ನಾಲ್ವರು ದರೋಡೆಕೋರರ ಬಂಧನ

ಮುಂಡಗೋಡ: ಟಿಬೆಟಿಯನ್ ಕಾಲನಿಯಲ್ಲಿ 19ರಂದು ನಡೆದ ದರೋಡೆ ಪ್ರಕರಣದ ನಾಲ್ವರು ಆರೋಪಿಗಳನ್ನು ಮುಂಡಗೋಡ ಪೊಲೀಸರು ಶುಕ್ರವಾರ ಪಟ್ಟಣದಲ್ಲಿ ಬಂಧಿಸಿದ್ದಾರೆ. ತಲೆಮರೆಸಿಕೊಂಡ ಇನ್ನೊಬ್ಬ ಆರೋಪಿಗಾಗಿ ಶೋಧ ನಡೆಸಿದ್ದಾರೆ.

ಮುಂಡಗೋಡ ಗಾಂಧಿನಗರದ ವಸಂತ ಕೊರವರ, ಆನಂದ ನಗರದ ಮಂಜು ಅರ್ಜುನ ನವಲೆ, ಕಿರಣ ಪ್ರಕಾಶ ಸೋಳಂಕಿ, ಬಸಾಪುರ ಗ್ರಾಮದ ಮಧುಸಿಂಗ ಗಂಗಾರಾಮಸಿಂಗ ರಜಪೂತ ಬಂಧಿತರು.

ಜ. 19ರಂದು ರಾತ್ರಿ 11.30ಕ್ಕೆ ಮುಂಡಗೋಡದ ಟಿಬೆಟಿಯನ್ ಕಾಲನಿಯ ಕ್ಯಾಂಪ್ ನಂ. 1ರ ಶಾರ್ತ್ಸೆ ಬೌದ್ಧ ಮಠದ ಬಳಿಯ ಜುಂಚುಪ್ ರಾಚೆನ್ ಅವರ ಮನೆಗೆ ನುಗ್ಗಿ ದರೋಡೆ ನಡೆಸಿದ್ದರು. ಜುಂಚುಪ್ ರಾಚೆನ್ ಬೆರಳಿಗೆ ಗಾಯಗೊಳಿಸಿ ಅವರು, ಮಹಿಳೆಯೊಬ್ಬರನ್ನು ಕಟ್ಟಿ ಹಾಕಿ 7 ಲಕ್ಷ ರೂ. ನಗದು, 4 ಲಕ್ಷ ರೂ. ಬಂಗಾರದ ಆಭರಣ ದೋಚಿದ್ದರು.

ನಾಲ್ವರು ದರೋಡೆಕೋರರಿಂದ ಕೃತ್ಯಕ್ಕೆ ಬಳಸಲಾದ 1 ಬಜಾಜ್ ಬೈಕ್, ಹಿರೋ ಸ್ಪೆಂಡ್ಲರ್ ಬೈಕ್, 1 ತಲವಾರ್, 1 ಚಾಕು, ಕಟರ್​ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಮುಂಡಗೋಡ ಪಿಐ, ಶಿರಸಿ ಪಿಐ, ಜೊಯಿಡಾ ಸಿಪಿಐ, ಅಂಕೋಲಾ ಸಿಪಿಐ ಒಳಗೊಂಡ 4 ತಂಡ ರಚಿಸಲಾಗಿತ್ತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿನಾಯಕ ಪಾಟೀಲ, ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಗೋಪಾಲ ಬ್ಯಾಕೊಡ ಮಾರ್ಗದರ್ಶನದಲ್ಲಿ ಶಿರಸಿ ಡಿವೈಎಸ್ಪಿ ನೇತೃತ್ವದಲ್ಲಿ ಮುಂಡಗೋಡ ಪಿಐ ಶಿವಾನಂದ ಚಲವಾದಿ ಹಾಗೂ ತಂಡ ಪಿಎಸ್​ಐ ಪ್ರೇಮನಗೌಡ ಪಾಟೀಲ, ಎಸ್​ಐ ಎಸ್.ವಿ. ಚವ್ಹಾಣ, ಎ.ಆರ್. ರಾಠೋಡ, ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಆರೋಪಿಗಳನ್ನು ಬಂಧಿಸಿದ ತಂಡಕ್ಕೆ ಎಸ್ಪಿ, ಎಎಸ್ಪಿ ಸೂಕ್ತ ಬಹುಮಾನ ಘೊಷಿಸಿದ್ದಾರೆ.