For us fire accident labour death Belagavi
ಬೆಳಗಾವಿ: ತಾಲೂಕಿನ ನಾವಗೆ ಗ್ರಾಮದ ಸ್ನೇಹಂ ಕಾರ್ಖಾನೆಯಲ್ಲಿ ಮಂಗಳವಾರ ರಾತ್ರಿ ಸಂಭವಿಸಿದ ಅಗ್ನಿ ದುರಂತದಲ್ಲಿ ಕಾರ್ಮಿಕನೋರ್ವ ಸುಟ್ಟು ಕರಕಲಾಗಿದ್ದು, ಗಂಭೀರ ಗಾಯಗೊಂಡ ಮೂವರು ಕಾರ್ಮಿಕರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಬೆಳಗಾವಿಯ ಮಾರ್ಕಂಡೇಯ ನಗರದ ನಿವಾಸಿ ಯಲ್ಲಪ್ಪ ಗುಂಡ್ಯಾಗೋಳ (20) ಮೃತಪಟ್ಟ ಕಾರ್ಮಿಕ.
ಮೆಡಿಕಲ್ ಟೇಪ್‌ಗಳನ್ನು ತಯಾರಿಸುವ ಕಾರ್ಖಾನೆಯ ಲಿಫ್ಟ್‌ನಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡಿತ್ತು. ನೋಡನೋಡುತ್ತಿದ್ದಂತೆ ಬೆಂಕಿ ಕಾರ್ಖಾನೆಯನ್ನೇ ಆವರಿಸಿತ್ತು. ಒಳಗಿದ್ದ ಹಲವು ಕಾರ್ಮಿಕರು ಬೆಂಕಿ ಕಂಡು ಹೊರಗೆ ಓಡಿ ಹೋದರು. ಆದರೆ, ಯಲ್ಲಪ್ಪ ಲಿಫ್ಟ್‌ನಲ್ಲಿ ಸಿಲುಕಿಕೊಂಡಿದ್ದರಿಂದ ಪಾರಾಗಲು ಆಸ್ಪದ ಸಿಗದೆ ಸುಟ್ಟು ಕರಕಲಾಗಿದ್ದಾನೆ.
ಆರು ಅಗ್ನಿಶಾಮಕ ವಾಹನಗಳು, ಹಲವಾರು ಸಿಬ್ಬಂದಿ ರಾತ್ರಿಯಿಡೀ ಕಾರ್ಯಾಚರಣೆ ಮಾಡಿದರೂ ಹತೋಟಿಗೆ ಬಾರದಷ್ಟು ಬೆಂಕಿ ತೀವ್ರವಾಗಿತ್ತು. ಬುಧವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಕಟ್ಟಡದ ಗೋಡೆ, ಕಿಟಕಿಗಳನ್ನು ಜೆಸಿಬಿ ಯಂತ್ರದಿಂದ ಒಡೆದು ಒಳಗೆ ನೀರು ಚಿಮ್ಮಿಸಿ ಬೆಂಕಿ ನಂದಿಸಲು ಯತ್ನಿಸಲಾಯಿತು. ಮೂರು ಅಂತಸ್ತಿನ ಈ ಕಟ್ಟಡಕ್ಕೆ ಸಣ್ಣ ಸಣ್ಣ ಕಿಟಕಿಗಳಿದ್ದು, ಸೂಕ್ತಪ್ರವೇಶ ದ್ವಾರಗಳು ಇರಲಿಲ್ಲ. ನಾಲ್ಕು ದಿಕ್ಕಿನಲ್ಲಿ ಎತ್ತರದ ಗೋಡೆಗಳು ಇರುವುದರಿಂದ ಕಾರ್ಯಾಚರಣೆಗೆ ಅಡ್ಡಿಯಾಗಿತ್ತು ಎಂದು ಅಗ್ನಿಶಾಮಕ ಅಧಿಕಾರಿಗಳು ತಿಳಿಸಿದರು. ಕಾರ್ಖಾನೆ ಸುತ್ತಲಿನ 10 ಕಿಮೀ ಪ್ರದೇಶದಲ್ಲಿ ದಟ್ಟ ಹೊಗೆ ಮತ್ತು ಪ್ಲಾಸ್ಟಿಕ್ ಸುಟ್ಟ ಘಾಟು ವಾಸನೆಯಿಂದ ಜನ ತೊಂದರೆಗೀಡಾದರು. ಬೆಂಕಿಗೆ ಕೋಟ್ಯಂತರ ರೂ. ಮೌಲ್ಯದ ವಸ್ತುಗಳು ನಾಶವಾಗಿವೆ. ಬುಧವಾರ ಸ್ಥಳಕ್ಕೆ ಧಾವಿಸಿದ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಮಹೇಶ ಕೋಣಿ ನೇತೃತ್ವದಲ್ಲಿ ವಿಧಿವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳು ಕಾರ್ಮಿಕನ ಮೃತದೇಹ ಪರಿಶೀಲನೆ ನಡೆಸಿದರು. ಕಾರ್ಖಾನೆಯಲ್ಲಿ ಎಲ್ಲ ರೀತಿ ಮುಂಜಾಗ್ರತಾ ಕ್ರಮ ವಹಿಸಲಾಗುತ್ತಿತ್ತು. ಲೋಪದಿಂದ ಇದೇ ಮೊದಲ ಬಾರಿಗೆ ಅವಘಡ ಸಂಭವಿಸಿದೆ. ಕಾರ್ಖಾನೆಯಲ್ಲಿ 450 ಜನ ಕೆಲಸ ಮಾಡುತ್ತಿದ್ದಾರೆ. ಮಂಗಳವಾರ ಎರಡನೇ ಶಿಫ್ಟ್‌ನಲ್ಲಿ 150 ಜನ ಇದ್ದರು. ಮೃತ ಯಲ್ಲಪ್ಪನ ಕುಟುಂಬಕ್ಕೆ ಕಾರ್ಖಾನೆಯಿಂದ 10 ಲಕ್ಷ ರೂ. ಪರಿಹಾರ ಹಾಗೂ ಅವರ ಕುಟುಂಬದಲ್ಲಿ ಒಬ್ಬರಿಗೆ ಕೆಲಸ ಕೊಡುವುದಾಗಿ ವ್ಯವಸ್ಥೆ ಮಾಡುತ್ತೇವೆ ಎಂದು ‘ಸ್ನೇಹಂ ಟೇಪ್ ತಯಾರಿಕೆ ಕಂಪನಿ’ಯವರು ಮಾಹಿತಿ ನೀಡಿದ್ದಾರೆ.
ಸ್ಥಳದಲ್ಲಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಪೊಲೀಸ್ ಕಮಿಷನರ್ ಇಡಾ ಮಾರ್ಟಿನ್ ಮಾರ್ಬನ್ಯಾಂಗ್, ಡಿಸಿಪಿ ರೋಹನ್ ಜಗದೀಶ ಸೇರಿ ಪೊಲೀಸರು ಸ್ಥಳದಲ್ಲಿದ್ದರು. ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆ ನಡೆದ ತಕ್ಷಣ ಮಂಗಳವಾರ ರಾತ್ರಿಯೇ 10 ಆಂಬುಲೆನ್ಸ್ ಹಾಗೂ ಅಗತ್ಯ ಸಿಬ್ಬಂದಿ ಕಳುಹಿಸಿ ಮುಂಜಾಗ್ರತೆ ವಹಿಸಿದ್ದೆವು. ಬೆಂಕಿಗೆ ಸಿಲುಕಿ ಗಾಯಗೊಂಡವರಿಗೆ ಕೆಎಲ್ಇ ಆಸ್ಪತ್ರೆಯಲ್ಲಿ ಚಿಕ್ಸಿತೆ ನೀಡಲಾಗುತ್ತಿದೆ.
| ಮಹೇಶ ಕೋಣಿ ಜಿಲ್ಲಾ ಆರೋಗ್ಯಾಧಿಕಾರಿ ಬೆಳಗಾವಿ