ಕೊಳ್ಳೇಗಾಲ: ಮೈಸೂರು ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೊಡಮಾಡುವ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಶಸ್ತಿ -2024ಗೆ ಚಿತ್ರಕಲಾ ಕ್ಷೇತ್ರದ ಸಾಧಕ, ಕೊಳ್ಳೇಗಾಲದ ಜೆ.ಮೂರ್ತಿ ಮುಡಿಗುಂಡ ಆಯ್ಕೆಯಾಗಿದ್ದಾರೆ.
ನ. 1ರಂದು ಮೈಸೂರಿನ ಓವಲ್ ಗ್ರೌಂಡ್‌ನಲ್ಲಿ ಜಿಲ್ಲಾಡಳಿತ ಹಮ್ಮಿಕೊಂಡಿರುವ ಸುವರ್ಣ ಸಂಭ್ರಮ ರಾಜ್ಯೋತ್ಸವ 50 ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ನೇರವೇರಲಿದೆ. ಕೊಳ್ಳೇಗಾಲದ ಮುಡಿಗುಂಡದ ಜವ ರಯ್ಯ ಮತ್ತು ನಂಜಮ್ಮ ಪುತ್ರ ಜೆ.ಮೂರ್ತಿ ಮುಡಿ ಗುಂಡ ಚಿತ್ರಕಲೆ ಕ್ಷೇತ್ರದಲ್ಲಿ ಛಾಪು ಮೂಡಿಸಿದ್ದಾರೆ. ಬಿಎಸ್ಸಿ ಪದವೀಧರರಾಗಿರುವ ಅವರಿಗೆ ಬಾಲ್ಯದಿಂದಲೇ ಚಿತ್ರಕಲೆಯಲ್ಲಿ ವಿಶೇಷ ಆಸಕ್ತಿ ಮೂಡಿತ್ತು. ತಮ್ಮ ಕುಂಚದಲ್ಲಿ ಆಕರ್ಷಣೀಯ ಚಿತ್ರಗಳನ್ನು ರಚಿಸಿ ಅವರು ಕಲಾ ರಂಗದಲ್ಲಿ ಖ್ಯಾತರಾಗಿದ್ದಾರೆ.
ಉಚಿತ ಶಿಬಿರ: ಜಲವರ್ಣ, ತೈಲವರ್ಣ, ಪೆನ್ಸಿಲ್ ಚಿತ್ರ, ಪ್ರಕೃತಿ ಚಿತ್ರ ಹಾಗೂ ಭಾವಚಿತ್ರ ಬಿಡಿಸುವುದರಲ್ಲಿ ಕಲಾವಿದ ಜೆ.ಮೂರ್ತಿ ಪರಿಣತರಾಗಿದ್ದಾರೆ. ಆಸಕ್ತರಿಗೆ ಉಚಿತವಾಗಿ ಚಿತ್ರ ಬಿಡಿಸುವ ತರಬೇತಿ ಶಿಬಿರಗಳನ್ನೂ ನಡೆಸಿದ್ದಾರೆ. ಮೂರ್ತಿ ಅವರು ಗಾಯನ, ಸಾಂಸ್ಕೃತಿಕ ಕಾರ್ಯಕ್ರಮ ಸಂಘಟನೆ, ಪರಿಸರ ಚಟುವಟಿಕೆ, ಕ್ಯಾಲಿಗ್ರಫಿಗಳಲ್ಲೂ ಸಾಧನೆ ತೋರಿರುವುದು ಬಹು ವಿಶೇಷ.
ವಿವಿಧೆಡೆ ಗೌರವ: ಮೂರ್ತಿ ಅವರ ಚಿತ್ರಕಲಾ ಸೇವೆಗೆ 2018ರಲ್ಲಿ ನಾಡಪ್ರಭು ಕೆಂಪೇಗೌಡ ಪ್ರಶಸ್ತಿ, 2021ರಲ್ಲಿ ಕರ್ನಾಟಕ ರಾಜ್ಯ ಸೇವಾ ಪ್ರಶಸ್ತಿ, ಕಪ್ಪಡಿ ಕ್ಷೇತ್ರದಲ್ಲಿ ಕುಂಚ ಕಲಾಶ್ರೀ ಪ್ರಶಸ್ತಿ, ಮೈಸೂರು ನಾಗಮಾರ್ಷಲ್ ಆರ್ಟ್ ಆಕಾಡೆಮಿಯ ಕಲಾ ರತ್ನ ಪ್ರಶಸ್ತಿ ಸೇರಿದಂತೆ ಅನೇಕ ಗೌರವಾದರಗಳು ಅಲಂಕರಿಸಿವೆ. ಇದೀಗ ಮೈಸೂರಿನ ಜಿಲ್ಲಾಡಳಿತ ಇವರನ್ನು ಗುರುತಿಸಿ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ಜಿಲ್ಲೆಯ ಗೌರವವನ್ನು ಹೆಚ್ಚಿಸಿದೆ.
ರಾಜರ್ಷಿ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರಲ್ಲಿ ಕೊಡಮಾಡುವ ಪ್ರಶಸ್ತಿ ನನಗೆ ಘೋಷಣೆ ಆಗಿರುವುದು ಧನ್ಯತೆ ಮೂಡಿಸಿದೆ. ಇದು ನನ್ನ ಬದುಕಿನ ವಿಶೇಷ ಸಂದರ್ಭ. ಪ್ರಶಸ್ತಿಗೆ ನನ್ನನ್ನು ಆಯ್ಕೆ ಮಾಡಿದ ಸಮಿತಿಗೆ ಹೃದಯ ಪೂರ್ವಕ ಧನ್ಯವಾದ ಸಮರ್ಪಿಸುವೆ.
ಜೆ.ಮೂರ್ತಿ
ಮುಡಿಗುಂಡ, ಕೊಳ್ಳೇಗಾಲ.