ತುಮಕೂರು: ನಗರದ ತೋಟಗಾರಿಕೆ ಇಲಾಖೆ ಆವರಣದಲ್ಲಿ ಜ.31 ರಿಂದ ಫೆ.2ರವರೆಗೆ ಫಲಪುಷ್ಪ ಪ್ರದರ್ಶನ ಏರ್ಪಡಿಸಲಾಗಿದೆ. ಈ ಬಾರಿಯ ಫಲಪುಷ್ಪ ಪ್ರದರ್ಶನದಲ್ಲಿ ಡಿಸ್ನಿ ಮಾದರಿಯಲ್ಲಿ ವಿವಿಧ ಅಲಂಕಾರಿಕ ಪುಷ್ಪಗಳ ಜೋಡಣೆ ಗಮನಸೆಳೆಯಲಿದೆ. ಜತೆಗೆ ವಿಶೇಷ ಆಕರ್ಷಣೆ ವನ್ಯಜೀವಿಗಳ ಮಾದರಿ ಪುಷ್ಪಾಲಂಕಾರವೂ ಆಕರ್ಷಣೀಯವಾಗಲಿದೆ.
ಪ್ರತೀ ವರ್ಷದಂತೆ ಈ ವರ್ಷವೂ ಫಲಪುಷ್ಪ ಪ್ರದರ್ಶನವನ್ನು ತೋಟಗಾರಿಕೆ ಇಲಾಖೆ ಆಯೋಜಿಸಿದ್ದು, ವಿಶೇಷವಾಗಿ ಮಕ್ಕಳನ್ನು ಆಕರ್ಷಿಸುವ ಸಲುವಾಗಿ ಡಿಸ್ನಿ ಮಾದರಿಯಲ್ಲಿ ವಿವಿಧ ಅಲಂಕಾರಿಕ ಪುಷ್ಪಗಳ ಜೋಡಣೆ ಮಾಡಲಾಗಿದೆ. ವಿವೇಕಾನಂದರ ಮರಳು ಶಿಲೆಯ ಕಲಾಕೃತಿಯಲ್ಲಿ ವಿಶೇಷ ಅಲಂಕಾರಿಕ ಹೂಗಳಿಂದ ಜನಾಕರ್ಷಣೆ ಎನಿಸಲಿವೆ.
16 ಸಾವಿರಕ್ಕೂ ಹೆಚ್ಚು ಹೂವಿನ ಕುಂಡಗಳನ್ನು ಅಲಂಕೃತವಾಗಿ ಜೋಡಿಸಲಾಗುವುದು. ಜಿಲ್ಲೆಯಲ್ಲಿ ಉತ್ತಮವಾಗಿ ಬೆಳೆದಿರುವ ತೋಟಗಾರಿಕಾ ಬೆಳೆಗಳ ಪ್ರದರ್ಶನ ಏರ್ಪಡಿಸಿ ಆಯ್ಕೆಯಾದ ಬೆಳೆಗಾರರಿಗೆ ಬಹುಮಾನ ವಿತರಿಸಲಾಗುವುದು. ಜತೆಗೆ ಜಿಲ್ಲೆಯ 10 ಪ್ರಗತಿಪರ ತೋಟಗಾರಿಕಾ ಬೆಳೆಗಳ ರೈತರನ್ನು ಗುರುತಿಸಿ ಸನ್ಮಾನಿಸಲಾಗುವುದು.ತೋಟಗಾರಿಕೆ ರೈತರಿಗೆ ತಾಂತ್ರಿಕ ಮಾಹಿತಿ ಹಾಗೂ ವಾಟರ್‌ಶೆಡ್ ಪ್ರಾತ್ಯಕ್ಷಿಕೆ ಮೂಲಕ ಎಲ್ಲ ತರಹದ ಹಣ್ಣು, ಹೂ ಮತ್ತು ತರಕಾರಿಗಳನ್ನು ಬೆಳೆಸುವ ಇಂಟಿಗ್ರೇಟೆಡ್ ತೋಟಗಾರಿಕೆ ಮಾದರಿಯನ್ನೂ ಪರಿಚಯಿಸಲಾಗುವುದು.
ತೆಂಗುಬೆಳೆಗಾರರಿಗೆ ತರಬೇತಿ: ಜಿಲ್ಲೆಯಲ್ಲಿ 1.76ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ತೆಂಗಿನ ಬೆಳೆಯಿದ್ದು, ಫೆ. 1, 2 ಹಾಗೂ 3ರಂದು ತೆಂಗಿನ ಬೆಳೆಗಳಿಗೆ ತಗಲಿರುವ ರೋಗೋಸ್ ಕೀಟ ನಿಯಂತ್ರಣಕ್ಕೆ ತೋಟಗಾರಿಕೆ ವಿಶ್ವವಿದ್ಯಾಲಯಗಳ ವಿಜ್ಞಾನಿಗಳಿಂದ ಬೆಳೆಗಳ ಸಂರಕ್ಷಣೆಗಾಗಿ ತೋಟಗಾರಿಕೆ ಪದ್ಧತಿ, ಸಂಸ್ಕರಣೆ ಹಾಗೂ ರೈತರ ಸಂತೆ, ಮಾರುಕಟ್ಟೆ, ಖುಷ್ಕಿ ತೋಟಗಾರಿಕೆ ತರಬೇತಿ ಸಹ ನೀಡಲಾಗುವುದು. ಜೇನುಕೃಷಿಯ ಮಹತ್ವದ ಬಗ್ಗೆ ರೈತರಿಗೆ ಅರಿವು ಮೂಡಿಸುವ ಕಾರ್ಯ ಕ್ರಮವು ಪ್ರದರ್ಶನದಲ್ಲಿರಲಿದೆ.
120 ಮಳಿಗೆಗಳು: ಪ್ರದರ್ಶನದ ಅಂಗವಾಗಿ ಕೃಷಿ, ರೇಷ್ಮೆ, ಪಶುಸಂಗೋಪನೆ, ಮೀನುಗಾರಿಕೆ, ಖಾದಿ ಮತ್ತು ಗ್ರಾಮೋದ್ಯೋಗ ಸೇರಿದಂತೆ ವಿವಿಧ ಇಲಾಖೆಗಳ 40 ಮಳಿಗೆಗಳು ಹಾಗೂ ಖಾಸಗಿಯವರೂ ಸೇರಿ ಒಟ್ಟು 120 ಸ್ಟಾಲ್‌ಗಳು ಪ್ರದರ್ಶನದಲ್ಲಿ ಸ್ಥಾಪಿಸಲಾಗುತ್ತದೆ.
31ರ ಸಂಜೆ ಉದ್ಘಾಟನೆ: ಜ.31ರಂದು ಸಂಜೆ 7.30ಕ್ಕೆ ಫಲಪುಷ್ಪ ಪ್ರದರ್ಶನವನ್ನು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಉದ್ಘಾಟಿಸುವರು. ತೋಟಗಾರಿಕೆ ಸಚಿವ ವಿ.ಸೋಮಣ್ಣ ಉಪಸ್ಥಿತರಿರುವರು. ಶಾಸಕ ಜಿ.ಬಿ. ಜ್ಯೋತಿಗಣೇಶ್ ಅಧ್ಯಕ್ಷತೆವಹಿಸುವರು.
ಫೆ.2ಕ್ಕೆ ಸಮಾರೋಪ : ಫೆ.2ರಂದು ಸಂಜೆ 4ಕ್ಕೆ ಸಮಾರೋಪದಲ್ಲಿ ಜಿಪಂ ಅಧ್ಯಕ್ಷೆ ಲತಾ ಬಹುಮಾನ ವಿತರಿಸುವರು. ಶಾಸಕ ಜಿ.ಬಿ.ಜ್ಯೋತಿಗಣೇಶ್ ಅಧ್ಯಕ್ಷತೆ ವಹಿಸುವರು. ಜಿಲ್ಲಾಧಿಕಾರಿ ಡಾ.ಕೆ.ರಾಕೇಶ ಕುಮಾರ್, ಜಿಪಂ ಸಿಇಓ ಶುಭಾಕಲ್ಯಾಣ್ ಮತ್ತಿತರರು ಉಪಸ್ಥಿತರಿರುವರು.
ಫಲಪುಷ್ಪ ಪ್ರದರ್ಶನದ ಜತೆಗೆ ರೈತರಿಗೆ ಉಪಯೋಗವಾಗುವಂತೆ ಜೇನುಕೃಷಿ, ಹನಿನೀರಾವರಿ ಘಟಕದ ತಾಂತ್ರಿಕ ಅಳವಡಿಕೆ ಹಾಗೂ ನಿರ್ವಹಣೆ, ಹಸಿರು ಮನೆಯಲ್ಲಿ ಸುಧಾರಿತ ಬೇಸಾಯದಿಂದ ಅತಿ ಕಡಿಮೆ ಜಾಗದಲ್ಲಿ ಹೆಚ್ಚು ತರಕಾರಿ ಹಾಗೂ ಹೂಗಳನ್ನು ಬೆಳೆಸುವ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ತರಬೇತಿ ಸಹ ನೀಡಲಾಗುವುದು.
ರಘು ಉಪನಿರ್ದೇಶಕ ತೋಟಗಾರಿಕೆ ಇಲಾಖೆ