವರು ಪ್ರಸ್ತಾಪಿಸಿದ ತಕ್ಷಣ ಒಪ್ಪಿಗೆ ನೀಡಿದೆ. ನನ್ನ ಜತೆಗೆ ಬೆಂಗಳೂರಿನಿಂದ ಎಚ್.ಎಸ್. ರಾಘವೇಂದ್ರರಾವ್ ಹಾಗೂ ಎಸ್.ಆರ್. ವಿಜಯಶಂಕರ್ ಬರುತ್ತಾರೆಂದು ತಿಳಿದಾಗ ಸಹಜವಾಗಿಯೇ ಮತ್ತಷ್ಟು ಸಂತೋಷವಾಯಿತು. ಬೆಂಗಳೂರಿನಲ್ಲಂತೂ ನಾವು ಭೇಟಿಯಾಗುವುದು ಕಷ್ಟ, ಹೀಗೆ ಒಟ್ಟಿಗೇ ಬಂಟ್ವಾಳಕ್ಕೆ ಹೋಗಿ ಬರುವಾಗಲಾದರೂ ಗೆಳೆಯರು ಒಟ್ಟಿಗೇ ಕಾಲ ಕಳೆಯಬಹುದೆಂದು ಖುಷಿಯಾಯಿತು. ಸಂವೇದನಾಶೀಲ ಸಜ್ಜನರ ಸಂಗದಲಿ ಹೊತ್ತು ಕಳೆಯುವ ಉಲ್ಲಾಸವೇ ಬೇರೆ!

ಒಂದೆರಡು ದಿನಗಳ ನಂತರ, ಹಿರಿಯರಾದ ಎಂ. ರಾಮಚಂದ್ರ ಕಾರ್ಕಳದಿಂದ ಕರೆಮಾಡಿ ಕಾರ್ಕಳದ ಕನ್ನಡ ಸಂಘದ ಮೂಲಕ ಮಾಸ್ತಿಯವರ 125ನೇ ಜನ್ಮಶತಮಾನೋತ್ಸವ ಆಚರಿಸಬೇಕೆಂದಿದ್ದೇವೆ. ನೀವು, ರಾಘವೇಂದ್ರರಾಯರು ಮತ್ತು ವಿಜಯಶಂಕರ ಬಂಟ್ವಾಳಕ್ಕೆ ಬರುತ್ತಿರುವಿರೆಂದು ತಿಳಿಯಿತು. ಮಾರನೆಯ ದಿನ ನಮ್ಮಲ್ಲಿಗೆ ಬಂದು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕೆಂದು ಆಹ್ವಾನಿಸಿದರು. ನಾನು ಗೌರವಿಸುವ ಹಿರಿಯರಲ್ಲಿ ರಾಮಚಂದ್ರ ಅವರೂ ಒಬ್ಬರು. ರಾಜರತ್ನಂ ಪರಿವಾರಕ್ಕೆ ಸೇರಿದ ಅವರು ಕಳೆದ ಅರ್ಧ ಶತಮಾನಕ್ಕೂ ಹೆಚ್ಚು ಕಾಲದಿಂದ ನಿರಂತರವಾಗಿ ಆ ಭಾಗದಲ್ಲಿ ಸಾಹಿತ್ಯ ಚಟುವಟಿಕೆಗಳನ್ನು ಅರ್ಥಪೂರ್ಣವಾಗಿ ನಡೆಸಿಕೊಂಡು ಬರುತ್ತಿರುವ ನಿಷ್ಕಾಮಕರ್ವಿು ವಿದ್ವಾಂಸರು. ಆರೋಗ್ಯ ಅಷ್ಟು ಸರಿ ಇಲ್ಲದಿದ್ದರೂ ಅವರ ಉತ್ಸಾಹ, ಆಸಕ್ತಿ ಕಿಂಚಿತ್ತೂ ಕುಂದಿಲ್ಲ. ಅವರಿಗೆ ನಡೆದ ಅಭಿನಂದನಾ ಸಮಾರಂಭದಲ್ಲಿ ನಾನು ಪಾಲ್ಗೊಳ್ಳಬೇಕಿತ್ತು. ಅನಾರೋಗ್ಯದ ಕಾರಣದಿಂದ ಹೋಗಲಾಗಿರಲಿಲ್ಲ. ಮನಸ್ಸಿನಲ್ಲಿ ಆ ಪಾಪಪ್ರಜ್ಞೆಯಿತ್ತು. ಜತೆಗೆ ಮಾಸ್ತಿ ನನ್ನ ಮೊದಲ ಪುಸ್ತಕಕ್ಕೆ ಬೆನ್ನುಡಿ ಬರೆದದ್ದು ನೆನಪಾಗಿ ಅವರನ್ನು ಮತ್ತೊಮ್ಮೆ ಓದುವ ಅವಕಾಶವನ್ನು ತಪ್ಪಿಸಿಕೊಳ್ಳಬಾರದೆನ್ನಿಸಿತು. ಹೀಗಾಗಿ ಅವರ ಆಹ್ವಾನವನ್ನೂ ಒಪ್ಪಿಕೊಂಡೆ.

