ಹಾಸನ: ಸೆರೆ ಹಿಡಿದು ದೂರದ ಅರಣ್ಯಕ್ಕೆ ಬಿಟ್ಟು ಬಂದರೂ ವಾಪಾಸ್ ಬಂದು ಹಿಂದೆ ದಾಳಿ ನಡೆಸಿದ್ದ ಮನೆ ಮೇಲೆ ಪುನಃ ದಾಳಿ ನಡೆಸುವ ಮೂಲಕ ಅಚ್ಚರಿ ಮೂಡಿಸಿರುವ ಓಲ್ಡ್ ಮಕ್ನಾ ಕಾಡಾನೆ ಸೆರೆಗೆ ಅರಣ್ಯ ಇಲಾಖೆ ಮತ್ತೆ ಮುಂದಾಗಿದ್ದು ಆರಂಭದಲ್ಲಿ ವಿಘ್ನ ಉಂಟಾಗಿದೆ
ಗುರುವಾರ ಅರಣ್ಯ ಇಲಾಖೆ ಸರ್ಕಾರದಿಂದ ಅನುಮತಿ ಪಡೆದುಕೊಂಡು ಓಲ್ಡ್ ಮಾಕ್ನಾ ಆನೆಯನ್ನು ಹಿಡಿಯುವ ಕಾರ್ಯಾಚರಣೆ ಆರಂಭಿಸಲು ಮುಂದಾಯಿತು. ಆದರೆ ಕಾರ್ಯಾಚರಣೆಗೆ ಬಂದಿದ್ದ ಒಂದು ಆನೆಗೆ ಅನಾರೋಗ್ಯದ ಹಿನ್ನೆಲೆಯಲ್ಲಿ ದುಬಾರಕಿದ್ದಂತಹ ಎರಡು ಹಾನಿಗಳು ತಡವಾಗಿದ್ದರಿಂದ ಕಾರ್ಯಾಚರಣೆಯನ್ನು ಶುಕ್ರವಾರಕ್ಕೆ ಮುಂದುಡಲಾಗಿದೆ.
ಈ ಮಕ್ನ ಆನೆಯು ಯಾವ ಹಾನಿಗಳ ಗುಂಪಿಗೂ ಕೂಡ ಸೇರಿಕೊಳ್ಳುವುದಿಲ್ಲ ಏಕಾಂಗಿಯಾಗಿ ಸಕಲೇಶಪುರ ಮತ್ತು ಬೇಲೂರು ಭಾಗದಲ್ಲಿ ತೀವ್ರ ದಾಳಿ ನಡೆಸಿ ಅಪಾರ ಪ್ರಮಾಣದ ಬೆಳೆ ಹಾನಿ ಜೊತೆಗೆ ಆಸ್ತಿಪಾಸ್ತಿಗಳು ಮತ್ತು ಜನರಿಗೆ ತೀವ್ರ ತೊಂದರೆಯನ್ನು ಉಂಟು ಮಾಡುತ್ತಿತ್ತು
ಈ ಮಕ್ನಾ ಆನೆ ಮನೆಗಳ ಮೇಲೆ ನಿರಂತರ ದಾಳಿ ನಡೆಸಿ ಉಪಟಳ ನೀಡುತ್ತಿರುವುದರಿಂದ ರೇಡಿಯೋ ಕಾಲರ್ ಅಳವಡಿಸಿ, ಕಳೆದ ವರ್ಷ ಜುಲೈ ತಿಂಗಳಿನಲ್ಲಿ ಈ ಮಕ್ನ ಆನೆಯನ್ನು ಸೆರೆ ಹಿಡಿದು ದೂರದ ಮಲೇಮಹದೇಶ್ವರ ಬೆಟ್ಟ ವ್ಯಾಪ್ತಿಯ ಅರಣ್ಯಕ್ಕೆ ಬಿಟ್ಟು ಬರಲಾಗಿತ್ತು.
ಸುಮಾರು 40 ರಿಂದ 45 ದಿನಗಳ ನಂತರ ಅಲ್ಲಿಂದ ನಡೆದು ವಾಪಾಸ್ ಬಂದು, ಈ ಹಿಂದೆ ದಾಳಿ ನಡೆಸಿದ್ದ ಸಕಲೇಶಪುರ ತಾಲ್ಲೂಕಿನ ಕೆಸಗುಲಿ ಗ್ರಾಮದ ಗಿರೀಶ್ ಎಂಬುವವರ ಮನೆ ಮೇಲೆ ನ.24 ರಂದು ಪುನಃ ದಾಳಿ ನಡೆಸಿ ಮನೆಯ ಕಿಟಕಿ ಗಾಜುಗಳನ್ನು ಪುಡಿ ಮಾಡಿತ್ತು.
