ನಾಳೆ ಜ.12 ರಾಷ್ಟ್ರೀಯ ಯುವ ದಿನ

ವ್ಯಕ್ತಿ ತಾನು ದುರ್ಬಲನೆಂದು ಭಾವಿಸಬಾರದು. ಏಕೆಂದರೆ ದೌರ್ಬಲ್ಯವೇ ಪಾಪ, ದೌರ್ಬಲ್ಯವೇ ಮರಣ. ತನ್ನ ದೌರ್ಬಲ್ಯವನ್ನು ಗೆಲ್ಲುವುದರಿಂದ ಎಲ್ಲವನ್ನೂ ಸಾಧಿಸಬಹುದು. ತನ್ನ ಆತ್ಮವಿಶ್ವಾಸದಿಂದ ಎದ್ದು ನಿಲ್ಲಬೇಕು, ತನ್ನೊಳಗಿರುವ ದೈವಿಕತೆಯನ್ನು ಹೊರಚಿಮ್ಮಬೇಕು ಇಂಥ ಘೊಷಣೆಯೊಂದಿಗೆ ದೇಶದ ಯುವಕರಲ್ಲಿ ಆತ್ಮವಿಶ್ವಾಸ ಹೆಚ್ಚಿಸಿದ ಮಹಾನ್ ವ್ಯಕ್ತಿ ಸ್ವಾಮಿ ವಿವೇಕಾನಂದರು. ದೇಶದ ಯುವ ಶಕ್ತಿಗಳಿಗೆ ಆಂತರ್ಯದ ಸತ್ವ ತುಂಬುವಲ್ಲಿ ಯಶಸ್ವಿಯಾದ ಅದ್ಭುತ ತತ್ವಜ್ಞಾನಿ ಇವರು. ನಮ್ಮ ದೇಶದ ತತ್ವವನ್ನು – ಸತ್ವವನ್ನು ಪ್ರಪಂಚಕ್ಕೆ ಸಾರಿದ ದೇಶದ ಈ ಹೆಮ್ಮೆಯ ಪುತ್ರನಿಗೆ ತಾಯ್ನಾಡು ಮತ್ತು ದೇಶದ ಸಂಸ್ಕೃತಿಯ ಬಗ್ಗೆ ಅಗಾಧವಾದ ಪ್ರೀತಿ. ಯುವ ಶಕ್ತಿಯೇ ದೇಶದ ಶಕ್ತಿ ಎಂಬ ಘೊಷಣೆ ಸಾರಿದ ವಿವೇಕಾನಂದರ ಜನ್ಮದಿನವನ್ನು ರಾಷ್ಟ್ರೀಯ ಯುವ ದಿನವನ್ನಾಗಿ ಆಚರಿಸುವುದರ ಮೂಲಕ ಸರಕಾರ ವಿವೇಕಾನಂದರಿಗೆ ಗೌರವ ಸೂಚಿಸುತ್ತಿದೆ.

ಹಿನ್ನೆಲೆ

1862ರ ಜನವರಿ 12ರಂದು ಜನಿಸಿದ ಇವರ ಪೂರ್ವಾಶ್ರಮದ ಹೆಸರು ನರೇಂದ್ರನಾಥ ದತ್ತ.

1879ರಲ್ಲಿ ಕೋಲ್ಕತದ ಸ್ಕೋಟಿಷ್ ಚರ್ಚ್ ಕಾಲೇಜಿನಲ್ಲಿ ಪಾಶ್ಚಾತ್ಯ ತರ್ಕ, ತತ್ವಶಾಸ್ತ್ರ ಹಾಗೂ ಇತಿಹಾಸದಲ್ಲಿ ಅಧ್ಯಯನ.

1881ರಲ್ಲಿ ಲಲಿತ ಕಲೆಯಲ್ಲಿ ಪದವಿ, 1884ರಲ್ಲಿ ಕಲಾ ಪದವಿ. 1881ರಲ್ಲಿಯೇ ಪರಮಹಂಸರನ್ನು ಭೇಟಿಯಾಗಿದ್ದ ನರೇಂದ್ರ, ಮೊದಲ ಭೇಟಿಯಲ್ಲಿಯೇ ರಾಮಕೃಷ್ಣರ ಶಕ್ತಿಯನ್ನು ನಂಬದೇ ಅವರನ್ನು ಪರೀಕ್ಷಿಸಲು ನಿರ್ಧರಿಸಿದ್ದರು. ಆನಂತರದ ನಿರಂತರ ಒಡನಾಟದಿಂದ ಅವರ ಸರಳತೆ, ನಿಷ್ಕಲ್ಮಶ ಭಕ್ತಿ ಮತ್ತು ಸಿದ್ಧಾಂತಗಳಿಗೆ ಅವರು ಆಕರ್ಷಿತರಾದರು. ನರೇಂದ್ರನಲ್ಲಿರುವ ಅಪರಿಮಿತ ಚೈತನ್ಯವನ್ನು ಗುರುತಿಸಿದ ರಾಮಕೃಷ್ಣರು, ಅವರನ್ನು ಶಿಷ್ಯನನ್ನಾಗಿ ಸ್ವೀಕರಿಸಿ, ವಿವೇಕಾನಂದ ಎಂದು ನಾಮಕರಣ ಮಾಡಿದರು.