ಪಯಣವೇ ಉಲ್ಲಾಸದ ಅನುಭವ: ಒಂದೆರಡು ದಿನಗಳಲ್ಲಿ ಸುಳ್ಯದಿಂದ ಡಾಕ್ಟರ್ ವೀಣಾ ಕರೆಮಾಡಿದರು. ಅವರ ಪರಿಚಯ ನನಗಿರಲಿಲ್ಲ. ಆ ಮಧ್ಯಾಹ್ನ ವಿಜಯಶಂಕರ್ ಕರೆಮಾಡಿ ಅವರ ಬಗ್ಗೆ ತಿಳಿಸಿದ್ದರು. ಅವರ ಸಂಘದಿಂದ ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ಅಡಿಗರನ್ನು ಪರಿಚಯಿಸುವ ಕಾರ್ಯಕ್ರಮ ಮಾಡುವುದು ಅವರ ಹಂಬಲ. ಅವರದು ಕಲಾವಿದರ ಕುಟುಂಬ. ತಾಯಿ ಮಕ್ಕಳೆಲ್ಲರೂ ಯಕ್ಷಗಾನದ ವೇಷ ಹಾಕುತ್ತಾರೆ. ವೃತ್ತಿಯಿಂದ ಡಾಕ್ಟರಾದರೂ ಸಾಹಿತ್ಯ ಸಂಸ್ಕೃತಿ ಬಗ್ಗೆ ಅಪಾರ ಆಸಕ್ತಿ. ಜೀವನೋತ್ಸಾಹಿ. ‘ನೀವು ಮೂವರೂ ಒಟ್ಟಿಗೇ ಸಿಗುವುದು ಅಪರೂಪ. ಹೇಗೂ ಇತ್ತ ಬರುತ್ತಿದ್ದೀರಿ. ನಮ್ಮಲ್ಲಿಗೂ ಬನ್ನಿ‘ ಎಂಬುದು ಅವರ ಆಗ್ರಹ. ವಿಜಯಶಂಕರರ ಒತ್ತಾಯ ಬೇರೆ. ಅವರ ಊರಮನೆ ಅಲ್ಲಿಗೆ ಹತ್ತಿರ. ನಮ್ಮನ್ನು ತಮ್ಮ ಮನೆಗೂ ಕರೆದುಕೊಂಡು ಹೋಗಬೇಕೆಂಬುದು ವಿಜಯಶಂಕರರ ಅಪೇಕ್ಷೆ. ಸುಳ್ಯದ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡರೆ ಹತ್ತಿರದ ಸಂಪಾಜೆಗೂ ಹೋಗಿಬರಬಹುದಲ್ಲ! ಅಲ್ಲಿಯೇ ಸಮೀಪದಲ್ಲಿ ಕಾಂತಬೈಲು. ಅದು ರಜನಿಯವರ ಗೆಳತಿ ಸಹನಾ ಮನೆ. ಬಹಳ ದಿನಗಳಿಂದ ಅವರೂ ಕರೆಯುತ್ತಿದ್ದರು. ಅಲ್ಲದೆ ಸುತ್ತ ಮಲೆಸಾಲಿನ ದಟ್ಟ ಕಾಡಿನ ನಡುವೆ ಜುಳುಜುಳು ಹರಿಯುವ ಹೊಳೆಯ ಬಳಿ ಅವರ ಮನೆ. ಅವರ ಮನೆಗೆ ಹೋಗುವ ದಾರಿಯ ಪಯಣವೇ ಒಂದು ಉಲ್ಲಾಸದ ಅನುಭವ. ಅದು ರಜನಿಯವರಿಗೆ ವಿಶೇಷ ಆಕರ್ಷಣೆ. ಮನೆಯವರ ಮಾತು ಕೇಳದಿರಲಾದೀತೆ? ಸರಿ, ಆ ಆಹ್ವಾನಕ್ಕೂ ಸಮ್ಮತಿಸಿದೆ.