ಅದೇ ರೀತಿ ಹತ್ತು ತಿಂಗಳ ಹಿಂದೆ 2022 ಏಪ್ರಿಲ್ 22 ರಂದು ಬೇಲೂರು ತಾಲ್ಲೂಕಿನ ಅನುಘಟ್ಟ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಗೋದಾಮಿನ ಮೇಲೆ ದಾಳಿ ನಡೆಸಿ ಅಕ್ಕಿಯನ್ನು ತಿಂದು ಹೋಗಿತ್ತು. ಮತ್ತೆ ಫೆ.15 ರಂದು ದಾಳಿ ನಡೆಸಿ ಗೋದಾಮಿನ ಬಾಗಿಲು ಮುರಿದು ಅಕ್ಕಿ ತಿಂದು ಹೋಗಿದೆ. ಕಾಲರ್ ಐಡಿ ಅಳವಡಿಸಿರುವುದರಿಂದಲೇ ಇದೇ ಆನೆ ದಾಳಿ ನಡೆಸುತ್ತಿದೆ ಎಂದು ಗೊತ್ತಾಗಿದೆ. ಇದರಿಂದ ಆನೆ ಇಷ್ಟು ಬುದ್ಧಿಶಾಲಿಯೇ ಎಂಬ ಅಚ್ಚರಿ ಮೂಡಿಸಿತ್ತು.
ಮಲೆನಾಡು ಭಾಗದಲ್ಲಿ ಓಲ್ಡ್ ಮಕ್ನಾ ಮತ್ತು ನ್ಯೂವ್ ಮಕ್ನಾ ಎಂಬ ಎರಡು ಆನೆಗಳು ಇರುವುದನ್ನು ಅರಣ್ಯ ಇಲಾಖೆ ಗುರುತಿಸಿದ್ದು, ಇದೀಗ ಓಲ್ಡ್ ಮಕ್ನಾ ಆನೆ ಸೆರೆಗೆ ಸರ್ಕಾರದಿಂದ ಅನುಮತಿ ದೊರಕಿದ್ದು, ಗುರುವಾರ ಬೆಳಿಗ್ಗೆಯಿಂದಲೇ ಸೆರೆ ಕಾರ್ಯಾಚರಣೆ ನಡೆಯಬೇಕಿತ್ತು ತಾಂತ್ರಿಕ ಕಾರಣಗಳಿಂದ ಶುಕ್ರವಾರಕ್ಕೆ ಮುಂದೂಡಲಾಗಿದೆ
ಕೊರಳಲ್ಲಿ ಅಳವಡಿಸಿರುವ ರೇಡಿಯೋ ಕಾಲರ್ ಸಹಾಯದಿಂದ ಆನೆ ಸಕಲೇಶಪುರ ಭಾಗದಲ್ಲಿ ಇರುವುದನ್ನು ಪತ್ತೆ ಹಚ್ಚಲಾಗಿದೆ. ಈ ಬಾರಿ ಸೆರೆಯಾದರೆ ಪುನಃ ಕಾಡಿಗೆ ಬಿಡದೆ ಬಂಧಿಸಿ, ಮತ್ತಿಗೋಡು ಹಾನಿಸಿಬಿರಕ್ಕೆ ಬಿಟ್ಟು ಅಲ್ಲಿಂದ ಅದನ್ನ ಪಳಗಿಸುವ ಯೋಚನೆಯಲ್ಲಿ ಅರಣ್ಯ ಇಲಾಖೆ ಇದೆ. ಕಾರ್ಯಾಚರಣೆಯಲ್ಲಿ ಅಭಿಮನ್ಯು, ಪ್ರಶಾಂತ, ಅಜೇಯ, ವಿಕ್ರಂ, ಆಜೇಯ ಎಂಬ ಐದು ಸಾಕಾನೆಗಳು, ಅರಣ್ಯ ಇಲಾಖೆ ಅಧಿಕಾರಿಗಳು ಹಾಗು ಸಿಬ್ಬಂದಿ ಭಾಗವಹಿಸಲಿದ್ದಾರೆ.
