ನಾಳೆ ಯೋಗ ದಿನಾಚರಣೆಗೆ ಜಿಲ್ಲೆ ಸಜ್ಜು

ಚಿಕ್ಕಬಳ್ಳಾಪುರ : ನಗರದ ಸರ್ ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಜೂ.21ರಂದು ಬೆಳಗ್ಗೆ 6.30ಕ್ಕೆ ಐದನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಪಿ.ಅನಿರುಧ್ ಶ್ರವಣ್ ತಿಳಿಸಿದರು.

ಜಿಲ್ಲಾಡಳಿತ ಭವನದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರಿಯ ಯೋಗ ಸೇವಾ ಪ್ರಾಕೃತಿಕ ಚಿಕಿತ್ಸಾ ಅನುಸಂಧಾನ ಪರಿಷತ್, ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆಯುಷ್ ಇಲಾಖೆ, ಪತಾಂಜಲಿ ಯೋಗ ಸಮಿತಿ ವತಿಯಿಂದ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಬೆಳಗ್ಗೆ 7 ರಿಂದ 7.45ರವರೆಗೆ ಯೋಗ ಪ್ರದರ್ಶನ, ಬೆಳಗ್ಗೆ 8 ಕ್ಕೆ ಉಪನ್ಯಾಸ, ಬೆಳಗ್ಗೆ 9ಕ್ಕೆ ಜಿಲ್ಲಾ ಕ್ರೀಡಾಂಗಣದಿಂದ ನಗರದ ಅಂಬೇಡ್ಕರ್ ಭವನದವರೆಗೆ ಯೋಗ ಜಾಗೃತಿ ಜಾಥಾ ನಡೆಯಲಿದೆ ಎಂದರು.

ಕಾರ್ಯಕ್ರಮಕ್ಕೆ ಎನ್​ಎಸ್​ಎಸ್, ಸ್ಕೌಟ್ಸ್ ಮತ್ತು ಗೈಡ್ಸ್, ಶಾಲಾ ಕಾಲೇಜು ವಿದ್ಯಾರ್ಥಿಗಳು, ಆಶಾ ಕಾರ್ಯಕರ್ತೆಯರು ಸೇರಿ ಹಲವರು ಆಗಮಿಸಲಿದ್ದಾರೆ. ಭಾಗವಹಿಸಲು ಇಚ್ಛಿಸುವವರು ಜೂ.20 ರೊಳಗೆ ಜಿಲ್ಲಾಡಳಿತ ಭವನದಲ್ಲಿರುವ ಆಯುಷ್ ಇಲಾಖೆ ಕಚೇರಿಯಲ್ಲಿ ನೋಂದಣಿ ಮಾಡಿಕೊಳ್ಳಬೇಕು ಎಂದರು.ಜಿಪಂ ಮುಖ್ಯ ಲೆಕ್ಕಾಧಿಕಾರಿ ಸಂಗಪ್ಪ ಉಪಾಸೆ, ಜಿಲ್ಲಾ ಆಯುಷ್ ಇಲಾಖೆ ಅಧಿಕಾರಿ ಇಂದುಮತಿ ಇದ್ದರು.

47 ಬಾಲ್ಯ ವಿವಾಹಗಳಿಗೆ ಬ್ರೇಕ್: ಜಿಲ್ಲೆಯಲ್ಲಿ ಏಪ್ರಿಲ್​ನಿಂದ ಮೇ ವರೆಗೆ 47 ಬಾಲ್ಯ ವಿವಾಹ ನಿಲ್ಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪಿ.ಅನಿರುಧ್ ಶ್ರವಣ್ ತಿಳಿಸಿದರು. ಮೇ ಅಂತ್ಯದವರೆಗೆ 51 ಬಾಲ್ಯ ವಿವಾಹಗಳ ದೂರು ಸ್ವೀಕರಿಸಲಾಗಿದೆ. ಇದರಲ್ಲಿ ನಾಲ್ಕು ನಡೆದಿದೆ. ಉಳಿದವನ್ನು ಸಕಾಲದಲ್ಲಿ ತಡೆಯಲಾಗಿದೆ. ಕಳೆದ 2018-19ನೇ ಸಾಲಿನಲ್ಲಿ 58 ದೂರಗಳನ್ನು ಸ್ವೀಕರಿಸಿದ್ದು 1 ಬಾಲಕ ಹಾಗೂ 53 ಬಾಲಕಿಯರ ಬಾಲ್ಯ ವಿವಾಹ ತಡೆಯಲಾಗಿದೆ. 4 ಬಾಲ್ಯ ವಿವಾಹಗಳು ನಡೆದಿದ್ದು, ಠಾಣೆಯಲ್ಲಿ 3 ಕೇಸ್ ದಾಖಲಾಗಿದೆ ಎಂದರು.

ಬಾಗೇಪಲ್ಲಿಯಲ್ಲಿ 16 ಪ್ರಕರಣಗಳು ವರದಿಯಾಗಿದೆ. 1 ವಿವಾಹವಾಗಿದ್ದು 15 ಬಾಲಕಿಯರನ್ನು ರಕ್ಷಿಸಲಾಗಿದೆ. ಗೌರಿಬಿದನೂರಿನಲ್ಲಿ 18, ಚಿಕ್ಕಬಳ್ಳಾಪುರ ಮತ್ತು ಚಿಂತಾಮಣಿಯಲ್ಲಿ ತಲಾ 3, ಶಿಡ್ಲಘಟ್ಟದಲ್ಲಿ 11 ದೂರುಗಳು ಸಲ್ಲಿಕೆಯಾಗಿದೆ. ಜಿಲ್ಲೆಯ ಗ್ರಾಮೀಣ ಭಾಗದಲ್ಲಿಯೇ ಹೆಚ್ಚಿನ ಪ್ರಕರಣಗಳು ವರದಿಯಾಗುತ್ತಿವೆ ಎಂದರು.

ಬಾಲ್ಯ ವಿವಾಹ ತಡೆಗೆ ಪಂಚಾಯಿತಿ ಮಟ್ಟದಲ್ಲಿ ಅಧಿಕಾರಿ ನಿಯೋಜಿಸಿದ್ದು ಪಿಡಿಒ ಹಾಗೂ ಪೊಲೀಸ್ ಸಿಬ್ಬಂದಿಗೆ ಕಟ್ಟುನಿಟ್ಟಿನ ಎಚ್ಚರಿಕೆ ವಹಿಸಿ ಬಾಲ್ಯ ವಿವಾಹಕ್ಕೆ ಅವಕಾಶ ನೀಡದಿರಲು ಸೂಚಿಸಲಾಗಿದೆ. ಬಾಲ್ಯ ವಿವಾಹದ ಬಗ್ಗೆ ಮಾಹಿತಿ ಗೊತ್ತಾದಲ್ಲಿ ಸಹಾಯವಾಣಿ 1098 ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡಬೇಕು. ಮಾಹಿತಿದಾರರ ಹೆಸರನ್ನು ಗೌಪ್ಯವಾಗಿಡಲಾಗುವುದು.

| ಪಿ.ಅನಿರುಧ್ ಶ್ರವಣ್ ಜಿಲ್ಲಾಧಿಕಾರಿ

Leave a Reply

Your email address will not be published. Required fields are marked *