ಹೀಗೆ ನಮ್ಮ ಉಪನ್ಯಾಸದ ಅಭಿಯಾನ ಈ ತಿಂಗಳ ಮೊದಲ ವಾರ ಆರಂಭವಾಯಿತು. ನಮ್ಮ ಜತೆಗೆ ಮನೆಯವರೂ- ರಜನಿ, ನಿರುಪಮಾ, ಮಾಲತಿ- ಸೇರಿಕೊಂಡರು. ಆರು ಜನರ ತಂಡ ಒಂದು ವಾಹನದಲ್ಲಿ ಕರಾವಳಿಯತ್ತ ಹೊರಟೆವು.

ನವೋದಯದ ನಮ್ಮ ಅನೇಕ ಹಿರಿಯರು ಹೀಗೆ ಒಟ್ಟುಗೂಡಿ ಸಾಹಿತ್ಯಸಂಸ್ಕೃತಿಯ ಪ್ರಚಾರ ಕಾರ್ಯಕ್ರಮಗಳಿಗೆ ಹೋಗುತ್ತಿದ್ದರು. ಅದರ ಫಲವಾಗಿ ಹೊಸ ತಲೆಮಾರಿನ ಅನೇಕರು ಸಾಹಿತ್ಯದಲ್ಲಿ ಆಸಕ್ತಿ ಬೆಳೆಸಿಕೊಳ್ಳುತ್ತಿದ್ದರು. ಒಂದು ವಾತಾವರಣ ರೂಪುಗೊಳ್ಳುತ್ತಿತ್ತು. ಸಣ್ಣಪುಟ್ಟ ಊರುಗಳಲ್ಲೂ ಸಾಹಿತ್ಯದ ಗಾಳಿಯಿತ್ತು. ಪ್ರಗತಿಶೀಲ ಚಳವಳಿಯ ಸಂದರ್ಭದಲ್ಲೂ ಇದು ರೂಢಿಯಲ್ಲಿತ್ತು. ಅನಕೃ ಅಂಥವರು ಒಂದೇ ದಿನ ನಾಲ್ಕಾರು ಕಡೆ ಭಿನ್ನ ವಿಷಯಗಳನ್ನು ಕುರಿತು ಮಾತನಾಡಿದ್ದನ್ನು ನಾನು ಬಲ್ಲೆ. ವಾಗ್ಮಿತೆಯೂ ಆಗ ಒಂದು ಕಲೆಯಾಗಿತ್ತು. ನಮ್ಮ ಕಾಲದಲ್ಲಿ ಅನಂತಮೂರ್ತಿ ಆ ಬಗೆಯ ಮಾತುಗಾರರು. ಇಂತಹ ಹಿರಿಯರ ಮಾತು ಎಳೆಯರನ್ನು ಓದಿನತ್ತ ಆಕರ್ಷಿಸುತ್ತಿತ್ತು. ಈಗ ಆ ರೀತಿಯ ವಾತಾವರಣ ವಿರಳವಾಗುತ್ತಿದೆ. ಮಾತೆಂದರೆ ಬೋರು ಎಂಬಂತಾಗಿರುವುದು ಕಾಲದ ಗುಣವೋ, ವಾಗ್ಮಿತೆಯ ಅಭಾವವೋ? ಸಾಹಿತ್ಯದ ಸಭೆ ಏರ್ಪಡಿಸುವುದಕ್ಕಿಂತ ಆ ಸಭೆಗಳಿಗೆ ಜನ ‘ಸೇರಿಸುವುದು‘ ಸಮಸ್ಯೆಯಾಗಿದೆ. ಆದರೆ ನಾವು ಹೋಗಿದ್ದ ಈ ಮೂರೂ ಊರುಗಳಲ್ಲಿ ಜನರು ಆಸಕ್ತಿಯಿಂದ ಸೇರಿದ್ದರು. ವಿಶೇಷವೆಂದರೆ ಎಲ್ಲ ಕಡೆ ವಿದ್ಯಾರ್ಥಿಗಳ ಸಂಖ್ಯೆ ಜಾಸ್ತಿಯಿತ್ತು. ಸುಳ್ಯದಲ್ಲಂತೂ ಸುಮಾರು 400ಕ್ಕಿಂತಲೂ ಅಧಿಕ ವಿದ್ಯಾರ್ಥಿನಿಯರು ಸಭೆ ಮುಗಿಯುವವರೆಗೂ ಆಸಕ್ತಿಯಿಂದ ಕುಳಿತು ಕೇಳಿದರು. ಸ್ಪಂದಿಸಿದರು. ರಾಘವೇಂದ್ರರಾವ್ ಹೇಳಿದಂತೆ ಇದು ನಮ್ಮ ಸಮಾಜದಲ್ಲಾಗಿರುವ ಪಲ್ಲಟದ ಸೂಚನೆಯೂ ಹೌದು. ಬಂಟ್ವಾಳ, ಕಾರ್ಕಳದಲ್ಲೂ ಹೊಸ ತಲೆಮಾರಿನ ಆಸಕ್ತರು ಅಧಿಕ ಸಂಖ್ಯೆಯಲ್ಲಿದ್ದರು. ಅಲ್ಲಿನ ಮಾತುಗಳೆಲ್ಲ ರಂಜಿಸುವ ನೆಲೆಯಲ್ಲಿರಲಿಲ್ಲ. ಮಾಸ್ತಿ, ಅಡಿಗರ ವಿಚಾರಗಳ ಜತೆ ಅಲ್ಲಿ ಸಂವಾದವಿತ್ತು. ನಮ್ಮ ಕಾಲದ ತಲ್ಲಣಗಳ ಬಗ್ಗೆ ಚರ್ಚೆಯಿತ್ತು. ಪರಂಪರೆಯನ್ನು ವರ್ತಮಾನದಲ್ಲಿಟ್ಟು ನೋಡುವ ವಿನ್ಯಾಸವಿತ್ತು. ಸಾಹಿತ್ಯದ ಪ್ರಸ್ತುತತೆಯ ಬಗ್ಗೆ ಚಿಂತನೆಯಿತ್ತು. ಗಂಭೀರ ಕವಿತೆಗಳ ವಿಶ್ಲೇಷಣೆ ನಡೆಯಿತು. ಭ್ರಷ್ಟಗೊಳ್ಳುತ್ತಿರುವ ನಮ್ಮ ರಾಜಕೀಯ ಧಾರ್ವಿುಕ ಸ್ವರೂಪದ ಬಗ್ಗೆ ಆತಂಕವಿತ್ತು. ಈ ಎಲ್ಲವನ್ನೂ ಹಿರಿಯರ ಜತೆ ಕುಳಿತು ಹೊಸ ತಲೆಮಾರು ಆಸಕ್ತಿಯಿಂದ ಆಲಿಸಿತು. ವರ್ತಮಾನದ ದುಗುಡದ ನಡುವೆಯೇ ಹೊಸ ಬೆಳಕಿನ ಗೆರೆಗಳು ಅಲ್ಲಿ ಹೊಳೆಯುತ್ತಿದ್ದವು. ಹೊಸ ತಲೆಮಾರು ನಾವು ಕೊಡುವುದನ್ನು ಸ್ವೀಕರಿಸಲು, ರ್ಚಚಿಸಲು ಸಿದ್ಧವಿದೆ. ಆದರೆ ಅವರಿಗೆ ನಾವು ಏನನ್ನು ಕೊಡುತ್ತಿದ್ದೇವೆ? ಹಿರಿಯರೆನ್ನಿಸಿಕೊಂಡವರ ಆತ್ಮಾವಲೋಕನಕ್ಕೂ ಈ ಸಮಾರಂಭಗಳು ಆಹ್ವಾನ ನೀಡಿದವು. ಇದು ನಾವು ಕಂಡ ಕರಾವಳಿಯ ಒಂದು ಚಿತ್ರ.