ತಾಂತ್ರಿಕ ಕಾರಣದಿಂದ ಮುಂದೂಡಿಕೆ: ಡಿಎಫ್‌ಒ
ಮಕ್ನಾ ಆನೆಯನ್ನು ಹಿಡಿಯಲು ಅರಣ್ಯ ಇಲಾಖೆ ಸಜ್ಜಾಗಿತ್ತು. ಆದರೆ ಕೆಲ ತಾಂತ್ರಿಕ ಕಾರಣಗಳಿಂದ ಗುರುವಾರ ನಡೆಯಬೇಕಿದ್ದ ಕಾರ್ಯಾಚರಣೆಯನ್ನು ಶುಕ್ರವಾರಕ್ಕೆ ಮುಂದೂಡಲಾಗಿದೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಕೆ.ಹರೀಶ್ ತಿಳಿಸಿದ್ದಾರೆ.
ರೇಡಿಯೋ ಕಾಲರ್ ಅಳವಡಿಸುವ ಸಂದರ್ಭದಲ್ಲಿ ಎರೆಡು ಆನೆಗಳಿಗೆ ತೀವ್ರ ಆಯಾಸ ಆಗಿರುವುದರಿಂದ ಅವುಗಳನ್ನು ಕಾರ್ಯಾಚರಣೆಗೆ ಬಳಸಿಕೊಳ್ಳಲು ಸಾಧ್ಯವಾಗುತ್ತಿಲ್ಲ, ಆದ್ದರಿಂದ ದುಬಾರೆ ಆನೆ ಶಿಬಿರದಿಂದ ಹರ್ಷ ಮತ್ತು ಧನಂಜಯ್ ಎಂಬ ಎರಡು ಆನೆಗಳನ್ನು ಕರೆಸಿಕೊಳ್ಳಲಾಗುತ್ತಿದೆ ಅವು ಬರುವುದು ತಡವಾಗಿದ್ದರಿಂದ ಕಾರ್ಯಾಚರಣೆಯನ್ನು ಶುಕ್ರವಾರಕ್ಕೆ ಮುಂದೂಡಲಾಗಿದೆ ಎಂದರು.
ಮೂರು ಆನೆಗಳಿಗೆ ರೇಡಿಯೋ ಕಾಲರ್:
ಸಕಲೇಶಪುರ- ಬೇಲೂರು ತಾಲ್ಲೂಕು ಭಾಗದಲ್ಲಿ ಕಾಡಾನೆ-ಮಾನವ ಸಂಘರ್ಷ ತಪ್ಪಿಸಲು ಅರಣ್ಯ ಇಲಾಖೆಯಿಂದ ಹಮ್ಮಿಕೊಂಡಿದ್ದ ಮೂರು ಕಾಡಾನೆಗಳಿಗೆ ರೇಡಿಯೋ ಕಾಲರ್ ಅಳವಡಿಕೆ ಕಾರ್ಯಾಚರಣೆ ಪೂರ್ಣಗೊಂಡಿದ್ದು, ಸಾಕಾನೆಗಳಿಗೆ ಬುಧವಾರ ವಿಶ್ರಾಂತಿ ನೀಡಲಾಗಿದೆ.
ರೇಡಿಯೋ ಕಾಲರ್ ಅಳವಡಿಕೆ ಕಾರ್ಯಾಚರಣೆ ಸೋಮವಾರ ಆರಂಭಗೊಂಡಿದ್ದು, ಸೋಮವಾರ ಓಲ್ಡ್ ಬೆಲ್ಸ್ ಹಾಗು ಭುವನೇಶ್ವರಿ ಹೆಣ್ಣಾನೆಗೆ ರೇಡಿಯೋ ಕಾಲರ್ ಅಳವಡಿಸಲಾಗಿತ್ತು. ಮಂಗಳವಾರ ಸಕಲೇಶಪುರ ತಾಲ್ಲೂಕಿನ ಹಲಸುಲಿಗೆ ಗ್ರಾಮದ ಹೊನ್ನೂರು ಎಸ್ಟೇಟ್‌ನಲ್ಲಿ ಕ್ರಾಂತಿ ಎಂಬ ಆನೆಗೆ ಯಶಸ್ವಿಯಾಗಿ ರೇಡಿಯೋ ಕಾಲರ್ ಅಳವಡಿಕೆ ಮಾಡಲಾಗಿತ್ತು.