ಅಮೆರಿಕಾದ ಚಿಕಾಕೋದಲ್ಲಿ ನಡೆದ ಸರ್ವ ಧರ್ಮ ಸಮ್ಮೇಳನದಲ್ಲಿ ಮಾತನಾಡಿ, ಭಾರತೀಯ ಸಂಸ್ಕೃತಿ ಮತ್ತು ಹಿಂದೂ ಧರ್ಮದ ಮೌಲ್ಯದ ಪರಿಚಯ ಮಾಡಿಕೊಟ್ಟ ವಿವೇಕಾನಂದರ ಭಾಷಣ ವಿಶ್ವ ವಿಖ್ಯಾತವಾಗಿದೆ.

ಸುಖಕ್ಕಿಂತ ದುಃಖವೇ, ಐಶ್ವರ್ಯಕ್ಕಿಂತಲೂ ದಾರಿದ್ರ್ಯವೇ, ಹೊಗಳಿಕೆಗಿಂತಲೂ ಪೆಟ್ಟುಗಳೇ ಮನುಷ್ಯನಲ್ಲಿ ಅಡಕವಾಗಿರುವ ಅಂತರಾಗ್ನಿಯನ್ನು ಹೊರಗೆಡಹುತ್ತದೆ ಎಂದು ಬೋಧಿಸಿದ ವಿವೇಕಾನಂದರು ಬಡವರ, ನೊಂದವರ, ಸಮಾಜದಲ್ಲಿ ತುಳಿತಕ್ಕೊಳಗಾದವರ ಕಷ್ಟಕ್ಕೆ ಸ್ಪಂದಿಸಿದರು. ಒಂದು ಆದರ್ಶವನ್ನು, ಗುರಿಯನ್ನು ಕೈಗೆತ್ತಿಕೊಳ್ಳಿ. ಕೇವಲ ಆ ಗುರಿಯ ಬಗ್ಗೆ ಮಾತ್ರ ಯೋಚಿಸಿ, ಚಿಂತಿಸಿ. ನಿಮ್ಮ ಬದುಕನ್ನೇ ಅದಕ್ಕಾಗಿ ಮುಡಿಪಾಗಿಡಿ. ಆ ಗುರಿಯು ನಿಮ್ಮ ಬುದ್ಧಿ, ಮನಸ್ಸು, ಇಂದ್ರಿಯಗಳು, ನರ-ನಾಡಿಗಳನ್ನೆಲ್ಲ ವ್ಯಾಪಿಸಲಿ. ಬೇರೆಲ್ಲ ಆಲೋಚನೆಗಳನ್ನು ಬದಿಗಿಡಿ. ಇದೇ ಯಶಸ್ಸಿನ ಏಕಮಾತ್ರ ಸೂತ್ರ! ಇದು ಯುವ ಶಕ್ತಿಗಳಲ್ಲಿರುವ ಉತ್ಸಾಹವನ್ನು ಬಡಿದೆಬ್ಬಿಸಲು ವಿವೇಕಾನಂದರು ಘೊಷಿಸಿದ ಪೋ›ತ್ಸಾಹ ವಾಕ್ಯ. ಇದು ಬಿಸಿರಕ್ತದ ಯುವ ಚೈತನ್ಯವನ್ನು ಜಾಗೃತಗೊಳಿಸುವ ಮಂತ್ರವಾಯಿತು. ಗಾಂಭೀರ್ಯ, ಸರಳತೆ, ಧೈರ್ಯ, ದಯೆ, ಸೇವಾಶಕ್ತಿಯಿಂದಲೇ ದೇಶದ ಜನತೆಯನ್ನು ಗೆದ್ದ ಸ್ವಾಮಿ ವಿವೇಕಾನಂದರು ತಮ್ಮ 29ನೇ ವಯಸ್ಸಿನಲ್ಲಿ ಧೈವಾಧೀನರಾದರು. ಅತೀ ಚಿಕ್ಕ ವಯಸ್ಸಿನಲ್ಲಿ ಮಹಾ ಸಾಧನೆ ತೋರಿದ ಈ ಶಕ್ತಿ 1902ರ ಜುಲೈ 4ರಂದು ಅಸ್ತಂಗತವಾದರು.

Leave a Reply

Your email address will not be published. Required fields are marked *