ಸಹಬಾಳ್ವೆಯ ಅತ್ಯುತ್ತಮ ಮಾದರಿ: ಸಾಹಿತ್ಯ ಸಂಸ್ಕೃತಿಯ ಬಗೆಗಿನ ಆಸಕ್ತಿ, ಚರ್ಚೆ ಹೆಚ್ಚು ಜೀವಂತವಾಗಿರುವುದು ಇಂತಹ ಸಣ್ಣ ಸಣ್ಣ ಊರುಗಳಲ್ಲಿಯೇ ಹೊರತು ದೊಡ್ಡ ದೊಡ್ಡ ನಗರಗಳಲ್ಲಿ ಅಲ್ಲ ಎಂಬ ಸತ್ಯವನ್ನೂ ಈ ಸಮಾರಂಭಗಳು ನಮಗೆ ಮನಗಾಣಿಸಿದವು. ತಮ್ಮ ಉಪನ್ಯಾಸದ ವೇಳೆಗೆ ಬಂದು ಮಾತನಾಡಿ, ತಮ್ಮ ಮಾತು ಮುಗಿದ ತಕ್ಷಣವೇ ದುರ್ದಾನ ತೆಗೆದುಕೊಂಡವರಂತೆ ಹೊರಟುಹೋಗುವ ವಿದ್ವಾಂಸರು ಅಲ್ಲಿರಲಿಲ್ಲ. ಬದಲಿಗೆ ಬೆಳಗ್ಗೆ ಉದ್ಘಾಟನೆಯ ವೇಳೆಗೆ ಬಂದವರು ಇಡೀ ದಿನ ಎಲ್ಲರ ಮಾತುಗಳನ್ನು ಕೇಳಿಸಿಕೊಂಡು ಸಮಾರೋಪದವರೆಗೂ ಇದ್ದರು. ಅರ್ಥವಿಷ್ಟೆ- ಬೇರೆಯವರ ಮಾತುಗಳನ್ನು ಕೇಳಿಸಿಕೊಳ್ಳುವ ವ್ಯವಧಾನ, ಸಂವಾದ ಸಂಸ್ಕೃತಿಯನ್ನು ಇಲ್ಲಿ ಕಾಣಬಹುದಿತ್ತು. ಜತೆಗೆ ಜಾತಿ, ಧರ್ಮ, ಭಾಷೆ, ಪಕ್ಷ- ಯಾವುದೇ ಹಂಗಿಲ್ಲದೆ ಜನರು ಇಲ್ಲಿ ಬೆರೆತಿದ್ದರು. ಸಹಬಾಳ್ವೆಯ ಅತ್ಯುತ್ತಮ ಮಾದರಿಯೊಂದು ಇಲ್ಲಿತ್ತು. ನಾವು ಕೇಳುತ್ತಿರುವ ಕರಾವಳಿಯ ಚಿತ್ರಕ್ಕೂ, ಇಲ್ಲಿ ನಾವು ಕಂಡ ಚಿತ್ರಕ್ಕೂ ಅರ್ಥಾತ್ ಸಂಬಂಧವಿರಲಿಲ್ಲ. ಈ ಕಾರ್ಯಕ್ರಮಗಳನ್ನು ಆಯೋಜಿಸಿದ ಮಾನ್ಯರೆಲ್ಲರಿಗೂ ಯಾವುದೇ ಒಳಉದ್ದೇಶಗಳಿರದೆ ಹೊಸ ತಲೆಮಾರಿಗೆ ಮಾದರಿಗಳನ್ನು ಒದಗಿಸಿಕೊಡುವ, ಶ್ರೇಷ್ಠ ಚಿಂತನೆಗಳನ್ನು ಪರಿಚಯಿಸುವ ಆಸೆಯಿತ್ತು. ಇದು ನಿಜವಾಗಿಯೂ ಸಮಾಜವನ್ನು ಕಟ್ಟುವ ಪರಿ. ಹೀಗೆ ಪ್ರಚಾರದ ಹಂಗಿಲ್ಲದ ಆರೋಗ್ಯಕರ ಸಂಸ್ಕೃತಿಯೊಂದು ಕರಾವಳಿಯಲ್ಲಿ ಜೀವಂತವಾಗಿದೆ. ವಿವೇಕ ರೈ, ಚಿನ್ನಪ್ಪಗೌಡ, ಲಕ್ಷ್ಮೀಶ ತೋಳ್ಪಾಡಿ, ವರದರಾಜ ಚಂದ್ರಗಿರಿ, ನರಸಿಂಹಮೂರ್ತಿ, ತಾಳ್ತಜೆ ವಸಂತಕುಮಾರ, ಜಯಪ್ರಕಾಶ ಮಾವಿನಕುಳಿ, ಹೆರಂಜೆ ಕೃಷ್ಣಭಟ್ಟ, ಅಜಕ್ಕಳ ಗಿರೀಶ ಭಟ್, ದೇವು ಹನೇಹಳ್ಳಿ, ಚಂದ್ರಶೇಖರ ಕೆದ್ಲಾಯ, ಪ್ರಭಾಕರ ಜೋಷಿ, ಎಲ್.ಸಿ. ಸುಮಿತ್ರ, ಸುಬ್ರಾಯ ಚೊಕ್ಕಾಡಿ, ಅರ್ತಿಕಜೆ, ಉಬರಡ್ಕ, ಶಿಶಿಲ, ಕಿರಣ ಸುಳ್ಯ, ರಾಧೇಶ ತೋಳ್ಪಾಡಿ, ಸಹನಾ ಕಾಂತಬೈಲು, ಲಕ್ಷ್ಮೀಶ ಚೊಕ್ಕಾಡಿ, ಕಲ್ಕುರ, ರಾಜಶೇಖರ ಹಳೆಮನಿ, ಸಂಪತ್​ರಾಜ್, ಸುಲತಾ, ನಮಿರಾಜ್, ಮಹಮದ್ ಶರೀಫ್, ಜೀವನರಾಮ್ ಸುಳ್ಯ, ಗೋವಿಂದ ಹೆಗಡೆ, ಬಾಲಸುಬ್ರಹ್ಮಣ್ಯ ಕಂಜರ್ಪಣೆ- ಇಂತಹ ಅನೇಕರ ಪಾಲ್ಗೊಳ್ಳುವಿಕೆ, ಭೇಟಿ, ಮಾತುಕತೆ ಮನುಷ್ಯ ಸಂಬಂಧಗಳ ಮಹತ್ವವನ್ನು ಮನಗಾಣಿಸಿತು. ಬೆಚ್ಚನೆಯ ಪ್ರೀತಿಯ ಅನುಭವವನ್ನು ನಮ್ಮದಾಗಿಸಿತು. ಇದೆಲ್ಲಾ ಸುದ್ದಿಯಾಗುವುದಿಲ್ಲ. ಪಿಸುಮಾತಿನ ಸವಿಗೆ ಅಬ್ಬರವಿರುವುದಿಲ್ಲ.

ನಾವು ಕರಾವಳಿಗೆ ಹೋದದ್ದು ದಸರಾ ಸಂದರ್ಭ. ಎಲ್ಲಿ ನೋಡಿದರೂ ಉತ್ಸವದ ವಾತಾವರಣ. ಯಕ್ಷಗಾನ, ತಾಳಮದ್ದಲೆಯ ಸಂಭ್ರಮ. ಜಗತ್ತಿನಲ್ಲಿ ಜನಸಾಮಾನ್ಯರೇ ಪೋಷಿಸಿಕೊಂಡು ಬಂದಿರುವ ಏಕೈಕ ಕಲೆಯೆಂದರೆ ಅದು ನಮ್ಮ ಕರಾವಳಿಯ ಯಕ್ಷಗಾನ. ನಮ್ಮ ಸಂಸ್ಕೃತಿ, ಕಲೆ ಇಂದು ಸರ್ಕಾರದ ಕೃಪಾಪೋಷಣೆಗೆ ಕಾದು ಕುಳಿತಂತೆ ಕಾಣಿಸುತ್ತಿದೆ. ಪ್ರಭುತ್ವಕ್ಕೆ ಸೃಜನಶೀಲತೆ ಮಣಿಯುತ್ತಿರುವಂತೆ ಭಾಸವಾಗುತ್ತಿದೆ. ನಮ್ಮ ಸಂವೇದನಾಶೀಲ ಮನಸ್ಸುಗಳು ವಿಧಾನಸೌಧದ ಸುತ್ತಮುತ್ತ ಸುಳಿದಾಡುತ್ತಾ ಆಸೆಗಣ್ಣುಗಳಿಂದ ನೋಡುತ್ತಿವೆ. ಆದರೆ ಕರಾವಳಿಯ ನಮ್ಮ ಯಕ್ಷಗಾನಕ್ಕೆ ಪ್ರಭುತ್ವದ ಹಂಗಿಲ್ಲ. ಪ್ರಜೆಗಳೇ ಇದರ ಪೋಷಕರು. ಇದನ್ನು ಹೀಗೂ ಹೇಳಬಹುದು- ಕರಾವಳಿಯಲ್ಲಿರುವುದು ಅಪ್ಪಟ ಪ್ರಜಾರಾಜ್ಯ. ಆದರೆ ಪ್ರಭುತ್ವ ಈಗ ಇಲ್ಲಿ ತನ್ನ ‘ಆಟ‘ ಆರಂಭಿಸಿದಂತೆ ತೋರುತ್ತಿದೆ. ಇಲ್ಲಿಯ ಶುದ್ಧ ಮನಸ್ಸುಗಳನ್ನು ತನ್ನ ಸ್ವಾರ್ಥಕ್ಕಾಗಿ ಕಲುಷಿತಗೊಳಿಸಲು ಪ್ರಯತ್ನಿಸುತ್ತಿದೆ. ನಮ್ಮ ಕರಾವಳಿಯ ಆರೋಗ್ಯಕರ ಮನಸ್ಸುಗಳು ಪ್ರಭುತ್ವದ ಈ ಹುನ್ನಾರವನ್ನು ಅರ್ಥಮಾಡಿಕೊಳ್ಳಬೇಕು. ಎಲ್ಲ ಆಕ್ರಮಣಗಳ ನಡುವೆಯೂ ಯಕ್ಷಗಾನ ತನ್ನ ಸ್ವಾಯತ್ತತೆಯನ್ನು ಕಾಪಾಡಿಕೊಂಡಿರುವಂತೆ ಇಲ್ಲಿಯ ಮನಸ್ಸುಗಳು ಯಾವ ಒತ್ತಡಗಳಿಗೂ ಮಣಿಯದೆ ತಮ್ಮ ಸ್ವಾಯತ್ತ ಸಹಬಾಳ್ವೆಯ ಪರಿಕಲ್ಪನೆಯನ್ನು ಕಾಪಾಡಿಕೊಳ್ಳಬೇಕು. ಹಾಗೆ ನೋಡಿದರೆ ಇಲ್ಲಿರುವ ಧರ್ಮಸಮನ್ವಯ, ಭಾಷಾಸೌಹಾರ್ದತೆ, ಪರಂಪರೆಯೊಡನೆ ಆಧುನಿಕತೆಯನ್ನು ಅಳವಡಿಸಿಕೊಳ್ಳುವ ಪ್ರಜ್ಞೆ, ದುಡಿಮೆಯ ಬಗೆಗಿನ ಗೌರವ, ವ್ಯಾವಹಾರಿಕ ಜಾಣ್ಮೆ- ಒಂದು ಮಾದರಿ ಎಂಬಂತಿದೆ. ಇಂತಹ ಶ್ರೇಷ್ಠ ಸಂಸ್ಕೃತಿಯೊಂದು ಯಾರದೋ ಹುನ್ನಾರಕ್ಕೆ ಬಲಿಯಾಗಬಾರದು. ಇಲ್ಲಿ ಮನೆಮನೆಯಲ್ಲೂ ಯಕ್ಷಗಾನ ಕಲಾವಿದರಿದ್ದಾರೆ. ಜನ ಈ ಕಲೆಯನ್ನು ಇಲ್ಲಿ ಉಸಿರಾಡುತ್ತಾರೆ. ನಾವು ವಿಜಯಶಂಕರರ ಸರವೂ ಮನೆಗೆ ಹೋಗಿದ್ದಾಗ ತುಂಡು ಪಂಚೆೆಯುಟ್ಟು, ಬನಿಯನ್​ನಲ್ಲಿದ್ದ ಅವರ ಬಂಧುವೊಬ್ಬರು ನಮ್ಮ ಲೋಕಾಭಿರಾಮದ ಮಾತುಕತೆಯ ನಡುವೆ ಯಕ್ಷಗಾನ ಪ್ರಸಂಗಗಳತ್ತ ಹೊರಳಿದರು. ಅವರ ವಿದ್ವತ್ತು, ವಿಮರ್ಶಾವಿವೇಕ ನನಗೆ ಆಶ್ಚರ್ಯವುಂಟುಮಾಡಿತು. ‘ಕುರಿತೋದದೆಯುಂ ಕಾವ್ಯಪ್ರಯೋಗ ಪರಿಣತಮತಿಗಳ್‘ ಎಂಬ ಕವಿರಾಜಮಾರ್ಗದ ಮಾತುಗಳ ಪ್ರತ್ಯಕ್ಷ ದರ್ಶನವಾಯಿತು. ಅಧಿಕಾರ ಕೇಂದ್ರಗಳಾದ ರಾಜಕೀಯ, ಧರ್ಮ ಭ್ರಷ್ಟಗೊಂಡಿರುವ ನಮ್ಮ ಸಂದರ್ಭದಲ್ಲಿ ಜನಸಾಮಾನ್ಯರ ಈ ವಿವೇಕವೇ ನಾಡನ್ನು ರಕ್ಷಿಸಬಲ್ಲುದು. ಅಂತಹ ಪ್ರಜಾವಿವೇಕವನ್ನು ನಾವು ನಮ್ಮ ಕರಾವಳಿಯ ಈ ಪ್ರವಾಸದಲ್ಲಿ ಕಂಡೆವು. ಎಂತೆಂಥದೋ ಆಕ್ರಮಣಗಳನ್ನು ದಕ್ಕಿಸಿಕೊಂಡು ತನ್ನ ಸ್ವಾಯತ್ತತೆಯನ್ನು ಕಾಪಾಡಿಕೊಂಡಿರುವ ಕರಾವಳಿಗೆ ಈಗಿನ ರಕ್ತಸಿಕ್ತ ಚರಿತ್ರೆಯನ್ನೂ ಜೀರ್ಣಿಸಿಕೊಳ್ಳುವ ಶಕ್ತಿಯಿದೆ ಅನ್ನಿಸಿತು.

ಯುರೋಪ್ ಪ್ರವಾಸ ಹೋಗಿದ್ದಾಗ ನನಗೆ ಅನ್ನಿಸಿದ್ದು- ‘ನಮ್ಮ ಕರ್ನಾಟಕ ಅದೆಷ್ಟು ಸುಂದರ!‘ ಎಂದು. ನಾವು ಶಿರಾಡಿ ಘಾಟಿನ ಮೂಲಕ ಕರಾವಳಿಗೆ ಹೋಗಿ ಕೊಡಗಿನ ಮಾರ್ಗವಾಗಿ ಬೆಂಗಳೂರಿಗೆ ಹಿಂತಿರುಗಿದೆವು. ಹಾದಿಬದಿಯುದ್ದಕ್ಕೂ ಪ್ರಕೃತಿಯ ಚೆಲುವು ಚಿತ್ತಾರ ಬಿಡಿಸಿತ್ತು. ಎಲ್ಲರದೂ ಒಂದೇ ಉದ್ಗಾರ- ಯಾವ ಒತ್ತಡಗಳಿಲ್ಲದೆ, ಯಾರ ಹಂಗಿಲ್ಲದೆ ಸುಮ್ಮನೆ ಕರ್ನಾಟಕ ಸುತ್ತಬೇಕು. ಚೆಲುವನ್ನು ಕಣ್ತುಂಬಿಕೊಳ್ಳಬೇಕು. ಹಿತವಾದ ಸೋನೆಮಳೆ, ಆಪ್ತ ಒಡನಾಟ, ಉಲ್ಲಾಸದ ಮಾತುಕತೆ, ರುಚಿ ರುಚಿಯಾದ ಕುರುಕಲು ತಿಂಡಿ, ಕರಾವಳಿಯಲ್ಲಿ ಅನುಭವಿಸಿದ ಆತ್ಮೀಯತೆಯ ಭಾವ ನಮ್ಮ ಪ್ರವಾಸವನ್ನು ಚಂದಗಾಣಿಸಿತ್ತು. ಬೆಂಗಳೂರಿಗೆ ಬರುತ್ತಿದ್ದಂತೆ ಪ್ರಕೃತಿ ಮುನಿದು ಆರ್ಭಟಿಸುತ್ತಿದ್ದು ಬದುಕಿನ ಲಯ ತಪ್ಪಿದ್ದು ಅನುಭವಕ್ಕೆ ಬರತೊಡಗಿತು.

(ಲೇಖಕರು ಖ್ಯಾತ ವಿಮರ್ಶಕರು)

Leave a Reply

Your email address will not be published. Required fields are marked *

Back To Top